``````````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆ ,ಅಭಿಮಾನಿಗಳಿಗೆ "ಶ್ರೀಅನ೦ತವೃತದ"ಶುಭಾಶಯಗಳು......
3 ತಿಂಗಳಲ್ಲಿ 242 ಭ್ರೂಣಗಳ ಹತ್ಯೆ; ಮಂಡ್ಯ ಭ್ರೂಣ ಹತ್ಯೆ ಜಾಲದ ಕುರಿತು ಮತ್ತಷ್ಟು ಆತಂಕಕಾರಿ ಮಾಹಿತಿ ಬಿಚ್ಚಿಟ್ಟ ಪೊಲೀಸ್ ಆಯುಕ್ತ ಬಿ.ದಯಾನಂದ
ಬೆಂಗಳೂರು: ಮೈಸೂರು ಹಾಗೂ ಮಂಡ್ಯ ಪ್ರದೇಶದಲ್ಲಿ ಪತ್ತೆಯಾಗಿದ್ದ ಭ್ರೂಣ ಹತ್ಯೆ ಜಾಲದ ಬಗೆಗಿನ ಸುದ್ದಿ ಇಡೀ ರಾಜ್ಯವನ್ನೇ ಆತಂಕಕ್ಕೊಳಗಾಗುವಂತೆ ಮಾಡಿದೆ. ಜೀವ ಉಳಿಸಬೇಕಾದ ವೈದ್ಯರೇ ಇಂತಹ ಅಮಾನವೀಯ ಕೆಲಸಕ್ಕೆ ಕೈಹಾಕಿದ್ದು ಮನುಕುಲ ತಲೆ ತಗ್ಗಿಸುವಂತಾಗಿತ್ತು. ಇದೀಗ ಪ್ರಕರಣ ಸಂಬಂದ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಮತ್ತಷ್ಟು ಆತಂಕಕಾರಿ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೆಣ್ಣು ಭ್ರೂಣ ಹತ್ಯೆ ಮಾಡುತ್ತಿದ್ದ ಜಾಲವನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಅ.15ರಂದು ವಾಹನ ತಪಾಸಣೆ ಮಾಡುತ್ತಿದ್ದರು. ಈ ವೇಳೆ ಆರೋಪಿಗಳು ಕಾರು ನಿಲ್ಲಸದೇ ಹೋಗಿದ್ದಾರೆ. ಅವರನ್ನು ಹಿಂಬಾಲಿಸಿ ವಿಚಾರಣೆ ನಡೆಸಿದ ವೇಳೆ ಘಟನೆ ಬೆಳಕಿಗೆ ಬಂದಿತ್ತು.
ಹೆಣ್ಣು ಮಗು ಎಂದು ಗೊತ್ತಾದರೇ ಹತ್ಯೆ ಮಾಡುತ್ತಿರುವುದು ತಿಳಿದುಬಂದಿತ್ತು. ಇಲ್ಲಿಯವರೆಗೂ 9 ಜನರನ್ನು ಬಂಧಿಸಿದ್ದು, ಚೆನ್ನೈ ಮೂಲದ ವೈದ್ಯ ತುಳಸಿರಾಮ್, ಮೈಸೂರಿನ ಖಾಸಗಿ ಆಸ್ಪತ್ರೆಯೊಂದರ ವೈದ್ಯ ಡಾ. ಚಂದನ್ ಬಲ್ಲಾಳ್, ಆತನ ಪತ್ನಿ ಮೀನಾ, ಮೈಸೂರಿನ ಖಾಸಗಿ ಆಸ್ಪತ್ರೆಯ ರಿಸೆಪ್ಶನಿಸ್ಟ್ ರಿಜ್ಮಾ, ಲ್ಯಾಬ್ ಟೆಕ್ನಿಶಿಯನ್ ನಿಸ್ಸಾರ್ ಎಂಬಾತನನ್ನು ಬಂಧಿಸಲಾಗಿದೆ, ಇನ್ನು, ಈ ಪ್ರಕರಣದಲ್ಲಿ ಮೊನ್ನೆಯೇ ಮೈಸೂರಿನ ಉದಯಗಿರಿಯ ಖಾಸಗಿ ಆಸ್ಪತ್ರೆ, ರಾಜ್ ಕುಮಾರ್ ರಸ್ತೆಯ ಆಯುರ್ವೇದಿಕ್ ಡೇ ಕೇರ್ ಸೆಂಟರನ್ನು ಜಪ್ತಿ ಮಾಡಲಾಗಿದೆ ಎಂದು ಹೇಳಿದ್ದಾರೆ.
ಮಂಡ್ಯದ ಆಲೆಮನೆಯಲ್ಲಿ ಭ್ರೂಣಗಳ ಹತ್ಯೆ ಮಾಡಿರುವುದು ಪತ್ತೆಯಾಗಿದ್ದು, ಮೂರು ತಿಂಗಳಲ್ಲಿ 242 ಭ್ರೂಣ ಹತ್ಯೆ ಮಾಡಿದ್ದಾರೆ. ಪ್ರತಿ ಭ್ರೂಣ ಹತ್ಯೆಗೆ 25ರಿಂದ 30,000 ರೂ ಪಡೆದಿದ್ದಾರೆ. ಪತ್ತೆಗೆ 25ರಿಂದ 30,000 ರೂ. ಹಾಗೂ ಹತ್ಯೆಗೆ ಮತ್ತೆ 30,000 ರೂ. ಸೇರಿದಂತೆ ಒಟ್ಟು 60,000 ರೂ. ಪ್ಯಾಕೇಜ್ ರೀತಿಯಲ್ಲಿ ದಂಧೆ ನಡೆಸುತ್ತಿದ್ದರು. ಈ ಕುರಿತು ತನಿಖೆ ಮುಂದುವರಿಸಿದ್ದೇವೆ. ಇನ್ನೂ ಇಬ್ಬರು ಮಧ್ಯವರ್ತಿಗಳು ಸಿಗಬೇಕಿದೆ. ಅವರು ಸಿಕ್ಕಮೇಲೆ ಇತರೆ ಮಾಹಿತಿಗಳು ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ
ಮೂರು ತಿಂಗಳಲ್ಲಿ 242 ಭ್ರೂಣ ಹತ್ಯೆ ಮಾಡಲಾಗಿದ್ದು, ಆರೋಪಿಗಳೇ ಒಪ್ಪಿಕೊಂಡಂತೆ ಎರಡು ವರ್ಷಗಳಿಂದ ಭ್ರೂಣ ಹತ್ಯೆ ಮಾಡುತ್ತಿದ್ದಾರೆ. ಇದರ ಲೆಕ್ಕದಂತೆ ಒಂದು ವರ್ಷಕ್ಕೆ ಕನಿಷ್ಠ 1,000 ಭ್ರೂಣ ಹತ್ಯೆ ಮಾಡುತ್ತಿದ್ದಾರೆ. ಎರಡು ವರ್ಷಕ್ಕೆ 2,000 ಭ್ರೂಣ ಹತ್ಯೆ ಮಾಡಿರುವ ಶಂಕೆ ಇದೆ. ಪೊಲೀಸರ ತನಿಖೆಯಲ್ಲಿ ಮೂರು ವರ್ಷದಿಂದ ಕೃತ್ಯವೆಸಗಿರುವುದು ಗೊತ್ತಾಗಿದೆ. ಅಲ್ಲಿಗೆ 3,000 ದಷ್ಟು ಭ್ರೂಣ ಹತ್ಯೆ ಮಾಡಿರುವ ಸಾಧ್ಯತೆ ಇದೆ.
ಇನ್ನು ಈ ಪ್ರಕರಣದ ತನಿಖೆಯಲ್ಲಿ ತಮಗೆ ಎರಡು ಸ್ಕ್ಯಾನಿಂಗ್ ಮಷಿನ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಈ ಪೈಕಿ ಒಂದು ಕೆಟ್ಟಿದ್ದು, ಮತ್ತೊಂದು ಚೆನ್ನಾಗಿದೆ ಎಂದಿದ್ದಾರೆ.
ಸಾಮಾನ್ಯವಾಗಿ ಇಂತಹ ಸ್ಕ್ಯಾನಿಂಗ್ ಮಷಿನ್ ಗಳು ಮತ್ತು ಸಲಕರಣೆಗಳನ್ನು ಪಡೆಯಬೇಕೆಂದರೆ ಡಿಎಚ್‌ಒ ಅವರ ಅನುಮತಿ ಪಡೆಯುವುದು ಅಗತ್ಯವಿರುತ್ತದೆ.
ಅಧಿಕಾರಿಗಳೂ ಕೂಡ ಇದರಲ್ಲಿ ಶಾಮೀಲಾಗಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ದಯಾನಂದ್ ಅವರು, ಈ ಸಾಧ್ಯತೆಗಳೂ ಕೂಡ ಇವೆ, ಅದರ ಬಗ್ಗೆ ಮುಂದಿನ ತನಿಖೆಯಲ್ಲಿ ತಿಳಿದುಬರಲಿದೆ ಎಂದರು.
ಸದ್ಯ ಪೊಲೀಸರ ಅತಿಥಿಯಾಗಿರುವ ವೀರೇಶ್ ಹಾಗೂ ಸಿದ್ದೇಶ್ ಎಂಬುವವರು ಮೂಲತಃ ಹೊನ್ನಾಳಿಯವರಾಗಿದ್ದು ಈ ಹಿಂದೆ ಅವರು ಕಿಡ್ನಾಪ್ ಕೇಸ್ ಒಂದರಲ್ಲಿ ಆರೋಪಿಯಾಗಿದ್ದರು ಎಂದು ತಿಳಿಸಿದ್ದಾರೆ.
ಸದ್ಯಕ್ಕೆ ಕಳೆದ ಮೂರು ತಿಂಗಳ ಮಾಹಿತಿ ಮೊದಲ ಹಂತದ ತನಿಖೆಯಲ್ಲಿ ಲಭಿಸಿದ್ದು, ಈ ಕುರಿತು ತನಿಖೆ ನಡೆಯುತ್ತಿದೆ. ಎಲ್ಲಾ ಆರೋಪಿಗಳನ್ನೂ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದ್ದು ವಿಚಾರಣೆ ನಡೆಯುತ್ತಿದೆ ಮತ್ತು ಕೆಲ ಪೋಷಕರನ್ನೂ ಕೂಡ ತನಿಖೆ ಮಾಡಲಿದ್ದೇವೆ ಎಂದು ಹೇಳಿದ್ದಾರೆ.
ನವಜಾತ ಶಿಶು ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿ, ಆರ್.ಆರ್.ನಗರದಲ್ಲಿನ ಹಸುಗೂಸು ಮಾರಾಟ ಪ್ರಕರಣವನ್ನು ಸಿಸಿಬಿ ಪೊಲೀಸರು ಭೇದಿಸಿದ್ದಾರೆ. ಮಕ್ಕಳ ಮಾರಾಟದ ಬಗ್ಗೆ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ವಿಫ್ಟ್ ಕಾರಿನಲ್ಲಿ ಮಗು ಸಾಗಿಸುತ್ತಿದ್ದಾಗ ಸಿಸಿಬಿ ತಂಡ ದಾಳಿ ಮಾಡಿತ್ತು. ಇಪತ್ತು ದಿನದ ಗಂಡು ಮಗುವನ್ನು ರಕ್ಷಣೆ ಮಾಡಲಾಗಿದೆ. ಬಂಧಿತ ಆರೋಪಿಗಳು ತಮಿಳುನಾಡು ಮೂಲದವರು. ಬಡ ಮಹಿಳೆಯರಿಗೆ ಗರ್ಭಧಾರಣೆ ಮಾಡಿಸಿ ಮಗು ಮಾರುತ್ತಿದ್ದರು.
8 ರಿಂದ 10 ಲಕ್ಷಕ್ಕೆ ಮಗು ಮಾರಾಟ ಮಾಡುತ್ತಿದ್ದದ್ದು ಬೆಳಕಿಗೆ ಬಂದಿದೆ. ತಮಿಳುನಾಡಿನ ಆಸ್ಪತ್ರೆಗಳು, ವೈದ್ಯರು ಮತ್ತು ಬೆಂಗಳೂರಿನ ಓರ್ವ ಮಹಿಳೆ ಮಕ್ಕಳನ್ನು ಮಾರಾಟ ಮಾಡಲು ಸಹಾಯ ಮಾಡುತ್ತಿದ್ದಳು. ಹತ್ತಕ್ಕೂ ಹೆಚ್ಚು ಮಕ್ಕಳನ್ನು ಮಾರಾಟ ಮಾಡಿರುವ ಬಗ್ಗೆ ಮಾಹಿತಿ ಇದೆ. ತಮಿಳುನಾಡಿನ 4 ಆಸ್ಪತ್ರೆಗಳಲ್ಲಿ ಕೃತ್ಯ ನಡೆದಿರುವ ಬಗ್ಗೆ ಮಾಹಿತಿ ಇದೆ ಎಂದು ಹೇಳಿದರು.
ರಾಕ್ಲೈನ್ ಸಹೋದರ ಭ್ರಮರೇಶ್ ಮನೆಯಲ್ಲಿ ಕಳ್ಳತನ: 7 ಆರೋಪಿಗಳ ಬಂಧನ
ರಾಕ್ಲೈನ್ ಸಹೋದರ ಭ್ರಮರೇಶ್ ಮನೆಯಲ್ಲಿ ವಸ್ತುಗಳು ಕಳ್ಳತನವಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಪ್ರಕರಣ ಸಂಬಂಧ ಮಹಾಲಕ್ಷ್ಮೀ ಲೇಔಟ್ ಪೊಲೀಸರು ಏಳು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಒಂದೂವರೆ ಕೋಟಿ ಮೌಲ್ಯದ ಚಿನ್ನ, ವಾಚ್, ಬೆಳ್ಳಿ ವಸ್ತುಗಳು ವಶಕ್ಕೆ ಪಡೆಯಲಾಗಿದೆ. ಭ್ರಮರೇಶ್ ಕುಟುಂಬ ಪ್ರವಾಸಕ್ಕೆ ಹೋಗಿದ್ದ ವೇಳೆ ಕಿಟಕಿ ಒಡೆದು ಕಳ್ಳತನ ಮಾಡಲಾಗಿತ್ತು. ದೂರಿನಲ್ಲಿ ಐದು ಕೆಜಿಗೂ ಹೆಚ್ಚು ಚಿನ್ನ ಕಳ್ಳತನವಾಗಿದೆ ಎಂದು ಉಲ್ಲೇಖವಾಗಿದೆ. ಆರೋಪಿಗಳು ಹಲವಾರು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿದರು