ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು

ಬಿ ಎಲ್ ಸಂತೋಷ್- ಯಡಿಯೂರಪ್ಪ ಮುಸುಕಿನ ಗುದ್ದಾಟ: ಅಭ್ಯರ್ಥಿಗಳ ಆಯ್ಕೆಯಲ್ಲಿ ಮಾಜಿ ಸಿಎಂ ಕೈ ಮೇಲು

ಬೆಂಗಳೂರು: ಮೊನ್ನೆ ಮಂಗಳವಾರ ಬಿಡುಗಡೆಯಾದ 189 ವಿಧಾನಸಭಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪನವರ ಪ್ರಭಾವ ಸಾಕಷ್ಟಿದೆ ಎಂಬುದು ಸ್ಪಷ್ಟವಾಗಿ ಗೋಚರವಾಗುತ್ತಿದೆ.

ಇದರ ಜೊತೆಗೆ ಬಿಜೆಪಿಯ ಪ್ರಭಾವಿ ಮುಖಂಡ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ(ಸಂಘಟನೆ) ಬಿ ಎಲ್ ಸಂತೋಷ್ ಅವರ ಪ್ರಭಾವ ಪಟ್ಟಿ ತಯಾರಿಯಲ್ಲಿ ಸಾಕಷ್ಟು ಇರಬಹುದು ಎಂಬ ಯೋಚನೆಯಲ್ಲಿದ್ದ ಯಡಿಯೂರಪ್ಪ ನಿಷ್ಠಾವಂತರಿಗೆ ಇದರಿಂದ ಖುಷಿಯಾಗಿದೆ. ಪಟ್ಟಿ ತಯಾರಿಯಲ್ಲಿ ಬಿ ಎಲ್ ಸಂತೋಷ್ ಪ್ರಭಾವ ಪಾತ್ರ ವಹಿಸಿರುವ ಸಾಧ್ಯತೆ ಕಡಿಮೆಯಿದೆ.

ಉದಾಹರಣೆಗೆ ತುಮಕೂರು ಗ್ರಾಮಾಂತರದಲ್ಲಿ ಬಿ ಎಲ್ ಸಂತೋಷ್ ಅವರು ಸೊಗಡು ಶಿವಣ್ಣನವರ ಪರವಾಗಿದ್ದರು, ಆದರೆ ಟಿಕೆಟ್ ಬಿ ಸುರೇಶ್ ಅವರ ಪಾಲಾಯಿತು. ಸುರೇಶ್ ಯಡಿಯೂರಪ್ಪ ಅನುಯಾಯಿ. ಸುರೇಶ್ ಅವರು ಈ ಹಿಂದೆ ಪಕ್ಷದ ಇಬ್ಬರು ಪ್ರಮುಖ ನಾಯಕರೊಂದಿಗೆ ಭಿನ್ನಾಭಿಪ್ರಾಯ ಹೊಂದಿ ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸಹ ರಾಜೀನಾಮೆ ನೀಡಿದ್ದರು.

ಈ ಬಾರಿ ಚಿತ್ರದುರ್ಗದಲ್ಲಿ ಜಿಹೆಚ್ ತಿಪ್ಪಾ ರೆಡ್ಡಿಯವರಿಗೆ ಟಿಕೆಟ್ ನೀಡಬಾರದು, ಟಿಕೆಟ್ ಅವರ ಕೈತಪ್ಪಿಹೋಗಬೇಕೆಂದು ಪಕ್ಷದೊಳಗೆ ಪ್ರಚಾರಗಳು, ತಂತ್ರಗಾರಿಕೆ ನಡೆಯುತ್ತಿತ್ತು. ಇಲ್ಲಿ ಕೂಡ ಯಡಿಯೂರಪ್ಪ ಅವರ ಕೈ ಮೇಲಾಗಿದೆ. 2019ರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ತೊರೆದು ಬಿಜೆಪಿ ಸೇರಿದ 17 ಮಂದಿ ಶಾಸಕರಿಗೆ ಈ ಬಾರಿ ಟಿಕೆಟ್ ನೀಡಲಾಗಿದೆ. ಮೂಲ ಪಕ್ಷದ ನಾಯಕರೊಬ್ಬರಿಗೆ ಮಾತ್ರ ಟಿಕೆಟ್ ಕೈತಪ್ಪಿ ಹೋಗಿದೆ.

ಅಥಣಿ ಕ್ಷೇತ್ರಕ್ಕೆ ಮಹೇಶ್ ಕುಮಟಳ್ಳಿಯನ್ನು ನಿಲ್ಲಿಸಬೇಕೆಂಬುದು ಯಡಿಯೂರಪ್ಪನವರ ಬೇಡಿಕೆಯಾಗಿತ್ತಂತೆ. ಇಲ್ಲಿನ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಬಂಡಾಯವೆದ್ದಿದ್ದಾರೆ. ಇನ್ನು ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯನವರ ಎದುರು ವಿಜಯೇಂದ್ರ ಸ್ಪರ್ಧಿಸುವುದು ಬೇಡ ಎಂದು ಖಡಾಖಂಡಿತವಾಗಿ ಯಡಿಯೂರಪ್ಪನವರೇ ಹೇಳಿದರಂತೆ. ತಮಗೆ ರಾಜಕೀಯ ಭವಿಷ್ಯ ಕೊಟ್ಟ ಶಿಕಾರಿಪುರವನ್ನೇ ತಮ್ಮ ಕುಟುಂಬದವರ ರಾಜಕಾರಣಕ್ಕೂ ಭದ್ರಪಡಿಸಿಕೊಳ್ಳುವ ಆಲೋಚನೆ ಯಡಿಯೂರಪ್ಪನವರದ್ದು. ಇನ್ನು ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ನೀಡಬೇಕೆಂಬುದು ಯಡಿಯೂರಪ್ಪನವರ ಬಯಕೆಯಾಗಿದೆಯಂತೆ.

ಈ ಬಾರಿ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಯಡಿಯೂರಪ್ಪನವರ ಮಾತಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ಮನ್ನಣೆ ನೀಡಿದ್ದಾರೆ ಎಂದು ಯಡಿಯೂರಪ್ಪನವರ ಅನುಯಾಯಿಗಳು ಕೂಡ ಖುಷಿಯಾಗಿದ್ದಾರಂತೆ. ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಯಡಿಯೂರಪ್ಪನವರ ಹೆಸರಿಡಬೇಕೆಂದು ಅನುಯಾಯಿಗಳ ಬಯಕೆಯಾಗಿತ್ತಂತೆ. ಇನ್ನು ಅಮಿತ್ ಶಾ ಅವರು ಯಡಿಯೂರಪ್ಪನವರ ನಿವಾಸಕ್ಕೆ ಭೇಟಿ ನೀಡಲು ಅವರೇ ವ್ಯವಸ್ಥೆ ಮಾಡಿದ್ದರು.

ಯಡಿಯೂರಪ್ಪನವರ ಅನುಯಾಯಿಗಳು ಈಗ ಸಂಭ್ರಮಾಚರಣೆಯಲ್ಲಿ ತೊಡಗಿದ್ದರೂ ಕೂಡ ಬಿಜೆಪಿ ನಾಯಕ ಜಿ ಮಧುಸೂಧನ್ ಮಾತ್ರ, ಎಲ್ಲರೂ ಯಡಿಯೂರಪ್ಪನವರ ಅನುಯಾಯಿಗಳೇ. ಬಿಜೆಪಿಯನ್ನು ಯಾರೊಬ್ಬರು ಪ್ರತ್ಯೇಕ ಗುಂಪು ಎಂದು ಪ್ರತ್ಯೇಕಿಸಲು ಸಾಧ್ಯವಿಲ್ಲ. ಇಲ್ಲಿ ಹಲವು ಬಣಗಳಿಲ್ಲ. 4 ದಶಕಗಳ ಕಾಲ ಪಕ್ಷವನ್ನು ಕಟ್ಟಿ ಬೆಳೆಸಿದ ಯಡಿಯೂರಪ್ಪನವರು ಸಾರ್ವಕಾಲಿಕ ನಾಯಕರು, ಇನ್ನೊಬ್ಬ ಯಡಿಯೂರಪ್ಪ ಬರಲು ಸಾಧ್ಯವಿಲ್ಲ ಎಂಬುದು ಅಷ್ಟೇ ಸತ್ಯ ಎಂದು ಹೇಳಿದ್ದಾರೆ.

No Comments

Leave A Comment