ಬೆಂಗಳೂರಿನಲ್ಲಿ ವಸತಿ ನಿಲಯದಲ್ಲಿ ನೇಣುಬಿಗಿದ ಸ್ಥಿತಿ ಯುವತಿಯ ಶವ ಅನುಮಾನಾಸ್ಪದ ರೀತಿಯಲ್ಲಿ ಪತ್ತೆ, ಆತ್ಮಹತ್ಯೆ ಶಂಕೆ
ಬೆಂಗಳೂರು, ಮೇ 17: ಹುಬ್ಬಳ್ಳಿಯ ನೇಹಾ ಹಿರೇಮಠ , ಅಂಜಲಿ ಅಂಬಿಗೇರ , ಕೊಡಗಿನ ಎಸ್ಎಲ್ಸಿ ವಿದ್ಯಾರ್ಥಿನಿ ಮೀನಾ ಕೊಲೆ (SSLC Student Mina) ಮತ್ತು ಗುರುವಾರ ಬೆಂಗಳೂರಿನ ಮನೆಯೊಂದರಲ್ಲಿ ಪತ್ತೆಯಾಗಿದ್ದ ಯುವತಿ ಶವ ಪ್ರಕರಣಗಳು ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ಬಗ್ಗೆ ಚರ್ಚೆ ಹುಟ್ಟು ಹಾಕಿವೆ. ಈ ಬೆನ್ನಲ್ಲೆ ಮತ್ತೊಬ್ಬ ಯುವತಿಯ ಶವ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ. ಬೆಂಗಳೂರು ಹೊರವಲಯದ ಚಂದಾಪುರ ಸಮೀಪದ ಹೀಲಲಿಗೆ ಬಳಿಯಿರುವ ಬಿಸಿಇಟಿ ಇಂಜಿನಿಯರಿಂಗ್ ಕಾಲೇಜಿನ ವಸತಿ ನಿಲಯದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿನಿ ಹರ್ಷಿತಾ (18) ಮೃತದೇಹ ಪತ್ತೆಯಾಗಿದೆ.
ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಕರಡಿಹಳ್ಳಿ ಗ್ರಾಮದ ವಿದ್ಯಾರ್ಥಿನಿ ಹರ್ಷಿತ(18) ಬೆಂಗಳೂರು ಹೊರವಲಯ ಚಂದಾಪುರ ಸಮೀಪದ ಹೀಲಲಿಗೆಯಲ್ಲಿನ ಕಾಲೇಜ್ ಅಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿಯಲ್ಲಿ ಇಂಜಿನಿಯರಿಂಗ್ ಓದುತ್ತಿದ್ದಳು. ಹರ್ಷಿತಾ ಕಾಲೇಜಿನ ವಸತಿ ನಿಲಯದಲ್ಲಿದ್ದು, ವಿದ್ಯಾಭ್ಯಾಸ ಮಾಡುತ್ತಿದ್ದಳು.
ಪಕ್ಕದ ಕೋಣೆಯಲ್ಲಿದ್ದ ಪ್ರಗತಿ ಎಂಬ ವಿದ್ಯಾರ್ಥಿನಿ ಹರ್ಷಿತಾ ಇದ್ದ ಕೋಣೆಯ ಬಾಗಲಿನ್ನು ಸಾಕಷ್ಟು ಸಾರಿ ಬಡೆಯುತ್ತಾಳೆ. ಆದರೆ ಹರ್ಷಿತಾ ಬಾಗಿಲು ತೆಗೆಯುವುದಿಲ್ಲ. ಅನುಮಾನಗೊಂಡ ಪ್ರಗತಿ ಸ್ಟೂಲ್ ಮೇಲೆ ಹತ್ತಿ, ಕಿಟಕಿಯಿಂದ ಇಣುಕಿ ನೋಡಿದಾಗ ಹರ್ಷಿತಾಳ ನೇಣು ಬಿಗಿದ ಸ್ಥಿತಿಯಲ್ಲಿ ಕಂಡಿದ್ದಾಳೆ. ಕೂಡಲೆ ಪ್ರಗತಿ ಅಕ್ಕ-ಪಕ್ಕದ ಕೋಣೆಯಲ್ಲಿದ್ದ ಸಹಪಾಠಿಗಳಿಗೆ ವಿಷಯ ತಿಳಿಸುತ್ತಾಳೆ. ಬಳಿಕ ಎಲ್ಲರೂ ಸೇರಿ ಬಾಗಿಲು ಮುರಿದು ಹರ್ಷಿತಾ ಕೋಣೆಯೊಳಗಡೆ ಹೋಗಿ, ಆಕೆಯನ್ನು ನೇಣು ಕುಣಿಕೆಯಿಂದ ಕೆಳಗೆ ಇಳಿಸಿ ಆಸ್ಪತ್ರೆಗೆ ಕರೆದೆಯ್ಯೊಲು ಮುಂದಾಗುತ್ತಾರೆ. ಆದರೆ ಅಷ್ಟೊತ್ತಿಗಾಗಲೆ ಹರ್ಷಿತಾ ಪ್ರಾಣ ಪಕ್ಷಿ ಹಾರಿ ಹೋಗಿತ್ತು.
ಹರ್ಷಿತಾ ನೇಣು ಹಾಕಿಕೊಂಡಿದ್ದ ವಿಚಾರವನ್ನು ವಿದ್ಯಾರ್ಥಿನಿಯರು ಕಾಲೇಜು ಪ್ರಾಧ್ಯಾಪಕಿ ಭಾರತಿ ತಿಳಿಸುತ್ತಾರೆ. ಆಗ ಪ್ರಾಧ್ಯಾಪಕಿ ಭಾರತಿ, “ಬಾಗಿಲು ಯಾಕೆ ತೆರೆದೆ” ಎಂದು ವಿದ್ಯಾರ್ಥಿನಿ ಪ್ರಗತಿಯನ್ನು ಪ್ರಶ್ನೆ ಮಾಡುತ್ತಾರೆ. ಅಲ್ಲದೆ ಬೇಜವಾಬ್ದಾರಿಯಾಗಿ ಮಾತನಾಡುತ್ತಾರೆ. ಪ್ರಾಧ್ಯಾಪಕಿ ಭಾರತಿ ವರ್ತನೆಯಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಇಂದು (ಮೇ 17) ಕಾಲೇಜು ಎದುರು ಪ್ರತಿಭಟನೆ ಮಾಡಿದರು.