![](https://i0.wp.com/karavalikirana.com/wp-content/uploads/2023/06/Untitled-4-21.jpg?fit=640%2C320&ssl=1)
ಕೊಟ್ಟ ಮಾತಿನಂತೆ ನಾಳೆ ‘ಅನ್ನ ಭಾಗ್ಯ’ ಯೋಜನೆ ಜಾರಿ, 5 ಕೆಜಿ ಅಕ್ಕಿ ಜೊತೆ ನಾಳೆಯಿಂದಲೇ ಖಾತೆಗೆ ಹಣ ವರ್ಗಾವಣೆ: ಸಚಿವ ಮುನಿಯಪ್ಪ
ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಬಿಪಿಎಲ್ ಹೊಂದಿರುವವರಿಗೆ ‘ಅನ್ನ ಭಾಗ್ಯ'(Anna Bhagya) ಯೋಜನೆ ನಾಳೆ ಜುಲೈ 1ರಂದು ಜಾರಿಗೆ ಬರಲಿದೆ.
ಕೇಂದ್ರ ಸರ್ಕಾರ ಬಿಪಿಎಲ್ ಕಾರ್ಡು ಹೊಂದಿರುವವರಿಗೆ ನೀಡುವ 5 ಕೆಜಿ ಅಕ್ಕಿ (Rice) ಜೊತೆ ಉಳಿದ 5 ಕೆಜಿ ಅಕ್ಕಿ ಬದಲಿಗೆ ಹಣ(Money) ನೀಡುವುದಾಗಿ ರಾಜ್ಯ ಸರ್ಕಾರ ಈಗಾಗಲೇ ಘೋಷಿಸಿದ್ದು, ಅದರಂತೆ ನಾಳೆ ಯೋಜನೆ ಜಾರಿಗೆ ಬರಲಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದ 5 ಕೆಜಿ ಅಕ್ಕಿ ವಿತರಣೆ ಜೊತೆ ಉಳಿದ 5 ಕೆಜಿ ಅಕ್ಕಿ ಬದಲಿಗೆ ಸದ್ಯಕ್ಕೆ ಕುಟುಂಬದ ಪ್ರತಿ ವ್ಯಕ್ತಿಗೆ 170 (ಪ್ರತಿ ಕೆ.ಜಿಗೆ 34 ರೂಪಾಯಿಗಳಂತೆ) ನೀಡುತ್ತೇವೆ. 90 ಪರ್ಸೆಂಟ್ ಫಲಾನುಭವಿಗಳಲ್ಲಿ ಖಾತೆಗಳಿವೆ. ಅಕೌಂಟ್ ಇಲ್ಲದವರು ಮಾಡಿಸಿಕೊಳ್ಳಬೇಕು. ಒಬ್ಬರಿಗೆ 170 ರೂಪಾಯಿ ಕೊಡುತ್ತೇವೆ. ಅಕ್ಕಿ ಸಿಗುವರೆಗೆ ಮಾತ್ರ ಈ ಹಣ ನೀಡುವ ವ್ಯವಸ್ಥೆಯಿರುತ್ತದೆ ಎಂದರು.
ಹೆಚ್ಚುವರಿ 5 ಕೆಜಿ ಅಕ್ಕಿ ಸಿಗುವವರೆಗೂ ಖಾತೆಗೆ ಹಣ ಜಮೆ ಮಾಡುತ್ತೇವೆ. ಎಂಎಸ್ ಪಿ(MSP) ಮೂಲಕ ಧಾನ್ಯ ಖರೀದಿ ಮಾಡುತ್ತೇವೆ. ಎರಡು ಕೆಜಿ, ಜೋಳ/ರಾಗಿ ಕೊಡುತ್ತೇವೆ. ಎಂಟು ಕೆಜಿ ಅಕ್ಕಿ ಕೊಡುತ್ತೇವೆ. ಅಕ್ಕಿ ಕೊಡಲು ನಾವು ಸಿದ್ದವಾಗಿದ್ದೇವೆ ಆದರೆ ಕೇಂದ್ರ ಸರ್ಕಾರ ಹೆಚ್ಚಿನ ಅಕ್ಕಿ ನೀಡಲು ಸಹಕಾರ ನೀಡಿಲ್ಲ ಎಂದರು.