Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಉಡುಪಿ ವಿಧಾನ ಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಯಶ್ಪಾಲ್ ಸುವರ್ಣ ನಾಮಪತ್ರಸಲ್ಲಿಕೆ-ಆಸ್ತಿ-ಸಾಲದ ವಿವರ ಇಲ್ಲಿದೆ ನೋಡಿ

ಉಡುಪಿ: ಉಡುಪಿ ವಿಧಾನಸಭೆ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಯಶಪಾಲ್ ಸುವರ್ಣ ಸಹಸ್ರಾರು ಮಂದಿ ಕಾರ್ಯಕರ್ತರು ಹಾಗೂ ಅಭಿಮಾನಿಗಳೊಂದಿಗೆ ಪಾದಯಾತ್ರೆ ಮೂಲಕ ಆಗಮಿಸಿ ತಾಲೂಕು ಕಚೇರಿಯಲ್ಲಿ ಗುರುವಾರ ನಾಮಪತ್ರ ಸಲ್ಲಿಸಿದರು.

ಮುಂಚೂಣಿಯ ಹಿಂದೂ ಶಾಸಕನಾಗಲಿ….
ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ರಘುಪತಿ ಭಟ್, ಕಾರ್ಯಕರ್ತರ ಹುಮ್ಮಸ್ಸು ಕಾಣುವಾಗ ಈ ಬಾರಿಯ ಚುನಾವಣೆಯಲ್ಲಿ ಯಶಪಾಲ್ ಸುವರ್ಣ 50 ಸಾವಿರ ಮತಗಳ ಅಂತರದಿಂದ ಜಯಶಾಲಿಯಾಗುವುದು ಯಾವುದೇ ರೀತಿಯಲ್ಲಿ ಕಷ್ಟ ಇಲ್ಲ ಎಂದೆನಿಸುತ್ತದೆ.

ಯಶಪಾಲ್ ಸುವರ್ಣ ಜೊತೆಗೂಡಿ ಈಗಾಗಲೇ ಉಡುಪಿ ವಿಧಾನಸಭಾ ಕ್ಷೇತ್ರದ ಗ್ರಾಮಾಂತರ ಪಂಚಾಯತ್ ಹಾಗೂ ಶಕ್ತಿಕೇಂದ್ರಗಳಲ್ಲಿ ಕಾರ್ಯಕರ್ತರ ಸಭೆ ನಡೆಸಲಾಗಿದೆ. ಎಲ್ಲಾ ಕಡೆಗಳಲ್ಲೂ ಉತ್ತಮ ಸ್ಪಂದನೆ ಲಭಿಸುತ್ತಿದೆ ಎಂದರು.

ಉಡುಪಿ ನಗರ ಹಾಗೂ ಕ್ಷೇತ್ರದ ಅಭಿವೃದ್ಧಿ ಬಿಜೆಪಿಯಿಂದ ನಡೆದಿದೆ. ದಿವ೦ಗತ ಡಾ.ವಿ.ಎಸ್. ಆಚಾರ್ಯ ಮಾರ್ಗದರ್ಶನದಲ್ಲಿ ತನ್ನ ಶಾಸಕತ್ವದ ಅವಧಿಯಲ್ಲಿ ಬಿಜೆಪಿ ಕೊಡುಗೆಯಿಂದ ಅಭಿವೃದ್ಧಿಯಾಗಿದೆ. ಜಿಲ್ಲಾಧಿಕಾರಿ ಕಚೇರಿ ನಿರ್ಮಾಣ, ಡಂಪಿಂಗ್ ಯಾರ್ಡ್ ಇತ್ಯಾದಿ ನಡೆಸಲಾಗಿದೆ. ರಸ್ತೆಗಳ ಅಭಿವೃದ್ಧಿ ಇವೆಲ್ಲವೂ ಬಿಜೆಪಿ ಸರಕಾರದ ಕೊಡುಗೆ. ಕೇಂದ್ರ ಹಾಗೂ ರಾಜ್ಯ ಸರಕಾರದ ವಿವಿಧ ಯೋಜನೆಗಳ ಮೂಲಕ 2,954 ಕೋ. ಅನುದಾನ ಲಭಿಸಿದೆ ಎಂದರು.
ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ 1,500 ಎಕ್ರೆ ಹಡಿಲು ಭೂಮಿಯಲ್ಲಿ ಸುಮಾರು 8 ಸಾವಿರ ಹೆಕ್ಟೇರ್ ಕೃಷಿ ಮಾಡಲಾಗಿದ್ದು, ಈ ಬಾರಿಯೂ ಅದನ್ನು ಮುಂದುವರಿಸಲಾಗುವುದು. ಕೇದಾರೋತ್ಥಾನ ಟ್ರಸ್ಟ್, ಯಕ್ಷ ಶಿಕ್ಷಣ ಟ್ರಸ್ಟ್ ಇತ್ಯಾದಿಗಳನ್ನು ಇನ್ನು ಮುಂದೆ ಯಶಪಾಲ್ ಸುವರ್ಣ ಮುನ್ನಡೆಸಿಕೊಂಡು ಹೋಗಲಿದ್ದಾರೆ.

ಮೆಡಿಕಲ್ ಕಾಲೇಜು ಸ್ಥಾಪನೆ, ಸ್ಮಾರ್ಟ್ ಸಿಟಿ ಯೋಜನೆ ಇತ್ಯಾದಿ ಇನ್ನೂ ಆಗಬೇಕಾದ ಕೆಲಸಗಳಿದ್ದು, ಯಶಪಾಲ್ ಶಾಸಕತ್ವದ ಅವಧಿಯಲ್ಲೂ ತಾನು ಸಹಕರಿಸುವುದಾಗಿ ಭಟ್ ತಿಳಿಸಿದರು.
ಹಿಂದುತ್ವದ ಪ್ರತಿಪಾದಕರಾದ ಯಶಪಾಲ್ ಸುವರ್ಣ ರಾಜ್ಯದಲ್ಲೇ ಮುಂಚೂಣಿಯ ಹಿಂದೂ ಶಾಸಕನಾಗಿ ಮೂಡಿಬರಲಿ ಎಂದು ಶಾಸಕ ಭಟ್ ಆಶಿಸಿದರು.
ಇನ್ನುಳಿದ 20 ದಿನಗಳಲ್ಲಿ ಯಶಪಾಲ್ ಸುವರ್ಣ ಅವರ ಗೆಲುವಿಗೆ ಪ್ರತಿಯೊಬ್ಬ ಕಾರ್ಯಕರ್ತನೂ ಶ್ರಮಿಸಬೇಕು. ಗೆಲುವಿನ ಆತ್ಮವಿಶ್ವಾಸ ಅತಿ ವಿಶ್ವಾಸ ಆಗಕೂಡದು ಎಂದು ಎಚ್ಚರಿಸಿದರು.

ದಾಖಲೆಯ ಅಂತರದಲ್ಲಿ ಜಯ….
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ನಾನು ಬಿಜೆಪಿ ಸೇರಿದ್ದರಿಂದ ಕಾಂಗ್ರೆಸ್ ಗೆ ನಷ್ಟ ಇಲ್ಲ ಎಂದು ಡಿಕೆ ಶಿವಕುಮಾರ್ ಹಾಗೂ ಸಿದ್ಧರಾಮಯ್ಯ ಹೇಳಿದ್ದರು. ನನ್ನಿಂದಾಗುವ ನಷ್ಟ ಪ್ರಮಾಣ ಈ ಬಾರಿಯ ಚುನಾವಣೆಯಲ್ಲಿ ಗೊತ್ತಾಗುತ್ತದೆ.

ರಘುಪತಿ ಭಟ್ ಹಾಗೂ ನನ್ನ ಸ್ಪರ್ಧೆಯ ಅಂತರವನ್ನೂ ಮೀರಿ ದಾಖಲೆಯ ಅಂತರದಲ್ಲಿ ಯಶಪಾಲ್ ಸುವರ್ಣ ವಿಜಯಿಯಾಗಲಿ ಎಂದು ಪ್ರಮೋದ್ ತಿಳಿಸಿದರು.

ಕಾಂಗ್ರೆಸ್ ದುರಾಡಳಿತ ತಪ್ಪಿಸಲು ಬಿಜೆಪಿಗೆ ಮತ…
ಉಡುಪಿ ವಿಧಾನ ಸಭಾ ಕ್ಷೇತ್ರದಲ್ಲಿ ರಘುಪತಿ ಭಟ್ ಪರಿಶ್ರಮ ಮತ್ತು ಶ್ರದ್ಧೆಯಿಂದ ನಿರ್ವಹಿಸಿದ ಕಾರ್ಯಕ್ರಮಗಳನ್ನು ಮುಂದುವರಿಸಲು ಯಶಪಾಲ್ ಸುವರ್ಣ ಸಮರ್ಥ ಅಭ್ಯರ್ಥಿ.

ಯಶಪಾಲ್ ಸುವರ್ಣ ಆ ಕಾರ್ಯದಲ್ಲಿ ಯಶಸ್ವಿಯಾಗುವ ವಿಶ್ವಾಸ ಇದೆ ಎಂದು ಸಚಿವ, ಕಾರ್ಕಳ ಬಿಜೆಪಿ ಅಭ್ಯರ್ಥಿ ವಿ. ಸುನಿಲ್ ಕುಮಾರ್ ಹೇಳಿದರು.
ತುಷ್ಟೀಕರಣದ ಮೂಲಕ ನಿರ್ದಿಷ್ಟ ಸಮುದಾಯಗಳ ಓಲೈಕೆಗೆ ತೊಡಗಿದ್ದ ಕಾಂಗ್ರೆಸ್ ದುರಾಡಳಿತ ತಪ್ಪಿಸಲು ಬಿಜೆಪಿಗೆ ಮತ ನೀಡಬೇಕಾಗಿದೆ. ಕಾಂಗ್ರೆಸ್ ಎಂದರೆ ತುಷ್ಟೀಕರಣ, ಬಿಜೆಪಿ ಸರ್ವವ್ಯಾಪಿ. ಬಿಜೆಪಿ ತನ್ನ ಆಡಳಿತಾವಧಿಯಲ್ಲಿ ಎಲ್ಲ ಜಾತಿ ಸಮುದಾಯಗಳಿಗೆ ಯೋಜನೆಗಳನ್ನು ನೀಡುವ ಮೂಲಕ ಸರ್ವವ್ಯಾಪಿ ಸಮರ್ಥ ಆಡಳಿತ ನೀಡಿದೆ ಎಂದರು.

ಜಿಲ್ಲೆಯ ಐದೂ ಕ್ಷೇತ್ರಗಳು ಮಾತ್ರವಲ್ಲದೇ, ಕರಾವಳಿಯಲ್ಲಿ ಕಮಲ ಅರಳುವ ಮೂಲಕ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರಕಾರಕ್ಕೆ ಅಧಿಕಾರಕ್ಕೆ ಬರಬೇಕಾಗಿದೆ ಎಂದು ಆಶಿಸಿದರು.

ಸಾಮಾನ್ಯ ಕಾರ್ಯಕರ್ತನಿಗೆ ಅವಕಾಶ…
ಅಭ್ಯರ್ಥಿ ಯಶಪಾಲ್ ಸುವರ್ಣ ಮಾತನಾಡಿ, ಸಾಮಾನ್ಯ ಕಾರ್ಯಕರ್ತನಾದ ನನಗೆ ಪಕ್ಷ ಅವಕಾಶ ನೀಡಿದೆ. ಉಡುಪಿಯಲ್ಲಿ ಶಾಸಕನಾಗುವ ಅಪೇಕ್ಷೆ ನನಗಿರಲಿಲ್ಲ. ಆದರೆ, ಪಕ್ಷ ನೀಡಿದ ಅವಕಾಶವನ್ನು ಸ್ವೀಕರಿಸಿ, ಸರ್ವರ ಆಶಯಕ್ಕೆ ಪೂರಕವಾಗಿ ನಡೆಯುವುದಾಗಿ ತಿಳಿಸಿದರು.

ಶಾಸಕ ರಘುಪತಿ ಭಟ್ ಸಹಕಾರದೊಂದಿಗೆ ಪಕ್ಷದ ಎಲ್ಲಾ ನಾಯಕರ ಸಂಪೂರ್ಣ ಸಹಕಾರದೊಂದಿಗೆ ಪಕ್ಷ ಕಾರ್ಯಕರ್ತರ ಬೆಂಬಲದೊಂದಿಗೆ ಜಯ ಸಾಧಿಸುವ ವಿಶ್ವಾಸ ಇದೆ ಎಂದರು.

ಐದೂ ಕ್ಷೇತ್ರಗಳು ನಮ್ಮದೇ…
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ. ಸುರೇಶ ನಾಯಕ್, ಈ ಬಾರಿಯ ಚುನಾವಣೆಯಲ್ಲಿ ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳಲ್ಲೂ ಈ ಹಿಂದಿನ ಎಲ್ಲಾ ದಾಖಲೆಗಳನ್ನು ಮೀರಿ ಬಿಜೆಪಿ ವಿಜಯ ಸಾಧಿಸಲಿದೆ ಎಂದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮಂಗಳೂರು ವಿಭಾಗ ಪ್ರಭಾರಿ ಉದಯಕುಮಾರ್ ಶೆಟ್ಟಿ, ಕಾಪು ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ ಶೆಟ್ಟಿ, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಬೈಕಾಡಿ ಸುಪ್ರಸಾದ ಶೆಟ್ಟಿ, ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್, ಗ್ರಾಮಾಂತರ ಅಧ್ಯಕ್ಷೆ ವೀಣಾ ನಾಯ್ಕ್, ಉಡುಪಿ ನಗರಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮನೋಹರ ಕಲ್ಮಾಡಿ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ವೀಣಾ ಶೆಟ್ಟಿ, ವಕ್ತಾರ ಆರ್ ಕಿಣಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್ ಮೊದಲಾದವರಿದ್ದರು.

ಪಾದಯಾತ್ರೆ…


ಬಳಿಕ ಸಹಸ್ರಾರು ಮಂದಿ ಕಾರ್ಯಕರ್ತರು ಹಾಗೂ ಅಭಿಮಾನಿಗಳೊಂದಿಗೆ ಕಡಿಯಾಳಿ, ಕಲ್ಸಂಕ, ಸಿಟಿ ಬಸ್ ನಿಲ್ದಾಣ, ಬನ್ನಂಜೆ ದೇವಸ್ಥಾನಕ್ಕೆ ತೆರಳಿ ಅಲ್ಲಿ೦ದ ತಾಲೂಕು ಕಚೇರಿ ತನಕ ಬೃಹತ್ ಪಾದಯಾತ್ರೆ ನಡೆಸಿ, ಬಳಿಕ ನಾಮಪತ್ರ ಸಲ್ಲಿಸಿದರು.

No Comments

Leave A Comment