ಉಡುಪಿಯಲ್ಲಿ ಎನ್ ಕೌಂಟರ್: ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ವಿಕ್ರಮ್ ಗೌಡ ಸಾವು....ಮಹಾ ಚುನಾವಣೆ: ಮತದಾರರು ಬೂತ್‌ಗಳಿಗೆ ತೆರಳಲು QR ಕೋಡ್ ಪರಿಚಯ...ನವೆಂಬರ್ 25ರಿಂದ ಸಂಸತ್ ಚಳಿಗಾಲದ ಅಧಿವೇಶನ: ಭಾನುವಾರ ಸರ್ವಪಕ್ಷ ಸಭೆ...
ಉಡುಪಿ: 4 ವರ್ಷ ಕಳೆದರೂ ವಾಸಕ್ಕೆ ಸಿಗದ ಸರಕಾರಿ ವಸತಿ ಸಮುಚ್ಚಯ – ಸಂತ್ರಸ್ತರಿಂದ ಪ್ರತಿಭಟನೆ
ಉಡುಪಿ:ಅ 06, ಉಡುಪಿ ನಗರಸಭೆ ವ್ಯಾಪ್ತಿಯ ಹೆರ್ಗ ಗ್ರಾಮದಲ್ಲಿರುವ ಸರಕಾರಿ ವಸತಿ ಸಮುಚ್ಷಯದಲ್ಲಿ ಸೂಕ್ತವಾದ ಮೂಲ ಸೌಕರ್ಯ ಕಲ್ಪಿಸಿ ಮತ್ತು ಶೀಘ್ರದಲ್ಲಿ ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರ ಮಾಡುವಂತೆ ಆಗ್ರಹಿಸಿ ಉಡುಪಿ ನಗರಸಭೆ ವ್ಯಾಪ್ತಿಯ ನಿವೇಶನ ರಹಿತರ ಹೋರಾಟ ಸಮಿತಿಯ ವತಿಯಿಂದ ಅ. 06 ರಂದು ಉಡುಪಿ ನಗರಸಭೆ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಉಡುಪಿ ನಗರ ಸಭೆ ವ್ಯಾಪ್ತಿಯ ಹೆರ್ಗದ ಸರಕಾರಿ ಜಾಗದಲ್ಲಿ ಸುಸಜ್ಜಿತ ವಸತಿ ಸಮುಚ್ಛಯ ಮಹಡಿಯ ಕಟ್ಟಡದ ನಿರ್ಮಾಣವು ಅಂತಿಮ ಹಂತ ತಲುಪಿ 4 ವರ್ಷ ಕಳೆದರೂ ನಿವೇಶನ ರಹಿತ ಫಲಾನುಭವಿಗಳು ಹಲವಾರು ಮೂಲ ಸೌಕರ್ಯದಿಂದ ವಂಚಿತರಾಗಿದ್ದಾರೆ, ಫಲಾನುಭವಿಗಳು ವಸತಿ ಸಮುಚ್ಛಯದಲ್ಲಿ ವಾಸವಾಗಲು ಯೋಗ್ಯಮೂಲ ಸೌಕರ್ಯವಿಲ್ಲದೆ ಅಕ್ಷರಶಃ ಬೀದಿ ಪಾಲಾಗುವಂತಹ ಆತಂಕದ ಸ್ಥಿತಿ ಎದುರಿಸುತ್ತಿದ್ದಾರೆ ಆದುದರಿಂದಾಗಿ ಶೀಘ್ರದಲ್ಲಿಯೇ ಮನೆಗಳ ಕಾಮಗಾರಿಯನ್ನು ಪೂರ್ಣ ಗೊಳಿಸಿ ಫಲಾನುಭವಿಗಳಿಗೆ ಮನೆ ಹಸ್ತಾಂತರ ಮಾಡುವಂತೆ ಆಗ್ರಹಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಫಲಾನುಭವಿ ಸುಪ್ರಿತಾ ಮಾತನಾಡಿ “ಮನೆಯನ್ನು ಪಡೆಯಲು ನಾವು ಮೊದಲಿಗೆ 90 ಸಾವಿರ ಸಾಲ ಮಾಡಿ ಹಣ ಕಟ್ಟಿದ್ದೆವು. ಅದು ಸಾಲ ಇನ್ನೂ ಕೂಡಾ ಪೂರ್ಣ ಪಾವತಿ ಆಗಿಲ್ಲ. ಮಾತ್ರವಲ್ಲದೇ ಬ್ಯಾಂಕ್ ನಿಂದ 3.10 ಲಕ್ಷ ರುಪಾಯಿ ಸಾಲ ಮಾಡಿ ಕೊಟ್ಟಿದ್ದಾರೆ. ಅದರ ಕಂತನ್ನು ಕೂಡಾ ಇದೀಗ ಪ್ರತಿ ತಿಂಗಳು ಕಟ್ಟುತ್ತಾ ಬರುತ್ತಿದ್ದೇವೆ. ಪ್ರಸ್ತುತ ಬಾಡಿಗೆ ಮನೆಯಲ್ಲಿ ಇದ್ದು ಅದರ ಬಾಡಿಗೆ ಕೂಡಾ ಕಟ್ಟಬೇಕು. ಮನೆ ಕೂಡಾ ಇಲ್ಲ, ಸಾಲ ಕೂಡಾ ಕಟ್ಟಬೇಕಾದ ಪರಿಸ್ಥಿತಿಯಲ್ಲಿ ಇದ್ದೇವೆ. ಆದಷ್ಟು ಬೇಗ ಮನೆ ನಮಗೆ ಸಿಕ್ಕಿದರೆ ಉಪಯೋಗವಾಗುತ್ತದೆ. ವಿದ್ಯುತ್ ಸಂಪರ್ಕ, ನೀರಿನ ಸಂಪರ್ಕ ಮತ್ತು ಇನ್ನಿತರ ಮೂಲಭೂತ ಸೌಕರ್ಯಕ್ಕಾಗಿ ಹಣ ಕೂಡಾ ಪಡೆದಿದ್ದಾರೆ. ಈ ವರ್ಷ ಆಸ್ತಿ ತೆರಿಗೆ ಕೂಡಾ ಕಟ್ಟಿದ್ದೇವೆ. ನಾವು ಹೊಟ್ಟೆಗೆ ಏನು ತಿನ್ನಬೇಕು, ಮಕ್ಕಳ ವಿದ್ಯಾಭ್ಯಾಸ ಮತ್ತು ಇತರ ಖರ್ಚು ಕೂಡಾ ಇದೆ. ಇದು 240 ಕುಟುಂಬಗಳ ಸಮಸ್ಯೆ” ಎಂದರು.
ಮತ್ತೋರ್ವ ಫಲಾನುಭವಿ ರಾಜಶೇಖರ ಮಾತನಾಡಿ “ಉಡುಪಿ ನಗರ ಭಾಗದಲ್ಲಿರುವ ನಿವೇಶನ ರಹಿತ ಬಡವರಿಗಾಗಿ ಕರ್ನಾಟಕ ಸರಕಾರ ಕೊಳೇಗೇರಿ ಅಭಿವೃದ್ದಿ ನಿಗಮದಿಂದ ಈ ಮನೆಗಳನ್ನು ನಿರ್ಮಿಸಲಾಗಿದೆ. ಕೆಲವೊಂದು ಮನೆಗಳ ಕಾಮಗಾರಿ ಇನ್ನೂ ಕೂಡಾ ಬಾಕಿ ಇದೆ. ಮನೆಗಾಗಿ ಬ್ಯಾಂಕ್ ಸಾಲ ಕೂಡಾ ಮಾಡಲಾಗಿದ್ದು ಇದನ್ನು ಕೂಡಾ ಕಟ್ಟಬೇಕಾಗಿದೆ. ಈ ಹಿಂದಿನ ಶಾಸಕರು ಹಕ್ಕುಪತ್ರವನ್ನು ಕೂಡಾ ವಿತರಣೆ ಮಾಡಿದ್ದರು ಆದರೆ ಆ ಮನೆಗಳು ನಮಗೆ ಇನ್ನೂ ಕೂಡಾ ಹಸ್ತಾಂತರ ಆಗಿಲ್ಲ” ಎಂದರು.
ಇಲ್ಲಿ ನಿರ್ಮಾಣ ಮಾಡಿರುವ ಮನೆಗಳಲ್ಲಿ ಕುಡಿಯುವ ಶುದ್ಧ ನೀರಿನ ನಳ್ಳಿ ಸಂಪರ್ಕ ಒದಗಿಸಬೇಕು. ಮನೆ ಹಾಗೂ ವಸತಿ ಸಮುಚ್ಚಯ ಕಟ್ಟಡಕ್ಕೆ ಸಮರ್ಪಕ ವಿದ್ಯುತ್ ಸಂಪರ್ಕದ ವ್ಯವಸ್ಥೆ ನೀಡಬೇಕು, ವಸತಿ ಸಮುಚ್ಚಯಕ್ಕೆ ಕಿಟಕಿ, ಬಾಗಿಲು ಅಳವಡಿಸಬೇಕು ಮತ್ತು ಕಟ್ಟಡಕ್ಕೆ ಸುಣ್ಣ – ಬಣ್ಣ ಪೈಂಟಿಂಗ್, ವಸತಿ ಸಮುಚ್ಛಯಕ್ಕೆ ಸಂಪರ್ಕಿಸುವ ಕಚ್ಚಾ ರಸ್ತೆಯನ್ನು ಪಕ್ಕಾ ರಸ್ತೆ ನಿರ್ಮಾಣದ ಅಭಿವೃದ್ಧಿಗೊಳಿಸುವುದು, ವಸತಿ ಸಮುಚ್ಚಯದ ಸುತ್ತಮುತ್ತಲಿನ ರಸ್ತೆಗೆ ಕಾಂಕ್ರೀಟೀಕರಣ ಅಭಿವೃದ್ಧಿ ಕಾಮಗಾರಿ ಮಾಡಬೇಕು ಮತ್ತು ದಾರಿದೀಪ ಅಳವಡಿಸಬೇಕು, ನಿವೇಶನ ರಹಿತ ಫಲಾನುಭವಿಗಳಿಗೆ ಬ್ಯಾಂಕ್ ನಿಂದ ಸಹಾಯಧನದೊಂದಿಗೆ ಸಾಲ ಸೌಲಭ್ಯ ದೊರಕದವರಿಗೆ ಈ ಕೂಡಲೇ ಸಾಲ ಸೌಲಭ್ಯ ಕೂಡಿಸಲು ಕ್ರಮ ವಹಿಸಬೇಕು ಎಂದು ಸಂತ್ರಸ್ತರು ಆಗ್ರಹಿಸಿದರು.