ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು

ಬಾಕಿ ಮೊತ್ತ ಬಿಡುಗಡೆ ಮಾಡಿ: ಸರ್ಕಾರಕ್ಕೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ 30 ದಿನಗಳ ಗಡುವು!

ಬೆಂಗಳೂರು: ಒಂದು ತಿಂಗಳೊಳಗೆ ಎಲ್ಲಾ ಇಲಾಖೆಗಳಲ್ಲೂ ಕನಿಷ್ಟ ಶೇ.50ರಷ್ಟು ಬಾಕಿ ಮೊತ್ತ ಬಿಡುಗಡೆ ಮಾಡಬೇಕು, ಇಲ್ಲದಿದ್ದರೆ, ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ಸರ್ಕಾರಕ್ಕೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಶುಕ್ರವಾರ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರು, ಬಾಕಿ ಬಿಲ್​ ಪಾವತಿಸುವಂತೆ ನಾಲ್ಕು ನಾಲ್ಕು ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದೇವೆ. ಅದರೆ ಇದುವರೆಗೆ ಪಾವತಿ ಮಾಡಿಲ್ಲ. ರಾಜ್ಯ ಸರ್ಕಾರದಿಂದ ಇನ್ನೂ 20 ಸಾವಿರ ಕೋಟಿ ರೂ. ಬಾಕಿ ಬರಬೇಕಿದೆ. ಜಲಸಂಪನ್ಮೂಲ, ಸಣ್ಣ ನೀರಾವರಿ, ಲೋಕೋಪಯೋಗಿ ಇಲಾಖೆ, ಗ್ರಾಮೀಣಾಭಿವೃದ್ಧಿ ಸೇರಿದಂತೆ ಹಲವು ಇಲಾಖೆಗಳಿಂದ ಬಾಕಿ ಬರಬೇಕು. ಇಂದಿನಿಂದ ಸರ್ಕಾರಕ್ಕೆ 30 ದಿನ ಗಡವು ನೀಡುತ್ತೇವೆ. ಕರೆದು ಮಾತನಾಡಿ ಬಗೆಹರಿಸಬೇಕು. ಇಲ್ಲವಾದರೆ ಹೋರಾಟ ಅನಿವಾರ್ಯ ಎಂದು ಹೇಳಿದರು.

ಹಳೇ ಸಮಸ್ಯೆಗಳ ಜೊತೆ ಹೊಸ ಸಮಸ್ಯೆಗಳು ಸೇರ್ಪಡೆಯಾಗಿವೆ. ತನಿಖೆ ಹೆಸರಲ್ಲಿ ರಾಜ್ಯ ಸರ್ಕಾರ ಬಾಕಿ ಹಣ ತಡೆಹಿಡಿದಿದೆ. ಕೆಲವು ಇಲಾಖೆಗಳಲ್ಲಿ ಶೇಕಡಾ 7ರಷ್ಟು ಹಣ ಬಿಡುಗಡೆ ಮಾಡಿದ್ದಾರೆ. ಒಂದು ತಿಂಗಳಲ್ಲಿ ಶೇ.50ರಷ್ಟು ಬಾಕಿ ಮೊತ್ತ ಬಿಡುಗಡೆ ಮಾಡಬೇಕು. ತಮಗೆ ಬೇಕಾದ ಕೆಲ ಗುತ್ತಿಗೆದಾರರಿಗೆ ಮಾತ್ರ ಹಣ ಬಿಡುಗಡೆ ಮಾಡುತ್ತಿದ್ದಾರೆ. ಈ ಬಗ್ಗೆ ಕೇಳಿದರೇ ಗೊತ್ತಿಲ್ಲ ಅಂತಾ ಇಂಜಿನಿಯರ್​​​ಗಳು ಹೇಳುತ್ತಿದ್ದಾರೆ. ಗುತ್ತಿಗೆದಾರರ ಬಾಕಿ ಬಿಲ್​ ಪಾವತಿ ಮಾಡದಿದ್ದರೇ ಪ್ರತಿಭಟನೆ ಮಾಡುತ್ತೇವೆ. ಈ ಬಗ್ಗೆ ಸಿಎಂ ಅವರಿಗೆ ಪತ್ರ ಬರೆಯುತ್ತೇವೆ, ಪ್ರಧಾನ ಮಂತ್ರಿಗೂ ಪತ್ರ ಬರೆಯುತ್ತೇವೆಂದು ತಿಳಿಸಿದರು.

ಕೆಲ ಗುತ್ತಿಗೆದಾರರಿಗೆ ಶಿಫಾರಸು ಪತ್ರ ತಂದರೆ ಕಮಿಷನ್ ಪಡೆದು ರಾತ್ರೋರಾತ್ರಿ ಚೆಕ್ ನೀಡುತ್ತಿದ್ದಾರೆ. ಕೆಲ ಗುತ್ತಿಗೆದಾರರು ಸಾಲ-ಸೋಲ ಮಾಡಿ, ಇನ್ನೂ ಕೆಲವರು ಖಾಸಗಿ ಲೇವಾದೇವಿಗಳ ಬಳಿ ಅಸ್ತಿ ಪತ್ರ ಅಡವಿಟ್ಟು ಕಾಮಗಾರಿ ಮಾಡಿದ್ದಾರೆ. ಅದೆಷ್ಟೋ ಗುತ್ತಿಗೆದಾರರು ಸಾಲಗಾರರ ಕಾಟಕ್ಕೆ ಊರು ಬಿಟ್ಟಿದ್ದಾರೆ. ಸರ್ಕಾರ ಒಂದು ತಿಂಗಳಲ್ಲಿ ಬಾಕಿ ಮೊತ್ತ ಶೇ 50 ರಷ್ಟು ಬಿಡುಗಡೆ ಮಾಡಬೇಕು. ಇಲ್ಲವಾದರೆ ಇಡೀ ರಾಜ್ಯದಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದರು.

ಅಂಬಿಕಾಪತಿ ಮನೆ‌ ಮೇಲೆ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿ, ಅಂಬಿಕಾಪತಿ ಅವರು ಬಹಳಷ್ಟು ವರ್ಷಗಳಿಂದ ಕಾಂಟ್ರ್ಯಾಕ್ಟರ್ ಕೆಲಸ ಮಾಡುತ್ತಿಲ್ಲ. 42 ಕೋಟಿ ರೂ. ಪತ್ತೆಯಾಗಿರುವುದು ಗೊತ್ತಾಯ್ತು. ಅವರದ್ದು ಇದೊಂದೇ ವ್ಯಾಪಾರವಲ್ಲ. ಅವರದ್ದು ಕೃಷಿ, ಜಲ್ಲಿ ಕ್ರಷರ್ ಸೇರಿದಂತೆ ಅನೇಕ ವ್ಯಾಪಾರಗಳಿವೆ. ಅವರು ಈಗ ಕಂಟ್ರಾಕ್ಟರ್ ಕೆಲಸವನ್ನೇ ನಿಲ್ಲಿಸಿಬಿಟ್ಟಿದ್ದಾರೆ ಎಂದು ಹೇಳಿದರು.

No Comments

Leave A Comment