ಖ್ಯಾತ ಗಾಯಕಿ ಎಸ್ ಜಾನಕಿಗೆ ಪುತ್ರ ಶೋಕ: ಹಠಾತ್ ಹೃದಯಾಘಾತಕ್ಕೆ ಬಲಿಯಾದ ಮುರಳಿ ಕೃಷ್ಣ!......
ಮೀನುಗಾರರ ಬಲೆಗೆ ಸಿಲುಕಿದ ಬೃಹತ್ ಶಾರ್ಕ್‌ಗೆ ಜೀವದಾನ!
ವರ್ಕಲಾ: ಡಿ. 14,ಕೇರಳದ ಪ್ರಸಿದ್ಧ ವರ್ಕಲಾ ಬೀಚ್‌ನಲ್ಲಿ ಮೀನುಗಾರರ ಬಲೆಗೆ ಸಿಲುಕಿಕೊಂಡು ದಡಕ್ಕೆ ಬಂದಿದ್ದ ಬೃಹತ್ ಗಾತ್ರದ ಶಾರ್ಕ್ ಮೀನನ್ನು ಸ್ಥಳೀಯರು ಹಾಗೂ ಪ್ರವಾಸಿಗರು ಸೇರಿ ಯಶಸ್ವಿಯಾಗಿ ರಕ್ಷಿಸಿದ ಹೃದಯಸ್ಪರ್ಶಿ ಘಟನೆ ನಡೆದಿದೆ. ಹಲವಾರು ಗಂಟೆಗಳ ಸತತ ಪ್ರಯತ್ನದ ನಂತರ, ಬೋಟ್‌ಗಳ ನೆರವಿನಿಂದ ಶಾರ್ಕ್ ಅನ್ನು ಮರಳಿ ಸಮುದ್ರಕ್ಕೆ ಬಿಡಲಾಗಿದೆ.
ಮೀನುಗಾರನೋರ್ವನ ಬಲೆಗೆ ಸಿಲುಕಿದ ಶಾರ್ಕ್ ಅಲೆಗಳ ಹೊಡೆತಕ್ಕೆ ಸಿಲುಕಿ ಕಡಲತೀರಕ್ಕೆ ತೇಲಿ ಬಂದಿತ್ತು. ಈ ದೃಶ್ಯವನ್ನು ಕಂಡ ಸ್ಥಳೀಯರು ಮತ್ತು ಪ್ರವಾಸಿಗರು ತಕ್ಷಣವೇ ಮೀನಿಗೆ ನೆರವಾಗಲು ಮುಂದಾದರು. ಕೆಲವರು ನೀರಿನೊಳಗೆ ಇಳಿದು ಮೀನನ್ನು ಸಮುದ್ರದ ಕಡೆ ತಳ್ಳಲು ಪ್ರಯತ್ನಿಸಿದರು. ಆದರೆ ಅಲೆಗಳ ಹೊಡೆತದಿಂದಾಗಿ ಶಾರ್ಕ್ ಪುನಃ ಪುನಃ ದಡಕ್ಕೆ ಬಂದು ಬೀಳುತ್ತಿತ್ತು.
ಜೀವವೊಂದನ್ನು ಉಳಿಸಲು ಜನರು ಒಗ್ಗೂಡಿದ ಈ ದೃಶ್ಯವು ಮಾನವೀಯತೆಯ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ಸುಮಾರು ಮೂರು ಗಂಟೆಗಳಿಗೂ ಹೆಚ್ಚು ಕಾಲ ನಡೆದ ಈ ಕಠಿಣ ರಕ್ಷಣಾ ಕಾರ್ಯಾಚರಣೆಯಲ್ಲಿ ನೂರಾರು ಜನರು ಭಾಗವಹಿಸಿದರು. ಶಾರ್ಕ್ ದೊಡ್ಡ ಗಾತ್ರದದ್ದಾಗಿದ್ದರೂ ಸೌಮ್ಯ ಸ್ವಭಾವ ಹೊಂದಿದ್ದುದಾಗಿ ಹೇಳಲಾಗಿದ್ದು, ಜನರು ಅದನ್ನು ಎಚ್ಚರಿಕೆಯಿಂದ ಆಳ ನೀರಿನ ಕಡೆಗೆ ಕರೆದೊಯ್ಯಲು ಶ್ರಮಿಸಿದರು.
ಈ ಘಟನೆಗೆ ಸಂಬಂಧಿಸಿದ ವೀಡಿಯೋವನ್ನು ಸರ್ಫರ್ @surferboy_varkala ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಬೆಳಗ್ಗೆ ಸುಮಾರು 8 ಗಂಟೆಗೆ ಸಮುದ್ರದಲ್ಲಿ ಸರ್ಫಿಂಗ್‌ಗೆ ತೆರಳುತ್ತಿದ್ದವರು ಈ ಶಾರ್ಕ್‌ನ್ನು ಗಮನಿಸಿದ್ದಾರೆ. ಆ ವೇಳೆ ಈಗಾಗಲೇ ಕೆಲ ಸ್ಥಳೀಯರು ಮತ್ತು ಪ್ರವಾಸಿಗರು ಮೀನನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದರು. ಮೀನುಗಾರಿಕಾ ಬಲೆಗಳಲ್ಲಿ ಸಿಲುಕಿದ ನಂತರ ಶಾರ್ಕ್ ಅಲೆಗಳ ಹೊಡೆತಕ್ಕೆ ದಡಕ್ಕೆ ಬಂದಿತ್ತು ಎಂದು ಅವರು ತಿಳಿಸಿದ್ದಾರೆ.
ಮೊದಲಿಗೆ ಬರಿಗೈಲಿ ಮೀನನ್ನು ನೀರಿಗೆ ಬಿಡಲು ಪ್ರಯತ್ನಿಸಿದರೂ, ಅದು ಸಾಧ್ಯವಾಗದೇ ಇದ್ದುದರಿಂದ ನಂತರ ಎರಡು ಬೋಟ್‌ಗಳ ಸಹಾಯವನ್ನು ಪಡೆಯಲಾಯಿತು. ಮೀನುಗಾರರು ಶಾರ್ಕ್‌ನ ಬಾಲದ ಸುತ್ತ ಹಗ್ಗವನ್ನು ಕಟ್ಟಿಕೊಂಡು, ನಿಧಾನವಾಗಿ ಆಳ ಸಮುದ್ರದ ಕಡೆಗೆ ಎಳೆದುಕೊಂಡು ಹೋದರು. ಅಂತಿಮವಾಗಿ ಬೋಟ್‌ಗಳ ಸಹಾಯದಿಂದ ಈ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿ ಮುಕ್ತಾಯವಾಯಿತು. ಈ ಸಂದರ್ಭದಲ್ಲಿ ಕೆಲವರಿಗೆ ಸಣ್ಣ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಆದರೆ ಜೀವ ಉಳಿಸಿದ ಸಂತೋಷ ಎಲ್ಲರ ಮುಖದಲ್ಲೂ ಮಂದಹಾಸ ಬೀರಿತ್ತು.
ಈ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಅಪರಿಚಿತ ಪ್ರವಾಸಿಗರು ಮತ್ತು ಸ್ಥಳೀಯರು ಒಟ್ಟಾಗಿ ತೋರಿದ ಮಾನವೀಯತೆಗಾಗಿ ಅನೇಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ವೀಡಿಯೋದಲ್ಲಿ ಹಲವು ಬಾರಿ ಜನರು ಮೀನನ್ನು ಸಮುದ್ರಕ್ಕೆ ತಳ್ಳುವಾಗ ಅಲೆಗಳು ಅಪ್ಪಳಿಸಿ ಅದು ಮತ್ತೆ ದಡಕ್ಕೆ ಬರುವ ದೃಶ್ಯಗಳಿದ್ದು, ಕೊನೆಗೆ ಶಾರ್ಕ್ ಆಳ ಸಮುದ್ರಕ್ಕೆ ಸಾಗುತ್ತಿದ್ದಂತೆ ಅಲ್ಲಿದ್ದ ವಿದೇಶಿ ಪ್ರವಾಸಿಗರು ಸೇರಿದಂತೆ ಅನೇಕರು ಸಂತಸಗೊಂಡಿದ್ದು ಕಂಡುಬರುತ್ತದೆ. ಈ ಘಟನೆ ಮಾನವೀಯತೆ ಮತ್ತು ಸಹಾನುಭೂತಿಯ ಶಕ್ತಿಯನ್ನು ಪ್ರತಿಬಿಂಬಿಸುವ ಅಪರೂಪದ ಕ್ಷಣವಾಗಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ಪಡೆಯುತ್ತಿದೆ.