ದೇಹಾಂತ್ಯವಾಗುವವರೆಗೂ ಬಿಜೆಪಿ ಬಿಡುವುದಿಲ್ಲ; ನಾನು ಲೋಕಸಭೆ ಟಿಕೆಟ್ ಪ್ರಬಲ ಆಕಾಂಕ್ಷಿ: ಪ್ರಮೋದ್ ಮಧ್ವರಾಜ್
ಉಡುಪಿ: ಇನ್ನೇನು ಕೆಲವೇ ತಿಂಗಳಲ್ಲಿ ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಹೀಗಿರುವಾಗ ಎಲ್ಲಾ ಪಕ್ಷಗಳಲ್ಲಿ ಟಿಕೆಟ್ ಆಕಾಕ್ಷಿಗಳ ಪಟ್ಟಿ ದಿನೇ ದಿನೇ ಹೆಚ್ಚುತ್ತಿದೆ. ಸದ್ಯ ಉಡುಪಿಯ ಬಿಜೆಪಿ ನಾಯಕ ಪ್ರಮೋದ್ ಮಧ್ವರಾಜ್ ತಾನು ಪ್ರಬಲ ಟಿಕೆಟ್ ಆಕಾಂಕ್ಷಿ ಎನ್ನುವ ಮೂಲಕ ಈ ಸ್ಪರ್ಧೆಗೆ ಮತ್ತಷ್ಟು ಬಲ ತುಂಬಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಲೋಕಸಭೆ ಚುನಾವಣೆಗೆ ಸಾಮಾಜಿಕ ನ್ಯಾಯದ ಅಡಿಯಲ್ಲಿ ಉಡುಪಿ ಚಿಕ್ಕಮಗಳೂರು ಕ್ಷೇತ್ರದಿಂದ ಬಿಜೆಪಿಯಲ್ಲಿ ಪ್ರಬಲ ಆಕಾಂಕ್ಷಿಯಾಗಿದ್ದೇನೆ ಎಂದು ಹೇಳಿದ್ದಾರೆ.
ಕೆಲ ಜನರ ಬಾಯಿಯಲ್ಲಿ ನಾನು ಬಿಜೆಪಿಯನ್ನು ತ್ಯಜಿಸುವ ಸಾಧ್ಯತೆ ಎಂಬ ಅಪಪ್ರಚಾರ ನಡೆಯುತ್ತಿದೆ. ಆದರೆ ಮುಂದೊಂದು ದಿನ ರಾಜಕೀಯ ನಿವೃತ್ತಿಯಾಗುತ್ತೇನೆಯೇ ಹೊರತು, ದೇಹಾಂತ್ಯ ಆಗುವವರೆಗೆ ನಾನು ಬಿಜೆಪಿ ಬಿಡುವುದಿಲ್ಲ. ನಾನು ಕಮಲ ಕಾರ್ಯಕರ್ತನಾಗಿರುತ್ತೇನೆ ಎಂದಿದ್ದಾರೆ.
ಅಲ್ಲದೇ ಬಿಜೆಪಿ ಬಿಡುವ ಮಾತೇ ಇಲ್ಲ ಎಂದಿರುವ ಪ್ರಮೋದ್ ಮಧ್ವರಾಜ್ ಇಹಲೋಕ ತ್ಯಾಗ ಮಾಡುವ ತನಕ ಬಿಜೆಪಿಯಲ್ಲಿ ಮುಂದುವರೆಯುತ್ತೇನೆ. ಈ ಮೂಲಕ ಅಪಪ್ರಚಾರಕ್ಕೆ ತರೆ ಎಳೆಯುತ್ತೇನೆ ಎಂಬ ದೃಢ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹೀಗಿದ್ದರೂ ನನ್ನನ್ನೇ ಆಯ್ಕೆ ಮಾಡುತ್ತಾರೆ ಎಂಬ ಪೂರ್ಣ ವಿಶ್ವಾಸ ಇಲ್ಲ. ಯಾರೂ ಈ ಬಗ್ಗೆ ಸ್ಪಷ್ಟ ಭರವಸೆ ಕೊಟ್ಟಿಲ್ಲ. ಅವಕಾಶ ಕೊಟ್ಟರೆ ಸಂತೋಷದಿಂದ ಎಲ್ಲರ ಆಶೀರ್ವಾದ ಪಡೆದು ಸ್ಪರ್ಧೆ ಮಾಡುತ್ತೇನೆ. ಬೇರೆಯವರಿಗೆ ಟಿಕೆಟ್ ಕೊಟ್ಟರೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ
ಈ ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿದ್ದ ಪ್ರಮೋದ್ ಮಧ್ವರಾಜ್ ಕೇವಲ ಒಂದು ವರ್ಷ ಹಿಂದೆಯಷ್ಟೇ ಬಿಜೆಪಿ ಸೇರಿದ್ದರು. ಅವರರು ಹಿರಿಯ ಕಾಂಗ್ರೆಸ್ ನಾಯಕಿ ಮನೋರಮ ಮಧ್ವರಾಜ್ ಅವರ ಪುತ್ರ. 2024 ಲೋಕ ಸಭಾ ಚುನಾವಣೆಯಲ್ಲಿ ತಾನು ಚಿಕ್ಕಮಗಳೂರು-ಉಡುಪಿ ಕ್ಷೇತ್ರದಿಂದ ಬಿಜೆಪಿಯ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿರುವುದಾಗಿ ಹೇಳಿದರು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಈ ಕ್ಷೇತ್ರವನ್ನು 2014 ರಿಂದ ಪ್ರತಿನಿಧಿಸುತ್ತಿದ್ದಾರೆ.