Log In
BREAKING NEWS >
````````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ಹಾಗೂ ಓದುಗರಿಗೆ ಶ್ರೀ ಗೌರಿ-ಗಣೇಶನ ಹಬ್ಬದ ಶುಭಾಶಯಗಳು```````

ಬೆಂಗಳೂರು ಮೆಟ್ರೋ ಪಿಲ್ಲರ್ ದುರಂತ: ಪೊಲೀಸರಿಂದ ಇಂಜಿನಿಯರ್ ಗಳು ಸೇರಿ 11 ಮಂದಿ ವಿರುದ್ಧ 1,100 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ

ಬೆಂಗಳೂರು: ತಾಯಿ-ಮಗು ಸಾವಿಗೆ ಕಾರಣವಾಗಿದ್ದ ಬೆಂಗಳೂರು ಮೆಟ್ರೋ ಪಿಲ್ಲರ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಿಎಂಆರ್ ಸಿಎಲ್ ಇಂಜಿನಿಯರ್ ಗಳು ಸೇರಿದಂತೆ 11 ಮಂದಿ ವಿರುದ್ಧ 1,100 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಹೌದು… ಮೆಟ್ರೋ ಪಿಲ್ಲರ್ ಚೌಕಟ್ಟು ಕುಸಿದು ತಾಯಿ-ಮಗ ಮೃತಪಟ್ಟು ಬೆಂಗಳೂರಿಗರನ್ನೇ ಬೆಚ್ಚಿಬೀಳಿಸಿದ್ದ ಪ್ರಕರಣಕ್ಕೆ ಸಂಬಂಧ ಪೂರ್ವ ವಿಭಾಗದ ಪೊಲೀಸರು ತನಿಖೆ ಪೂರ್ಣಗೊಳಿಸಿ ಆರೋಪಪಟ್ಟಿ( ಚಾರ್ಜ್‌ಶೀಟ್) ಸಲ್ಲಿಸಿದ್ದಾರೆ. ಗೋವಿಂದಪುರ ಪೊಲೀಸರು ದುರ್ಘಟನೆ ಸಂಬಂಧ ನ್ಯಾಯಾಲಯಕ್ಕೆ ೧೧೦೦ ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ನಿರ್ಮಾಣ ಕಂಪನಿಯ ಇಂಜಿನಿಯರ್ಸ್ ಹಾಗೂ ಬಿಎಂಆರ್‌ಸಿಎಲ್ ಇಂಜಿನಿಯರ್ ಗಳು ಸೇರಿ ೧೧ ಮಂದಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.

ತಜ್ಞರ ವರದಿಗಳು, ಪೊಲೀಸರ ತನಿಖೆ ಹಾಗೂ ಎಫ್‌ಎಸ್‌ಎಲ್ ರಿಪೋರ್ಟ್ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿದ್ದರು. ಐಐಟಿ ರಿಪೋರ್ಟ್ ಮತ್ತು ಎಫ್‌ಎಸ್‌ಎಲ್ ರಿಪೋರ್ಟ್ ಅನ್ನು ಚಾರ್ಜ್‌ಶೀಟ್‌ನಲ್ಲಿ ಸೇರಿಸಲಾಗಿದೆ. ಅಧಿಕಾರಿಗಳ ಲೋಪ ಹಾಗೂ ಪಿಲ್ಲರ್ ನಿರ್ಮಾಣ ವೇಳೆ ಕೈಗೊಂಡ ಸುರಕ್ಷತಾ ಕ್ರಮಗಳ ವೈಫಲ್ಯದ ಬಗ್ಗೆ ಉಲ್ಲೇಖಿಸಲಾಗಿದೆ. ತನಿಖೆ ವೇಳೆ ತನಿಖಾಧಿಕಾರಿಗಳು ಪ್ರಾಜೆಕ್ಟ್ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಪಿಲ್ಲರ್ ಡಿಸೈನ್ ಹೇಗೆ ಮಾಡಲಾಗಿತ್ತು ಸುರಕ್ಷತೆ ಏನೆಲ್ಲಾ ಕ್ರಮ ಕೈಗೊಳ್ಳಬೇಕಿತ್ತು ಪ್ರರಕಣದಲ್ಲಿ ಲೋಪ ಯಾರದು ಎಂಬ ಆಯಾಮದಲ್ಲಿ ಪೊಲೀಸರು ತನಿಖೆ ನಡೆಸಿದ್ದರು. ಐಐಟಿ ರಿಪೋರ್ಟ್ ಮತ್ತು ಬಳಕೆಯಾದ ಮೆಟಿರಿಯಲ್ಸ್ ಬಗ್ಗೆ ಎಫ್‌ಎಸ್‌ಎಲ್ ವರದಿ ಪಡೆದು ಘಟನೆ ನಡೆದು ಐದು ತಿಂಗಳ ಬಳಿಕ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.

ಘಟನೆ ಹಿನ್ನೆಲೆ:
ಗದಗ ಮೂಲದ ಲೋಹಿತ್ ಕುಮಾರ್ ಮತ್ತು ತೇಜಸ್ವಿನಿ ದಂಪತಿ ಇಬ್ಬರೂ ಬೆಂಗಳೂರಿನಲ್ಲಿ ೧೦ ವರ್ಷಗಳಿಂದ ವಾಸವಿದ್ದರು. ಇಬ್ಬರೂ ಸಿವಿಲ್ ಇಂಜಿನಿಯರ್ ಆಗಿದ್ದರು. ಮಕ್ಕಳಿಬ್ಬರನ್ನೂ ಬೇಬಿ ಸಿಟ್ಟಿಂಗ್‌ಗೆ ಬಿಟ್ಟು, ಪತ್ನಿಯನ್ನ ಕಂಪನಿ ಬಳಿ ಡ್ರಾಪ್ ಮಾಡಿ ಬಳಿ ತಾನೂ ಕೆಲಸಕ್ಕೆ ಹೋಗಲೆಂದು ಪತ್ನಿ-ಮಕ್ಕಳನ್ನು ಬೈಕ್‌ನಲ್ಲಿ ಲೋಹಿತ್ ಕರೆದುಕೊಂಡು ಜನವರಿ ೧೦ರ ಮಂಗಳವಾರ ಬೆಳಗ್ಗೆ ಹೋಗುತ್ತಿದ್ದರು. ದುರಾದೃಷ್ಟವಶಾತ್ ಚಲಿಸುತ್ತಿದ್ದ ಬೈಕ್ ಮೇಲೆ ಅಂದು ೧೦.೩೦ರ ಸುಮಾರಿಗೆ ಮೆಟ್ರೋ ಪಿಲ್ಲರ್ ಚೌಕಟ್ಟು ಕುಸಿದಿದ್ದು, ನಾಲ್ವರೂ ಗಂಭೀರ ಗಾಯಗೊಂಡರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತ್ತಾದರೂ ತೇಜಸ್ವಿನಿ ಮತ್ತು ಎರಡೂವರೆ ವರ್ಷದ ಮಗ ಮೃತಪಟ್ಟರು. ಲೋಹಿತ್ ಮತ್ತು ಮಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು

No Comments

Leave A Comment