ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ
ಕುಂದಾಪುರ: ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ಸಂಭ್ರಮದ ಕೊಡಿ ಹಬ್ಬ- ರಥೋತ್ಸವ
ಕುಂದಾಪುರ, ನ 27: ಕರ್ನಾಟಕ ಕರಾವಳಿಯ ಸಪ್ತ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಪುರಾಣ ಪ್ರಸಿದ್ಧ ಧ್ವಜಪುರ (ಕೋಟೇಶ್ವರ)ದ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ಸಂಭ್ರಮದ ಕೊಡಿ ಹಬ್ಬ-ರಥೋತ್ಸವ ನ.27 ಸೋಮವಾರ ವಿಜೃಂಭಣೆಯಿಂದ ನಡೆಯಿತು.
ಕರಾವಳಿಯ ಪ್ರಥಮ ರಥೋತ್ಸವ ಎಂಬ ಹೆಗ್ಗಳಿಕೆ ಪಡೆದಿರುವ ಕೋಟೇಶ್ವರ ರಥೋತ್ಸವದ ಅಂಗವಾಗಿ ನ.20ರಿಂದಲೇ ಧಾರ್ಮಿಕ ವಿಧಿವಿಧಾನಗಳು ಆರಂಭಗೊಂಡಿದ್ದವು. ಸೋಮವಾರ ದಿವಾಗಂಟೆ 11-31ಕ್ಕೆ ಮಕರ ಲಗ್ನ ಸುಮುಹೂರ್ತದಲ್ಲಿ ಶ್ರೀ ಮನ್ಮಹಾರಥೋತ್ಸವ ನಡೆಯಿತು.
ಕೋಟೇಶ್ವರ ರಥೋತ್ಸವದ ಸಂದರ್ಭದಲ್ಲಿ ಗರುಡ ಪ್ರದಕ್ಷಣೆ ಸಹಜ ಪ್ರಕ್ರಿಯೆ. ಎಷ್ಟೋ ಜನ ಭಕ್ತರು ಗರುಡ ಬರುವುದನ್ನೇ ಕಾದಿರುತ್ತಾರೆ. ಇವತ್ತು ಕೂಡಾ ರಥಕ್ಕೆ ಗರುಡ ಪ್ರದಕ್ಷಣೆ ಬಂದಿರುವ ದೃಶ್ಯವನ್ನು ನೋಡಿ ಭಕ್ತರು ಪುಳಕಿತರಾದರು.
ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಎಂ.ಪ್ರಭಾಕರ ಶೆಟ್ಟಿ, ದೇವಳದ ತಂತ್ರಿಗಳಾದ ಪ್ರಸನ್ನ ಕುಮಾರ್ ಐತಾಳ್, ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಪ್ರಶಾಂತ ಕುಮಾರ್ ಶೆಟ್ಟಿ, ಸಮಿತಿ ಸದಸ್ಯರಾದ ಎಸ್.ರಾಘವೇಂದ್ರ ರಾವ್ ನೇರಂಬಳ್ಳಿ, ಸುರೇಶ್ ಶೇರೆಗಾರ್ ಬೀಜಾಡಿ, ಚಂದ್ರಿಕಾ ಧನ್ಯ ಕೋಟೇಶ್ವರ, ಶಾರದಾ ಮೂಡುಗೋಪಾಡಿ, ಮಂಜುನಾಥ ಆಚಾರ್ಯ, ಭಾರತಿ, ಹಾಗೂ ಅರ್ಚಕರು, ಸಿಬ್ಬಂದಿ ವರ್ಗ ಹಾಗು ಸಮಸ್ತ ಕೋಟೇಶ್ವರ ಗ್ರಾಮಸ್ಥರು, ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.
ನ.20ರಿಂದ ಅಂಕುರಾರೋಹಣದಿಂದ ರಥೋತ್ಸವದ ಧಾರ್ಮಿಕ ವಿಧಿವಿಧಾನ ಆರಂಭವಾಗಿತ್ತು. ನ.28ರ ತನಕವೂ ಧಾರ್ಮಿಕ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಪನ್ನಗೊಳ್ಳುತ್ತವೆ.
ಕೋಟೇಶ್ವರದ ಸುತ್ತುಮುತ್ತಲಿನ ನವವಿವಾಹಿತರು ಬದುಕಿನ ಕುಡಿಯೊಡೆವ ಕ್ಷೇತ್ರವೆಂದೇ ನಂಬುಗೆ ತಳೆದವರಾಗಿ ಕೋಟಿತೀರ್ಥದಲ್ಲಿ ಸ್ನಾನಮಾಡಿ ದೇವರ ದರ್ಶನ ಪಡೆದು ಕಬ್ಬಿನ ಕೊಡಿಯನ್ನು ಒಟ್ಟಿಗೆ ಕೊಂಡೊಯ್ಯುತ್ತಾರೆ.
ಸುಮಾರು 5 ಎಕರೆ ವಿಸ್ತೀರ್ಣದ ವಿಶಾಲವಾದ ಈ ಕೆರೆಗೆ ಸುತ್ತಕ್ಕಿ ತಳಿದರೆ ತಮ್ಮ ಇಷ್ಟಾರ್ಥ ಈಡೇರುತ್ತದೆ ಎಂಬ ನಂಬಿಕೆಯಿಂದ ಹಬ್ಬದ ದಿನ ಬೆಳಿಗ್ಗೆ 3 ಗಂಟೆಯಿಂದಲೇ ದೂರ ದೂರದ ಹರಕೆ ಹೊತ್ತ ಭಕ್ತಾಭಿಮಾನಿಗಳು ಕೆರೆಯಲ್ಲಿ ತೀರ್ಥ ಸ್ನಾನ ಮಾಡಿ ಮನೆಯಲ್ಲಿಯೇ ಬೆಳೆದ ಅಕ್ಕಿಯನ್ನು ಈ ಕೆರೆಯ ಸುತ್ತ ಹಾಯಿಸಿದ ಬಿಳಿ ಬಟ್ಟೆಯ ಮೇಲೆ ತಳಿಯುತ್ತಾರೆ.