``````````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆ ,ಅಭಿಮಾನಿಗಳಿಗೆ "ಶ್ರೀಅನ೦ತವೃತದ"ಶುಭಾಶಯಗಳು......

ಡಿಸೆಂಬರ್​ 4-15 ರವರೆಗೆ ಚಳಿಗಾಲ ಅಧಿವೇಶನ: ಶಾಸಕರ ಹೆಗಲಿಗೇರಲಿದೆ ಚಿನ್ನದ ಲೇಪಿತ ಗಂಡಬೇರುಂಡ ಬ್ಯಾಡ್ಜ್‌ಗಳು!

ಬೆಂಗಳೂರು: ರಾಜ್ಯದ 224 ಶಾಸಕರು ಇನ್ನು ಮುಂದೆ ರಾಜ್ಯ ಲಾಂಛನ ಗಂಡಬೇರುಂಡ ಇರುವ ಬ್ಯಾಡ್ಜ್ ಧರಿಸಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿದ್ದಾರೆ.

ರಾಜ್ಯ ಲಾಂಛನವಾದ ಗಂಡಬೇರುಂಡದ ಚಿನ್ನದ ಲೇಪಿತ ಬ್ಯಾಡ್ಜ್’ಗಳ ಸಿದ್ಧಪಡಿಸುವಂತೆ ವಿಧಾನಸಭೆ ಸಚಿವಾಲಯ ಆದೇಶ ನೀಡಿದ್ದು, ಬೆಳಗಾವಿ ಅಧಿವೇಶನದ ವೇಳೆಗೆ ಉಡುಗೊರೆ ರೂಪದಲ್ಲಿ ಇದನ್ನು ವಿತರಿಸಲು ಸಿದ್ಧತೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ರಾಜ್ಯಕ್ಕೆ ‘ಕರ್ನಾಟಕ’ ಎಂದು ನಾಮಕರಣ ಮಾಡಿ 50 ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ಶಾಸಕರು ಬ್ಯಾಡ್ಜ್ ಗಳ ಧರಿಸುವ ಮೂಲಕ ಇದಕ್ಕೆ ಮಹತ್ವ ನೀಡಲು ನಿರ್ಧರಿಸಲಾಗಿದೆ.

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ವಿಧಾನಮಂಡಲದ ಅಧಿವೇಶನದಿಂದ ಶಾಸಕರು ಮತ್ತು ಎಂಎಲ್‌ಸಿಗಳು ತಮ್ಮ ಭುಜದ ಎಡಭಾಗದಲ್ಲಿ ಬ್ಯಾಡ್ಜ್‌ಗಳನ್ನು ಧರಿಸಲಿದ್ದಾರೆ. ಅಧಿವೇಶನದಲ್ಲಿ ಅಷ್ಟೇ ಅಲ್ಲದೆ, ಶಾಸಕರು ರಾಜ್ಯ ಮತ್ತು ದೇಶದ ಹೊರಗೆ ಪ್ರಯಾಣಿಸುವಾಗ ಈ ಬ್ಯಾಡ್ಜ್ ಗಳನ್ನು ಧರಿಸುವ ಸಾಧ್ಯತೆಗಳಿವೆ.

ಈ ಬ್ಯಾಡ್ಜ್ ಖಂಡಿತವಾಗಿಯೂ ಅಧಿವೇಶನದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಬ್ಯಾಡ್ಜ್ ಧರಿವಂತೆ ಕಡ್ಡಾಯ ಮಾಡುವುದಿಲ್ಲ. ಆದರೆ, ಬ್ಯಾಡ್ಜ್ ರಾಜ್ಯದ ಲಾಂಛನವನ್ನು ಹೊಂದಿರುವುದರಿಂದ ಧರಿಸಲು ಪ್ರತಿಯೊಬ್ಬ ಶಾಸಕರಿಗೂ ಹೆಮ್ಮೆಯಾಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಇತ್ತೀಚೆಗೆ ಹೊರ ದೇಶದಿಂದ ಚುನಾಯಿತ ಪ್ರತಿನಿಧಿಗಳು ತಮ್ಮನ್ನು ಭೇಟಿಯಾಗಲು ಬಂದಾಗ ಅವರು ತಮ್ಮ ತಮ್ಮ ದೇಶದ ಬ್ಯಾಡ್ಜ್ ಗಳನ್ನು ಧರಿಸಿದ್ದರು. ಇದನ್ನು ಗಮನಿಸಿದ ಸ್ಪೀಕರ್ ಯುಟಿ ಖಾದರ್ ಅವರಿಗೆ ಗಂಡಬೇರುಂಡ ಬ್ಯಾಡ್ಜ್ ಕಲ್ಪನೆ ಬಂದಿದೆ. ಹೀಗಾಗಿ ರಾಜ್ಯದ ಶಾಸಕರಿಗೂ ಇದೇ ರೀತಿಯ ಬ್ಯಾಡ್ಜ್‌ಗಳನ್ನು ನೀಡಲು ಚಿಂತನೆ ನಡೆಸಿದ್ದರು ಎಂದು ಅಧಿಕೃತ ಮೂಲಗಳು ಮಾಹಿತಿ ನೀಡಿದೆ.

ಆರಂಭದಲ್ಲಿ ಶಾಸಕರಿಗೆ ಮಾತ್ರ ಬ್ಯಾಡ್ಜ್‌ಗಳನ್ನು ನೀಡುವ ಆಲೋಚನೆ ಇತ್ತು. ಆದರೆ ವಿಧಾನಪರಿಷತ್ ಸದಸ್ಯರೂ ಕೂಡ ಆಸಕ್ತಿ ತೋರಿದ ಹಿನ್ನೆಲೆಯಲ್ಲಿ ಅವರಿಗೂ ಬ್ಯಾಡ್ಜ್‌ಗಳನ್ನು ನೀಡಲು ನಿರ್ಧರಿಸಲಾಯಿತು.

“ಪ್ರತಿ ಬ್ಯಾಡ್ಜ್‌ಗೆ ಸುಮಾರು 2,800 ರೂಪಾಯಿ ವೆಚ್ಚವಾಗುತ್ತಿದೆ. ಪ್ರತಿ ಶಾಸಕರಿಗೆ ಮೂರು ಸೆಟ್‌ಗಳ ಬ್ಯಾಡ್ಜ್ ಗಳನ್ನು ನೀಡಲಾಗುತ್ತದೆ. ಇದರ ಸಂಪೂರ್ಣ ವೆಚ್ಚ ಸುಮಾರು 20 ಲಕ್ಷ ರೂ. ಆಗಲಿದ್ದು, ಪ್ರಸ್ತಾವನೆಗೆ ಹಣಕಾಸು ಇಲಾಖೆ ಒಪ್ಪಿಗೆ ನೀಡಿದೆ’ ಎಂದು ಮೂಲಗಳು ತಿಳಿಸಿವೆ.

ಹಿತ್ತಾಳೆಯಿಂದ ಬ್ಯಾಡ್ಜ್ ಗಳನ್ನು ಸಿದ್ಧಪಡಿಸಲಾಗುತ್ತಿದ್ದು, ಇದಕ್ಕೆ ಚಿನ್ನದ ಲೇಪನವನ್ನು ನೀಡಲಾಗುತ್ತಿದೆ.ಗಂಡಬೇರುಂಡ ಹಿಂದೂ ಪುರಾಣಗಳಲ್ಲಿ ಎರಡು ತಲೆಯ ಪಕ್ಷಿಯಾಗಿದ್ದು ಇದನ್ನು ಭಗವಾನ್ ವಿಷ್ಣುವಿನ ರೂಪವೆಂದು ನಂಬಲಾಗಿದೆ. ಈ ಲಾಂಛನವನ್ನು ಅಂದಿನ ಮೈಸೂರು ರಾಜ್ಯವು ಬಳಸುತ್ತಿತ್ತು. 50 ವರ್ಷಗಳ ಹಿಂದೆ ಮೈಸೂರು ರಾಜ್ಯವು ಕರ್ನಾಟಕವಾದ ನಂತರವೂ ರಾಜ್ಯದ ಲಾಂಛನವಾಗಿ ಮುಂದುವರೆಸಲಾಯಿತು.

ಇದೇ ಜುಲೈ ತಿಂಗಳ ಬಜೆಟ್ ಅಧಿವೇಶನದ ವೇಳೆ ಶಾಸಕರಲ್ಲದ ಅಪರಿಚಿತ ವ್ಯಕ್ತಿಯೊಬ್ಬರು ವಿಧಾನಸಭೆ ಪ್ರವೇಶಿಸಿ ಕೆಲ ಕಾಲ ಕುಳಿತಿದ್ದ ಆತಂಕಕಾರಿ ಬೆಳವಣಿಗೆ ಕಂಡು ಬಂದಿತ್ತು. ಈ ಬೆಳವಣಿಗೆ ಶಾಸಕರ ಭದ್ರತೆ ಕುರಿತು ಪ್ರಶ್ನೆಗಳನ್ನು ಶುರು ಮಾಡಿತ್ತು. ಶಾಸಕರು ಬ್ಯಾಡ್ಜ್‌ಗಳನ್ನು ಧರಿಸಿದರೆ, ಈ ಭದ್ರತಾ ಲೋಪಗಳೂ ಕೂಡ ಸಂಭವಿಸುವುದಿಲ್ಲ ಎಂದು ಮೂಲಗಳು ತಿಳಿಸಿವೆ.

No Comments

Leave A Comment