ಹಾಲಾಡಿ ಶೆಟ್ಟರು ರಘುಪತಿ ಭಟ್ಟರ ಟಿಕೇಟ್ ತಪ್ಪಿಸಿದರೇ..? : ಕುಂದಾಪುರದಲ್ಲಿ ಕಿರಣ್ ಕೊಡ್ಗಿಗೆ, ಹಾಗಾದ್ರೆ ಉಡುಪಿಯಲ್ಲಿ ಯಾರಿಗೆ
ಉಡುಪಿ : ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟರು ತಮ್ಮ ಸಮಯೋಚಿತ ರಾಜಕೀಯ ನಿವೃತ್ತಿಯ ಒಂದು ನಿರ್ಧಾರ ಉಡುಪಿ ಜಿಲ್ಲೆಯ ಬಿಜೆಪಿ ಪಾಳೆಯದಲ್ಲಿ ಅಲ್ಲೋಲಕಲ್ಲೋಲಕ್ಕೆ ಕಾರಣರಾಗಿದ್ದಾರೆ.
ರಾಜಕೀಯ ಪಕ್ಷಗಳು ಎಷ್ಟೇ ಇಲ್ಲ ಎಂದರೂ ಜಿಲ್ಲೆಯಲ್ಲಿ ಜಾತಿ ಆಧಾರಿತ ರಾಜಕೀಯವೇ ನಡೆಯುತ್ತದೆ. ಜಿಲ್ಲೆಯ ಬಹುಸಂಖ್ಯಾತ ಮತದಾರರಿರುವ ಬಿಲ್ಲವ, ಬಂಟ ಮತ್ತು ಮೊಗವೀರ ಸಮದಾಯಕ್ಕೆ ಒಂದಾದರೂ ಟಿಕೇಟ್ ನೀಡಲೇಬೇಕಾಗುತ್ತದೆ.
ಕಾರ್ಕಳದಲ್ಲಿ ಬಿಲ್ಲವ ಸಮುದಾಯದ ಸುನಿಲ್ ಕುಮಾರ್ ಅವರಿಗೆ ಬಹುತೇಕ ಟಿಕೇಟ್ ಪಕ್ಕ ಆಗಿದೆ. ಇದುವರೆಗಿನ ಲೆಕ್ಕಾಚಾರದಲ್ಲಿ ಲಾಲಾಜಿ ಅಥವಾ ಯಶಪಾಲ್ ಅವರು ಮೊಗವೀರ ಸಮುದಾಯವನ್ನು ಪ್ರತಿನಿಧಿಸಬಹುದು. ಆದರೇ ಬೈಂದೂರಿನ ಬಿ.ಎಂ.ಸುಕುಮಾರ್ ಶೆಟ್ಟಿ ಅವರಿಗೆ ಪುನಃ ಈ ಬಾರಿ ಟಿಕೇಟ್ ಸಿಗುವುದು ಕಷ್ಟ ಎನ್ನಲಾಗುತ್ತಿದೆ.
ಹಾಗಿರುವಾಗ ಬಂಟ ಸಮುದಾಯದಲ್ಲಿ ಹಾಲಾಡಿ ಅವರಿಗೆ ಟಿಕೇಟ್ ಬಹುತೇಕ ಗ್ಯಾರಂಟಿ ಆಗಿತ್ತು. ಕೇಳಿದರೇ ಎಲ್ಲಾ ವರಿಷ್ಟರಿಗೆ ಬಿಟ್ಟದ್ದು ಎಂದು ಟಿಪಿಕಲ್ ಉತ್ತರ ನೀಡುತಿದ್ದರು, ಅದಕ್ಕೆ ಪೂರಕವಾಗಿ, ಪಕ್ಷದ, ಆರ್ ಎಸ್ ಎಸ್ ಕಾರ್ಯಕ್ರಮಗಳಿಗೇ ಹೋಗದ ಅವರು, ಇತ್ತೀಚೆಗೆ ಹೋಗಲಾರಂಭಿಸಿದ್ದರು. ಆದ್ದರಿಂದ ಅವರು ಮತ್ತೇ ಸ್ಪರ್ಧಿಸುವ ಆಸೆಯಲ್ಲಿದ್ದಾರೆ ಎಂದು ಲೆಕ್ಕ ಹಾಕಲಾಗುತ್ತಿತ್ತು.
ಆದರೇ ಇದೀಗ ಸಡನ್ ಆಗಿ ತಾನಿನ್ನು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ, ಇಷ್ಟೇ ಆಗಿದ್ದರೇ ಪರವಾಗಿರಲಿಲ್ಲ, ತನ್ನ ಬದಲಿಗೆ ಬ್ರಾಹ್ಮಣ ಸಮುದಾಯದ ಕಿರಣ್ ಕೊಡ್ಗಿ ಅವರಿಗೆ ಟಿಕೇಟ್ ಕೊಡಬೇಕು ಎಂದೂ ಬಲವಾದ ಹಕ್ಕೊತ್ತಾಯ ಮಂಡಿಸಿದ್ದಾರೆ.
ಇದು ಉಡುಪಿಯಲ್ಲಿ ರಘುಪತಿ ಭಟ್ಟರನ್ನು ಬೆಚ್ಚಿ ಬೀಳಿಸಿದೆ. ಹಾಗೇ ನೋಡಿದರೇ ಉಡುಪಿಯಲ್ಲಿ 5 – 6 ಪರ್ಸೆಂಟ್ ಗಿಂತಲೂ ಕಡಿಮೆ ಇರುವ ಬ್ರಾಹ್ಮಣ ಸಮುದಾಯಕ್ಕೆ ಟಿಕೇಟ್ ನೀಡಲೇಬೇಕಾದ ಅನಿವಾರ್ಯತೆ ಏನೂ ಬಿಜೆಪಿಗಿಲ್ಲ.
ಆದರೂ ಉಡುಪಿ ಮಠಗಳ ಪ್ರತಿನಿಧಿ ಎಂಬಂತೆ ಹಿಂದೆ ಡಾ.ವಿ.ಎಸ್.ಆಚಾರ್ಯರಿಗೆ, ನಂತರ ರಘುಪತಿ ಭಟ್ಟರಿಗೆ ಟಿಕೇಟ್ ನೀಡಲಾಗಿತ್ತು. ಅವರಿಗೆ ಟಿಕೇಟು ಕೊಡಿಸಲು ಹಿಂದಿನ ಪೇಜಾವರ ಶ್ರೀಗಳು ಸಾಕಷ್ಟು ಕೆಲಸ ಮಾಡಿದ್ದೂ ಗುಟ್ಟೆನಲ್ಲ, ಈಗ ಪೇಜಾವರ ಶ್ರೀಗಳೂ ಇಲ್ಲ.
ಕುಂದಾಪುರ ಕ್ಷೇತ್ರದ ಮಟ್ಟಿಗೆ ಹಾಲಾಡಿ ಅವರು ಬೆಟ್ಟು ಮಾಡಿ ತೋರಿಸಿದವರಿಗೆ ಟಿಕೇಟು ನೀಡುವುದು ಬಿಜೆಪಿಗೆ ಅನಿವಾರ್ಯ, ಕಾರಣ ಅಲ್ಲಿ ಹಾಲಾಡಿ ಅವರಿಗೆ ಬೇಸರವನ್ನುಂಟು ಮಾಡಿ, ಅವರ ಬೆಂಬಲ ಇಲ್ಲದೇ, ಬಿಜೆಪಿ ಗೆಲ್ಲುವುದು ಸಾಧ್ಯವಿಲ್ಲ, ಯಾರ ಸಮಜಾಯಿಷಿಯನ್ನು ಅವರು ಕೇಳಿದವರೂ ಅಲ್ಲ ಕೇಳುವವರೂ ಅಲ್ಲ.