
ಸರ್ಕಾರಿ ಶಾಲಾ ಮಕ್ಕಳ ಬಿಸಿಯೂಟದಲ್ಲಿ ಮೀನು ಸಾರು: ಹೈ ಪ್ರೋಟೀನ್ ಎಂದ ತಜ್ಞರು, ಸಹಮತ
ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ನೀಡುವ ಬಿಸಿಯೂಟದ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ. ಮಕ್ಕಳಿಗೆ ಪೌಷ್ಠಿಕಾಂಶವುಳ್ಳ ಆಹಾರ ನೀಡಬೇಕು ಎಂದು ಸರ್ಕಾರ ಚಿಂತನೆ ನಡೆಸುತ್ತಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಸಸ್ಯಾಹಾರ, ಮಾಂಸಾಹಾರದ ವಿಚಾರದಲ್ಲಿ ಚರ್ಚೆಗಳು ಆರಂಭವಾಗಿವೆ. ಕಳೆದ ಕೆಲ ವರ್ಷಗಳಿಂದ ಶಾಲಾ ಮಕ್ಕಳಿಗೆ ನೀಡುವ ಮೊಟ್ಟೆ ವಿಚಾರದಲ್ಲೂ ವಿವಾದ ಶುರುವಾಗಿತ್ತು.
ಈ ಎಲ್ಲಾ ಚರ್ಚೆಗಳ ನಡುವಲ್ಲು ಶಾಲಾ ಮಕ್ಕಳಿಗೆ ಪೌಷ್ಠಿಕಾಂಶಯುಕ್ತ ಆಹಾರ ನೀಡುವ ದೃಷ್ಟಿಯಿಂದ ಸರ್ಕಾರ, ಅತೀ ಹೆಚ್ಚು ಮಕ್ಕಳು ಬಯಸಿದ್ದರಿಂದ ಬಿಸಿಯೂಟದ ಜೊತೆಗೆ ಕೋಳಿ ಮೊಟ್ಟೆ ನೀಡುತ್ತಿದೆ. ಇದರ ಜೊತೆಗೆ ಬಾಳೆಹಣ್ಣು, ಚಿಕ್ಕಿ, ಬೇಳೆ ಸಾರು ಸೇರಿದಂತೆ ಇತರ ಪೌಷ್ಠಿಕಾಂಶಯುಕ್ತ ಆಹಾರವನ್ನು ಬಿಸಿಯೂಟದಲ್ಲಿ ನೀಡಲಾಗುತ್ತಿದೆ.
ಇದರ ನಡುವಲ್ಲೇ ತೆಲಂಗಾಣ ರಾಜ್ಯ ಸರ್ಕಾರ ತಮ್ಮ ರಾಜ್ಯದ ಸರ್ಕಾರಿ ಮಕ್ಕಳಿಗೆ ಮಧ್ಯಾಹ್ನದ ಊಟದಲ್ಲಿ ಮೀನು ಸಾರು ಸೇರಿಸುವ ಕುರಿತು ಚಿಂತನೆ ನಡೆಸುತ್ತಿದ್ದು, ರಾಜ್ಯದ ಬಿಸಿಯೂಟದಲ್ಲಿಯೂ ಮೀನಿನ ಸಾರು ಸೇರಿಸಬೇಕು ಎಂಬುದರ ಕುರಿತು ಕರಾವಳಿಯಲ್ಲಿ ಚರ್ಚೆಗಳು ಆರಂಭವಾಗಿವೆ.
ತೆಲಂಗಾಣ ರಾಜ್ಯ ಮೀನುಗಾರರ ಸಹಕಾರ ಒಕ್ಕೂಟವು ಸಲ್ಲಿಸಿದ ಪ್ರಸ್ತಾವನೆಯನ್ನು ತೆಲಂಗಾಣ ಸರ್ಕಾರವು ಪರಿಶೀಲಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಈ ಕುರಿತ ಚರ್ಚೆಗಳು ಆರಂಬವಾಗಿವೆ.