ನೇಜಾರು ಕೊಲೆ : ಕೊಡಿಬೆಂಗ್ರೆ ಮಸೀದಿಯಲ್ಲಿ ಒಂದೇ ಕುಟುಂಬದ ನಾಲ್ವರ ಅಂತ್ಯಕ್ರಿಯೆ – ವಿದೇಶದಿಂದ ಆಗಮಿಸಿದ ಮಕ್ಕಳ ತಂದೆ, ಕುಟುಂಬಸ್ಥರ ಮುಗಿಲು ಮುಟ್ಟಿದ ಆಕ್ರಂದನ
ಉಡುಪಿ: ನೇಜಾರು ತೃಪ್ತಿ ಲೇಔಟ್ ನಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ ಶಾಕ್ ನಿಂದ ಜನತೆ ಇನ್ನೂ ಹೊರಬಂದಿಲ್ಲ. ಎಲ್ಲ ನಾಲ್ಕು ಮೃತದೇಹಗಳ ಮರಣೋತ್ತರ ಪರೀಕ್ಷೆ ಪ್ರಕ್ರಿಯೆ ಇಂದು ಬೆಳಗಿನ ಜಾವ ನಾಲ್ಕು ಗಂಟೆಗೆ ಸುಮಾರಿಗೆ ಮಣಿಪಾಲ ಕೆಎಂಸಿ ಶವಗಾರದಲ್ಲಿ ನೆರವೇರಿಸಲಾಯಿತು. ಬಳಿಕ ಕುಟುಂಬ ಮತ್ತು ಊರ ನೂರಾರು ಜನರ ಸಮ್ಮುಖ ಮೃತದೇಹಗಳನ್ನು ದಫನ ಮಾಡಲಾಯಿತು.
ಮನೆಯ ಯಜಮಾನ ನೂರ್ ಮುಹಮ್ಮದ್ ಸೌದಿ ಅರೇಬಿಯಾದಿಂದ ಇಂದು ಬೆಳಗ್ಗೆ 6 ಗಂಟೆ ಸುಮಾರಿಗೆ ಉಡುಪಿಗೆ ಆಗಮಿಸಿದ್ದರು. ನಾಲ್ವರು ಮಕ್ಕಳ ತಂದೆ ಊರಿಗೆ ಬರುವಾಗ ಪತ್ನಿ ಮತ್ತು ಮೂವರು ಮಕ್ಕಳು ಇಹಲೋಕ ತ್ಯಜಿಸಿದ್ದರು. ಓರ್ವ ಹಿರಿಮಗ ಮತ್ತು ತಂದೆಯ ಸಂಕಟ ಮತ್ತು ನೋವು ಯಾವುದೇ ಪದಗಳಿಗೆ ನಿಲುಕುವಂತಿರಲಿಲ್ಲ.
ಉಡುಪಿ ಜಾಮಿಯ ಮಸೀದಿಯಲ್ಲಿ ತಾಯಿ ಮತ್ತು ಹಿರಿಯ ಮಗಳ, ಇಂದ್ರಾಳಿ ಮಸೀದಿಯಲ್ಲಿ ಕಿರಿಯ ಮಗಳ ಹಾಗೂ ಉಡುಪಿ ಖಬರಸ್ತಾನದಲ್ಲಿರುವ ಕೋಣೆಯಲ್ಲಿ ಮಗನ ಪಾರ್ಥಿವ ಶರೀರಗಳ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ನಂತರ ನಾಲ್ಕು ಪ್ರಾರ್ಥಿವ ಶರೀರಗಳನ್ನು ನೇಜಾರು ತೃಪ್ತಿ ಲೇಔಟ್ ನಲ್ಲಿರುವ ಮನೆಗೆ ಕೊಂಡೊಯ್ಯಲಾಯಿತು.
ಸಾರ್ವಜನಿಕ ವೀಕ್ಷಣೆಗೆ ಅವಕಾಶ ಕಲ್ಪಿಸಿ, ಮಧ್ಯಾಹ್ನ ಕೋಡಿಬೆಂಗ್ರೆ ಮಸೀದಿಯಲ್ಲಿ ಅಂತ್ಯಕ್ರಿಯೆಯನ್ನು ನಡೆಸಲಾಯಿತು.