ಖ್ಯಾತ ಗಾಯಕಿ ಎಸ್ ಜಾನಕಿಗೆ ಪುತ್ರ ಶೋಕ: ಹಠಾತ್ ಹೃದಯಾಘಾತಕ್ಕೆ ಬಲಿಯಾದ ಮುರಳಿ ಕೃಷ್ಣ!......
ಭಾರತ ಮತ್ತು ಯೂರೋಪಿಯನ್ ಯೂನಿಯನ್ ವ್ಯಾಪಾರ ಒಪ್ಪಂದಕ್ಕೆ ಸಹಿ; ಹೊಸ ಇತಿಹಾಸ
ನವದೆಹಲಿ: ಜ.27: ಭಾರತ ಮತ್ತು ಯೂರೋಪಿಯನ್ ಯೂನಿಯನ್ ನಡುವೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಭಾರತ ಮತ್ತು ಯೂರೋಪಿಯನ್ ಯೂನಿಯನ್ ಶೃಂಗಸಭೆಯಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಗಿರುವುದನ್ನು ಘೋಷಿಸಲಾಗಿದೆ. ಇದರೊಂದಿಗೆ, ಎರಡು ದಶಕಗಳಿಂದ ನಡೆಯುತ್ತಿದ್ದ ಅವಿರತ ಪ್ರಯತ್ನಕ್ಕೆ ಫಲ ಸಿಕ್ಕಿದಂತಾಗಿದೆ. ಐರೋಪ್ಯ ಒಕ್ಕೂಟದ 27 ರಾಷ್ಟ್ರಗಳ ಮಾರುಕಟ್ಟೆ ಪ್ರವೇಶ ಒಂದೇ ಒಪ್ಪಂದದಲ್ಲಿ ಭಾರತಕ್ಕೆ ಸಿಗಲಿದೆ. ಯೂರೋಪಿಯನ್ ಕೌನ್ಸಿಲ್ ಮುಖ್ಯಸ್ಥ ಆಂಟೋನಿಯೋ ಕೋಸ್ಟಾ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಡೀಲ್ಗೆ ಸಹಿ ಹಾಕಿದ್ದಾರೆ.
ಭಾರತ ಮತ್ತು ಯೂರೋಪಿಯನ್ ಯೂನಿಯನ್ ನಡುವಿನ ವ್ಯಾಪಾರ ಒಪ್ಪಂದವನ್ನು ಪ್ರಧಾನಿ ನರೇಂದ್ರ ಮೋದಿ ಅವರು ‘ಮದರ್ ಆಫ್ ಆಲ್ ಡೀಲ್ಸ್’ (ವಿಶ್ವದ ಅತಿದೊಡ್ಡ ಒಪ್ಪಂದ) ಎಂದು ಬಣ್ಣಿಸಿದ್ದಾರೆ. ಭಾರತದ ಜವಳಿ, ಹರಳು, ಆಭರಣ, ಲೆದರ್ ಇತ್ಯಾದಿ ಸೆಕ್ಟರ್ಗಳಿಗೆ ಪುಷ್ಟಿ ಸಿಗುವ ನಿರೀಕ್ಷೆ ಇದೆ.
ವರ್ಷಗಳಿಂದ ನಡೆದ ಪ್ರಯತ್ನಗಳಿಗೆ ಫಲ
ಭಾರತ ಮತ್ತು ಐರೋಪ್ಯ ಒಕ್ಕೂಟದ ನಡುವೆ ಫ್ರೀ ಟ್ರೇಡ್ ಡೀಲ್ಗಾಗಿ 2007ರಲ್ಲೇ ಮಾತುಕತೆ ಆರಂಭವಾಗಿತ್ತು. ಟ್ಯಾರಿಫ್, ಮಾರುಕಟ್ಟೆ ಪ್ರವೇಶ ಮತ್ತು ನಿಯಮಗಳ ಕಾರಣಗಳಿಂದ 2013ರಲ್ಲಿ ಮಾತುಕತೆಗಳು ಸ್ಥಗಿತಗೊಂಡಿದ್ದವು. 2022ರಲ್ಲಿ ಮತ್ತೆ ಚಾಲನೆಗೊಂಡಿತು. ಜಾಗತಿಕ ವ್ಯಾಪಾರ ಬಿಕ್ಕಟ್ಟು ಉದ್ಭವಗೊಂಡ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷದಿಂದ ಒಪ್ಪಂದ ಸಂಬಂಧ ಮಾತುಕತೆಗೆ ವೇಗ ಸಿಕ್ಕಿತು.
ಮದರ್ ಆಫ್ ಆಲ್ ಡೀಲ್ಸ್ ಎನ್ನೋದು ಯಾಕೆ?
ಭಾರತ ವಿಶ್ವದಲ್ಲೇ ನಾಲ್ಕನೇ ಅಥವಾ ಐದನೇ ಅತಿದೊಡ್ಡ ಆರ್ಥಿಕತೆಯ ದೇಶ ಎನಿಸಿದೆ. ಐರೋಪ್ಯ ಒಕ್ಕೂಟದಲ್ಲಿ 27 ದೇಶಗಳಿವೆ. ಯೂರೋಪ್ ಖಂಡದ ಅರ್ಧಕ್ಕೂ ಹೆಚ್ಚು ದೇಶಗಳು ಈ ಯೂನಿಯನ್ನ ಭಾಗವಾಗಿವೆ. ಭಾರತ ಹಾಗೂ ಈ 27 ದೇಶಗಳ ಆರ್ಥಿಕತೆಯನ್ನು ಗಣನೆಗೆ ತೆಗೆದುಕೊಂಡರೆ, ಅದು ವಿಶ್ವದ ಶೇ. 25ರಷ್ಟು ಜಿಡಿಪಿಯಷ್ಟಾಗುತ್ತದೆ.
200 ಕೋಟಿ ಗ್ರಾಹಕರಿರುವ ಬೃಹತ್ ಮಾರುಕಟ್ಟೆ ಸೃಷ್ಟಿಯಾಗುತ್ತದೆ. 2024-25ರ ಹಣಕಾಸು ವರ್ಷದಲ್ಲಿ ಈ ಎರಡು ಮಹಾನ್ ಆರ್ಥಿಕ ಶಕ್ತಿಗಳ ನಡುವೆ ನಡೆದ ದ್ವಿಪಕ್ಷೀಯ ವ್ಯಾಪಾರ ಗಣನೀಯವಾಗಿದೆ. ಸರಕುಗಳ ವಹಿವಾಟು 136.5 ಬಿಲಿಯನ್ ಡಾಲರ್ ಇದ್ದರೆ, ಸರ್ವಿಸಸ್ ಟ್ರೇಡ್ 80 ಬಿಲಿಯನ್ ಡಾಲರ್ನಷ್ಟು ಇತ್ತು. ಒಟ್ಟೂ ಮಾರುಕಟ್ಟೆ ಗಾತ್ರ ಗಮನಿಸಿದಾಗ ಈ ದ್ವಿಪಕ್ಷೀಯ ವ್ಯಾಪಾರ ಪ್ರಮಾಣ ಇನ್ನೂ ಬೃಹತ್ ಆಗುವ ಎಲ್ಲಾ ಸಾಧ್ಯತೆ ಇದೆ.
ಇತರ ಐರೋಪ್ಯ ದೇಶಗಳೊಂದಿಗೂ ಭಾರತದ ಸಂಬಂಧ
ಯೂರೋಪ್ನ ಇತರ ದೇಶಗಳೊಂದಿಗೂ ಭಾರತ ವ್ಯಾಪಾರ ಒಪ್ಪಂದ ಕುದುರಿಸಿದೆ. ಐರೋಪ್ಯ ಒಕ್ಕೂಟದ ಭಾಗವಾಗಿರದ ಬ್ರಿಟನ್ ಜೊತೆ ಭಾರತ ಎಫ್ಟಿಎ ಮಾಡಿಕೊಂಡಿದೆ. ಯೂರೋಪಿಯನ್ ಫ್ರೀ ಟ್ರೇಡ್ ಅಸೋಸಿಯೇಶನ್ (ಇಎಫ್ಟಿಎ) ಜೊತೆಗೂ ಒಪ್ಪಂದ ಕುದುರಿದೆ. ಬಹಳ ಮುಂದುವರಿದ ಆರ್ಥಿಕತೆಗಳಾದ ಸ್ವಿಟ್ಜರ್ಲ್ಯಾಂಡ್, ನಾರ್ವೇ, ಲೇಕ್ಟನ್ಸ್ಟೀನ್ ಮತ್ತು ಐಸ್ಲ್ಯಾಂಡ್ ದೇಶಗಳು ಇಎಫ್ಟಿಎನಲ್ಲಿವೆ.