ಸಕ್ಕರೆ ಪ್ರಮಾಣ ಹೆಚ್ಚಳ ಹಿನ್ನೆಲೆಯಲ್ಲಿ ಅರವಿಂದ ಕೇಜ್ರಿವಾಲ್‌ಗೆ ಇನ್ಸುಲಿನ್ ನೀಡಲಾಗಿದೆ: ತಿಹಾರ್ ಜೈಲು ಅಧಿಕಾರಿಗಳು
ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ಅವರಿಗೆ ಕಡಿಮೆ ಡೋಸ್‌ನ ಇನ್ಸುಲಿನ್ ನೀಡಲಾಗಿದೆ ಎಂದು ತಿಹಾರ್ ಜೈಲಿನ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಏಮ್ಸ್ ವೈದ್ಯರ ಸಲಹೆಯ ಮೇರೆಗೆ ಸೋಮವಾರ ಸಂಜೆ ಕೇಜ್ರಿವಾಲ್ ಅವರಿಗೆ ಕಡಿಮೆ ಡೋಸ್‌ನ ಇನ್ಸುಲಿನ್‌ನ ಎರಡು ಘಟಕಗಳನ್ನು ನೀಡಲಾಗಿದೆ’ ಎಂದು ತಿಹಾರ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾತ್ರಿ 7 ಗಂಟೆ ಸುಮಾರಿಗೆ ಕೇಜ್ರಿವಾಲ್ ಅವರ ರಕ್ತದಲ್ಲಿನ ಸಕ್ಕರೆ ಪ್ರಮಾಣ 217 ರಷ್ಟಿದ್ದು, ತಿಹಾರ್‌ನ ವೈದ್ಯರು ಅವರಿಗೆ ಇನ್ಸುಲಿನ್ ನೀಡಲು ನಿರ್ಧರಿಸಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.
ಏಪ್ರಿಲ್ 20 ರಂದು ಮುಖ್ಯಮಂತ್ರಿಯವರೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಏಮ್ಸ್ ತಜ್ಞರು, ಸಕ್ಕರೆ ಮಟ್ಟವು ಒಂದು ನಿರ್ದಿಷ್ಟ ಮಟ್ಟವನ್ನು ದಾಟಿದರೆ ಕೇಜ್ರಿವಾಲ್ ಅವರಿಗೆ ಇನ್ಸುಲಿನ್ ನೀಡಬಹುದು ಎಂದು ತಿಹಾರ್ ಜೈಲಿನ ವೈದ್ಯರಿಗೆ ಸಲಹೆ ನೀಡಿದ್ದರು ಎಂದು ಅವರು ಹೇಳಿದರು.