ಜನವರಿ 9ರ ಶುಕ್ರವಾರದ೦ದು ಶೀರೂರು ಮಠಾಧೀಶರಾದ ಶ್ರೀಶ್ರೀವೇದವರ್ಧನ ತೀರ್ಥ ಶ್ರೀಪಾದರ ಪುರಪ್ರವೇಶ...ಉಡುಪಿ ಶ್ರೀಕೃಷ್ಣಮಠದಲ್ಲಿ ಜನವರಿ 9ರ ಶುಕ್ರವಾರದ೦ದು ಸಪ್ತೋತ್ಸವ ಆರ೦ಭ...
ಮಂಗಳೂರು : ತುಳು ನಾಡಿನ ಕಂಬಳಕ್ಕೆ ಹೊಸ ನಿಯಮ!
ಮಂಗಳೂರು : ತುಳು ನಾಡಿನ ಪರಂಪರೆಯ ಕಂಬಳದಲ್ಲಿ ಈ ವರ್ಷದಿಂದ ಹಲವು ಮಹತ್ವದ ಬದಲಾವಣೆಗಳನ್ನು ಜಾರಿಗೊಳಿಸಲಾಗುತ್ತಿದೆ. ಹಗ್ಗ ಹಿರಿಯ, ಹಗ್ಗ ಕಿರಿಯ, ನೇಗಿಲು ಹಿರಿಯ, ನೇಗಿಲು ಕಿರಿಯ, ಅಡ್ಡ ಹಲಗೆ ಮತ್ತು ಕನೆ ಹಲಗೆ ಎಂಬ ಆರು ವಿಭಾಗಗಳಲ್ಲಿ ನಡೆಯುವ ಕಂಬಳ ಸ್ಪರ್ಧೆಗಳಿಗೆ ಸಮಯ ನಿರ್ವಹಣೆ ಮತ್ತು ಅಂಕ ನಿರ್ಧಾರಕ್ಕೆ ಸಂಬಂಧಿಸಿದಂತೆ ಕಂಬಳ ಸಮಿತಿ ಹೊಸ ನಿಯಮಗಳನ್ನು ಜಾರಿಗೆ ತಂದಿದೆ.
ಕನೆ ಹಲಗೆ ವಿಭಾಗದಲ್ಲಿ ಈಗಾಗಲೇ ಇದ್ದ ಗೊಂದಲದ ನಿರ್ವಹಣೆಗೆ ಈ ಬಾರಿ ಸಮಿತಿ ಸ್ಪಷ್ಟವಾದ ತೀರ್ಮಾನಕ್ಕೆ ಬಂದಿದೆ. ಹಿಂದಿನ ವರ್ಷಗಳಲ್ಲಿ ಕೋಣಗಳು ನಿಶಾನೆಗೆ ನೀರು ತಾಕದಿದ್ದರೂ, ಓಟದ ಸಮಯದಲ್ಲಿ ನೀರು ಹಾಯಿಸಿದ ಎತ್ತರವನ್ನು ಆಧರಿಸಿ ಬಹುಮಾನ ನೀಡುವ ಪದ್ಧತಿ ಇತ್ತು. ಇದು ಕೆಲವೊಮ್ಮೆ ಗೊಂದಲ ಮತ್ತು ಅನಗತ್ಯ ಚರ್ಚೆಗೆ ಕಾರಣವಾಗುತ್ತಿತ್ತು. ಇದಕ್ಕೆ ಕೊನೆಗಾಣಿಸುತ್ತಾ, ಈ ಬಾರಿ 6.5 ಕೋಲು ಮತ್ತು 7.5 ಕೋಲು ನಿಶಾನೆಗೆ ನೀರು ತಾಕಿದರಷ್ಟೇ ಬಹುಮಾನ ನೀಡುವಂತೆ ಕಂಬಳ ಸಮಿತಿ ನಿರ್ಧರಿಸಿದೆ.
ಕನೆ ಹಲಗೆ ವಿಭಾಗಕ್ಕೆ 3.30 ಗಂಟೆಯಲ್ಲಿ 5 ಸುತ್ತು ಕಡ್ಡಾಯ: ಈ ಹಿಂದೆ ಕನೆ ಹಲಗೆ ವಿಭಾಗದಲ್ಲಿ 4 ಸುತ್ತಿನ ಓಟಕ್ಕೆ ಅವಕಾಶವಿತ್ತು. ಆದರೆ ಈ ವರ್ಷದಿಂದ 3 ಗಂಟೆ 30 ನಿಮಿಷದೊಳಗೆ 5 ಸುತ್ತು ಓಟ ಮುಗಿಸುವುದು ಕಡ್ಡಾಯವಾಗಲಿದೆ. ನಿಗದಿತ ಸಮಯದೊಳಗೆ 5 ಸುತ್ತುಗಳನ್ನು ಪೂರ್ಣಗೊಳಿಸದಿದ್ದರೆ, ನಂತರ ಮತ್ತಷ್ಟು ಅವಕಾಶ ನೀಡಲಾಗುವುದಿಲ್ಲ ಎಂದು ಸಮಿತಿ ಸ್ಪಷ್ಟಪಡಿಸಿದೆ. ಕಂಬಳವನ್ನು ನಿಯಮದಂತೆ 24 ಗಂಟೆಯೊಳಗೆ ಮುಗಿಸಲು ಈ ಕ್ರಮ ಜಾರಿಗೆ ತಂದಿರುವುದಾಗಿ ತಿಳಿಸಲಾಗಿದೆ.
ಕೋಣ ಬಿಡುವ ಸಮಯಕ್ಕೂ ಕಠಿಣ ನಿಯಮ: ಕಂಬಳದ ಇತರ ವಿಭಾಗಗಳಲ್ಲೂ ಕೋಣ ಗಂತಿಗೆ ಇಳಿಸುವ ಮತ್ತು ಬಿಡುವ ಸಮಯಕ್ಕೆ ಕಟ್ಟುನಿಟ್ಟಿನ ಮಿತಿ ನಿಗದಿಪಡಿಸಲಾಗಿದೆ.
ಅಡ್ಡ ಹಲಗೆ, ನೇಗಿಲು, ಹಗ್ಗ ಕಿರಿಯ ವಿಭಾಗಗಳಲ್ಲಿ: ಸ್ಪರ್ಧೆ ಮುಗಿದ ಬಳಿಕ ಕೋಣ ಗಂತಿಗೆ ಇಳಿಸಲು 3 ನಿಮಿಷ ಕಾಲಾವಕಾಶ. ವಿಳಂಬವಾದರೆ ಅವಕಾಶ ನಿರಾಕರಣೆಯ ಕ್ರಮ ಜಾರಿಯಾಗುತ್ತದೆ. ಹಗ್ಗ ಹಿರಿಯ ಮತ್ತು ಅಡ್ಡ ಹಲಗೆ, ನೇಗಿಲು ವಿಭಾಗಗಳಲ್ಲಿ: ಕೋಣ ಬಿಡಲು 5 ನಿಮಿಷ ಅವಧಿ.
ಹಗ್ಗ ಕಿರಿಯ ಮತ್ತು ನೇಗಿಲು ಕಿರಿಯ ವಿಭಾಗಗಳಲ್ಲಿ: ಕ್ರಮವಾಗಿ 8 ನಿಮಿಷ ಮತ್ತು 6 ನಿಮಿಷಗಳ ಕಾಲಾವಕಾಶ.
ಈ ಎಲ್ಲಾ ನಿಯಮಗಳನ್ನು ಪಾಲಿಸುವ ಜವಾಬ್ದಾರಿ ಸ್ಪರ್ಧಾಪರರಿಗೆ ನೀಡಲಾಗಿದ್ದು, ತೀರ್ಪುಗಾರರ ನಿರ್ಧಾರವೇ ಅಂತಿಮ ಎಂದು ಕಂಬಳ ಸಮಿತಿ ಸಭೆಯಲ್ಲಿ ಘೋಷಿಸಲಾಗಿದೆ. ಯಾವುದೇ ಕಾರಣಕ್ಕೂ ತೀರ್ಪು ಪ್ರಶ್ನಿಸಲು ಅವಕಾಶವಿರುವುದಿಲ್ಲವೆಂದು ಸ್ಪಷ್ಟವಾಗಿ ತಿಳಿಸಲಾಗಿದೆ.