ರಂಗೇರಿದ ವರುಣಾ- ಕನಕಪುರ: ಕಾಂಗ್ರೆಸ್ – ಬಿಜೆಪಿ ದಿಗ್ಗಜರ ಮಹಾಸಮರ; ‘ಸೋಮಣ್ಣ- ಸಾಮ್ರಾಟ್’ ಪವರ್ ಮೇಲೆ ಬಿಜೆಪಿ ಭರವಸೆ ಅಪಾರ!
ಬೆಂಗಳೂರು: ಕಾಂಗ್ರೆಸ್ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವರುಣಾ ಕ್ಷೇತ್ರದಲ್ಲಿ ಸಚಿವ ವಿ. ಸೋಮಣ್ಣ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಇದರೊಂದಿಗೆ ಕನಕಪುರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರ ವಿರುದ್ಧ ಸಚಿವ ಆರ್. ಅಶೋಕ್ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ.
ವರುಣಾದಲ್ಲಿ ಸಿದ್ದರಾಮಯ್ಯ ವಿರುದ್ಧ ಹಾಗೂ ಕನಕಪುರದಲ್ಲಿ ಡಿಕೆಶಿ ವಿರುದ್ಧ ಸ್ಪರ್ಧೆ ಮಾಡಲಿರುವ ಸಚಿವರಾದ ಆರ್. ಅಶೋಕ್ ಹಾಗೂ ಸೋಮಣ್ಣ ಅವರಿಗೆ ಮತ್ತೊಂದು ಸುರಕ್ಷಿತ ಕ್ಷೇತ್ರವನ್ನೂ ಕಾಯ್ದಿರಿಸಲಾಗಿದೆ. ಎರಡು ಕ್ಷೇತ್ರಗಳಲ್ಲಿ ಇಬ್ಬರೂ ಸಚಿವರು ಅಖಾಡಕ್ಕೆ ಇಳಿಯಲಿದ್ದಾರೆ.
ಆರ್. ಅಶೋಕ್ ಅವರು ಕನಕಪುರದಲ್ಲಿ ಸ್ಪರ್ಧೆ ಮಾಡುವ ಜೊತೆಯಲ್ಲೇ ತಮ್ಮ ಸ್ವಕ್ಷೇತ್ರ ಪದ್ಮನಾಭ ನಗರದಿಂದಲೂ ಅಖಾಡಕ್ಕೆ ಇಳಿಯಲಿದ್ದಾರೆ. ಇನ್ನು ಸಚಿವ ವಿ. ಸೋಮಣ್ಣ ಅವರು ವರುಣಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ಜೊತೆಯಲ್ಲೇ ಚಾಮರಾಜನಗರದಿಂದಲೂ ಅಖಾಡಕ್ಕೆ ಇಳಿಯಲಿದ್ದಾರೆ. ಈ ಮೂಲಕ ಒಕ್ಕಲಿಗರ ಪ್ರಬಾವಿ ನಾಯಕ ಅಶೋಕ್ ಹಾಗೂ ಲಿಂಗಾಯತ ಪ್ರಮುಖ ನಾಯಕ ವಿ.ಸೋಮಣ್ಣ ಅವರ ಸಾಮರ್ಥ್ಯ ಸಾಬೀತು ಪಡಿಸಲು ಬಿಜೆಪಿ ಟಾರ್ಗೆಟ್ ನೀಡಿದೆ.
ಕಂದಾಯ ಸಚಿವ ಆರ್. ಅಶೋಕ್ ಪದ್ಮನಾಭನಗರದಲ್ಲಿ ತಮ್ಮ ಸ್ಥಾನ ಉಳಿಸಿಕೊಳ್ಳಬಹುದು, ಆದರೆ ಡಿ.ಕೆ ಶಿವಕುಮಾರ್ ಭದ್ರಕೋಟೆ ಕನಕಪುರದಲ್ಲಿ ಸ್ಪರ್ಧೆ ಕಠಿಣವಾಗುವ ಸಾಧ್ಯತೆಯಿದೆ. ಸೋಮಣ್ಣ ಅವರಿಗೆ ಎರಡೂ ಸ್ಥಾನಗಳು ಹೊಸದು. ವರುಣಾದಲ್ಲಿ ಅವರು ಸಿಎಲ್ಪಿ ನಾಯಕ ಸಿದ್ದರಾಮಯ್ಯ ವಿರುದ್ಧ ಮತ್ತು ಚಾಮರಾಜನಗರದಲ್ಲಿ ಕಾಂಗ್ರೆಸ್ನ ಸಿ ಪುಟ್ಟರಂಗ ಶೆಟ್ಟಿಗೆ ಸೋಮಣ್ಣ ಸವಾಲು ಹಾಕಲಿದ್ದಾರೆ.