ಉಡುಪಿಯಲ್ಲಿ ಎನ್ ಕೌಂಟರ್: ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ವಿಕ್ರಮ್ ಗೌಡ ಸಾವು....ಮಹಾ ಚುನಾವಣೆ: ಮತದಾರರು ಬೂತ್‌ಗಳಿಗೆ ತೆರಳಲು QR ಕೋಡ್‌ ಪರಿಚಯ...ನವೆಂಬರ್ 25ರಿಂದ ಸಂಸತ್ ಚಳಿಗಾಲದ ಅಧಿವೇಶನ: ಭಾನುವಾರ ಸರ್ವಪಕ್ಷ ಸಭೆ...

ಅದಾನಿ ಗ್ರೂಪ್‌ ವಿರುದ್ಧ ಜೆಪಿಸಿ ತನಿಖೆಗೆ ಆಗ್ರಹ: ಕೇಂದ್ರ ಸರ್ಕಾರದ ವಿರುದ್ಧ ಪ್ರತ್ಯೇಕ ಪ್ರತಿಭಟನೆ, ವಿರೋಧ ಪಕ್ಷಗಳ ನಡುವಿನ ಬಿರುಕು ಬಹಿರಂಗ!

ನವದೆಹಲಿ: ಅದಾನಿ ಸಮೂಹದ ಕಂಪನಿಗಳ ಭ್ರಷ್ಟಾಚಾರ ಮತ್ತು ಆರ್ಥಿಕ ದುರುಪಯೋಗದ ಆರೋಪಗಳ ತನಿಖೆಗೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ರಚಿಸುವಂತ ಒತ್ತಾಯಿಸಿ ಪ್ರತಿಪಕ್ಷಗಳು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಂಗಳವಾರ ಪ್ರತ್ಯೇಕವಾಗಿ ಪ್ರತಿಭಟನೆಗಳನ್ನು ನಡೆಸಿದ್ದು, ಈ ಪ್ರತಿಭಟನೆಗಳು ವಿರೋಧಪಕ್ಷಗಳಲ್ಲಿ ಮೂಡಿರುವ ಬಿರುಕನ್ನು ಬಹಿರಂಗಪಡಿಸಿದೆ.

ಲಂಡನ್ ನಲ್ಲಿ ಕಾಂಗ್ರೆಸ್ ನಾಯಕ ನೀಡಿದ್ದ ರಾಹುಲ್ ಗಾಂಧಿ ಹೇಳಿಕೆ ಲೋಕಸಭೆಯಲ್ಲಿ ಮಂಗಳವಾರ ಕೋಲಾಹಲ ಎಬ್ಬಿಸಿತ್ತು. ತೀವ್ರ ಗದ್ದಲ ಹಿನ್ನೆಲೆಯಲ್ಲಿ ಕಲಾಪವನ್ನು ಮುಂದೂಡಲಾಗಿತ್ತು. ಇದರ ಬೆನ್ನಲ್ಲೇ ಕಾಂಗ್ರೆಸ್ ಮತ್ತು ಡಿಎಂಕೆ, ಸಿಪಿಎಂ, ಜೆಡಿಯು, ಆರ್‌ಜೆಡಿ, ಎನ್‌ಸಿಪಿ, ಎಸ್‌ಪಿ ಸೇರಿದಂತೆ ಹಲವು ಪಕ್ಷಗಳು ಜೆಪಿಸಿ ತನಿಖೆಗೆ ಒತ್ತಾಯಿಸಿ ಸಂಸತ್ತಿನ ಹೊರಗೆ ಪ್ರತಿಭಟನೆ ನಡೆಸಿದವು.

ಬಿಆರ್‌ಎಸ್ ಮತ್ತು ಎಎಪಿ ಇತರ ಪಕ್ಷಗಳಿಂದ ಸ್ವಲ್ಪ ದೂರ ನಿಂತು ನಿರ್ಧರಿಸಿ, ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿತು. ಈ ಬೆಳವಣಿಗೆ ವಿಪಕ್ಷಗಳ ನಡುವೆ ಒಡಕು ಮೂಡಿರುವುದನ್ನು ಸ್ಪಷ್ಟಪಡಿಸಿತು.

ಸಂಸತ್ ಅಧಿವೇಶನಕ್ಕೆ ತಂತ್ರ ರೂಪಿಸಲು ಕಳೆದ ಎರಡು ದಿನಗಳ ಹಿಂದೆ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ಸಭೆಯನ್ನು ಕರೆದಿದ್ದರು. ಈ ಸಭಂಯಲ್ಲೂ ಭಿನ್ನಾಭಿಪ್ರಾಯಗಳು ಕಂಡು ಬಂದಿದ್ದವು ಎಂದು ಮೂಲಗಳು ತಿಳಿಸಿವೆ. ಎರಡು ದಿನಗಳ ಸಭೆಯಲ್ಲಿ ಎಎಪಿ ಹಾಜರಾಗಿದ್ದರೆ, ಟಿಎಂಸಿ ಮಾತ್ರ ದೂರ ಉಳಿದಿತ್ತು ಎಂದು ತಿಳಿದುಬಂದಿದೆ.

ಹಲವು ರಾಜ್ಯಗಳಲ್ಲಿ ಆಮ್ ಆದ್ಮಿ ಪಕ್ಷ ಹಾಗೂ ಕಾಂಗ್ರೆಸ್ ಎರಡು ಪಕ್ಷಗಳೂ ಎದುರಾಳಿಗಳಾಗಿದ್ದು, ಎರಡೂ ಪಕ್ಷಗಳ ನಡುವೆ ವೈಮನಸ್ಸುಗಳಿವೆ.

ದೆಹಲಿ ಮದ್ಯ ಹಗರಣ ಪ್ರಕರಣದಲ್ಲಿ ಎಎಪಿ ನಾಯಕ ಮತ್ತು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಬಂಧನದ ನಂತರ ಎರಡೂ ಪಕ್ಷಗಳ ನಡುವಿನ ವೈಮನಸ್ಸು ಮತ್ತಷ್ಟು ಹೆಚ್ಚಳಗೊಂಡಿದೆ.

ಸಿಸೋಡಿಯಾ ಬಂಧನವನ್ನು ಎಲ್ಲಾ ವಿರೋಧ ಪಕ್ಷಗಳು ಖಂಡಿಸಿದ್ದರೆ, ಕಾಂಗ್ರೆಸ್ ಮಾತ್ರ ಈ ಕ್ರಮವನ್ನು ಸ್ವಾಗತಿಸಿತ್ತು. ಕೇಂದ್ರೀಯ ಸಂಸ್ಥೆಗಳ ದುರುಪಯೋಗ ಖಂಡಿಸಿ 10 ಪಕ್ಷಗಳು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿತ್ತು. ಆದರೆ, ಪತ್ರದಲ್ಲಿ ಕಾಂಗ್ರೆಸ್ ಸಹಿ ಮಾತ್ರ ಕಂಡು ಬಂದಿರಲಿಲ್ಲ.

ಈ ನಡುವೆ ಲಂಡನ್ ನಲ್ಲಿ ರಾಹುಲ್ ಗಾಂಂಧಿಯವರು ಮಾಡಿದ್ದ ಭಾಷಣ ಸತತ 2ನೇ ದಿನವಾದ ಮಂಗಳವಾರವೂ ಸಂಸತ್ತಿನ ಉಭಯ ಸದನಗಳಲ್ಲಿ ಭಾರೀ ಗದ್ದಲಕ್ಕೆ ಕಾರಣವಾಗಿತ್ತು.

ಮಂಗಳವಾರ ಬೆಳಿಕ್ಕೆ ಕಲಾಪ ಆರಂಭವಾಗುತ್ತಲೇ ಲೋಕಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿ ಸದಸ್ಯರು ಮತ್ತು ಹಲವು ಸಚಿವರು ರಾಹುಲ್ ಗಾಂಧಿ ಕ್ಷಮೆ ಕೇಳಿ ಎಂದು ಘೋಷಣೆ ಕೂಗಿದರು. ಈ ವೇಳೆ ಪ್ರತಿಪಕ್ಷ ಕಾಂಗ್ರಸ್ ಸದಸ್ಯರು 2015ರ ಪ್ರಧಾನಿ ಮೋದಿಯವರು ಸೋಲ್ ನಲ್ಲಿ ಮಾಡಿದ ಏನು ತಪ್ಪು ಮಾಡಿದ್ದೆನೋ ಗೊತ್ತಿಲ್ಲ. ನಾನು ಭಾರತದಲ್ಲಿ ಹುಟ್ಟಿದ್ದೇನೆ ಎಂಬ ಹೇಳಿಕೆ ಒಳಗೊಂಡ ಭಿತ್ತಿಪತ್ರ ಪ್ರದರ್ಶಿಸುವ ಮೂಲಕ ಮೋದಿ ಕ್ಷಮೆಗೆ ಆಗ್ರಹಿಸಿದರು.

ಈ ವೇಳೆ ಪ್ರಶ್ನೋತ್ತರ ಕಲಾಪಕ್ಕೆ ಅವಕಾಶ ಮಾಡಿಕೊಡಿ, ಬಳಿಕ ವಿಪಕ್ಷ ಸದಸ್ಯರಿಗೆ ವಿಷಯ ಪ್ರಸ್ತಾಪಕ್ಕೆ ಅವಕಾಶ ಮಾಡಿಕೊಡುವುದಾಗಿ ಸ್ಪೀಕರ್ ಓಂ ಬಿರ್ಲಾ ಹೇಳಿದರೂ ಗದ್ದಲ ಕಡಿಮೆಯಾಗದ ಹಿನ್ನೆಲೆಯಲ್ಲಿ ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಲಾಯಿತು. ಮಧ್ಯಾಹ್ನ 2 ಗಂಟೆಗೆ ಕಲಾಪ ಆರಂಭವಾದರೂ ಇದೇ ಪರಿಸ್ಥಿತಿ ಪುನರಾವರ್ತನೆಗೊಂಡ ಹಿನ್ನೆಲೆಯಲ್ಲಿ ಕಲಾಪವನ್ನು ಬುಧವಾರಕ್ಕೆ ಮುಂದೂಡಲಾಯಿತು.

No Comments

Leave A Comment