ಕರಾವಳಿ ಕರ್ನಾಟಕದಲ್ಲಿ ಮುಂದುವರಿದ ಮಳೆ, ರೆಡ್ ಅಲರ್ಟ್ ಘೋಷಣೆ, ಮಣಿಪಾಲದಲ್ಲಿ ರಸ್ತೆ ಬದಿ ಗುಡ್ಡ ಕುಸಿತ
ಕರಾವಳಿ ಕರ್ನಾಟಕದಲ್ಲಿ (Coastal Karnataka) ಮಳೆಯ ಅಬ್ಬರ ಮುಂದುವರಿದಿದೆ. ಬುಧವಾರ ಬೆಳಿಗ್ಗೆ ವರೆಗೆ ಭಾರೀ ಮಳೆಯಾಗಲಿದ್ದು, ರೆಡ್ ಅಲರ್ಟ್ (Red Alert) ಘೋಷಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಮಳೆಯ ಮುನ್ಸೂಚನೆ ನೀಡಲಾಗಿದ್ದು, ಎಚ್ಚರವಹಿಸುವಂತೆ ಸೂಚಿಸಲಾಗಿದೆ. ಜುಲೈ 4 ರಿಂದ ಜುಲೈ 8 ರವರೆಗೆ ಕರ್ನಾಟಕ ಕರಾವಳಿಯಲ್ಲಿ ಗಂಟೆಗೆ 45-55 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಇಲಾಖೆ ತಿಳಿಸಿದೆ.
ಈ ಮಧ್ಯೆ, ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆ ಮುಂದುವರಿದಿದ್ದು, ಮಣಿಪಾಲದ ಮುಖ್ಯ ರಸ್ತೆಯ ಪಕ್ಕದಲ್ಲಿದ್ದ ಗುಡ್ಡವೊಂದು ಮಂಗಳವಾರ ಕುಸಿದು ಬಿದ್ದಿದೆ. ಕುಸಿದ ಗುಡ್ಡದ ಮಣ್ಣು ರಸ್ತೆಗೆ ಬಿದ್ದಿದೆ. ಸತತ ಮಳೆಯಿಂದಾಗಿ ಗುಡ್ಡದ ಮಣ್ಣು ಮೃದುವಾಗಿ ಕುಸಿದು ಬೀಳಲು ಕಾರಣವಾಯಿತು. ಬೆಟ್ಟದ ಮೇಲೆ ಕಟ್ಟಡಗಳಿದ್ದು, ಆತಂಕದ ವಾತಾವರಣ ಸೃಷ್ಟಿಯಾಗಿದೆ.
ಸೋಮವಾರ ಸಂಜೆ ಸುರಿದ ಭಾರೀ ಮಳೆಗೆ ಮಂಗಳೂರು ನಗರದ ಪಂಪ್‌ವೆಲ್ ವೃತ್ತ ಸಂಪೂರ್ಣ ಜಲಾವೃತಗೊಂಡಿದ್ದು, ತೀವ್ರ ಟ್ರಾಫಿಕ್ ಜಾಮ್ ಉಂಟಾಗಿತ್ತು. ಪಂಪ್‌ವೆಲ್ ಮೇಲ್ಸೇತುವೆ ಕೆಳಗೆ ಮೊಣಕಾಲು ಎತ್ತರಕ್ಕೆ ನೀರು ಹರಿದು ಮಂಗಳೂರು ಕಡೆಗೆ ಹೋಗುವ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಂಡಿದ್ದು, ನಗರಕ್ಕೆ ತೆರಳುವ ವಾಹನಗಳು ಜಂಕ್ಷನ್‌ನಲ್ಲಿ ಗಂಟೆಗಟ್ಟಲೆ ನಿಂತಿದ್ದವು. ಇದಲ್ಲದೆ ಕೊಟ್ಟಾರ ಚೌಕಿ ಜಂಕ್ಷನ್ ಕೂಡ ಭಾರೀ ಮಳೆಗೆ ಜಲಾವೃತವಾಗಿತ್ತು. ಪಂಪ್‌ವೆಲ್ ಮತ್ತು ಕೊಟ್ಟಾರ ಚೌಕಿಯಂತಹ ಜಂಕ್ಷನ್‌ಗಳು ಪ್ರತಿ ವರ್ಷ ಪ್ರವಾಹ ಪರಿಸ್ಥಿತಿ ಎದುರಿಸುವುದಲ್ಲದೆ ಜಲಾವೃತಗೊಳ್ಳುತ್ತವೆ. ಆದರೂ ಈ ಮರುಕಳಿಸುವ ಅವ್ಯವಸ್ಥೆಗೆ ಶಾಶ್ವತ ಪರಿಹಾರವನ್ನು ಕಂಡುಹಿಡಿಯಲಾಗಿಲ್ಲ ಎಂದು ನಗರವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೈರಲ್ ಆಯ್ತು ಪಂಪ್‌ವೆಲ್ ವಿಡಿಯೋ