ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ
ಕಾಯಕ, ದಾಸೋಹ ನಮಗೆ ಪ್ರೇರಣೆ, ಬಸವೇಶ್ವರ ಹಾದಿಯಲ್ಲಿ ನಡೆಯುತ್ತೇವೆ: ವಿಜಯಪುರದಲ್ಲಿ ಪ್ರಧಾನಿ ಮೋದಿ ಭಾಷಣ
ವಿಜಯಪುರ: ಸಬ್ ಕಾ ಸಾತ್ ಸಬ್ ಕಾ ವಿಕಾಸ್ಗೆ ಭಗವಾನ್ ಬಸವಣ್ಣನವರೂ ಸ್ಫೂರ್ತಿಯಾಗಿದ್ದು, ಕಾಯಕ, ದಾಸೋಹ ನಮಗೆ ಪ್ರೇರಣೆಯಾಗಿದೆ. ಬಸವೇಶ್ವರ ಹಾದಿಯಲ್ಲಿ ನಾವು ನಡೆಯುತ್ತೇವೆಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶನಿವಾರ ಹೇಳಿದ್ದಾರೆ.
ವಿಜಯಪುರದ ಸೈನಿಕ ಶಾಲೆ ಆವರಣದಲ್ಲಿ ಆಯೋಜಿಸಲಾಗಿರುವ ಬಿಜೆಪಿ ಸಮಾವೇಶದಲ್ಲಿ ಮಾತನಾಡಿರುವ ಅವರು, ಪಂಚನದಿಗಳ ನಾಡು ವಿಜಯಪುರ ಜನತೆಗೆ ನಮಸ್ಕಾರಗಳು ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದರು.
ಜಗಜ್ಯೋತಿ ಬಸವೇಶ್ವರರ ಜನ್ಮಭೂಮಿಗೆ ಬಂದಿದ್ದೇನೆ. 2014ರಲ್ಲಿ ಯುಗಾದಿ ಹಬ್ಬದ ಸಂದರ್ಭದಲ್ಲಿ ನಾನು ಬಂದಿದ್ದೆ. ಹೊಸ ವರ್ಷದ ಜೊತೆಗೆ ನಿಮ್ಮ ಆಶೀರ್ವಾದ ಕೂಡ ಸಿಕ್ಕಿತ್ತು ಎಂದು ಸ್ಮರಿಸಿದರು.
ಇಷ್ಟು ದೊಡ್ಡ ಸಂಖ್ಯೆಯಲ್ಲಿ ನನಗೆ ಆಶೀರ್ವಾದ ಮಾಡಲು ಬಂದಿದ್ದೀರಿ. ‘ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ’ ಎಂದು ಕನ್ನಡದಲ್ಲೇ ಹೇಳಿದರು.
ಬಿಜೆಪಿಯ ಡಬಲ್ ಎಂಜಿನ್ ಸರ್ಕಾರದಿಂದ ಅಭಿವೃದ್ಧಿ ಸಾಧ್ಯವಾಗಿದೆ. ಸಬ್ ಕಾ ಸಾತ್ ಸಬ್ ಕಾ ವಿಕಾಸ್ಗೆ ಭಗವಾನ್ ಬಸವಣ್ಣನವರೂ ಸ್ಫೂರ್ತಿಯಾಗಿದ್ದಾರೆ. ಕಾಯಕ ಮತ್ತು ದಾಸೋಹದ ಪ್ರೇರಣೆ ನಮ್ಮ ಅಭಿವೃದ್ಧಿ ಯೋಜನೆಗಳ ಹಿಂದಿದೆ. ಆದಿವಾಸಿ, ಮಹಿಳೆಯರು, ದಲಿತರು ಸೇರಿದಂತೆ ಎಲ್ಲ ವರ್ಷಗಗಳ ಅಭಿವೃದ್ಧಿಗೆ ಬದ್ಧರಾಗಿದ್ದೇವೆ. ಅನ್ನ, ಆಶ್ರಯ್, ಅಕ್ಷರಕ್ಕಾಗಿ ಡಬಲ್ ಎಂಜಿನ್ ಸರ್ಕಾರ ಕೆಲಸ ಮಾಡಿದೆ ಎಂದು ತಿಳಿಸಿದರು.
ಸಾವಿರಾರು ಕುಟುಂಬಗಳಿಗೆ ನಮ್ಮ ಸರ್ಕಾರ ಭೂಮಿ ಹಕ್ಕುಪತ್ರ ವಿತರಣೆ ಮಾಡಿದೆ. ವಂಚಿತರಿಗೆ ಸರ್ಕಾರದ ಸೌಲಭ್ಯ ತಲುಪಿಸುವುದು ನಮ್ಮ ಗುರಿ. ಸಾಮಾಜಿಕ ನ್ಯಾಯ ಒದಗಿಸಲು ಬಿಜೆಪಿಯ ಡಬಲ್ ಎಂಜಿನ್ ಸರ್ಕಾರ ಅನೇಕ ಕೆಲಸ ಮಾಡಿದೆ. ಇದಕ್ಕೆ ಅನೇಕ ಸಾಕ್ಷಿಗಳಿವೆ. ಕಾಂಗ್ರೆಸ್ ಸರ್ಕಾರವು ಬಂಜಾರ, ಲಂಬಾಣಿ ಸಮುದಾಯದವರಿಗೆ ಏನೂ ಮಾಡಿಲ್ಲ. ಕಾಂಗ್ರೆಸ್ ಸರ್ಕಾರವು ಭಗವಾನ್ ಬಸವಣ್ಣರ ತತ್ವಗಳ ಅನುಷ್ಠಾನಕ್ಕೆ ಏನೂ ಮಾಡಿಲ್ಲ ಎಂದು ಆರೋಪಿಸಿದರು.
ಕೇಂದ್ರದಿಂದ 1 ರೂಪಾಯಿ ಬಿಡುಗಡೆ ಮಾಡಿದ್ದರೆ ಫಲಾನುಭವಿಗೆ 15 ಪೈಸೆ ಮಾತ್ರ ದೊರೆಯುತ್ತದೆ ಎಂಬುದನ್ನು ಕಾಂಗ್ರೆಸ್ ಪಕ್ಷದ ಪ್ರಧಾನಮಂತ್ರಿಯವರೇ ಹೇಳಿದ್ದರು. ಪಂಚಾಯತಿಯಿಂದ ಹಿಡಿದು ಸಂಸತ್ತಿನವರೆಗೆ ಕಾಂಗ್ರೆಸ್ ಹಿಡಿತದಲ್ಲಿದ್ದಾಗ ಪರಿಸ್ಥಿತಿ ಹಾಗಿತ್ತು. ಭ್ರಷ್ಟಾಚಾರ ತೊಡೆದುಹಾಕಲು ಏನೂ ಕ್ರಮ ಕೈಗೊಂಡಿರಲಿಲ್ಲ. ಬಡ ಜನರಿಗೆ ಸಲ್ಲಬೇಕಾದ ದುಡ್ಡನ್ನು ಲೂಟಿ ಮಾಡಲಾಗುತ್ತಿತ್ತು. ನೇರ ನಗದು ವರ್ಗಾವಣೆ ಮೂಲಕ ನಮ್ಮ ಸರ್ಕಾರ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದೆ. ಈಗ ಎಲ್ಲ ಲಾಭಾಂಶವೂ ಫಲಾನುಭವಿಗಳಿಗೆ ತಲುಪುತ್ತಿದೆ.
ಇಂದು ದೆಹಲಿಯಿಂದ 1 ರೂಪಾಯಿ ಬಿಡುಗಡೆಯಾದರೆ ನೂರಕ್ಕೆ ನೂರರಷ್ಟು ಫಲಾನುಭವಿಗಳಿಗೆ ತಲುಪುತ್ತಿದೆ. ಬಿಜೆಪಿ ಸರ್ಕಾರ ರೈತರ ಖಾತೆಗೆ ಹಣ ನೇರ ಜಮೆ ಮಾಡಿದೆ. ಮಧ್ಯವರ್ತಿಗಳಿಲ್ಲದೇ ರೈತರ ಖಾತೆಗಳಿಗೆ ನೇರವಾಗಿ ಹಣ ಜಮೆ ಮಾಡಿದೆ, ಮಾಡುತ್ತಿದೆ. ಡಬಲ್ ಇಂಜಿನ್ ಸರ್ಕಾರದಿಂದ ಕರ್ನಾಟಕ ಅಭಿವೃದ್ಧಿಯಾಗುತ್ತಿದೆ. ಕರ್ನಾಟಕದಲ್ಲೂ ಬಡವರಿಗೆ ರೇಷನ್ ನೀಡುತ್ತಿದ್ದೇವೆ ಎಂದು ಹೇಳಿದರು.
ಬಿಜೆಪಿ ಸರ್ಕಾರವು ಯೋಜನೆಗಳಲ್ಲಿ ಪಾರದರ್ಶಕತೆ ತಂದಿದೆ. ಎಲ್ಾ ಹಣವೂ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮೆಯಾಗುತ್ತಿದೆ. ಇಡೀ ದೇಶದಲ್ಲಿ ಕಿಸಾನ್ ಸಮ್ಮಾನ್ ನಿಧಿಯ ಹಣ ನೇರವಾಗಿ ರೈತರ ಖಾತೆಗಳಿಗೆ ತಲುಪುತ್ತಿದೆ. ವಿಜಯಪುರದ ರೈತರ ಖಾತೆಗಳಿಗೂ ನೇರ ಹಣ ಜಮೆ ಮಾಡಲಾಗಿದೆ. ಕಾಂಗ್ರೆಸ್ ಸರ್ಕಾರ ಇದ್ದಿದ್ದರೆ ಹಣ ಇಲ್ಲಿವರೆಗೆ ಬರುತ್ತಲೇ ಇರಲಿಲ್ಲ, ಕಾಂಗ್ರೆಸ್ ಯಾವುದೇ ಸಾಲಮನ್ನಾ ಮಾಡಲಿಲ್ಲ. ರೈತರ ಸಾಲಮನ್ನಾ ಮಾಡದೇ ತಮ್ಮ ಜೇಬಿಗೆ ಹಣ ಹಾಕಿಕೊಂಡರು. ಆದರೆ, ಬಿಜೆಪಿಯು ರೈತರ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ.
ಕಳಸಾ ಬಂಡೂರಿ, ಕೃಷ್ಣಾ ಮೇಲ್ದಂಡೆ ಯೋಜನೆಗೆ ಬಜೆಟ್ನಲ್ಲಿ ಅನುದಾನ ನೀಡಿದ್ದೇವೆ. ವಿಜಯಪುರದ ರೈತರಿಗೆ ನೆರವಾಗುವ ಅನೇಕ ಕ್ರಮಗಳನ್ನು ಕೈಗೊಂಡಿದ್ದೇವೆ. ರೇವಣ ಸಿದ್ದೇಶ್ವರ ಏತ ನೀರಾವರಿ ಯೋಜನೆಯ ಕೆಲಸ ಆರಂಭವಾಗಿದೆ. ಇದು ಡಬಲ್ ಎಂಜಿನ್ ಸರ್ಕಾರದ ಕಟಿಬದ್ಧತೆಯಾಗಿದೆ. ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿಯೂ ಡಬಲ್ ಎಂಜಿನ್ ಸರ್ಕಾರ ಕ್ರಮ ಕೈಗೊಂಡಿದೆ. ಜಲ ಜೀವನ್ ಮಿಷನ್ ಯೋಜನೆ ಅನುಷ್ಠಾನಕ್ಕೂ ಮೊದಲು ಕುಡಿಯುವ ನೀರನ್ನು ಎಲ್ಲಿಂದಲೋ ತರಬೇಕಿತ್ತು. ಈಗ ಮನೆ ಮನೆಗೆ ನೀರು ಬರುತ್ತಿದೆ ಎಂದು ತಿಳಿಸಿದರು.
ಬಿಜೆಪಿಯ ಡಬಲ್ ಎಂಜಿನ್ ಸರ್ಕಾರ ಆಯುಷ್ಮಾನ್ ಭಾರತ್ ಯೋಜನೆ ಜಾರಿಗೆ ತಂದಿತು. ಬಿಜೆಪಿ ಸರ್ಕಾರದ ನೀತಿಯಿಂದ ಇಂದು ನಮ್ಮ ಮಾತೆಯರಿಗೆ, ಸಹೋದರಿಯರಿಗೆ ಹೊಸ ಶಕ್ತಿ ದೊರೆತಿದೆ. ಬಿಜೆಪಿ ಸರ್ಕಾರ ಜನಧನ ಬ್ಯಾಂಕ್ ಖಾತೆ ಮೂಲಕ ಮಹಿಳೆಯರ ಜೀವನ ಬದಲಿಸಿದೆ. ಈ ಖಾತೆಯ ಮೂಲಕ ಸರ್ಕಾರಿ ಯೋಜನೆಗಳ ಹಣ ನೇರ ವರ್ಗಾವಣೆಯಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಮಹಿಳೆಯರ ಕಲ್ಯಾಣಕ್ಕೆ ಗಂಭೀರ ಯತ್ನವನ್ನೇ ಮಾಡಿಲ್ಲ. ಬಿಜೆಪಿ ಸರ್ಕಾರ ಲಕ್ಷಾಂತರ ರೂಪಾಯಿ ನೀಡಿದೆ. ನಮ್ಮ ಸರ್ಕಾರ ಆಧುನಿಕ ಸಂಪರ್ಕ, ಮೂಲಸೌಕರ್ಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡುತ್ತಿದೆ. ವಿಜಯಪುರ-ಸೋಲಾಪುರ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಇದರಿಂದ ಉದ್ಯೋಗಾವಕಾಶಗಳೂ ಹೆಚ್ಚು ಸೃಷ್ಟಿಯಾಗಲಿವೆ,
ಬಿಜೆಪಿಯ ಡಬಲ್ ಎಂಜಿನ್ ಸರ್ಕಾರ ವೋಕಲ್ ಫಾರ್ ಲೋಕಲ್ ಆಗಿ ಕಾರ್ಯನಿರ್ವಹಿಸುತ್ತಿದೆ. ಕರ್ನಾಟಕದಲ್ಲಿ ನೇಕಾರ ಸಮ್ಮಾನ್ ಯೋಜನೆ ಜಾರಿಗೆ ತಂದೆವು. ಕೇಂದ್ರ ಸರ್ಕಾರವೂ ಅದಕ್ಕೆ ಬೆಂಬಲ ನೀಡಿದೆ. ವಿಜಯಪುರದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಿದ್ದೇವೆ. ಜಿಲ್ಲೆಗೆ ಹೊಸ ಕೈಗಾರಿಕೆಗಳು ಬರುತ್ತಿವೆ. ಈ ಬಾರಿ ಹೊಸ ಮುಖಗಳಿಗೆ ಟಿಕೆಟ್ ನೀಡಿದ್ದೇವೆ. ಕರ್ನಾಟಕದ ಭವಿಷ್ಯಕ್ಕಾಗಿ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.