ಉಡುಪಿಯಲ್ಲಿ ಎನ್ ಕೌಂಟರ್: ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ವಿಕ್ರಮ್ ಗೌಡ ಸಾವು....ಮಹಾ ಚುನಾವಣೆ: ಮತದಾರರು ಬೂತ್‌ಗಳಿಗೆ ತೆರಳಲು QR ಕೋಡ್‌ ಪರಿಚಯ...ನವೆಂಬರ್ 25ರಿಂದ ಸಂಸತ್ ಚಳಿಗಾಲದ ಅಧಿವೇಶನ: ಭಾನುವಾರ ಸರ್ವಪಕ್ಷ ಸಭೆ...

ಭ್ರಷ್ಟಾಚಾರ ನಿರ್ಮೂಲನೆ, ಕರ್ನಾಟಕ ರಾಜ್ಯವನ್ನು ಆರ್ಥಿಕ ಸಂಕಷ್ಟದಿಂದ ಹೊರತರುವುದು, ಹಸಿವು ಮುಕ್ತ ಕರ್ನಾಟಕ ಸರ್ಕಾರದ ಆದ್ಯತೆ: ರಾಜ್ಯಪಾಲ ಗೆಹ್ಲೋಟ್

ಬೆಂಗಳೂರು: ರಾಜ್ಯದಲ್ಲಿ ನೂತನ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ವಿಧಾನ ಮಂಡಲ ಜಂಟಿ ಅಧಿವೇಶನ ಇಂದು ಜುಲೈ 3ರಂದು ಆರಂಭವಾಗಿದೆ. ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಿದ್ದಾರೆ.

ಜುಲೈ 7ಕ್ಕೆ 14ನೇ ಬಾರಿ ಸಿಎಂ ಸಿದ್ದರಾಮಯ್ಯ ಬಜೆಟ್​ ಮಂಡಿಸಲಿದ್ದಾರೆ. ಒಟ್ಟು 10 ದಿನಗಳ ಕಾಲ ವಿಧಾನಮಂಡಲ ಜಂಟಿ ಬಜೆಟ್ ಅಧಿವೇಶನ ನಡೆಯಲಿದೆ. 16ನೇ ವಿಧಾನಸಭೆಯ ಮೊದಲ ಅಧಿವೇಶನದಲ್ಲಿ ಹಲವು ವಿಷಯ ಪ್ರಸ್ತಾಪವಾಗಲಿದೆ.

ವಿಧಾನಸೌಧಕ್ಕೆ ಆಗಮಿಸಿದ ರಾಜ್ಯಪಾಲ ಥಾವರ್​ಚಂದ್​ ಗೆಹ್ಲೋಟ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಾಗತಿಸಿದರು. ಬಸವಣ್ಣನ ತತ್ವದಡಿ ರಾಜ್ಯ ಸರ್ಕಾರ ನಡೆಯುತ್ತಿದೆ. ಸರ್ಕಾರ ಎಲ್ಲಾ ಸಮುದಾಯಗಳ ಪರವಾಗಿ ಕಾರ್ಯನಿರ್ವಹಣೆ ಮಾಡುತ್ತಿದೆ. ಕುವೆಂಪು ಅವರ ಸರ್ವಜನಾಂಗದ ಶಾಂತಿ ತೋಟ ತತ್ವದಡಿ ಕೆಲಸ ಮಾಡುತ್ತಿದ್ದೇವೆ. ಬಸವಣ್ಣ, ಸರ್ವಜ್ಞ ಸೇರಿ ಅನೇಕ ಸಂತರು ಶಾಂತಿ ತತ್ವ ಪಾಲನೆ ಮಾಡಲಾಗುತ್ತಿದೆ ಎಂದರು.

ಆರ್ಥಿಕ ಸಂಕಷ್ಟದಿಂದ ಹೊರಬರುವುದು ಸರ್ಕಾರದ ಆದ್ಯತೆ: ದೇಶದ ಅಭಿವೃದ್ಧಿಯಲ್ಲಿ ಸಾಕಷ್ಟು ಕೊಡುಗೆ ನೀಡಿರುವ ಕರ್ನಾಟಕ ರಾಜ್ಯ ಇಂದು ಆರ್ಥಿಕ ಮುಗ್ಗಟ್ಟಿನ ಸ್ಥಿತಿಗೆ ತಲುಪಿದೆ. ಕರ್ನಾಟಕ ರಾಜ್ಯವನ್ನು ಆರ್ಥಿಕ ಸಂಕಷ್ಟದಿಂದ ಹೊರತರುವುದು ನೂತನ ಕಾಂಗ್ರೆಸ್ ಸರ್ಕಾರದ ಆದ್ಯತೆಯಾಗಿದೆ ಎಂದು ಗೆಹ್ಲೋಟ್ ಹೇಳಿದರು.

ಸಂಕುಚಿತ ಮನಸ್ಸುಗಳು ವಿವಿಧ ಸಮುದಾಯಗಳ ನಡುವೆ ಒಡಕು ಮತ್ತು ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸುತ್ತವೆ. ಅಂತಹ ಮನಃಸ್ಥಿತಿಯ ಜನರು ಸಮಾಜದ ವಿವಿಧ ಹಂತಗಳಲ್ಲಿ ಇನ್ನೂ ಉಳಿದಿದ್ದಾರೆ ಎಂದು ಭಾಷಣದಲ್ಲಿ ಹೇಳಿದ ರಾಜ್ಯಪಾಲರು, ಶಾಂತಿಯುತ ಮತ್ತು ಪರಸ್ಪರ ಪ್ರೀತಿಸುವ ಸಮಾಜವನ್ನು ನಿರ್ಮಿಸಲು ಸರ್ಕಾರ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಿದರು.

ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಎಷ್ಟು ಬೇರೂರಿ ಹೋಗಿದೆ ಎಂದರೆ ಹಲವು ಕಾರಣಗಳಿಂದ ಅದು ಬಹುತೇಕ ಸಾಂಸ್ಥೀಕರಣಗೊಂಡಿದೆ. ಇದನ್ನು ನಿರ್ಮೂಲನೆ ಮಾಡುವುದು ದೊಡ್ಡ ಸವಾಲಾಗಿದೆ. ಈ ಸವಾಲನ್ನು ಎದುರಿಸಲು ಮತ್ತು ಭ್ರಷ್ಟಾಚಾರವನ್ನು ಬೇರುಸಹಿತ ಕಿತ್ತೊಗೆಯಲು ನಿಮ್ಮೆಲ್ಲರ ಸಹಕಾರ ಅಗತ್ಯ ಎಂದು ಉಭಯ ಸದನಗಳ ಸದಸ್ಯರನ್ನು ಮನವಿ ಮಾಡಿಕೊಂಡರು.

ಈ ನಿಟ್ಟಿನಲ್ಲಿ ಸರ್ಕಾರವು ಅಗತ್ಯವಿರುವ ಎಲ್ಲಾ ಆಡಳಿತಾತ್ಮಕ ಮತ್ತು ಶಾಸಕಾಂಗ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದರು.

‘ಅನ್ನ ಭಾಗ್ಯ’ ಯೋಜನೆಯಡಿ ರಾಜ್ಯ ಸರ್ಕಾರದ ಹೆಚ್ಚುವರಿ ಐದು ಕೆಜಿ ಅಕ್ಕಿ ಹಂಚಿಕೆಯನ್ನು ನೇರ ಲಾಭದ ರೂಪದಲ್ಲಿ ಪ್ರತಿ ವ್ಯಕ್ತಿಗೆ ಕೆಜಿಗೆ 34 ರೂಪಾಯಿಗಳಂತೆ ನೇರವಾಗಿ ಬಿಪಿಎಲ್ ಕುಟುಂಬಗಳ ಬ್ಯಾಂಕ್ ಖಾತೆಗಳಿಗೆ ಪ್ರತಿ ತಿಂಗಳು ಹಣ ವರ್ಗಾವಣೆ ಮಾಡಲಾಗುವುದು ಎಂದು ರಾಜ್ಯಪಾಲರು ಹೇಳಿದರು.

ಎಲ್ಲಾ ಬಡ ಕುಟುಂಬಗಳಿಗೆ ಹೆಚ್ಚುವರಿಯಾಗಿ ಐದು ಕೆಜಿ ಅಕ್ಕಿ ನೀಡುವವರೆಗೆ ಪರ್ಯಾಯವಾಗಿ ಹಣವನ್ನು ಖಾತೆಗೆ ಹಾಕುವ ವ್ಯವಸ್ಥೆ ಮುಂದುವರಿಯುತ್ತದೆ, ‘ಅನ್ನ ಭಾಗ್ಯ’ ಯೋಜನೆ ಮತ್ತು ‘ಇಂದಿರಾ ಕ್ಯಾಂಟೀನ್’ ಮೂಲಕ ರಾಜ್ಯದ ಜನರನ್ನು ಸರ್ಕಾರ ಹಸಿವು ಮುಕ್ತಗೊಳಿಸಲಿದೆ ಎಂದು ಹೇಳಿದರು.

ಹಸಿವು ಮುಕ್ತ ಕರ್ನಾಟಕ: ಇಂದಿರಾ ಕ್ಯಾಂಟೀನ್ ಮೂಲಕ ಸರ್ಕಾರ ಹಸಿವು ಮುಕ್ತ ಕರ್ನಾಟಕ ರಾಜ್ಯ ಸ್ಥಾಪನೆಗೆ ಮಾಡಲಿದೆ. ಬಡವರು, ದುಡಿಯುವ ವರ್ಗದ ಜನರು, ವಲಸೆ ಕಾರ್ಮಿಕರು ಮುಂತಾದವರ ಹಸಿವು ತಣಿಸಲು ಇಂದಿರಾ ಕ್ಯಾಂಟೀನ್ ಸ್ಥಾಪನೆ ಮಾಡಲಾಗಿದೆ. ಯುವನಿಧಿ ಯೋಜನೆಯಡಿ ನಿರುದ್ಯೋಗಿ ಯುವಕರಿಗೆ ಹಣ ನೀಡಲು ಮುಂದಾಗಿದೆ.

ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್​ವರೆಗೆ ಉಚಿತ ವಿದ್ಯುತ್​ ಕೊಡಲಾಗುತ್ತದೆ. ಈ ಯೋಜನೆಯಿಂದ ಸುಮಾರು 2.14 ಕೋಟಿ ಕುಟುಂಬಕ್ಕೆ ಅನುಕೂಲ ಆಗಲಿದೆ. ಮಹಿಳಾ ಸಬಲೀಕರಣಕ್ಕಾಗಿ ಗೃಹಲಕ್ಷ್ಮೀ ಯೋಜನೆ ಜಾರಿ ಮಾಡಲಾಗಿದೆ. ಗೃಹಲಕ್ಷ್ಮೀ ಯೋಜನೆಯಡಿ ಮನೆ ಯಜಮಾನಿ ಖಾತೆಗೆ 2 ಸಾವಿರ ರೂಪಾಯಿ ಹಾಕಲಾಗುತ್ತದೆ. ನನ್ನ ಸರ್ಕಾರ ಆಡಳಿತವನ್ನು ಪವಿತ್ರ ಕರ್ತವ್ಯ ಎಂದು ಪರಿಗಣಿಸುತ್ತದೆ. ಸರ್ಕಾರ ಬಡವರು, ಆರ್ಥಿಕ ಹಿಂದುಳಿದವರ ಪರವಾಗಿ ನಿಲ್ಲುತ್ತದೆ ಎಂದರು.

ವಿಧಾನಸೌಧ ಸುತ್ತ 2 ಕಿ.ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ: ಇಂದಿನಿಂದ 10 ದಿನ ವಿಧಾನಮಂಡಲ​​​ ಅಧಿವೇಶನ ಹಿನ್ನೆಲೆ ವಿಧಾನಸೌಧ ಸುತ್ತ 2 ಕಿ.ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಆದೇಶ ಹೊರಡಿಸಿದ್ದಾರೆ. 2 ಕಿ.ಮೀ. ವ್ಯಾಪ್ತಿಯಲ್ಲಿ ಪ್ರತಿಭಟನೆ, ಧರಣಿ ನಡೆಸುವಂತಿಲ್ಲ. ವಿಧಾನಸೌಧದ ಸುತ್ತಮುತ್ತ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಕೇಂದ್ರ ವಿಭಾಗದ ಡಿಸಿಪಿ‌ ಶ್ರೀನಿವಾಸಗೌಡ ನೇತೃತ್ವದಲ್ಲಿ ಮೂವರು ಡಿಸಿಪಿ, 15 ಎಸಿಪಿ, 80 ಇನ್ಸ್​ಪೆಕ್ಟರ್​ಗಳು ಸೇರಿದಂತೆ ವಿಧಾನಸೌಧ ಸುತ್ತಮುತ್ತ 1500 ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

ವಿರೋಧ ಪಕ್ಷದ ನಾಯಕರ ಅನುಪಸ್ಥಿತಿ: ಕರ್ನಾಟಕ ವಿಧಾನ ಮಂಡಲ ಅಧಿವೇಶನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವಿಧಾನ ಸಭೆ ಪ್ರತಿಪಕ್ಷ ನಾಯಕನಿಲ್ಲದೆ ಕಲಾಪ ನಡೆಯುತ್ತಿದೆ. ಪ್ರಮುಖ ವಿರೋಧ ಪಕ್ಷ ಬಿಜೆಪಿಯಲ್ಲಿ ಪ್ರತಿಪಕ್ಷ ನಾಯಕನ ಆಯ್ಕೆಯಲ್ಲಿ ಹೈಕಮಾಂಡ್ ಮತ್ತು ರಾಜ್ಯ ಬಿಜೆಪಿ ಇನ್ನೂ ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ. ವಿಪಕ್ಷ ನಾಯಕನ ಆಯ್ಕೆಗೆ ದೆಹಲಿ ಬಿಜೆಪಿಯಿಂದ ವೀಕ್ಷಕನ್ನು ಬೆಂಗಳೂರಿಗೆ ಕಳುಹಿಸಲಾಗಿದೆ.

No Comments

Leave A Comment