ಮಲ್ಪೆ: ಮನೆಯೊಂದಕ್ಕೆ ನುಗ್ಗಿದ ಕಳ್ಳರು 2.25 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಸೊತ್ತುಗಳನ್ನು ಕಳವು ಮಾಡಿರುವ ಘಟನೆ ಕೊಡವೂರಿನ ಮೂಡುಬೆಟ್ಟು ಮುಖ್ಯಪ್ರಾಣ ರಸ್ತೆಯಲ್ಲಿ ಇರುವ ಮನೆಯಲ್ಲಿ ನಡೆದಿದೆ.
ಕೊಡವೂರಿನ ಮೂಡುಬಿಟ್ಟುವಿನಲ್ಲಿ ವಾಸವಿರುವ ಕಾರ್ಕಳದ ಬೆಳುವಾಯಿಯ ಶೇಖ್ ನಝೀರ್ ಅಹಮದ್ ಅವರು ಜ.17 ರಂದು ಹೆಂಡತಿಯೊಂದಿಗೆ ಕೊಡವೂರು ಮೂಡುಬೆಟ್ಟುವಿನ ತಮ್ಮ ಬಾಡಿಗೆ ಮನೆಗೆ ಬೀಗ ಹಾಕಿ ಊರಾದ ಬೆಳುವಾಯಿಗೆ ಹೋಗಿದ್ದರು. ಜ.20 ರಂದು ನೆರೆ ಮನೆಯ ನಿವಾಸಿ ಕರೆ ಮಾಡಿ ಇವರ ಮನೆಯಲ್ಲಿ ಕಳ್ಳತನ ಆಗಿರುವ ಬಗ್ಗೆ ಮಾಹಿತಿ ನೀಡಿದ್ದರು.
ಮೂಡುಬೆಟ್ಟುವಿನ ಮನೆಗೆ ಬಂದು ನೋಡಿದಾಗ ಮನೆಯ ಮುಖ್ಯ ಬಾಗಿಲಿನ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಒಟ್ಟು 2,00,000 ರೂ. ಮೌಲ್ಯದ 48 ಗ್ರಾಂ ಚಿನ್ನಾಭರಣ ಹಾಗೂ ಒಟ್ಟು 25,000 ರೂ. ಮೌಲ್ಯದ 4 ವಾಚ್ ಗಳನ್ನು ಕಳವು ಮಾಡಿಕೊಂಡು ಹೋಗಿರುವುದು ಕಂಡು ಬಂದಿದೆ.
ಈ ಬಗ್ಗೆ ಶೇಖ್ ನಝೀರ್ ಅಹಮ್ಮದ್ ಅವರು ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.