Log In
BREAKING NEWS >
ಎಲ್ಲೆಡೆಯಲ್ಲಿ ಶಾ೦ತಿಯುತವಾಗಿ ವಿಜೃ೦ಭಣೆಯ ಹನುಮಾನ್ ಜಯ೦ತಿ ಆಚರಣೆ.....

ಬೆಂಗಳೂರು ಗೆದ್ದವರಿಗೆ ರಾಜ್ಯದ ಅಧಿಕಾರದ ಚುಕ್ಕಾಣಿ: ರಾಜಧಾನಿಯಲ್ಲಿ 15 ಸೀಟು ಪಡೆಯಲು ಅತಿರಥ-ಮಹಾರಥರ ಹಣಾಹಣಿ!

ಬೆಂಗಳೂರು: ರಾಜ್ಯ ವಿಧಾನಸಭೆಯಲ್ಲಿ ರಾಜಧಾನಿ ಬೆಂಗಳೂರಿನ ಸದಸ್ಯತ್ವ ಪಾಲು 28. ಆಡಳಿತಾರೂಢ ಬಿಜೆಪಿ ಮತ್ತು ವಿಪಕ್ಷ ಕಾಂಗ್ರೆಸ್‌ ನಡುವೆ ಈ ಕ್ಷೇತ್ರಗಳಲ್ಲಿ ನೇರ ಹಣಾಹಣಿ ಇದೆ. 28 ಕ್ಷೇತ್ರಗಳ ಪೈಕಿ 15 ಸ್ಥಾನ ಗೆಲ್ಲಲು ಕಾಂಗ್ರೆಸ್ ಮತ್ತು ಬಿಜೆಪಿ ತಂತ್ರ ರೂಪಿಸುತ್ತಿವೆ.

ಬೆಂಗಳೂರನ್ನು ಗೆದ್ದವರೇ ರಾಜ್ಯವನ್ನು ಗೆಲ್ಲುತ್ತಾರೆ ಎಂಬ ನಂಬಿಕೆ ಇದೆ. ಈ ಸತ್ಯವನ್ನು ಅರಿತಿರುವ ಪಕ್ಷಗಳು ರಾಜ್ಯ ರಾಜಧಾನಿಯಲ್ಲಿನ ಮತದಾನದ ಮಾದರಿಯಲ್ಲಿನ ವಿಶಿಷ್ಟ ಏರಿಳಿತಗಳ ಬಗ್ಗೆಯೂ ತಿಳಿದಿದ್ದಾರೆ.

ಐಟಿ ಸಿಟಿ ಎಂದೇ ಪ್ರಸಿದ್ಧವಾಗಿರುವ ಸಿಲಿಕಾನ್ ಸಿಟಿಯಲ್ಲಿ 2008 ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 17, ಕಾಂಗ್ರೆಸ್ 10 ಮತ್ತು ಜೆಡಿಎಸ್ ಒಂದು ಸ್ಥಾನವನ್ನು ಗೆದ್ದು ಬಿಜೆಪಿ ಅಧಿಕಾರಕ್ಕೆ ಬಂದಿತು. 2013ರಲ್ಲಿ ಕಾಂಗ್ರೆಸ್‌ 13, ಬಿಜೆಪಿ 12, ಜೆಡಿಎಸ್‌ ಮೂರು ಗೆದ್ದು ನಂತರ ಕಾಂಗ್ರೆಸ್‌ ಸರ್ಕಾರ ರಚಿಸಿತ್ತು. 2018ರಲ್ಲಿ ಬಿಜೆಪಿ 12, ಕಾಂಗ್ರೆಸ್ 14 ಮತ್ತು ಜೆಡಿಎಸ್ 2 ಸ್ಥಾನಗಳನ್ನು ಗೆದ್ದಿದ್ದವು.

ಬೆಂಗಳೂರಿನಲ್ಲಿ ಕೆಲವು ವಿಧಾನಸಭಾ ಕ್ಷೇತ್ರಗಳು ಕಾಂಗ್ರೆಸ್‌ಗೆ, ಇನ್ನು ಕೆಲವರು ಬಿಜೆಪಿ ಅನುಕೂಲವಾಗಿವೆ. ಆದರೆ ಯಾವಾಗಲೂ ಶೇ.15-20ರಷ್ಟು ಮತದಾರರು ಜಾತಿ, ಧರ್ಮದ ಬಗ್ಗೆ ತಲೆಕೆಡಿಸಿಕೊಳ್ಳದೆ ತಟಸ್ಥರಾಗಿರುತ್ತಾರೆ. ಈ ವರ್ಗವನ್ನು ಗುರಿಯಾಗಿಟ್ಟುಕೊಂಡು ಈ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಬಹುದು ಎಂಬ ಲೆಕ್ಕಾಚಾರ ಕಾಂಗ್ರೆಸ್ ಪಕ್ಷದ್ದಾಗಿದೆ.

ಮತದಾರರು ಕಾಂಗ್ರೆಸ್ ಗೆ ವೋಟ್ ಮಾಡುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದು ಕಾಂಗ್ರೆಸ್ ಮುಖಂಡ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. ಭ್ರಷ್ಟಾಚಾರ,  ಆಡಳಿತ ವೈಫಲ್ಯ, ಹಗರಣಗಳು ಮತ್ತು ಬಿಜೆಪಿ ಸರ್ಕಾರಕ್ಕೆ ಸಂಬಂಧಿಸಿದ ಇತರ ಸಮಸ್ಯೆಗಳು ಇದಕ್ಕೆ ಕಾರಣ. ನಾವು ನಗರದಲ್ಲಿ 15-16 ಸೀಟುಗಳನ್ನು ಗುರಿಯಾಗಿಸಿಕೊಂಡಿದ್ದೇವೆ ಎಂದು ರಾಮಲಿಂಗಾರೆಡ್ಡಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.

ಬಿಜೆಪಿ ಕೂಡ 15 ಕ್ಷೇತ್ರ ಗೆಲ್ಲಲು ಹವಣಿಸುತ್ತಿದೆ. 2019ರಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ನಿಂದ ಬಿಜೆಪಿ ಸೇರಿ ಬಿಎಸ್‌ ಯಡಿಯೂರಪ್ಪ ಸರ್ಕಾರ ರಚನೆಗೆ ಕಾರಣರಾದ ಯಶವಂತಪುರ, ರಾಜರಾಜೇಶ್ವರಿನಗರ, ಮಹಾಲಕ್ಷ್ಮಿ ಲೇಔಟ್‌ ಮತ್ತು ಕೆಆರ್‌ ಪುರಂನಲ್ಲಿ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು.

ಕೆಲ ತಿಂಗಳ ಹಿಂದೆಯಷ್ಟೇ ಇದೇ ಅಭ್ಯರ್ಥಿಗಳ ವಿರುದ್ಧ ಪ್ರಚಾರ ಮಾಡಿದ್ದ ಬಿಜೆಪಿ ಕಾರ್ಯಕರ್ತರು ಮತ್ತೆ ಅವರ ಗೆಲುವಿಗೆ ಶ್ರಮಿಸಿದ್ದು ವಿಪರ್ಯಾಸ. ಆದರೆ ಈ ಬಾರಿ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಅಭ್ಯರ್ಥಿಯಾಗಿಲ್ಲದ ಕಾರಣ ಅದೇ ಪ್ರಯತ್ನ ಫಲ ನೀಡದಿರಬಹುದು ಎಂದು ಸ್ಥಳೀಯ ಬಿಜೆಪಿ ಮುಖಂಡರೊಬ್ಬರು ತಿಳಿಸಿದ್ದಾರೆ.

ಈಗ ಬಿಜೆಪಿಗೆ ಸೇರಿರುವ ಗೋವಿಂದರಾಜನಗರ, ಚಿಕ್ಕಪೇಟೆ, ಬಸವನಗುಡಿ ಕ್ಷೇತ್ರಗಳನ್ನು ಗೆಲ್ಲಲು ಕಾಂಗ್ರೆಸ್ ಪ್ಲಾನ್ ಮಾಡಿದೆ. ಅದೇ ರೀತಿ ಜಯನಗರ, ಹೆಬ್ಬಾಳ ಮತ್ತು ಪಕ್ಷದ ಶಾಸಕರು ಪ್ರತಿನಿಧಿಸುವ ಕೆಲವು ಕ್ಷೇತ್ರಗಳಲ್ಲಿ ಬಿಜೆಪಿಗೆ ಉತ್ತಮ ಅವಕಾಶಗಳಿವೆ ಎನ್ನಲಾಗಿದೆ.

ಕಳೆದ ಚುನಾವಣೆಯಲ್ಲಿ ಬಿಜೆಪಿ ಕೆಲವು ಕಾಂಗ್ರೆಸ್ ಮತ್ತು ಜೆಡಿಎಸ್ ಭದ್ರಕೋಟೆಗಳಿಗೆ ಲಗ್ಗೆ ಇಟ್ಟಿತು. ಆದರೆ ಶಾಂತಿನಗರ ಮತ್ತು ಸರ್ವಜ್ಞನಗರ ಕಾಂಗ್ರೆಸ್ ಪ್ರಾಬಲ್ಯದ ಕ್ಷೇತ್ರಗಳಾಗಿವೆ.  2018 ರಲ್ಲಿ, ಆಗಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಈ ಎಲ್ಲಾ ಕ್ಷೇತ್ರಗಳನ್ನು ಒಳಗೊಂಡ ಬೃಹತ್ ರೋಡ್‌ಶೋ ನಡೆಸಿದರೂ ಫಲಿತಾಂಶದಲ್ಲಿ ಯಾವುದೇ ವ್ಯತ್ಯಾಸವಾಗಲಿಲ್ಲ.

ಬಿಬಿಎಂಪಿ ಚುನಾವಣೆ ನಡೆಯದ ಕಾರಣ ಕೌನ್ಸಿಲರ್ ಗಳ ಗೈರು ಕಾಂಗ್ರೆಸ್ ಮತ್ತು ಬಿಜೆಪಿ ಎರಡಕ್ಕೂ ಕಂಟಕವಾಗಿದ. ಕಾರ್ಪೊರೇಟರ್‌ಗಳು ವೈಯಕ್ತಿಕ ಮತದಾರರೊಂದಿಗೆ ತಮ್ಮ ಬಲವಾದ ಸಂಪರ್ಕದಿಂದ ತಮ್ಮ ಪಕ್ಷಗಳನ್ನು ಗೆಲ್ಲಲು ಸಹಾಯ ಮಾಡುತ್ತಾರೆ.

ಕಾರ್ಪೊರೇಟರ್‌ಗಳ ಅನುಪಸ್ಥಿತಿಯಲ್ಲಿ, ರಸ್ತೆ ಮೂಲಸೌಕರ್ಯ, ಗುಂಡಿಗಳು ಮತ್ತು ಟ್ರಾಫಿಕ್ ಜಾಮ್‌ಗಳಂತಹ ನಾಗರಿಕ ಸಮಸ್ಯೆಗಳನ್ನು ಕ್ಷೇತ್ರದ ಶಾಸಕರು ನಿರ್ವಹಿಸಬೇಕಾಗುತ್ತದೆ, ನಾವು ಅವುಗಳನ್ನು ಪರಿಹರಿಸದಿದ್ದರೆ, ನಾವು ಜನರ ಕೋಪವನ್ನು ಎದುರಿಸಬೇಕಾಗುತ್ತದೆ ಎಂದು ಶಾಸಕರೊಬ್ಬರು ಹೇಳಿದರು.

No Comments

Leave A Comment