ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ
ಧರ್ಮಸ್ಥಳ ಪ್ರಕರಣ: ಬುರುಡೆ ಕೇಸ್ ಜತೆ ಮತ್ತೊಂದು ಸಾಹಸಕ್ಕೆ ಕೈಹಾಕಿದ ಎಸ್ಐಟಿ!
ಮಂಗಳೂರು: ಸೆಪ್ಟೆಂಬರ್ 12: ಧರ್ಮಸ್ಥಳ ‘ಬುರುಡೆ’ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಇದೀಗ ಮತ್ತೊಂದು ಪ್ರಮುಖ ನಿರ್ಧಾರಕ್ಕೆ ಬಂದಿದೆ. ‘ಬುರುಡೆ’ ಪ್ರಕರಣದ ಜತೆಗೆ ಧರ್ಮಸ್ಥಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಶವ ದಫನ ದಾಖಲೆಗಳತ್ತವೂ ಎಸ್ಐಟಿ ಗಮನ ಕೇಂದ್ರೀಕರಿಸಿದೆ. ಧರ್ಮಸ್ಥಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಶವಗಳ ದಫನದಲ್ಲೇ ಅಕ್ರಮ ಎಸಗಲಾಗಿದೆ. ಹೆಣಗಳನ್ನು ಹೂತು ಹಾಕಲು ಫೋರ್ಜರಿ ದಾಖಲೆ ಸೃಷ್ಟಿಸಲಾಗಿದೆ ಎಂದು ಹೋರಾಟಗಾರ ಗಿರೀಶ್ ಮಟ್ಟಣ್ಣನವರ್ ಆರೋಪಿಸಿದ್ದರು. ಎಸ್ಐಟಿ ಕಚೇರಿಗೆ ದಾಖಲೆಗಳನ್ನೂ ಸಲ್ಲಿಸಿದ್ದರು. ಹೀಗಾಗಿ ಪಂಚಾಯತ್ ದಫನ ದಾಖಲೆಗಳ ಆಳವಾದ ಪರಿಶೀಲನೆಗೆ ಎಸ್ಐಟಿ ಮುಂದಾಗಿದೆ.
ಪ್ರತೀನಿತ್ಯ ಧರ್ಮಸ್ಥಳ ಪಂಚಾಯತಿಯಿಂದ ದಾಖಲೆಗಳನ್ನು ತರಿಸಿಕೊಳ್ಳುತ್ತಿರುವ ಎಸ್ಐಟಿ, ಶವ ಹೂತು ಹಾಕಿದ ವಿವರ, ಯುಡಿಆರ್, ರಶೀದಿಗಳ ಮಾಹಿತಿ ಸಂಗ್ರಹ ಮಾಡುತ್ತಿದೆ. 1987 ರಿಂದ 2025 ರವರೆಗಿನ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಿರುವ ಎಸ್ಐಟಿ, ಮಟ್ಟಣ್ಣನವರ್ ಕೊಟ್ಟ ದಾಖಲೆ ಹಾಗೂ ಪಂಚಾಯತ್ ಮೂಲ ದಾಖಲೆಗಳ ಪರಿಶೀಲನೆ ಮಾಡುತ್ತಿದೆ. ಶವ ದಫನ ದಾಖಲೆಗಳಲ್ಲಿ ಸಹಿ ಹಾಕಿರುವ ವ್ಯಕ್ತಿಗಳಿಗೂ ವಿಚಾರಣೆ ಬಿಸಿ ತಟ್ಟಲು ಶುರುವಾಗಿದೆ. ಮಾಜಿ ಅಧ್ಯಕ್ಷರು, ಪಿಡಿಓ, ಸಿಬ್ಬಂದಿಗಳನ್ನು ಪ್ರತಿ ನಿತ್ಯ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಈ ಮೂಲಕ ಧರ್ಮಸ್ಥಳ ಬುರುಡೆ ಕೇಸ್ನ ಎಲ್ಲಾ ಆರೋಪಗಳಿಗೆ ಸ್ಪಷ್ಟತೆ ಕೊಡಲು ಎಸ್ಐಟಿ ಮುಂದಾಗಿದೆ.
ಬಂಗ್ಲೆಗುಡ್ಡದಲ್ಲಿ ಎಸ್ಐಟಿ ರಹಸ್ಯ ಶೋಧ!
ಧರ್ಮಸ್ಥಳ ಬುರುಡೆ ಪ್ರಕರಣ ಸಂಬಂಧ ಬಂಗ್ಲೆಗುಡ್ಡ ರಹಸ್ಯ ಬಯಲು ಮಾಡಲು ಎಸ್ಐಟಿ ಅಧಿಕಾರಿಗಳು ಪಣತೊಟ್ಟಿದ್ದು, ಗೋಪ್ಯವಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಗುರುವಾರ ಸಂಜೆ ವೇಳೆ ಮತ್ತೆ ಬಂಗ್ಲೆಗುಡ್ಡದಲ್ಲಿ ಎಸ್ಐಟಿ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ. ಎಸ್ಐಟಿ ಅಧಿಕಾರಿ ಸೈಮನ್ ನೇತೃತ್ವದಲ್ಲಿ ಈ ಕಾರ್ಯ ನಡೆಯುತ್ತಿದ್ದು, ಸೌಜನ್ಯ ಮಾವ ವಿಠಲ ಗೌಡ ಹೇಳಿಕೆಯ ಸತ್ಯಾಸತ್ಯತೆ ತಿಳಿಯಲು ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.
ಏನು ಹೇಳಿದ್ದರು ವಿಠಲ ಗೌಡ?
ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದ ವಿಠಲ ಗೌಡ, ಬಂಗ್ಲಗುಡ್ಡೆಗೆ ಎರಡು ಸಲ ಸ್ಥಳ ಮಹಜರಿಗೆ ನನ್ನನ್ನು ಕರೆದುಕೊಂಡು ಹೋಗಿದ್ದು, ಅಲ್ಲಿ ಮೂರು ಮನುಷ್ಯರ ಅಸ್ಥಿಪಂಜರಗಳು ಸಿಕ್ಕಿವೆ. ಹತ್ತಿರ ಹತ್ತಿರ ಹತ್ತು ಅಡಿಗಳ ಜಾಗದಲ್ಲಿ ಅವು ಸಿಕ್ಕಿವೆ. ಎರಡನೇ ಬಾರಿಗೆ ಸ್ಥಳ ಮಹಜರಿಗೆ ಹೋದಾಗ ಹೆಣಗಳ ರಾಶಿ ಸಿಕ್ಕಿದೆ. ಕಣ್ಣಿಗೆ ಕಂಡದ್ದು 5 ಹೆಣಗಳು. ಸಣ್ಣ ಮಗುವಿನ ಎಲುಬು ಇರುವುದು ಗೋಚರ ಆಗತ್ತು ಎಂದು ಹೇಳಿಕೊಂಡಿದ್ದರು.
ಎಸ್ಐಟಿ ತನಿಖೆ ವಿಧಾನದ ಬಗ್ಗೆ ಬಿಜೆಪಿ ಅಸಮಾಧಾನ
ಧರ್ಮಸ್ಥಳದ ಬುರುಡೆ ಪ್ರಕರಣದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಹಾಗೂ ಎಸ್ಐಟಿ ತನಿಖಾ ವಿಧಾನದ ಬಗ್ಗೆ ಬಿಜೆಪಿ ಶಾಸಕ ಎಸ್ ಸುರೇಶ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಮಾಧ್ಯಮ ಫೇಸ್ಬುಕ್ನಲ್ಲಿ ಸಂದೇಶ ಪ್ರಕಟಿಸಿರುವ ಅವರು, ‘‘ನಿನ್ನೆಯ ದೃಶ್ಯ ಮಾಧ್ಯಮಗಳ ಸುದ್ದಿ ಮತ್ತು ಹಿಂದಿನ ಪತ್ರಿಕಾ ವರದಿಗಳನ್ನು ಗಮನಿಸಿದ ಮೇಲೆ ನನ್ನ ಮನಸ್ಸಿನಲ್ಲಿ ಎದ್ದಿರುವ ಪ್ರಶ್ನೆ. ಮಾನ್ಯ ಗೃಹ ಮಂತ್ರಿ ಪರಮೇಶ್ವರ ರವರೇ, ಯಾಕೋ ಇದು ಸರಿಯಾಗಿ ನಡೆಯುತ್ತಿಲ್ಲ ಅಂತ ನಿಮಗೆ ಅನ್ನಿಸುತ್ತಿಲ್ಲವೇ? ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ತನಿಖೆ ನಡೆಸುತ್ತಿರುವ SIT , ತನಿಖೆ ಎದುರಿಸುತ್ತಿರುವ ವ್ಯಕ್ತಿಯೋರ್ವನನ್ನು (ಮಾಧ್ಯಮಗಳ ಮಾಹಿತಿ ಪ್ರಕಾರ ಬುರುಡೆ ತಂದಾತ) ತನ್ನ ಅಧಿಕೃತ ವಕ್ತಾರನಾಗಿ ನೇಮಿಸಿದೆಯೇ ? ಮಧ್ಯಂತರ ವರದಿಯನ್ನು ಆತನೇ ನೀಡುತ್ತಿರುವಂತಿದೆ . ಮಹಜರಿನ ಹೆಸರಲ್ಲಿ ಆತ ಮಾಧ್ಯಮಕ್ಕೆ ನೀಡಿದ ಮಾಹಿತಿಗಳು ಇಡೀ SIT ತನಿಖಾ ವ್ಯವಸ್ಥೆಯನ್ನೇ ಅಣಕಿಸುವಂತಿದೆ. SIT ಯಿಂದ ನ್ಯಾಯ ನಿರೀಕ್ಷಣೆ ಮರೀಚಿಕೆ ಅನ್ನಿಸಿದ್ದು ನನಗೆ ಮಾತ್ರವೇ? ಅದೇ ರೀತಿ ಷಡ್ಯಂತ್ರದ ಮುಖ್ಯಸ್ಥನೆಂದೇ ಗುರುತಿಸಲ್ಪಟ್ಟ ವ್ಯಕ್ತಿ ಅನೇಕ ದಿನಗಳಿಂದ ಸಾರ್ವಜನಿಕ ವಾಗಿ ಕಾಣಿಸುತ್ತಿರಲಿಲ್ಲ. ನಿನ್ನೆ ಏಕಾಏಕಿಯಾಗಿ SIT ಮುಂದೆ ಹಾಜರಾಗಿ ದೂರು ಸಲ್ಲಿಸಿರುವುದು ಕುತಂತ್ರದ ಯಾವ ಮುಖ? ಇದು ಯಾರ ನಿರ್ದೇಶನ’’ ಎಂದು ಸುರೇಶ್ ಕುಮಾರ್ ಪ್ರಶ್ನಿಸಿದ್ದಾರೆ.
ಮಹೇಶ್ ಶೆಟ್ಟಿ ತಿಮರೋಡಿಯಿಂದ ಮತ್ತೆ ದೂರು…
ಧರ್ಮಸ್ಥಳದಲ್ಲಿ ಸಂಭವಿಸಿದ ಅಸಹಜ ಸಾವುಗಳ ಬಗ್ಗೆ ತನಿಖೆ ನಡೆಸುವಂತೆ ಎಸ್ಐಟಿ ಪೊಲೀಸ್ ಠಾಣೆಗೆ ಮಹೇಶ್ ಶೆಟ್ಟಿ ತಿಮರೋಡಿ ಹೊಸದಾಗಿ ದೂರು ನೀಡಿದ್ದಾರೆ. ಅಸಹಜ ಸಾವನ್ನು ಕೊಲೆ ಪ್ರಕರಣಗಳಾಗಿ ಎಫ್ಐಆರ್ ದಾಖಲಿಸುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ. 2006ರಿಂದ 2010 ರವರೆಗೆ ಧರ್ಮಸ್ಥಳದ ವಸತಿ ಗೃಹಗಳಲ್ಲಿ ಅನೇಕ ಸಂಶಯಾಸ್ಪದ ಸಾವುಗಳು ಸಂಭವಿಸಿವೆ. ಧರ್ಮಸ್ಥಳದ ಗಾಯತ್ರಿ, ಶರಾವತಿ, ವೈಶಾಲಿ ವಸತಿಗೃಹದಲ್ಲಿ ಈ ಸಾವುಗಳು ಸಂಭವಿಸಿವೆ. ಆದರೆ, ಅಪರಿಚಿತ ಶವಗಳನ್ನು ಬೇಕೆಂದೇ ಅನಾಥ ಶವಗಳೆಂದು ಘೋಷಿಸಲಾಗಿದೆ. ತಕ್ಷಣವೇ ಗ್ರಾಮ ಪಂಚಾಯತ್ ಮುಖಾಂತರ ಸಮಾಧಿ ಮಾಡಲಾಗಿದೆ. ಇವುಗಳು ಎಲ್ಲಾ ದೃಷ್ಟಿಯಿಂದ ಸಂಭಾವ್ಯ ಕೊಲೆ ಪ್ರಕರಣಗಳೆಂದು ಶಂಕೆ ಮೂಡುತ್ತದೆ ಎಂದು ತಿಮರೋಡಿ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಅತಿಥಿ ಗೃಹದಲ್ಲಿ ವ್ಯಕ್ತಿಯ ಮಾಹಿತಿ, ದಾಖಲೆಗಳನ್ನು ಪಡೆದಿರುತ್ತಾರೆ. ಆದರೆ, ಅಥಿತಿಗಳ ವಿವರಗಳನ್ನು ಉದ್ದೇಶಪೂರ್ವಕವಾಗಿ ಮುಚ್ಚಿಡಲಾಗಿದೆ. ಅಥವಾ ದಾಖಲೆಗಳನ್ನು ನಾಶಪಡಿಸಿರುವ ಗಂಭೀರ ಅನುಮಾನವಿದೆ. ಹೀಗಾಗಿ ಪ್ರತ್ಯೇಕ ಎಫ್ಐಆರ್ ದಾಖಲಿಸಿ ತನಿಖೆ ಮಾಡಬೇಕೆಂದು ತಿಮರೋಡಿ ಮನವಿ ಮಾಡಿದ್ದಾರೆ. ದೂರು ಅರ್ಜಿಯಲ್ಲಿ ನಾಲ್ಕು ಪ್ರತ್ಯೇಕ ಯುಡಿಆರ್ ಪ್ರಕರಣಗಳ ಬಗ್ಗೆ ಉಲ್ಲೇಖಿಸಲಾಗಿದ್ದು, ಈ ಬಗ್ಗೆ ಆರ್ಟಿಐನಿಂದ ಪಡೆದ ದಾಖಲೆಗಳನ್ನು ಸಹ ಸಲ್ಲಿಕೆ ಮಾಡಲಾಗಿದೆ.