``````````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆ ,ಅಭಿಮಾನಿಗಳಿಗೆ "ಶ್ರೀಅನ೦ತವೃತದ"ಶುಭಾಶಯಗಳು......

ಶಿರೂರು ಗುಡ್ಡ ಕುಸಿತ: 13 ದಿನವಾದರೂ ಸಿಗದ ನಾಪತ್ತೆಯಾದವರ ಸುಳಿವು, ಕಾರ್ಯಾಚರಣೆ ಸ್ಥಗಿತಗೊಳಿಸಲು ನಿರ್ಧಾರ

ಕಾರವಾರ, ಜುಲೈ.28: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಗುಡ್ಡ ಕುಸಿತ (Shirur Landslide) ಪ್ರಕರಣಕ್ಕೆ ಸಂಬಂಧಿಸಿ ಹದಿಮೂರನೇ ದಿನದ ಕಾರ್ಯಾಚರಣೆಯೂ ವಿಫಲವಾಗಿದೆ. ಕಣ್ಮರೆಯಾದ ಮೂವರ ಬಗ್ಗೆ ಸಣ್ಣ ಸುಳಿವು ಸಿಕ್ಕಿಲ್ಲ. ಬೆಳಿಗ್ಗೆಯಿಂದ ನಿರಂತರ ಕಾರ್ಯಾಚರಣೆ ಮಾಡಿ ಮುಳುಗು ತಜ್ಞರು ಹೈರಾಣಾಗಿದ್ದಾರೆ. ಹೀಗಾಗಿ ಸಭೆ ನಡೆಸಲಾಗಿದ್ದು ಕಾರ್ಯಾಚರಣೆ ಸ್ಥಗಿತಗೊಳಿಸಲು ನಿರ್ಧಾರ ಮಾಡಲಾಗಿದೆ.

13 ದಿನದಿಂದ ಕಾರ್ಯಾಚರಣೆ ನಡೆಸಿದರೂ ಯಾವುದೇ ಫಲ ಸಿಕ್ಕಿಲ್ಲ. ಹೀಗಾಗಿ ಮುಂದಿನ ಕಾರ್ಯಾಚರಣೆಯ ಬಗ್ಗೆ ಡಿಸಿ, ಎಸ್​ಪಿ, ನೌಕಾಪಡೆ ಮತ್ತು ಸೇನೆ ಸೇರಿ ಚರ್ಚೆ ನಡೆಸಿದ್ದು ಮುಂದೆ ಕಾರ್ಯಾಚರಣೆ ಮಾಡಬೇಕಾ? ಅಥವಾ ಇಂದಿಗೆ ಕಾರ್ಯಾಚರಣೆ ನಿಲ್ಲಿಸಬೇಕಾ? ಎಂಬುವುದರ ಬಗ್ಗೆ ಕೇರಳ ಶಾಸಕರು, ಕಾರವಾರ ಶಾಸಕರು ಮತ್ತು ಅಧಿಕಾರಿಗಳು ಸಭೆ ನಡೆಸಿ ತೀರ್ಮಾನಿಸಿದ್ದಾರೆ. 13 ದಿನವೂ ನಾಪತ್ತೆಯಾಗಿದ್ದ ಮೂವರು ಪತ್ತೆಯಾಗದ ಹಿನ್ನೆಲೆ ತಾತ್ಕಾಲಿಕವಾಗಿ ಶೋಧ ಕಾರ್ಯಾಚರಣೆ ಸ್ಥಗಿತ ಮಾಡಲು ನಿರ್ಧಾರ ಮಾಡಲಾಗಿದೆ.

ಹದಿಮೂರನೇ ದಿನದ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಬೆಳಿಗ್ಗೆಯಿಂದ ನಡೆಸಿದ ಕಾರ್ಯಾಚರಣೆಯಲ್ಲಿ ಯಶಸ್ಸು ಸಿಗದಿದಕ್ಕೆ ಸದ್ಯಕ್ಕೆ ತಾತ್ಕಾಲಿಕವಾಗಿ ಕಾರ್ಯಾಚರಣೆ ಸ್ಥಗಿತ ಮಾಡಲು ನಿರ್ಧಾರ ಮಾಡಲಾಗಿದೆ. ಆರ್ಮಿ, ನೆವಿ ಹಾಗೂ ನಿವೃತ್ತ ಸೇನಾ ತಂಡ ಗುರುತಿಸಿದ ಪಾಯಿಂಟ್ ನಲ್ಲಿ ನಿನ್ನೆಯಿಂದಲೂ ಸ್ಕೂಬಾ ಡೈವ್ ಮೂಲಕ ಕಾರ್ಯಾಚರಣೆ ಮಾಡಲಾಗಿತ್ತು. ಅಪಾರ ಪ್ರಮಾಣದ ಕಲ್ಲು ಮಣ್ಣು ಬಂಡೆಯ ರಾಶಿ ಹೊರತು ಪಡಿಸಿ ಬೇರೆ ಏನೂ ಕೂಡ ಕಾಣದ ಹಿನ್ನೆಲೆ ಅನಿವಾರ್ಯವಾಗಿ ಇಂದಿನ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ.

ಇನ್ನು ಮತ್ತೊಂದೆಡೆ ಕಳೆದ 13 ದಿನಗಳಿಂದ ಯಾವುದೇ ಭೇದ ಭಾವ ಮಾಡದೆ ಕನ್ನಡ ಮಾಧ್ಯಮದವರು ಸುದ್ದಿ ಪ್ರಸಾರ ಮಾಡಿ ವಾಸ್ತವ ತಿಳಿಸಿದ್ದಾರೆ. ಎಲ್ಲ ಕನ್ನಡದ ಮಾಧ್ಯಮದವರಿಗೆ ಕೇರಳ ರಾಜ್ಯದ ಪರವಾಗಿ ಧನ್ಯವಾದ ಎಂದು ಕೇರಳ ರಾಜ್ಯದ ಮಂಜೇಶ್ವರ ಕ್ಷೇತ್ರದ ಶಾಸಕ ಅಶ್ರಫ್ ಟಿವಿ9 ಮೂಲಕ ರಾಜ್ಯದ ಮಾಧ್ಯಮಗಳಿಗೆ ಧನ್ಯವಾದ ತಿಳಿಸಿದ್ದಾರೆ.

ಮಾತು ಮುಂದುವರೆಸಿದ ಅಶ್ರಫ್, ಅರ್ಜುನ್ ಕೇರಳದವನಾಗಿದ್ರು ಸಹಿತ ತಾರತಮ್ಯ ಮಾಡದೆ ಸುದ್ದಿ ಮಾಡಿದ್ರಿ. ರಾಷ್ಟ್ರ ಮಟ್ಟದಲ್ಲಿ ಇಲ್ಲಿನ ನೈಜತೆಯನ್ನು ತಿಳಿಸುವ ಪ್ರಾಮಾಣಿಕ ಪ್ರಯತ್ನ ಕನ್ನಡದ ಮಾಧ್ಯಮದವರು ಮಾಡಿದ್ದಾರೆ. ನಾನು ಕಳೆದ 10 ದಿನಗಳಿಂದ ಶಿರೂರಿನಲ್ಲೆ ಇದ್ದೇನೆ. ಏನೆಲ್ಲಾ ಪ್ರಯತ್ನ ಮಾಡಬೇಕು ಎಲ್ಲವನ್ನೂ ಮಾಡಲಾಗಿದೆ. ಇವತ್ತಿನವರೆಗೂ ಲಾರಿಯ ಒಂದು ಅವಶೇಷ ಕೂಡ ಸಿಕ್ಕಿಲ್ಲ, ಅದು ದುಃಖ ತಂದಿದೆ. ಕೇವಲ ಅರ್ಜುನ್ ಅಷ್ಟೆ ಅಲ್ಲ ಕರ್ನಾಟಕದ ಲೋಕೇಶ್ ಮತ್ತು ಜಗನ್ನಾಥ ಕುಟುಂಬ ನೋಡಿ ಬೇಜಾರು ಆಗುತ್ತೆ. ಇಷ್ಟು ದೊಡ್ಡ ಕಾರ್ಯಾಚರಣೆ ಮಾಡಿದ್ರು ಅವರ ಪತ್ತೆ ಸಿಗದ ಹಿನ್ನೆಲೆ ಉಭಯ ಸರ್ಕಾರಗಳು ಮಾತನಾಡಿ ತಾರ್ಕಿಕ ಅಂತ್ಯಕ್ಕೆ ಬರಬೇಕಾಗಿದೆ. ಯಾಕಂದ್ರೆ ನದಿಯ ನೀರಿನ ವೇಗ ಮತ್ತು ಸ್ಥಳದಲ್ಲಿ ಬಂಡೆ ಕಲ್ಲು ನೋಡಿದ್ರೆ ಲಾರಿ ಮತ್ತು ಅರ್ಜುನ ಸೇರಿದಂತೆ ಇನ್ನೂಳಿದವರ ಪತ್ತೆ ಮಾಡುವುದು ಬಹಳ ಕಷ್ಟ ಆಗುತ್ತಿದೆ.

ಈ ವಿಚಾರವಾಗಿ ಅರ್ಜುನ್ ಕುಟುಂಬದವರಿಗೂ ಮಾತನಾಡಿದ್ದೇನೆ. ಆದ್ರೆ ಅರ್ಜುನ್ ಮೃತ ದೇಹ ಸಿಗುವವರೆಗೂ ಗಂಗಾವಳಿ ನದಿ ಬಿಡಲ್ಲ ಅಂತಿದ್ದಾರೆ. ಅವರ ದುಃಖ ನಮಗೆ ಅರ್ಥ ಆಗುತ್ತದೆ. ಆದ್ರೆ ವಾಸ್ತವ ಪರಿಸ್ಥಿತಿಯನ್ನು ಅರಿತುಕೊಳ್ಳುವ ಅವಶ್ಯಕತೆ ಇದೆ. ಇಂದು ತಂತ್ರಜ್ಞಾನ ಮತ್ತು ಸೇನೆಯ ಇಷ್ಟು ದೊಡ್ಡ ಶಕ್ತಿ ಇದ್ರೂ ಸಹಿತ ಪ್ರಕೃತಿಯ ಆಟದ ಮುಂದೆ ನಾವು ಯಶಸ್ಸು ಕಾಣಲು ಆಗದಿರುವ ನೋವು ನನಗಿದೆ. ಕಳೆದ 10 ದಿನಗಳಿಂದ ಇಲ್ಲೆ ಇದ್ದೆನೆ ಇದುವರೆಗೂ ಅರ್ಜುನ ಸಿಗದ ದುಃಖ ಕಾಡುತ್ತಿದೆ ಎಂದು ಹೇಳಿದರು.

No Comments

Leave A Comment