ಶಿಥಿಲಗೊಂಡ ಗೋಕರ್ಣ ಮಹಾಬಲೇಶ್ವರ ದೇವಸ್ಥಾನ ದ್ವಾರದ ಕಟ್ಟಡ; ನವೀಕರಣಕ್ಕೆ ಪುರಾತತ್ವ ಇಲಾಖೆಯಿಂದ ಸಿಗುತ್ತಿಲ್ಲ ಅನುಮತಿ
ಕಾರವಾರ, ಮೇ.30: ಶಿವಭಕ್ತರ ಪುಣ್ಯ ಕ್ಷೇತ್ರ, ಪುರಾಣ ಪ್ರಸಿದ್ಧ ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ದ್ವಾರದ ಕಟ್ಟಡ ಕುಸಿಯುವ ಹಂತಕ್ಕೆ ತಲುಪಿದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದಲ್ಲಿರುವ ಮಹಾಬಲೇಶ್ವರ ದೇವಸ್ಥಾನದ ದ್ವಾರದ ಕಟ್ಟಡ ಮಳೆಯಿಂದ ಸಂಪೂರ್ಣವಾಗಿ ಕುಸಿಯುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಭಕ್ತರಲ್ಲಿ ಆತಂಕ ಹೆಚ್ಚಾಗಿದೆ.
ಗೋಕರ್ಣದಲ್ಲಿನ ಮಹಾಬಲೇಶ್ವರ ದೇವಸ್ಥಾನದ ದಕ್ಷಿಣ ದ್ವಾರದ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದೆ. ಶಿಥಿಲ ಗೊಂಡಿರುವ ದ್ವಾರದ ಮೂಲಕವೇ ನಿತ್ಯ ಸಾವಿರಾರು ಜನ ದರ್ಶನ ಪಡೆದು ಹೊರ ಬರುತ್ತಾರೆ. ಭಕ್ತರು ಆತಂಕದಲ್ಲೇ ದರ್ಶನ ಪಡೆದು ದೇವಸ್ಥಾನದಿಂದ ಹೊರಬರುವ ಪರಿಸ್ಥಿತಿ ಇದೆ. ಆತ್ಮಲಿಂಗದ ದರ್ಶನ ಪಡೆದು ದಕ್ಷಿಣ ದ್ವಾರದ ಮೂಲಕ ಹೊರ ಬಂದ್ರೆ ಪುಣ್ಯ ಸಿಗುತ್ತೆ ಎಂಬ ಪ್ರತೀತಿ ಇದೆ. ಹೀಗಾಗಿ ಶಿಥಿಲಗೊಂಡಿದ್ರು ಸಹ ಅದೇ ದ್ವಾರದ ಮೂಲಕ ಭಕ್ತರು ಓಡಾಡುತ್ತಿದ್ದಾರೆ. ಪಿಡಬ್ಲೂಡಿ ಇಂಜಿನಿಯರ್ ಕಟ್ಟಡ ಸಂಪೂರ್ಣ ಶಿಥಿಲ ಗೊಂಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಕಟ್ಟಡವನ್ನ ಸಂಪೂರ್ಣವಾಗಿ ಕೆಡವಿ ಮತ್ತೆ ಕಟ್ಟಬೇಕೆಂದು ಸೂಚಿಸಿದ್ದಾರೆ. ಇತ್ತ ಪರಾತತ್ವ ಇಲಾಖೆ ಕೂಡ ಶಿಥಿಲ ಗೊಂಡಿರುವ ಬಗ್ಗೆ ಮಾಹಿತಿ ಪಡೆದುಕೊಂಡಿದೆ. ಕಟ್ಟಡ ಸಂಪೂರ್ಣ ಕುಸಿಯುವ ಹಂತಕ್ಕೆ ಬಂದಿದ್ದು ಆದಷ್ಟು ಬೇಗ ಹೊಸ ಕಟ್ಟಡ ಕಟ್ಟ ಬೇಕಿದೆ.
ಇನ್ನು ಕಟ್ಟಡ ಕಟ್ಟುವುದಕ್ಕೆ ಪುರಾತತ್ವ ಇಲಾಖೆಯ ಅನುಮತಿ ಅಗತ್ಯ. ಆದರೆ ಇದುವರೆಗೂ ಪುರಾತತ್ವ ಇಲಾಖೆ ಅನುಮತಿ ನೀಡಿಲ್ಲ. ಈ ಹಿನ್ನೆಲೆ ಯಥಾಸ್ಥಿತಿ ಮುಂದುವರಿದಿದೆ. ಪುರಾತತ್ವ ಇಲಾಖೆ ಅನುಮತಿ ನೀಡಿದ್ರೆ ದೇವಸ್ಥಾನದ ಹಣದಲ್ಲೆ ಕಟ್ಟಡ ನಿರ್ಮಿಸಲು ಆಡಳಿತ ಮಂಡಳಿ ಪ್ಲಾನ್ ಮಾಡಿದೆ.
ದಕ್ಷಿಣದ ಕಾಶಿ ಎಂದು ಕರೆಯುವ ಗೋಕರ್ಣವು ದೇವತೆಗಳು ವಾಸವಾಗಿರುವ ಪವಿತ್ರ ಭೂಮಿ ಎಂಬ ನಂಬಿಕೆ ಇದೆ. ಇಲ್ಲಿ ಶಿವನಿಗೆ ಸಂಬಂಧಿಸಿದ ಮಹಾಬಲೇಶ್ವರ ದೇವಸ್ಥಾನವಿದ್ದು ನಿತ್ಯವೂ ವಿಶೇಷ ಪೂಜೆಗಳು ನಡೆಯುತ್ತವೆ. ಈ ದೇವಸ್ಥಾನಕ್ಕೆ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ.
ಗೋಕರ್ಣ ಹೆಸರು ಬಂದದ್ದು ಹೇಗೆ?
ಒಮ್ಮೆ ಬ್ರಹ್ಮ ದೇವನು ಶಿವನನ್ನು ಪಾತಾಳಕ್ಕೆ ಕಳುಹಿಸಿದ್ದನು. ಆಗ ಶಿವನು ಗೋವಿನ ಕಿವಿಯಿಂದ ಕಾಣಿಸಿಕೊಂಡನು. ಅದಕ್ಕಾಗಿ ಗೋ ಎಂದರೆ ಹಸು, ಕರ್ಣ ಎಂದರೆ ಕಿವಿ ಎಂದರ್ಥ. ಒಟ್ಟಿಗೆ ಈ ಅಕ್ಷರಗಳನ್ನು ಸೇರಿಸಿ ಗೋಕರ್ಣ ಎಂದು ಕರೆಯಲಾಯಿತು. ಇಲ್ಲಿ ಇಂದಿಗೂ ಗೋವಿನ ಕಿವಿಯನ್ನು ಹೋಲುವ ಒಂದು ಗುಹೆಯಿದೆ.