ಉಡುಪಿ: ಶೀರೂರು ಮಠದ ಪರ್ಯಾಯ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು ಸಿದ್ಧತೆಗಳು ಭರದಿಂದ ಸಾಗುತ್ತಿವೆ. ನಗರಸಭೆ ಮತ್ತು ಪರ್ಯಾಯ ಸ್ವಾಗತ ಸಮಿತಿ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗುವ ನಗರ ದೀಪಾಲಂಕಾರ ಜ.15ರಂದು ಹಾಗೂ ಅಂಬಾಗಿಲಿನಲ್ಲಿ ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲುದ್ದೇಶಿಸಿರುವ ಪರಶುರಾಮ ಸ್ವಾಗತ ಗೋಪುರದ ಭೂಮಿಪೂಜೆ ಜ. 16ರಂದು ನಡೆಯಲಿದೆ ಎಂದು ಪರ್ಯಾಯ ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ಉಡುಪಿ ಶಾಸಕ ಯಶಪಾಲ್ ಸುವರ್ಣ ತಿಳಿಸಿದರು.
ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಉಡುಪಿ ನಗರಸಭೆ ವತಿಯಿಂದ ಶಾಸಕ ಸುವರ್ಣ ನೇತೃತ್ವದಲ್ಲಿ ಪರ್ಯಾಯ ಮಹೋತ್ಸವದ ವಿದ್ಯುತ್ ದೀಪಾಲಂಕಾರಕ್ಕೆ 50 ಲಕ್ಷ ರೂ. ಬಿಡುಗಡೆಯಾಗಿದ್ದು ಈಗಾಗಲೇ ದೀಪಾಲಂಕಾರ ಬಹುತೇಕ ಪೂರ್ಣಗೊಂಡಿದೆ. ಗುರುವಾರ ಸಂಜೆ 7 ಗಂಟೆ ವೇಳೆಗೆ ಕೋರ್ಟ್ ರಸ್ತೆಯ ಕೆನರಾ ಬ್ಯಾಂಕ್ ಎದುರುಗಡೆ ಉದ್ಘಾಟಿಸಲಾಗುವುದು.
ಉಡುಪಿಯ ದಕ್ಷಿಣ ಭಾಗದಲ್ಲಿ ಈಗಾಗಲೇ ಪುತ್ತಿಗೆ ಮಠದ ವತಿಯಿಂದ ಭವ್ಯವಾದ ಗೀತಾಚಾರ್ಯರ ಸ್ವಾಗತ ಗೋಪುರ ನಿರ್ಮಿಸಿದ್ದು ಇದೀಗ ನಗರ ಪ್ರವೇಶಿಸುವ ಉತ್ತರ ಭಾಗದಲ್ಲಿ ಪರ್ಯಾಯ ಸ್ವಾಗತ ಸಮಿತಿ ವತಿಯಿಂದ ಅಂಬಾಗಿಲು ರಾಷ್ಟ್ರೀಯ ಹೆದ್ದಾರಿ ಜಂಕ್ಷನ್’ನಲ್ಲಿ ತುಳುನಾಡಿನ ಸೃಷ್ಟಿಕರ್ತ ಶ್ರೀ ಪರಶುರಾಮನ ಭವ್ಯ ಸ್ವಾಗತ ಗೋಪುರಕ್ಕೆ ಜ.16ರಂದು ಬೆಳಿಗ್ಗೆ 9 ಗಂಟೆಗೆ ಶೀರೂರು ಮಠದ ದಿವಾನ ಡಾ.ಉದಯಕುಮಾರ್ ಸರಳತ್ತಾಯ ಭೂಮಿಪೂಜೆ ನೆರವೇರಿಸುವರು ಎಂದರು.
ಅನ್ನಸಂತರ್ಪಣೆ
ಪರ್ಯಾಯದ ಮುನ್ನಾದಿನ ಜ.17ರಂದು ರಾಜಾಂಗಣ, ಪಾರ್ಕಿಂಗ್ ಪ್ರದೇಶ, ನಿತ್ಯಾನಂದ ಮಂದಿರ, ಬಸ್ಸು ನಿಲ್ದಾಣ ಸಮೀಪದ ಬೋರ್ಡ್ ಹೈಸ್ಕೂಲ್’ಗಳಲ್ಲಿ ಸಾರ್ವಜನಿಕರಿಗೆ ಹಾಗೂ ಗೋವಿಂದ ಕಲ್ಯಾಣ ಮಂಟಪದಲ್ಲಿ ಸಾಂಸ್ಕೃತಿಕ ಕಲಾತಂಡದವರಿಗೆ ಸಂಜೆ 7ರಿಂದ ರಾತ್ರಿ 12ರ ವರೆಗೆ ಅನ್ನಸಂತರ್ಪಣೆ ನಡೆಯಲಿದೆ. ಸುಮಾರು ಒಂದು ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆ ಇದ್ದು, ಜ. 17ರಿಂದ 22ರ ವರೆಗೆ ಪ್ರತಿದಿನ ಅನ್ನಸಂತರ್ಪಣೆಗೆ ವ್ಯವಸ್ಥೆ ಮಾಡಲಾಗಿದೆ
ಪರ್ಯಾಯ ಶೋಭಾಯಾತ್ರೆ
ಈ ಬಾರಿಯ ಪರ್ಯಾಯ ಮಹೋತ್ಸವ ವಾರಾಂತ್ಯದ ಶನಿವಾರ ಮತ್ತು ಭಾನುವಾರ ಬಂದಿರುವುದರಿಂದ ಸುಮಾರು 2- 3 ಲಕ್ಷ ಮಂದಿಯನ್ನು ನಿರೀಕ್ಷಿಸಲಾಗಿದೆ. ಪರ್ಯಾಯ ಮೆರವಣಿಗೆ ಅತ್ಯಂತ ವಿಜೃಂಭಣೆಯಿಂದ ವಿಶಿಷ್ಟವಾಗಿ ನಡೆಯಲಿದ್ದು, ಶ್ರೀಮಧ್ವ, ವಾದಿರಾಜರು, ಶೀರೂರು ಮಠದ ಯತಿ ಪರಂಪರೆ, ಪೌರಾಣಿಕ ಟ್ಯಾಬ್ಲೊಗಳು, ವಿವಿಧ ಸಾಂಸ್ಕೃತಿಕ ತಂಡಗಳು ಭಾಗವಹಿಸಲಿವೆ.
ಶೋಭಾಯಾತ್ರೆ ಜ. 18ರಂದು ರಾತ್ರಿ 2 ಗಂಟೆಗೆ ಜೋಡುಕಟ್ಟೆಯಿಂದ ಆರಂಭಗೊಂಡು ಕಲ್ಪನ ಜಂಕ್ಷನ್ ಮೂಲಕ ರಥಬೀದಿ ತಲುಪಲಿದೆ ಎಂದು ಯಶಪಾಲ್ ತಿಳಿಸಿದರು.
ದರ್ಬಾರ್ ಸಭೆ
ವಿಜಯನಗರ ಶೈಲಿಯಲ್ಲಿ ನಿರ್ಮಾಣಗೊಳ್ಳಲಿರುವ ರಾಜಾಂಗಣದ ವೇದಿಕೆಯನ್ನು ಹೂಗಳಿಂದ ಸಿಂಗರಿಸಿ, ಅಷ್ಟ ಮಠಾಧೀಶರೊಂದಿಗೆ ಭಾವಿ ಪರ್ಯಾಯ ಶೀರೂರು ಶ್ರೀಗಳ ಪರ್ಯಾಯ ದರ್ಬಾರ್ ಸಭೆ ನಡೆಯಲಿದ್ದು, ನಾಡಿನ ಗಣ್ಯರು ಭಾಗವಹಿಸಲಿದ್ದಾರೆ. ಮುಂಜಾನೆ 5.30ಕ್ಕೆ ಆರಂಭವಾಗುವ ದರ್ಬಾರ್ ಸಭೆ ಸುಮಾರು 9 ಗಂಟೆ ವರೆಗೆ ನಡೆಯಲಿದ್ದು, ಆ ಸಂದರ್ಭದಲ್ಲಿ ಪರ್ಯಾಯ ದೀಕ್ಷೆ ಸ್ವೀಕರಿಸುವ ಶ್ರೀ ವೇದವರ್ಧನತೀರ್ಥ ಶ್ರೀಪಾದರು ನಾಡಿನ ಗಣ್ಯರು, ಉದ್ಯಮಿಗಳಿಗೆ ಪರ್ಯಾಯ ದರ್ಬಾರ್ ಸಂಮಾನ ನೀಡಿ ಗೌರವಿಸುವರು.
ಜ.18ರಿಂದ 10 ದಿನಗಳ ಕಾಲ ಪ್ರತಿದಿನ ಸಂಜೆ ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ವಿವರಿಸಿದರು.
ಹರಿದುಬಂದ ಹೊರೆಕಾಣಿಕೆ
ಶೀರೂರು ಮಠದ ಪರ್ಯಾಯ ಮಹೋತ್ಸವ ಸಂದರ್ಭದಲ್ಲಿ ರಾಯಚೂರು ಭಕ್ತ ವೃಂದದವರಿಂದ 12 ಲಕ್ಷ ರೂ. ಮೌಲ್ಯದ ಸುಮಾರು 250 ಕ್ವಿಂಟಾಲ್ ಅಕ್ಕಿ ಸಂಗ್ರಹವಾಗಿದೆ. ಜ.10ರಿಂದ ಆರಂಭವಾದ ಹಸಿರು ಹೊರೆ ಕಾಣಿಕೆ ಮಠಕ್ಕೆ ಹರಿದುಬರುತ್ತಿದ್ದು, ಜ. 17ರ ವರೆಗೆ ಹೊರೆ ಕಾಣಿಕೆ ಹರಿದುಬರಲಿದೆ. ಈ ಬಾರಿಯ ಹಸಿರು ಹೊರೆ ಕಾಣಿಕೆಯಲ್ಲಿ ದಾಖಲೆ ಪ್ರಮಾಣದ ವಸ್ತುಗಳು ಸಂಗ್ರಹವಾಗಿದ್ದು, ಸುಮಾರು 4 ಲಕ್ಷ ಮಂದಿ ಭಕ್ತರಿಗೆ ಅನ್ನಸಂತರ್ಪಣೆಗೆ ಬಳಕೆಯಾಗಲಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಪರ್ಯಾಯ ಸಮಿತಿ ಕಾರ್ಯದರ್ಶಿ ಮಟ್ಟಾರು ರತ್ನಾಕರ ಹೆಗ್ಡೆ, ಸಂಚಾಲಕ ಮೋಹನ ಭಟ್, ಕೋಶಾಧಿಕಾರಿ ಜಯಪ್ರಕಾಶ ಕೆದ್ಲಾಯ, ಮಧುಕರ ಮುದ್ರಾಡಿ ಮೊದಲಾದವರಿದ್ದರು.