ಉಡುಪಿಯಲ್ಲಿ ಎನ್ ಕೌಂಟರ್: ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ವಿಕ್ರಮ್ ಗೌಡ ಸಾವು....ಮಹಾ ಚುನಾವಣೆ: ಮತದಾರರು ಬೂತ್‌ಗಳಿಗೆ ತೆರಳಲು QR ಕೋಡ್ ಪರಿಚಯ...ನವೆಂಬರ್ 25ರಿಂದ ಸಂಸತ್ ಚಳಿಗಾಲದ ಅಧಿವೇಶನ: ಭಾನುವಾರ ಸರ್ವಪಕ್ಷ ಸಭೆ...
24 ಗಂಟೆಗಳಲ್ಲಿ ದಕ್ಷಿಣ ಗಾಜಾಕ್ಕೆ ಸ್ಥಳಾಂತರಗೊಳ್ಳಿ: ಇಸ್ರೇಲ್ ಆದೇಶ ತಿರಸ್ಕರಿಸಿದ ಹಮಾಸ್
ಗಾಜಾ ಸಿಟಿ: ಗಾಜಾಪಟ್ಟಿಯಲ್ಲಿ ಬೀಡು ಬಿಟ್ಟಿರುವ ಹಮಾಸ್ ಉಗ್ರರನ್ನು ನಿರ್ನಾಮ ಮಾಡದೆ ಬಿಡುವುದಿಲ್ಲ ಎಂದು ಪಣತೊಟ್ಟಿರುವ ಇಸ್ರೇಲ್ ಉತ್ತರ ಗಾಜಾದಲ್ಲಿರುವ ಪ್ಯಾಲೆಸ್ಟೀನಿಯನ್ ಜನರನ್ನು 24 ಗಂಟೆಗಳ ಅವಧಿಯಲ್ಲಿ ದಕ್ಷಿಣ ಗಾಜಾಕ್ಕೆ ಸ್ಥಳಾಂತರಗೊಳ್ಳುವಂತೆ ಆದೇಶಿಸಿದ್ದು, ಈ ಆದೇಶವನ್ನು ಹಮಾಸ್ ತಿರಸ್ಕರಿಸಿದೆ.
ಸರಿಸುಮಾರು 1.1 ಮಿಲಿಯನ್ ಪ್ಯಾಲೆಸ್ಟೀನಿಯನ್ನರು ವಾಡಿ ಗಾಜಾದ ಉತ್ತರದಲ್ಲಿ ನೆಲೆಸಿದ್ದಾರೆ, ಇವರ ಸ್ಥಳಾಂತರಕ್ಕೆ ಇಸ್ರೇಲ್ ಆದೇಶಿಸಿದೆ.
ಇಸ್ರೇಲ್ ಯೋಧರು ಗಾಜಾದ ನಿವಾಸಿಗಳ ವೈಯಕ್ತಿಕ ಸುರಕ್ಷತೆಗೆ ಒತ್ತು ನೀಡಿದ್ದು, ಹಮಾಸ್ ಭಯೋತ್ಪಾದಕರು ಅವರನ್ನು ಮಾನವ ಗುರಾಣಿಗಳಾಗಿ ಬಳಸುವ ಸಾಧ್ಯತೆ ಇರುವುದರಿಂದ ಸ್ಥಳದಿಂದ ತೆರಳುವಂತೆ ಒತ್ತಾಯಿಸಿದೆ.
ಆದರೆ, ಇಸ್ರೇಲ್’ನ ಈ ಆದೇಶವನ್ನು ಹಮಾಸ್ ತಿರಸ್ಕರಿಸಿದೆ. “ನಾವು ತುಂಬಾ ಸಾಮರ್ಥ್ಯ ಹೊಂದಿರುವ ವ್ಯಕ್ತಿಗಳಾಗಿದ್ದೇವೆ. ಆ ನಿಟ್ಟಿನಲ್ಲಿ ಯುದ್ಧವನ್ನು ಮುಂದುವರಿಸುತ್ತೇವೆ. ನಮ್ಮ ಬಳಿಯೂ ಹೋರಾಟಗಾರರು ಮತ್ತು ಬೆಂಬಲಿಗರಿದ್ದಾರೆ. ಇಸ್ರೇಲ್ ಬೆದರಿಕೆಯನ್ನು, ಪಲಾಯನಗೊಳ್ಳುವಂತೆ ನೀಡುತ್ತಿರುವ ಆದೇಶವನ್ನು ನಾವು ತಿರಸ್ಕರಿಸುತ್ತಿದ್ದೇವೆಂದು ಹೇಳಿದೆ.
ನಾವು ನಮ್ಮ ಭೂಮಿಯಲ್ಲಿ ಮನೆಗಳಲ್ಲಿ, ನಮ್ಮ ನಗರಗಳಲ್ಲಿ ಸ್ಥಿರವಾಗಿ ನಿಂತಿದ್ದೇವೆ. ನಮ್ಮಿಂದ ಯಾವುದೇ ಸ್ಥಳಾಂತರಗಳೂ ಇರುವುದಿಲ್ಲ ಎಂದು ತಿಳಿಸಿದೆ.
ಇಸ್ರೇಲ್ ಆದೇಶ ಕುರಿತು ಪ್ರತಿಕ್ರಿಯೆ ನೀಡಿರುವ ವಿಶ್ವಸಂಸ್ಥೆ, ಇಸ್ರೇಲ್ ಆದೇಶದಂತೆ ಸರಿಸುಮಾರು 1.1 ಮಿಲಿಯನ್ ಜನರನ್ನು ಸ್ಥಳಾಂತರಿಸಬೇಕಾಗುತ್ತದೆ. ಈ ಆದೇಶವು ಎಲ್ಲ ವಿಶ್ವಸಂಸ್ಥೆ ಸಿಬ್ಬಂದಿ ಮತ್ತು ಶಾಲೆಗಳು, ಆರೋಗ್ಯ ಕೇಂದ್ರಗಳು ಮತ್ತು ಚಿಕಿತ್ಸಾಲಯಗಳು ಸೇರಿದಂತೆ ವಿಶ್ವಸಂಸ್ಥೆಯ ಸೌಲಭ್ಯಗಳಲ್ಲಿ ಆಶ್ರಯ ಪಡೆದವರಿಗೆ ಅನ್ವಯಿಸುತ್ತದೆ. ಇಷ್ಟೊಂದು ಬೃಹತ್ ಸಂಖ್ಯೆಯ ಜನರನ್ನು ಸ್ಥಳಾಂತರಿಸುವುದು ವಿನಾಶಕಾರಿ ಪರಿಣಾಮಗಳಿಗೆ ಕಾರಣವಾಗಲಿದೆ. ಇಂಥದೊಂದು ಪ್ರಕ್ರಿಯೆ ಅಸಾಧ್ಯ ಎಂದು ಹೇಳಿದೆ. ಅಲ್ಲದೆ, ಇಸ್ರೇಲ್ ಇಂಥ ಆದೇಶ ನೀಡಿದ್ದರೆ ಅದನ್ನು ರದ್ದುಪಡಿಸಬೇಕೆಂದು ಮನವಿ ಮಾಡಿದೆ.
ವಿಶ್ವಸಂಸ್ಥೆಯ ಪ್ರತಿಕ್ರಿಯೆಯನ್ನು ವಿಶ್ವಸಂಸ್ಥೆಯ ಇಸ್ರೇಲ್ ರಾಯಭಾರಿ ಗಿಲಾಡ್ ಎರ್ಡಾನ್ ಅವರು ಖಂಡಿಸಿದ್ದಾರೆ. ಇದು ಹಮಾಸ್ ವಿರುದ್ಧದ ಮಿಲಿಟರಿ ಕಾರ್ಯಾಚರಣೆಯಾಗಿದ್ದು, ಅಮಾಯಕ ನಾಗರಿಕರಿಗೆ ಉಂಟಾಗಬಹುದಾದ ಹಾನಿಯನ್ನು ಕಡಿಮೆ ಮಾಡುವ ಉದ್ದೇಶದಿಂದ ಗಾಜಾ ನಿವಾಸಿಗಳಿಗೆ ಆರಂಭಿಕ ಎಚ್ಚರಿಕೆಯಾಗಿದೆ ಎಂದು ಹೇಳಿದ್ದಾರೆ.
“ಹಲವು ವರ್ಷಗಳಿಂದ ಹಮಾಸ್ ಶಸ್ತ್ರಾಸ್ತ್ರಗಳನ್ನು ಇಲ್ಲಿ ಸಂಗ್ರಹಿಸಿ ಇಡುತ್ತಿರುವ ಬಗ್ಗೆ ಮತ್ತು ಗಾಜಾ ಪಟ್ಟಿಯಲ್ಲಿನ ನಾಗರಿಕರು ಮತ್ತು ನಾಗರಿಕ ಮೂಲಸೌಕರ್ಯಗಳನ್ನು ಬಳಸಿ ಶಸ್ತ್ರಾಸ್ತ್ರಗಳನ್ನು ಅಡಗಿಸಿಡುತ್ತಿರುವ ಬಗ್ಗೆ ತಿಳಿದಿದ್ದರೂ ವಿಶ್ವಸಂಸ್ಥೆ ಕಣ್ಣುಮುಚ್ಚಿ ಕುಳಿತಿದೆ.
“ಈಗ ಹಮಾಸ್ ಭಯೋತ್ಪಾದಕರಿಂದ ದಾಳಿಗೊಳಗಾದ ಇಸ್ರೇಲ್ ಪರವಾಗಿ ನಿಲ್ಲುವ ಬದಲು, ವಿಶ್ವಸಂಸ್ಥೆ ಇಸ್ರೇಲ್‌ಗೆ ನೀತಿ ಬೋಧನೆ ಮಾಡುತ್ತಿದೆ. ಒತ್ತೆಯಾಳುಗಳನ್ನು ಹಿಂದಿರುಗಿಸುವುದು, ಹಮಾಸ್ ಅನ್ನು ಖಂಡಿಸುವುದು ಮತ್ತು ತನ್ನನ್ನು ರಕ್ಷಿಸಿಕೊಳ್ಳುವ ಇಸ್ರೇಲ್‌ನ ಹಕ್ಕನ್ನು ಬೆಂಬಲಿಸುವತ್ತ ವಿಶ್ವಸಂಸ್ಥೆ ಈಗ ಗಮನ ಹರಿಸುವುದು ಉತ್ತಮ” ಎಂದು ತಿಳಿಸಿದ್ದಾರೆ.
ಇಸ್ರೇಲ್- ಪ್ಯಾಲೆಸ್ತೀನ್ ನಡುವಿನ ಸಂಘರ್ಷ ಸುಮಾರು ನೂರು ವರ್ಷಗಳಿಂದ ನಡೆಯುತ್ತಿದೆ. ವೆಸ್ಟ್ ಬ್ಯಾಂಕ್, ಗಾಜಾ ಪಟ್ಟಿ ಮತ್ತು ಗೋಲನ್ ಹೈಟ್ಸ್ ಇನ್ನಿತರ ಪ್ರದೇಶಗಳ ಮೇಲಿನ ಹಕ್ಕಿನ ಬಗ್ಗೆ ಎರಡೂ ರಾಷ್ಟ್ರಗಳ ನಡುವೆ ವಿವಾದ ಇದೆ. ಪೂರ್ವ ಜೆರುಸಲೆಮ್ ಸೇರಿ ಈ ಪ್ರದೇಶಗಳನ್ನು ಪ್ಯಾಲೆಸ್ತೀನ್ ತನ್ನದು ಎಂದು ಹೇಳಿಕೊಳ್ಳುತ್ತಿದೆ. ಆದರೆ ಇಸ್ರೇಲ್ ಜೆರುಸಲೆಮ್ ಮೇಲಿನ ಹಕ್ಕನ್ನು ಸಾಧಿಸುತ್ತಿದೆ.
ಗಾಜಾ ಪಟ್ಟಿ ಇಸ್ರೇಲ್ ಮತ್ತು ಈಜಿಪ್ಟ್ ನಡುವೆ ಇದೆ. ಈ ಸ್ಥಳವು ಪ್ರಸ್ತುತ ಹಮಾಸ್ ಉಗ್ರರ ನಿಯಂತ್ರಣದಲ್ಲಿದೆ. ಹಮಾಸ್ ಎಂಬುದು ಇದು ಇಸ್ರೇಲ್ ವಿರೋಧಿ ಗುಂಪು. ಸೆಪ್ಟೆಂಬರ್ 2005 ರಲ್ಲಿ ಇಸ್ರೇಲ್, ಗಾಜಾ ಪಟ್ಟಿಯಿಂದ ತನ್ನ ಪಡೆಗಳನ್ನು ಹಿಂತೆಗೆದುಕೊಂಡಿತು. ನಂತರ ಈ ಪ್ರದೇಶದ ಮೇಲೆ ಹಲವಾರು ನಿರ್ಬಂಧಗಳನ್ನು ವಿಧಿಸಿತು. ವೆಸ್ಟ್ ಬ್ಯಾಂಕ್ ಮತ್ತು ಗಾಜಾ ಪಟ್ಟಿಯಲ್ಲಿ ಸ್ವತಂತ್ರ ಪ್ಯಾಲೆಸ್ಟೈನ್ ರಾಜ್ಯವನ್ನು ಸ್ಥಾಪಿಸಬೇಕು ಎಂದು ಪ್ಯಾಲೆಸ್ತೀನ್ ಹೋರಾಟ ನಡೆಸುತ್ತಿದೆ.
ಅಕ್ಟೋಬರ್ 7ರಂದು ಹಮಾಸ್ ಉಗ್ರರು ಇಸ್ರೇಲ್ ಮೇಲೆ ದಾಳಿ ನಡೆಸಿ, 1,200 ಮಂದಿಯನ್ನು ಹತ್ಯೆ ಮಾಡಿದ್ದರು. ಈ ದಾಳಿಗೆ ಪ್ರತೀಕಾರವಾಗಿ ಹಮಾಸ್ ಅನ್ನು ನಾಶಗೈಯ್ಯುವುದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಘೋಷಿಸಿದ್ದಾರೆ. ಆದರೆ, ಇಸ್ರೇಲ್ ದಾಳಿಯಿಂದಾಗಿ ಗಾಝಾ ಪಟ್ಟಿಯಲ್ಲಿ ಅಪಾರ ಸಾವು ನೋವು ಸಂಭವಿಸಿದ್ದು, ಸಾವಿನ ಸಂಖ್ಯೆ 1530 ದಾಟಿದೆ.
ಗಾಜಾದತ್ತ ಹೊರಟ ಇಸ್ರೇಲ್ ಬಂಕರ್‌ಗಳು; ಹಮಾಸ್ ಉಗ್ರರ ನಿರ್ಣಾಮ ನಿಶ್ಚಿತ!
ಈ ನಡುವೆ ಗಡುವ ನೀಡಿದ ಕೆಲವೇ ಗಂಟೆಗಳಲ್ಲಿ ಇಸ್ರೇಲ್‌ನ ಶಸ್ತ್ರಸಜ್ಜಿತ ವಾಹನಗಳು, ಬಂಕರ್‌ಗಳು ಗಾಜಾ ಗಡಿಯತ್ತ ಮುನ್ನುಗ್ಗುತ್ತಿದ್ದು, ಕೆಲವೇ ಗಂಟೆಯಲ್ಲಿ ಗಾಜಾಪಟ್ಟಿ ಮೇಲೆ ಪೂರ್ಣ ಪ್ರಮಾಣದ ದಾಳಿ ಆರಂಭಿಸಲಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
ಗಾಜಾ ನಗರದಲ್ಲಿ ಹಮಾಸ್ ಉಗ್ರರು ಜನರ ಮನೆಗಳಲ್ಲಿ, ಗುಹೆಗಳಲ್ಲಿ, ದೊಡ್ಡ ದೊಡ್ಡ ಕಟ್ಟಡಗಳಲ್ಲಿ ಅಡಗಿ ಕುಳಿತಿದ್ದಾರೆ ಎಂಬ ಮಾಹಿತಿ ಇಸ್ರೇಲ್‌ಗೆ ಲಭ್ಯವಾಗಿದೆ.
ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು, ರಾಕೆಟ್‌ಗಳನ್ನು ಇಟ್ಟುಕೊಂಡಿರುವ ಹಮಾಸ್ ಉಗ್ರರು ಎಂದಿಗೂ ತಲೆನೋವು ಎಂಬುದು ಇಸ್ರೇಲ್‌ಗೆ ಗೊತ್ತಿದೆ. ಅದರಲ್ಲೂ, ಇಸ್ರೇಲ್ ಮೇಲೆ ದಾಳಿ ಮಾಡುವ ಮೂಲಕ ಹಮಾಸ್ ಉಗ್ರರು ಸಾವಿರಾರು ಜನರನ್ನು ಕೊಂದಿದ್ದಾರೆ. ಹಾಗಾಗಿ, ಗಾಜಾ ನಗರದ ಮೇಲೆ ಪೂರ್ಣಪ್ರಮಾಣದ ದಾಳಿ ಮಾಡುವ ಮೂಲಕ ಇಡೀ ನಗರವನ್ನು, ಹಮಾಸ್ ಉಗ್ರರನ್ನು ನಾಶಗೊಳಿಸಬೇಕು ಎಂಬುದು ಇಸ್ರೇಲ್ ಉದ್ದೇಶವಾಗಿದೆ. ಹಾಗಾಗಿಯೇ, ನೂರಾರು ಬಂಕರ್‌ಗಳನ್ನು, ವಾಹನಗಳನ್ನು ಗಾಜಾ ನಗರದತ್ತ ಸಾಗಿಸುತ್ತಿದೆ ಎಂದು ತಿಳಿದುಬಂದಿದೆ.