ನಾಡಿನ ಸಮಸ್ತ ಜನತೆಗೆ ,ನಮ್ಮ ಎಲ್ಲಾ ಗ್ರಾಹಕರಿಗೆ,ಜಾಹೀರಾತುದಾರರಿಗೆ "ಕ್ರಿಸ್ಮಸ್" ಹಬ್ಬ ಹಾಗೂ ಹೊಸವರುಷದ ಶುಭಾಶಯಗಳು...

ಸರ್ಕಾರಿ ಶಾಲಾ ಮಕ್ಕಳ ಬಿಸಿಯೂಟದಲ್ಲಿ ಮೀನು ಸಾರು: ಹೈ ಪ್ರೋಟೀನ್ ಎಂದ ತಜ್ಞರು, ಸಹಮತ

ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ  ನೀಡುವ ಬಿಸಿಯೂಟದ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ. ಮಕ್ಕಳಿಗೆ ಪೌಷ್ಠಿಕಾಂಶವುಳ್ಳ ಆಹಾರ ನೀಡಬೇಕು ಎಂದು ಸರ್ಕಾರ ಚಿಂತನೆ ನಡೆಸುತ್ತಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಸಸ್ಯಾಹಾರ, ಮಾಂಸಾಹಾರದ ವಿಚಾರದಲ್ಲಿ ಚರ್ಚೆಗಳು ಆರಂಭವಾಗಿವೆ. ಕಳೆದ ಕೆಲ ವರ್ಷಗಳಿಂದ ಶಾಲಾ ಮಕ್ಕಳಿಗೆ ನೀಡುವ ಮೊಟ್ಟೆ ವಿಚಾರದಲ್ಲೂ ವಿವಾದ ಶುರುವಾಗಿತ್ತು.

ಈ ಎಲ್ಲಾ ಚರ್ಚೆಗಳ ನಡುವಲ್ಲು ಶಾಲಾ ಮಕ್ಕಳಿಗೆ ಪೌಷ್ಠಿಕಾಂಶಯುಕ್ತ ಆಹಾರ ನೀಡುವ ದೃಷ್ಟಿಯಿಂದ ಸರ್ಕಾರ, ಅತೀ ಹೆಚ್ಚು ಮಕ್ಕಳು ಬಯಸಿದ್ದರಿಂದ ಬಿಸಿಯೂಟದ ಜೊತೆಗೆ ಕೋಳಿ ಮೊಟ್ಟೆ ನೀಡುತ್ತಿದೆ. ಇದರ ಜೊತೆಗೆ ಬಾಳೆಹಣ್ಣು, ಚಿಕ್ಕಿ, ಬೇಳೆ ಸಾರು ಸೇರಿದಂತೆ ಇತರ ಪೌಷ್ಠಿಕಾಂಶಯುಕ್ತ ಆಹಾರವನ್ನು ಬಿಸಿಯೂಟದಲ್ಲಿ ನೀಡಲಾಗುತ್ತಿದೆ.

ಇದರ ನಡುವಲ್ಲೇ ತೆಲಂಗಾಣ ರಾಜ್ಯ ಸರ್ಕಾರ ತಮ್ಮ ರಾಜ್ಯದ ಸರ್ಕಾರಿ ಮಕ್ಕಳಿಗೆ ಮಧ್ಯಾಹ್ನದ ಊಟದಲ್ಲಿ ಮೀನು ಸಾರು ಸೇರಿಸುವ ಕುರಿತು ಚಿಂತನೆ ನಡೆಸುತ್ತಿದ್ದು, ರಾಜ್ಯದ ಬಿಸಿಯೂಟದಲ್ಲಿಯೂ ಮೀನಿನ ಸಾರು ಸೇರಿಸಬೇಕು ಎಂಬುದರ ಕುರಿತು ಕರಾವಳಿಯಲ್ಲಿ ಚರ್ಚೆಗಳು ಆರಂಭವಾಗಿವೆ.

ಈ ನಡುವಲ್ಲೇ ಬಿಸಿಯೂಟ ಮೆನುವಿನಲ್ಲಿ ಮೀನಿನ ಸಾರು ಸೇರಿಸುವ ಪರವಾಗಿ ತಜ್ಞರು ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಮೀನಿನ ಪ್ರೋಟೀನ್ ಶಾಲಾ ಮಕ್ಕಳಿಗೆ ಪ್ರಯೋಜನವನ್ನು ನೀಡುತ್ತದೆ. ಮಕ್ಕಳು ಸ್ಥಳೀಯವಾಗಿ ಲಭ್ಯವಿರುವ ಆಹಾರವನ್ನು ಸೇವಿಸುವುದು ಉತ್ತಮ ಎಂದು ಹೇಳುತ್ತಿದ್ದಾರೆ.

ಆಹಾರ ಭದ್ರತಾ ಕಾಯಿದೆಯಂತೆ ಮಕ್ಕಳ ಆಹಾರ ಕ್ರಮದಲ್ಲಿ ಪ್ರೊಟೀನ್ ಅವಶ್ಯವಾಗಿದೆ. ಇಲ್ಲದಿದ್ದರೆ, ಕಾರ್ಬೋಹೈಡ್ರೇಟ್ ಮತ್ತು ಕೊಬ್ಬಿನಂಶ ಇರುವ ಆಹಾರವನ್ನು ಮಾತ್ರ ಸೇವಿಸಿದಂತಾಗುತ್ತದೆ. ಮಕ್ಕಳು ತಮಗೆ ಬೇಕಾದುದನ್ನು ಸೇವಿಸಲು ಅವಕಾಶವಿದೆ. ಮಕ್ಕಳಲ್ಲಿ ಚಿಕ್ಕವಯಸ್ಸಿನಲ್ಲೇ ಏನು ಬೇಕಾದರೂ ತಿನ್ನಬಹುದು ಎಂಬ ಅರಿವು ಮೂಡಿಸಬೇಕು ಎಂದು ಅಭಿವೃದ್ಧಿ ಶಿಕ್ಷಣತಜ್ಞ ಡಾ ವಿಪಿ ನಿರಂಜನಾರಾಧ್ಯ ಅವರು ಹೇಳಿದ್ದಾರೆ.

ಸಾರ್ವಜನಿಕ ಆರೋಗ್ಯ ವೈದ್ಯೆ ಮತ್ತು ಸಂಶೋಧಕಿ ಡಾ ಸಿಲ್ವಿಯಾ ಕರ್ಪಗಮ್ ಅವರು ಮಾತನಾಡಿ, ಇಂತಹ ಬೆಳವಣಿಗೆಗಳು ಸ್ಥಳೀಯ ಆರ್ಥಿಕತೆಗೆ ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.

ಸ್ಥಳೀಯ ಮೀನುಗಳ ಬಳಕೆಯನ್ನು ಉತ್ತೇಜಿಸುವುದು ಸ್ಥಳೀಯ ಮೀನುಗಾರರಿಗೆ ಸಹಾಯ ಮಾಡಿದಂತಾಗುತ್ತದೆ. ಇದು ಆರ್ಥಿಕತೆಯನ್ನೂ ಹೆಚ್ಚಿಸುತ್ತದೆ. ಕರಾವಳಿ ಪ್ರದೇಶಗಳಲ್ಲಿನ ಶಾಲೆಗಳಲ್ಲಿ ಇದನ್ನು ಪರಿಚಯಿಸುವುದು ಪ್ರಯೋಜನಕಾರಿಯಾಗಿದೆ, ತೆಲಂಗಾಣ ಸರ್ಕಾರ ಈಗಾಗಲೇ ಈ ಬಗ್ಗೆ ಚಿಂತನೆ ನಡೆಸುತ್ತಿದೆ. ಆದರೆ, ಕರ್ನಾಟಕದಲ್ಲಿ ಬಿಸಿಯೂಟದಲ್ಲಿ ಮೊಟ್ಟೆ ಸೇರಿಸಲು ಸರ್ಕಾರ ಹೆಣಗಾಡುವಂತಾಗಿತ್ತು. ಇಂದಿರಾ ಕ್ಯಾಂಟೀನ್ ನಲ್ಲಿ ಮೆನುವಿನಲ್ಲಿ ಇನ್ನೂ ಸೇರ್ಪಡೆಗೊಳಿಸಲು ಸಾಧ್ಯವಾಗಿಲ್ಲ. ಟೀಕೆಗಳಿಂದಾಗಿ ಸರ್ಕಾರ ಇಂತಹ ನಿರ್ಧಾರ ಕೈಗೊಳ್ಳಲು ಹಿಂಜರಿಯುತ್ತಿದೆ ಎಂದು ಹೇಳಿದ್ದಾರೆ.

ಮೀನುಗಾರರ ಸಹಕಾರಿಗಳ ರಾಷ್ಟ್ರೀಯ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ರಿಷಿಕೇಶ್ ಕಶ್ಯಪ್ ಮಾತನಾಡಿ, ತೆಲಂಗಾಣ ಸರ್ಕಾರದ ಪ್ರಸ್ತಾವನೆಯಲ್ಲಿ ರಾಜ್ಯದ ಮೀನುಗಾರರ ವ್ಯಾಪಾರವನ್ನು ಉತ್ತೇಜಿಸಲು ಹಲವಾರು ಯೋಜನೆಗಳಿವೆ. ಬಿಹಾರ, ಉತ್ತರ ಪ್ರದೇಶ ಮತ್ತು ಇತರ ರಾಜ್ಯಗಳಲ್ಲಿ ಇದೇ ರೀತಿಯ ಪ್ರಸ್ತಾಪಗಳನ್ನು ಪರಿಗಣಿಸಲಾಗುತ್ತಿದೆ. ಆದರೆ, ಕರ್ನಾಟಕ ಸರ್ಕಾರ ಅಂತಹ ನಿರ್ಧಾರಗಳನ್ನು ಕೈಗೊಂಡಿಲ್ಲ. ಸ್ಥಳೀಯ ಮೀನುಗಾರರೊಂದಿಗೆ ಒಪ್ಪಂದ ಮಾಡಿಕೊಂಡಿರುವುದರಿಂದ ಸರ್ಕಾರ ಯೋಜನೆಗೆ ಮುಂದಾಗಿದ್ದೇ ಆದರೆ, ಅದು ಸುಲಭವಾಗಲಿದೆ ಎಂದು ಹೇಳಿದ್ದಾರೆ.

No Comments

Leave A Comment