ಖ್ಯಾತ ಗಾಯಕಿ ಎಸ್ ಜಾನಕಿಗೆ ಪುತ್ರ ಶೋಕ: ಹಠಾತ್ ಹೃದಯಾಘಾತಕ್ಕೆ ಬಲಿಯಾದ ಮುರಳಿ ಕೃಷ್ಣ!......
ವಾಯುಪಡೆ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾಗೆ ‘ಅಶೋಕ ಚಕ್ರ’ ಪ್ರಶಸ್ತಿ ಪ್ರದಾನ
ನವದೆಹಲಿ: ಭಾರತದ ಎರಡನೇ ಗಗನಯಾತ್ರಿ ಮತ್ತು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಉಳಿದುಕೊಂಡ ದೇಶದ ಮೊದಲ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರಿಗೆ ಗಣರಾಜ್ಯೋತ್ಸವದಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ದೇಶದ ಅತ್ಯುನ್ನತ ಶಾಂತಿಕಾಲದ ಶೌರ್ಯ ಪ್ರಶಸ್ತಿಯಾದ (highest peacetime gallantry award) ಅಶೋಕ ಚಕ್ರ ನೀಡಿ ಗೌರವಿಸಿದರು.
ರಾಷ್ಟ್ರ ರಾಜಧಾನಿಯಲ್ಲಿರುವ ಕರ್ತವ್ಯ ಪಥದಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರಪತಿಗಳು ಶುಕ್ಲಾ ಅವರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಅಶೋಕ ಚಕ್ರವು ಭಾರತದ ಅತ್ಯುನ್ನತ ಶಾಂತಿಕಾಲದ ಶೌರ್ಯ ಪ್ರಶಸ್ತಿಯಾಗಿದ್ದು, ಯುದ್ಧಭೂಮಿಯ ಹೊರಗೆ ತೋರುವ ಅದ್ಭುತ ಸಾಹಸ, ಆತ್ಮತ್ಯಾಗ ಅಥವಾ ಧೈರ್ಯಕ್ಕಾಗಿ ಸೈನಿಕರು ಮತ್ತು ನಾಗರಿಕರಿಗೆ ನೀಡಲಾಗುತ್ತದೆ. ಇದು ಅತ್ಯುನ್ನತ ಯುದ್ಧಕಾಲದ ಶೌರ್ಯ ಪ್ರಶಸ್ತಿಯಾದ ʻಪರಮವೀರ ಚಕ್ರʼಕ್ಕೆ ಸಮಾನವಾಗಿದೆ.
ಆಕ್ಸಿಯಮ್-4 ಕಾರ್ಯಾಚರಣೆಯ ಭಾಗವಾಗಿ 2025 ರ ಜೂನ್ 25 ರಂದು ಸ್ಪೇಸ್‌ಎಕ್ಸ್ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಲ್ಲಿ ಹಾರಾಟ ನಡೆಸಿದ ನಾಲ್ವರು ಗಗನಯಾತ್ರಿಗಳಲ್ಲಿ ಶುಕ್ಲಾ ಕೂಡ ಒಬ್ಬರಾಗಿದ್ದರು.
ಐಎಸ್‌ಎಸ್‌ನಲ್ಲಿ ಸುಮಾರು 18 ದಿನಗಳನ್ನ ಕಳೆದ ನಂತರ ಅವರು ಜುಲೈ 15 ರಂದು ಸುರಕ್ಷಿತವಾಗಿ ಭೂಮಿಗೆ ಮರಳಿದ್ದರು.ತಮ್ಮ 17 ದಿನಗಳ ವಾಸ್ತವ್ಯದ ಅವಧಿಯಲ್ಲಿ ಗಗನಯಾತ್ರಿ ಶುಕ್ಲಾ ಇತರ ವಿಜ್ಞಾನಿಗಳೊಂದಿಗೆ 60 ಕ್ಕೂ ಹೆಚ್ಚು ವೈಜ್ಞಾನಿಕ ಪ್ರಯೋಗಗಳನ್ನ ನಡೆಸಿದ್ದರು.
ಇದು ಅಂತರರಾಷ್ಟ್ರೀಯ ಸಂಶೋಧನಾ ಪ್ರಯತ್ನಗಳಿಗೆ ಅಮೂಲ್ಯವಾದ ಡೇಟಾವನ್ನು ಕೊಡುಗೆ ನೀಡಿದೆ. ಭಾರತದ ಶುಭಾಂಶು ಶುಕ್ಲಾ ಸೇರಿದಂತೆ ಆಕ್ಸ್-4ನ ಸದಸ್ಯರಾದ ಕಮಾಂಡರ್ ಪೆಗ್ಗಿ ವಿಟ್ಸನ್ (ಯುಎಸ್ಎ), ಮಿಷನ್ ಸ್ಪೆಷಲಿಸ್ಟ್ ಸಾವೋಸ್ಜ್ ಉಜ್ನಾನ್ಸ್ಕಿ-ವಿಸ್ನಿಯೆವ್ಸ್ಕಿ (ಪೋಲೆಂಡ್) ಮತ್ತು ಟಿಬೋರ್ ಕಾಪು (ಹಂಗೇರಿ) ಭೂಮಿಗೆ ವಾಪಸ್ ಆಗಿದ್ದರು.