ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಮೈಸೂರು : ಆಷಾಢ ಮಾಸದ ಮೊದಲ ಶುಕ್ರವಾರದ ಹಿನ್ನೆಲೆಯಲ್ಲಿ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಸಾವಿರಾರು ಭಕ್ತಾದಿಗಳು ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ದಾರೆ. ಮುಂಜಾನೆಯಿಂದಲೇ ಬೆಟ್ಟದ ಪಾದದಿಂದ ಸಾವಿರ ಮೆಟ್ಟಿಲು ಹತ್ತಿದ ಭಕ್ತರು, ದಾರಿಯುದ್ದಕ್ಕೂ ಜಯಘೋಷ ಮೊಳಗಿಸಿದರು. ಮೆಟ್ಟಿಲುಗಳಿಗೆ ಅರಿಶಿನ- ಕುಂಕುಮ ಹಚ್ಚಿ ಹರಕೆ ತೀರಿಸುತ್ತಿದ್ದಾರೆ.
ಆಷಾಢ ಮಾಸದಲ್ಲಿ ಶಕ್ತಿ ದೇವತೆಗೆ ವಿಶೇಷ ಪೂಜೆ ಸಲ್ಲಿಸುವುದಕ್ಕಾಗಿ ಮೈಸೂರು, ಹಾಸನ, ಚಾಮರಾಜನಗರ, ಮಡಿಕೇರಿ ಸೇರಿದಂತೆ ತಮಿಳುನಾಡು ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರಗಳಿಂದ ಸಾವಿರಾರು ಭಕ್ತಾದಿಗಳು ಸರತಿ ಸಾಲಿನಲ್ಲಿ ಆಗಮಿಸಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆಯುತ್ತಿದ್ದಾರೆ.
ಮುಂಜಾನೆ 1:30 ರಿಂದ ಚಾಮುಂಡೇಶ್ವರಿಗೆ ವಿಶೇಷ ಅಭಿಷೇಕ ನೆರವೇರಿಸಿದ್ದು, ನಾಲ್ಕು ವಾರಗಳು ಕಾಲ ಭಕ್ತರಿಗೆ ದೇವರ ದರ್ಶನವಾಗಲಿದೆ. ಭಕ್ತಾದಿಗಳು ಬೆಟ್ಟ ಹತ್ತಿ ದರ್ಶನ ಪಡೆಯುತ್ತಿದ್ದಾರೆ ಎಂದು ದೇವಸ್ಥಾನದ ಅರ್ಚಕರಾದ ಶಶಿಧರ್ ದೀಕ್ಷಿತ್ ತಿಳಿಸಿದ್ದಾರೆ.
ಖಾಸಗಿ ವಾಹನಗಳಿಗೆ ಪ್ರವೇಶ ನಿರ್ಬಂಧಿಸಿದ್ದರಿಂದ ಜನರು ವಾಹನಗಳನ್ನು ಲಲಿತ ಮಹಲ್ ಅರಮನೆ ಸಮೀಪದ ಜಾಗದಲ್ಲಿ ನಿಲ್ಲಿಸಿ, ಅಲ್ಲಿಂದ ಸಾರಿಗೆ ಬಸ್ ಗಳಲ್ಲಿ ಬೆಟ್ಟಕ್ಕೆ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ನಗರ ಬಸ್ ನಿಲ್ದಾಣದಿಂದಲೂ ಬಸ್ ವ್ಯವಸ್ಥೆ ಮಾಡಲಾಗಿದೆ. ಭಕ್ತರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷಿಕಾಂತ್ ರೆಡ್ಡಿ ತಿಳಿಸಿದ್ದಾರೆ.