ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ
ಕಾಪು ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಜೂ. 25 ಸ್ವರ್ಣ ಗದ್ದುಗೆಗೆ ಸ್ವರ್ಣ ಸಮರ್ಪಣೆಗೆ ಚಾಲನೆ
ಕಾಪು, ಜೂ. 14 : ಪ್ರಥಮ ಹಂತದಲ್ಲಿ ಸುಮಾರು 32 ಕೋಟಿ ರೂಪಾಯಿ ವೆಚ್ಚದಲ್ಲಿ ಸಂಪೂರ್ಣ ಶಿಲಾಮಯವಾಗಿ, ಅತ್ಯಾಕರ್ಷವಾದ ಇಳಕಲ್ ಕೆಂಪು ಶಿಲೆಯಿಂದ ನಿರ್ಮಾಣಗೊಳ್ಳುತ್ತಿರುವ ಕಾಪು ಶ್ರೀ ಹೊಸ ಮಾರಿ ದೇವಸ್ಥಾನದಲ್ಲಿ ಪ್ರತಿಷ್ಟಾಪನೆಗೊಳ್ಳಲಿರುವ ಮಾರಿಯಮ್ಮ ಮತ್ತು ಉಚ್ಚಂಗಿ ದೇವಿಗೆ ಸಮರ್ಪಿಸಲ್ಪಡುವ ಸ್ವರ್ಣ ಗದ್ದುಗೆ ನಿರ್ಮಾಣಕ್ಕೆ ಸ್ವರ್ಣ ಸಮರ್ಪಣೆಗೆ ಜೂ. 25 ರಿಂದ ಅವಕಾಶ ಮಾಡಿಕೊಡಲಾಗುವುದು ಎಂದು ಕಾಪು ಶ್ರೀ ಹೊಸಮಾರಿಗುಡಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ವಾಸುದೇವ ಶೆಟ್ಟಿ ಹೇಳಿದರು.
ಕಾಪು ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಕ್ಷೇತ್ರದ ತಂತ್ರಿ ಬ್ರಹ್ಮಶ್ರೀ ವಿದ್ವಾನ್ ಕುಮಾರಗುರು ತಂತ್ರಿ ಮತ್ತು ಅರ್ಚಕ ವೇ. ಮೂ. ಕೆ. ಶ್ರೀನಿವಾಸ ತಂತ್ರಿ ಅವರ ನೇತೃತ್ವದಲ್ಲಿ, ಶಿಲಾ ಸೇವೆ, ಶಿಲಾ ಕಂಬ ಸಮರ್ಪಿಸಿದ ದಾನಿಗಳು, ಭಕ್ತರು ಮತ್ತು ಗಣ್ಯರ ಉಪಸ್ಥಿತಿಯಲ್ಲಿ ಜೂ. 25 ರಂದು ಬೆಳಿಗ್ಗೆ 9.09 ಕ್ಕೆ ಸ್ವರ್ಣ ಗೌರಿ ಪೂಜೆ ನೆರವೇರಿಸಿ, ಬಳಿಕ ಸ್ವರ್ಣ ಸಮರ್ಪಣಾ ಸಮಾರಂಭಕ್ಕೆ ಚಾಲನೆ ನೀಡಲಾಗುವುದು ಎಂದರು.
ಪ್ರಥಮ ಹಂತದ ಸ್ವರ್ಣ ಸಮರ್ಪಣಾ ಸಂಕಲ್ಪದಲ್ಲಿ ಭಾಗವಹಿಸುವ ಭಕ್ತರಿಗೆ ಜೂ. 21ರವರೆಗೆ ಹೆಸರು ನೋಂದಾಯಿಸಲು ಅವಕಾಶವಿದೆ. ಸ್ವರ್ಣ ಸಮರ್ಪಣಾ ಸಮಾರಂಭ ಮತ್ತು ಮಾರಿಯಮ್ಮ ದೇವಿಯ ಸನ್ನಿಧಾನದಲ್ಲೇ ಸ್ವರ್ಣ ಸಮರ್ಪಣೆಗೆ ಅವಕಾಶ ಮಾಡಿಕೊಡಲಾಗುವುದು ಎಂದರು.
20 ಕೆಜಿ ಸ್ವರ್ಣ, 160 ಕೆಜಿಬೆಳ್ಳಿ :
ಕಾಪು ಮಾರಿಯಮ್ಮ ದೇವಿ ಮತ್ತು ಉಚ್ಚಂಗಿ ದೇವಿಯ ನೂತನ ಸ್ವರ್ಣ ಗದ್ದುಗೆ ನಿರ್ಮಾಣಕ್ಕೆ 20 ಕೆಜಿ ಚಿನ್ನ, 160 ಕೆಜಿ ಬೆಳ್ಳಿ ಉಪಯೋಗಿಸಲಾಗುತ್ತದೆ. ಈಗಾಗಲೇ ಪ್ರಸಿದ್ಧ ಜ್ಯುವೆಲ್ಲರಿ ಸಂಸ್ಥೆಯವರಿಂದ ಕೊಟೇಷನ್ ಆಹ್ವಾನಿಸಲಾಗಿದ್ದು, ಸೂಕ್ತವೆನಿಸುವವರಿಗೆ ಸ್ವರ್ಣ ಗದ್ದುಗೆ ನಿರ್ಮಾಣದ ಗುತ್ತಿಗೆ ವಹಿಸಿ ಕೊಡಲಾಗುವುದು ಎಂದರು
ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿ ಪ್ರಧಾನ ಕಾರ್ಯಾಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಬೆಳಪು ಮಾತನಾಡಿ, ಅಯೋಧ್ಯೆ ರಾಮ ಮಂದಿರ ಮಾದರಿಯಲ್ಲಿ ಕಾಪು ಮಾರಿಯಮ್ಮ ದೇವಿಯ ಮಾರಿಗುಡಿ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿಗಳು ದಕ್ಷಿಣ ಭಾರತದಲ್ಲಿ ಅತ್ಯಪೂರ್ವವೆಂಬಂತೆ ನಡೆಯುತ್ತಿದೆ. ಅದಕ್ಕೆ ಪೂರಕವಾಗಿ ಮಾರಿಯಮ್ಮ, ಉಚ್ಚಂಗಿ ದೇವಿಗೆ ಸ್ವರ್ಣ ಗದ್ದುಗೆ ನಿರ್ಮಿಸಿ ಸಮರ್ಪಿಸಲು ಸಂಕಲ್ಪಿಸಲಾಗಿದ್ದು, ಪ್ರಪಂಚದಾದ್ಯಂತ ನೆಲೆಸಿರುವ ಭಕ್ತರು ಸ್ವರ್ಣ ಗದ್ದುಗೆಗೆ ಸ್ವರ್ಣ ಸಮರ್ಪಣಾ ಕಾರ್ಯದಲ್ಲಿ ಪಾಲ್ಗೊಳ್ಳಬೇಕೆನ್ನುವುದು ಸಮಿತಿಯ ಆಶಯವಾಗಿದೆ.
ಬಳಸಿದಚಿನ್ನಸಮರ್ಪಣೆಗೂಅವಕಾಶ :
ಗದ್ದುಗೆಯೇ ಪ್ರಧಾನವಾಗಿರುವ ಕಾಪು ಮಾರಿಗುಡಿಯಲ್ಲಿ ಸ್ವರ್ಣ ಗದ್ದುಗೆ ಸಮರ್ಪಣೆಗೆ ಹೊಸ ಚಿನ್ನದೊಂದಿಗೆ ಭಕ್ತರು ತಾವು ಉಪಯೋಗಿಸಿದ, ಬಳಸಿದ ಚಿನ್ನಗಳನ್ನೂ ಹರಕೆಯ ರೂಪದಲ್ಲಿ ಸಮರ್ಪಿಸಲು ಅವಕಾಶವಿದೆ. ಸಮಿತಿಯ ಸಂಕಲ್ಪಕ್ಕೆ ಮಾರಿಯಮ್ಮ ದೇವಿಯ ಅಭಯವೂ ಸಿಕ್ಕಿದ್ದ, ಸ್ವರ್ಣ ನೀಡಿದ ಭಕ್ತರ ಕಷ್ಟ ಕಾರ್ಪಣ್ಯಗಳನ್ನು ತನ್ನ ಕಾಲಬುಡಕ್ಕೆ ಹಾಕಿಕೊಳ್ಳುವುದಾಗಿ ಅಮ್ಮನ ನುಡಿಯಾಗಿದೆ ಎಂದರು.
ಕಾಪು ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಪ್ರಚಾರ ಸಮಿತಿ ಪ್ರಧಾನ ಸಂಚಾಲಕ ಯೋಗೀಶ್ ಶೆಟ್ಟಿ ಬಾಲಾಜಿ, ಸ್ವರ್ಣ ಸಮರ್ಪಣಾ ಸಮಿತಿ ಕಾರ್ಯಾಧ್ಯಕ್ಷರಾದ ರತ್ನಾಕರ ಶೆಟ್ಟಿ ನಡಿಕೆರೆ, ಪ್ರಸನ್ನ ಆಚಾರ್ಯ, ಕಾರ್ಯದರ್ಶಿ ರವಿ ಭಟ್ ಮಂದಾರ, ಕಚೇರಿ ನಿರ್ವಹಣಾ ಸಮಿತಿಯ ಜಯರಾಮ ಆಚಾರ್ಯ, ಸಂದೀಪ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.