ಮೆಕ್ಸಿಕೋ: ಫುಟ್ಬಾಲ್ ಮೈದಾನದಲ್ಲಿ ಬಂದೂಕುಧಾರಿಗಳ ಗುಂಡಿನ ದಾಳಿ; 11 ಮಂದಿ ಸಾವು, 12 ಜನರಿಗೆ ಗಾಯ
ಸಲಾಮಾಂಕಾ: ಮಧ್ಯ ಮೆಕ್ಸಿಕೋದಲ್ಲಿ ನಡೆದ ಫುಟ್ಬಾಲ್ ಪಂದ್ಯದ ನಂತರ ಬಂದೂಕುಧಾರಿಗಳು ಫುಟ್ಬಾಲ್ ಅಭಿಮಾನಿಗಳ ಮೇಲೆ ಗುಂಡು ಹಾರಿಸಿದ ದುರ್ಘಟನೆ ನಡೆದಿದ್ದು, ಸಂಘಟಿತ ಅಪರಾಧದ ಆರೋಪ ಹೊರಿಸಲಾದ ಹಿಂಸಾಚಾರದಿಂದ ಪೀಡಿತ ಪ್ರದೇಶದಲ್ಲಿ 11 ಜನರು ಮೃತಪಟ್ಟಿದ್ದಾರೆ. 12 ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಗ್ವಾನಾಜುವಾಟೊ ರಾಜ್ಯದ 160,000 ಜನರಿರುವ ಸಣ್ಣ ನಗರವಾದ ಸಲಾಮಾಂಕಾದಲ್ಲಿ ಭಾನುವಾರ ನಡೆದ ಪಂದ್ಯದ ನಂತರ ಸಶಸ್ತ್ರಧಾರಿಗಳು ಸಮುದಾಯ ಫುಟ್ಬಾಲ್ ಮೈದಾನಕ್ಕೆ ನುಗ್ಗಿದರು.
10 ಜನರು ಸ್ಥಳದಲ್ಲೇ ಮೃತಪಟ್ಟು ಇನ್ನೊಬ್ಬರು ನಂತರ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಒಬ್ಬ ಮಹಿಳೆ ಮತ್ತು ಮಗು ಸೇರಿದಂತೆ ಹನ್ನೆರಡು ಜನರು ಗಾಯಗೊಂಡಿದ್ದಾರೆ.
ಸಂಘಟಿತ ಅಪರಾಧ ಗುಂಪುಗಳ ಮೇಲೆ ಹಿಂಸಾಚಾರ ಬಗ್ಗೆ ಮಾತನಾಡಿರುವ, ಮೇಯರ್ ಸೀಸರ್ ಪ್ರೀಟೊ ಸರ್ಕಾರವನ್ನು “ಶಾಂತಿ, ನೆಮ್ಮದಿ ಮತ್ತು ಭದ್ರತೆಯನ್ನು ಪುನಃಸ್ಥಾಪಿಸಲು” ಸಹಾಯ ಮಾಡಬೇಕೆಂದು ಒತ್ತಾಯಿಸಿದರು.
ನಾವು ಗಂಭೀರ ಕ್ಷಣವನ್ನು, ಗಂಭೀರ ಸಾಮಾಜಿಕ ಕುಸಿತವನ್ನು ಎದುರಿಸುತ್ತಿದ್ದೇವೆ. ಅಧಿಕಾರಿಗಳನ್ನು ನಿಗ್ರಹಿಸಲು ಕ್ರಿಮಿನಲ್ ಗುಂಪುಗಳು ಪ್ರಯತ್ನಿಸುತ್ತಿವೆ ಎಂದು ಹೇಳಿದ್ದಾರೆ.
ಸಲಾಮಾಂಕಾದಲ್ಲಿ ಶನಿವಾರ ರಾತ್ರಿ ಮಾನವ ಅವಶೇಷಗಳನ್ನು ಹೊಂದಿರುವ ನಾಲ್ಕು ಚೀಲಗಳು ಪತ್ತೆಯಾಗಿವೆ, ಹತ್ತಿರದ ಎರಡು ಸಮುದಾಯಗಳಲ್ಲಿ, ಅದೇ ದಿನ ಆರು ಜನರು ಕೊಲ್ಲಲ್ಪಟ್ಟರು.
ಕಳೆದ ವಾರ, ಸಲಾಮಾಂಕಾ ಮೂಲದ ಸರ್ಕಾರಿ ತೈಲ ಕಂಪನಿ ಪೆಮೆಕ್ಸ್‌ನ ಸಂಸ್ಕರಣಾಗಾರಕ್ಕೆ ಬಾಂಬ್ ಬೆದರಿಕೆ ಬಂದಿತ್ತು.
ಮಧ್ಯ ಮೆಕ್ಸಿಕೋದ ಗ್ವಾನಾಜುವಾಟೊ ಅಭಿವೃದ್ಧಿ ಹೊಂದುತ್ತಿರುವ ಕೈಗಾರಿಕಾ ಕೇಂದ್ರವಾಗಿದ್ದು, ಹಲವಾರು ಜನಪ್ರಿಯ ಪ್ರವಾಸಿ ತಾಣಗಳಿಗೆ ನೆಲೆಯಾಗಿದೆ, ಆದರೆ ಅಧಿಕೃತ ನರಹತ್ಯೆ ಅಂಕಿಅಂಶಗಳ ಪ್ರಕಾರ, ಗ್ಯಾಂಗ್ ಟರ್ಫ್ ಯುದ್ಧಗಳಿಂದಾಗಿ ದೇಶದ ಅತ್ಯಂತ ಮಾರಕ ರಾಜ್ಯವಾಗಿದೆ.
ಗ್ವಾನಾಜುವಾಟೊದಲ್ಲಿನ ಹೆಚ್ಚಿನ ಹಿಂಸಾಚಾರವು ತೈಲ ಕಳ್ಳತನದಲ್ಲಿ ತೊಡಗಿರುವ ಸಾಂಟಾ ರೋಸಾ ಡಿ ಲಿಮಾ ಗ್ಯಾಂಗ್ ಮತ್ತು ಲ್ಯಾಟಿನ್ ಅಮೇರಿಕನ್ ರಾಷ್ಟ್ರದ ಅತ್ಯಂತ ಶಕ್ತಿಶಾಲಿಗಳಲ್ಲಿ ಒಂದಾದ ಜಲಿಸ್ಕೊ ನ್ಯೂ ಜನರೇಷನ್ ಡ್ರಗ್ ಕಾರ್ಟೆಲ್ ನಡುವಿನ ಸಂಘರ್ಷಕ್ಕೆ ಸಂಬಂಧಿಸಿದೆ.