ಜನವರಿ 9ರ ಶುಕ್ರವಾರದ೦ದು ಶೀರೂರು ಮಠಾಧೀಶರಾದ ಶ್ರೀಶ್ರೀವೇದವರ್ಧನ ತೀರ್ಥ ಶ್ರೀಪಾದರ ಪುರಪ್ರವೇಶ...ಉಡುಪಿ ಶ್ರೀಕೃಷ್ಣಮಠದಲ್ಲಿ ಜನವರಿ 9ರ ಶುಕ್ರವಾರದ೦ದು ಸಪ್ತೋತ್ಸವ ಆರ೦ಭ...
ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣ: ಭೈರತಿ ಬಸವರಾಜ್ ಬಿಟ್ಟು 18 ಆರೋಪಿಗಳ ವಿರುದ್ಧ ಚಾರ್ಜ್ಶೀಟ್ ಸಲ್ಲಿಕೆ
ಬೆಂಗಳೂರು: ರೌಡಿ ಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿಯ ಎಸ್‌ಐಟಿ, ಎಫ್‌ಐಆರ್‌ನಲ್ಲಿ ಹೆಸರಿಸಲಾದ ಬಿಜೆಪಿ ಶಾಸಕ ಭೈರತಿ ಬಸವರಾಜ್ ಅವರನ್ನು ಹೊರತುಪಡಿಸಿ ಇತರ 18 ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದೆ.
ಸೋಮವಾರ ನಗರದ ನ್ಯಾಯಾಲಯದಲ್ಲಿ ಸಲ್ಲಿಸಲಾದ ಚಾರ್ಚ್ ಶೀಟ್ ನಲ್ಲಿ ಜುಲೈ 15 ರಂದು ನಡೆದ ವಿ ಜಿ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ(40) ಹತ್ಯೆಗೆ ಸಂಬಂಧಿಸಿದ ಪ್ರಕರಣದಲ್ಲಿ ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ(ಕೆಸಿಒಸಿಎ) ಜಾರಿಗೊಳಿಸುವುದನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದ ಕೆಲವು ದಿನಗಳ ನಂತರ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.
ಈ ವರ್ಷದ ಜುಲೈನಲ್ಲಿ ಭಾರತಿ ನಗರದಲ್ಲಿ ಬಿಕ್ಲು ಶಿವನನ್ನು ಶಸ್ತ್ರಸಜ್ಜಿತ ದಾಳಿಕೋರರು ಕೊಚ್ಚಿ ಕೊಲೆ ಮಾಡಿದ್ದರು. ಹಿಂದಿನ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದ ಎಫ್‌ಐಆರ್‌ನಲ್ಲಿ ಬಿಜೆಪಿ ಶಾಸಕ ಭೈರತಿ ಬಸವರಾಜ್ ಅವರನ್ನು ಐದನೇ ಆರೋಪಿಯನ್ನಾಗಿ ಹೆಸರಿಸಲಾಗಿದ್ದು, ಗ್ಯಾಂಗ್‌ಸ್ಟರ್ ಜಗದೀಶ್ ಪದ್ಮನಾಭ ಅಲಿಯಾಸ್ ಜಗ(45)ನನ್ನು ಪ್ರಮುಖ ಆರೋಪಿಯನ್ನಾಗಿ ಮಾಡಲಾಗಿದೆ.
ಒಟ್ಟು 4236 ಪುಟಗಳ ಚಾರ್ಜ್ ಶೀಟ್ ಅನ್ನು ಸಿಐಡಿ ಅಧಿಕಾರಿಗಳು ನಿನ್ನೆ ಸಂಜೆ ಕೋರ್ಟ್ ಗೆ ಸಲ್ಲಿಕೆ ಮಾಡಿದ್ದು, ಒಂದನೇ ಆರೋಪಿಯಿಂದ ನಾಲ್ಕು ಹಾಗೂ ಆರರಿಂದ 19ನೇ ಆರೋಪಿಗಳ ವಿರುದ್ದ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಐದನೇ ಆರೋಪಿ ಶಾಸಕ ಭೈರತಿ ಬಸವರಾಜ್ ವಿರುದ್ದ ಸದ್ಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿಲ್ಲ.
ಸದ್ಯ ಶಾಸಕ ಭೈರತಿ ಬಸವರಾಜು ತಲೆ ಮರೆಸಿಕೊಂಡಿದ್ದು, ಹುಡುಕಾಟ ಮುಂದುವರೆದಿದೆ ಎಂದು ಭೈರತಿ ಬಸವರಾಜು ಬಗ್ಗೆ ಚಾರ್ಜ್ ಷೀಟ್ ನಲ್ಲಿ ಉಲ್ಲೇಖ ಮಾಡಲಾಗಿದೆ. ಭೈರತಿ ಬಸವರಾಜು ಬಂಧನವೂ ಆಗಿಲ್ಲ..ವಿಚಾರಣೆಯೂ ನಡೆದಿಲ್ಲ. ಹೀಗಾಗಿ ಶಾಸಕ ಭೈರತಿ ಬಸವರಾಜ್ ವಿರುದ್ದ ತನಿಖೆ ಮುಂದುವರೆದಿರೋದಾಗಿ ಮಾಹಿತಿಯನ್ನು ಉಲ್ಲೇಖಿಸಿದ್ದಾರೆ. ಇಪ್ಪತ್ತನೇ ಆರೋಪಿ ಅಜಿತ್ ವಿರುದ್ದವೂ ತನಿಖೆ ಮುಂದುವರೆದಿದೆ ಎಂದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖ ಮಾಡಲಾಗಿದೆ.
ಜಗಾ ಅವರ ಸಹಚರರಾದ ವಿಮಲ್ ರಾಜ್, ಕಿರಣ್ ಕೃಷ್ಣ, ಮದನ್ ಕೆ ಮತ್ತು ಪ್ರದೀಪ್ ಕೆ ಅವರನ್ನು ಸಹ ಆರೋಪಿಗಳೆಂದು ಪಟ್ಟಿ ಮಾಡಲಾಗಿದೆ.
ಕೊಲೆಯಾದ ಒಂದು ದಿನದ ನಂತರ, ಜುಲೈ 16 ರಂದು, ಐದು ಮಂದಿ – ಕಿರಣ್ ಕೃಷ್ಣ, ಪ್ರದೀಪ್, ವಿಮಲ್ ರಾಜ್, ಮದನ್ ಕೆ ಮತ್ತು ಸ್ಯಾಮ್ಯುಯೆಲ್ ವಿಕ್ಟರ್ – ಅಪರಾಧದಲ್ಲಿ ಭಾಗಿಯಾಗಿರುವುದಾಗಿ ಹೇಳಿಕೊಂಡು ಪೊಲೀಸರ ಮುಂದೆ ಶರಣಾಗಿದ್ದರು.