ಕಾರವಾರ: ಸಾಲದಿಂದ ಮನನೊಂದು ಆತ್ಮಹತ್ಯೆಗೆ ಶರಣಾದ ಗೋವಾದ ಕುಟುಂಬ
ಕಾರವಾರ: ಆಘಾತಕಾರಿ ಘಟನೆಯೊಂದರಲ್ಲಿ ಗೋವಾದ ಮೂವರ ಕುಟುಂಬವೊಂದು ಸಾಲದ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಬ್ಬರು ಇಲ್ಲಿನ ಕಾಳಿ ನದಿ ದಂಡೆಯಲ್ಲಿ ಸಾವನ್ನಪ್ಪಿದ್ದರೆ, ಗೋವಾದಲ್ಲಿ ಒಬ್ಬರು ನೇಣು ಹಾಕಿಕೊಂಡಿದ್ದಾರೆ.
ಕಾರವಾರದಿಂದ 5 ಕಿಮೀ ದೂರದಲ್ಲಿರುವ ದೇವಬಾಗ್ ದ್ವೀಪದಲ್ಲಿ ಬುಧವಾರ 12 ವರ್ಷದ ಬಾಲಕನ ಶವವನ್ನು ಸ್ಥಳೀಯರು ಪತ್ತೆ ಮಾಡಿದ ನಂತರ ಇದು ಗೊತ್ತಾಗಿದೆ. ತದಂತರ ಪೊಲೀಸರು ಅದೇ ಸ್ಥಳದಿಂದ 37 ವರ್ಷದ ಮಹಿಳೆಯ ಮತ್ತೊಂದು ಶವವನ್ನು ಪತ್ತೆ ಹಚ್ಚಿದ್ದಾರೆ. ಸಾವಿಗೆ ಕಾರಣ ಪತ್ತೆಹಚ್ಚಲು ಪೊಲೀಸರು ಹುಡುಕಾಟ ನಡೆಸಿದಾಗ ಮೃತ ಮಹಿಳೆ ಬಾಲಕ ದಕ್ಷ್ ಪಟೇಲ್ ತಾಯಿ ಎಂದು ಗುರುತಿಸಿದ್ದಾರೆ.
ಮೃತ ಮಹಿಳೆಯನ್ನು ಗೋವಾದ ಮಾಪುಸಾ ಸಮೀಪದ ಪಾಡಿ ನಿವಾಸಿ ಜ್ಯೋತಿ ಪಾಟೀಲ್ ಎಂದು ಗುರುತಿಸಲಾಗಿದೆ. ನಂತರ, ಗೋವಾದಲ್ಲಿ ಪೊಲೀಸರು ತನಿಖೆ ನಡೆಸಿದಾಗ ಅಲ್ಲಿನ ಪಾಡಿ ಅರಣ್ಯ ಪ್ರದೇಶದಲ್ಲಿ ಜ್ಯೋತಿ ಅವರ ಪತಿ ಶ್ಯಾಮ್ ಪಾಟೀಲ್ ಕೂಡ ಶವವಾಗಿ ಪತ್ತೆಯಾಗಿದ್ದಾರೆ. ಅವರು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಗೋವಾ ಪೊಲೀಸರು ಖಚಿತಪಡಿಸಿದ್ದಾರೆ.
ಶ್ಯಾಮ್ ತೀವ್ರ ಹೆಜ್ಜೆ ಇಡುವ ಮೊದಲು ತನ್ನ ಹೆಂಡತಿ ಮತ್ತು ಮಗನನ್ನು ನೀರಿಗೆ ಎಸೆದಿರಬಹುದು ಎಂದು ಶಂಕಿಸಲಾಗಿದೆ. ಶ್ಯಾಮ್ ಹಲವಾರು ಜನರಿಂದ ಮತ್ತು ವಿವಿಧ ಹಣಕಾಸು ಸಂಸ್ಥೆಗಳಿಂದ ಸಾಲ ಮಾಡಿದ್ದರಿಂದ ತೀವ್ರ ಸಾಲದ ಸುಳಿಯಲ್ಲಿ ಸಿಲುಕಿದ್ದ ಎಂದು ಪೊಲೀಸರು ಶಂಕಿಸಿದ್ದಾರೆ. ಡೆತ್ ನೋಟ್ನಲ್ಲಿ, ತನ್ನಿಂದ ಸಾಲ ಪಡೆದ ಕೆಲವರು ತನ್ನನ್ನು ಮತ್ತು ತನ್ನ ಕುಟುಂಬವನ್ನು ಸಾವಿಗೆ ತಳ್ಳಿದ್ದಾರೆ ಎಂದು ಆರೋಪಿಸಿದ್ದಾರೆ.