ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು

ಇನ್ನೂ ನಿರ್ಧಾರವಾಗದ ವಿಪಕ್ಷ ನಾಯಕ: ಇಬ್ಬರು ಕೇಂದ್ರ ಬಿಜೆಪಿ ವೀಕ್ಷಕರು ಇಂದು ಬೆಂಗಳೂರಿಗೆ, ವರದಿ ಬಳಿಕ ಆಯ್ಕೆ ಸಾಧ್ಯತೆ!

ಬೆಂಗಳೂರು: ರಾಜ್ಯ ವಿಧಾನಸಭೆ, ಪರಿಷತ್ ವಿಪಕ್ಷ ನಾಯಕ ಆಯ್ಕೆ, ಪ್ರತಿಪಕ್ಷಗಳ ನಾಯಕ ಆಯ್ಕೆ ಸೇರಿದಂತೆ ವಿವಿಧ ವಿಚಾರಗಳ ಕುರಿತು ರಾಜ್ಯ ಬಿಜೆಪಿ ನಾಯಕರು ಹಾಗೂ ಹೈಕಮಾಂಡ್ ಚರ್ಚೆಗಳು ನಡೆಸಿದ್ದು, ಆದರೂ, ಇನ್ನೂ ಈ ಕುರಿತು ಯಾವುದೇ ರೀತಿಯ ಅಂತಿಮ ನಿರ್ಧಾರಗಳಾಗಿಲ್ಲ ಎಂದು ತಿಳಿದುಬಂದಿದೆ.

ಈ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಅವರು ವಿಪಕ್ಷ ನಾಯಕರ ಆಯ್ಕೆ ವಿಚಾರವಾಗಿ ಕೇಂದ್ರದ ವೀಕ್ಷಕರಾಗಿ ವಿನೋದ್ ತಾವೆ, ಮನ್ಸೂಖ್ ಮಾಂಡವೀಯ ಅವರನ್ನು ಆಯ್ಕೆ ಮಾಡಿದ್ದು, ಇಬ್ಬರೂ ನಾಯಕರು ಇಂದು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.

ವೀಕ್ಷಕರು ರಾಜ್ಯ ಬಿಜೆಪಿ ಶಾಸಕರ ಅಭಿಪ್ರಾಯ ಸಂಗ್ರಹಿಸಿ ಬಳಿಕ ಹೈಕಮಾಂಡ್ ಗೆ ಮಾಹಿತಿ ನೀಡಲಿದ್ದು, ವರದಿ ಪರಿಶೀಲಿಸಿದ ಬಳಿಕ ವಿಪಕ್ಷ ನಾಯಕರು ಯಾರು ಎಂಬುದರ ಕುರಿತು ನಿರ್ಧಾರಗಳಾಗಲಿವೆ ಎಂದು ತಿಳಿದುಬಂದಿದೆ. ಹೀಗಾಗಿ ವಿಪಕ್ಷ ನಾಯಕನ ಆಯ್ಕೆ ಇನ್ನೂ 2-3 ದಿನ ವಿಳಂಬವಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಹೈಕಮಾಂಡ್ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ ಅವರು, ಪಕ್ಷದ ಹೈಕಮಾಂಡ್ ಕೇಂದ್ರ ಸಚಿವರಾದ ವಿನೋದ್ ತಾವ್ಡೆ ಮತ್ತು ಮನ್ಸುಖ್ ಮಾಂಡವಿಯಾ ಅವರನ್ನು ವೀಕ್ಷಕರನ್ನಾಗಿ ಕಳುಹಿಸಲಿದ್ದು, ಅವರು ಸೋಮವಾರ ಬೆಂಗಳೂರಿಗೆ ಆಗಮಿಸಲಿದ್ದಾರೆ. ಈ ವೇಳೆ ಶಾಸಕರ ಅಭಿಪ್ರಾಯ ಸಂಗ್ರಹಿಸಿ ಹೈಕಮಾಂಡ್‌ಗೆ ವರದಿ ಸಲ್ಲಿಸಲಿದ್ದಾರೆ. ವಿಪಕ್ಷ ನಾಯಕನ ಆಯ್ಕೆ ಬಹುತೇಕ ಮಂಗಳವಾರ ನಿರ್ಧಾರವಾಗಲಿದೆ ಎಂದು ಹೇಳಿದರು.

ಇದರೊಂದಿಗೆ ಇಂದು ಬಜೆಟ್ ಅಧಿವೇಶನ ಆರಂಭವಾದರೂ, ವಿಪಕ್ಷ ನಾಯಕನಿಲ್ಲದೆ, ಆಡಳಿತಾರೂಢ ಕಾಂಗ್ರೆಸ್ ಸರ್ಕಾರವನ್ನು ಗುರಿ ಮಾಡಲು ಬಿಜೆಪಿ ಸಜ್ಜಾಗಿದೆ.

ಯಡಿಯೂರಪ್ಪ ಅವರು ವಿಪಕ್ಷ ನಾಯಕನ ಸ್ಥಾನಕ್ಕೆ ವೀರಶೈವ ಲಿಂಗಾಯತರಾದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಬೆಂಬಲಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಈ ನಡುವೆ ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಸ್ಪರ್ಧೆಯಲ್ಲಿದ್ದಾರೆ, ಆದರೆ ಇದಕ್ಕೆಯಡಿಯೂರಪ್ಪ ವಿರೋಧವಿದೆ ಎಂದು ಹೇಳಲಾಗುತ್ತಿದೆ.

ಯತ್ನಾಳ್ ಅವರ ಜೊತೆಗೆ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ್ ಬೆಲ್ಲದ್ ಅವರ ಹೆಸರು ಕೂಡ ಕೇಳಿ ಬರುತ್ತಿದೆ.

ಒಂದು ವೇಳೆ ವಿಪಕ್ಷ ನಾಯಕನ ಸ್ಥಾನ ವೀರಶೈವ-ಲಿಂಗಾಯತರಿಗೆ ಬಂದಿದ್ದೇ ಆದರೆ, ಆರ್‌ಎಸ್‌ಎಸ್‌ನಲ್ಲಿ ಬೇರೂರಿರುವ ಒಕ್ಕಲಿಗ ನಾಯಕರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡುವ ಸಾಧ್ಯತೆಗಳ ಹೆಚ್ಚಾಗಿವೆ ಎಂದು ಮೂಲಗಳು ತಿಳಿಸಿವೆ,

ರಾಜ್ಯಾಧ್ಯಕ್ಷ ಸ್ಥಾನಕ್ಕಾಗಿ ಮಾಜಿ ಸಚಿವರಾದ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್, ಸಿ.ಟಿ.ರವಿ, ಕೇಂದ್ರ ಸಚಿವೆ ಶೋಬಾ ಕರಂದ್ಲಾಜೆ ರೇಸ್ ನಲ್ಲಿದ್ದಾರೆ.

ಮಾಜಿ ಸಚಿವ ಸುನೀಲ್ ಕುಮಾರ್ ಅವರಿಗೆ ಆರ್ಎಸ್ಎಸ್ ಬೆಂಬಲವಿದ್ದು, ಅವರಿಗೂ ಒಂದಷ್ಟು ಜವಾಬ್ದಾರಿ ನೀಡುವ ಸಾಧ್ಯತೆಗಳುವೆ ಎಂದು ಹೇಳಲಾಗುತ್ತಿದೆ.

ಈ ನಡುವೆ ಯಡಿಯೂರಪ್ಪ ಅವರು ದೆಹಲಿಗೆ ಭೇಟಿ ನೀಡುವುದಕ್ಕೂ ಮುನ್ನ ಮಾಜಿ ಸಚಿವ ಆರಗ ಜ್ಞಾನೇಂದ್ರ ಅವರೊಂದಿಗೆ ಮಾತುಕತೆ ನಡೆಸಿದರು.

ಈ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ ಆರಗ ಜ್ಞಾನೇಂದ್ರ ಅವರು, ವಿಪಕ್ಷ ನಾಯಕನ ಸ್ಥಾನಕ್ಕಾಗಿ ನಾನು ಲಾಬಿ ಮಾಡುತ್ತಿಲ್ಲ. ಪಕ್ಷದ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ ಎಂದು ಹೇಳಿದರು.

No Comments

Leave A Comment