ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ

ಧರ್ಮಸ್ಥಳ ವಿರೋಧಿ ಅಭಿಯಾನದ ಮೂಲ ಸಂಚುಕೋರರು ಸಿಗುವುದು ಕಷ್ಟ: ಎಸ್​ಐಟಿಗಿದೆ ತಾಂತ್ರಿಕ ಸಂಕಷ್ಟ

ಇದೊಂದು ವಿಪರ್ಯಾಸ. ಧರ್ಮಸ್ಥಳವೆಂದರೆ ನ್ಯಾಯ ಮತ್ತು ಧರ್ಮ ಸಿಗುವ ಸ್ಥಳ. ಇವತ್ತಿಗೂ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದ ಗ್ರಾಮೀಣ ಭಾಗದ ಹಿರೀಕರು ಆ ಊರಿನ ಹೆಸರನ್ನು ಸಹ ಬಾಯಿಬಿಟ್ಟು ಹೇಳಲು ಹಿಂಜರಿಯುತ್ತಾರೆ. ಯಾಕೆಂದರೆ, ಆ ರೀತಿ ಹೇಳಿದರೆ ಆ ಊರಿಗಿರುವ ಶಕ್ತಿಗೆ ತಾವು ಮಾಡುವ ಅಪಮಾನವಾಗಬಹುದು; ಹಾಗೊಮ್ಮೆ ಮಾಡಿದರೆ ತಮಗೆ ಶಾಪ ತಟ್ಟಬಹುದು ಎಂಬುದು ಅವರ ನಂಬುಗೆ. ಅಂತಹ ಧರ್ಮಸ್ಥಳವನ್ನು ಅಲ್ಲಿಯ ಧರ್ಮಾಧಿಕಾರಿ ಕುಟುಂಬವನ್ನು ಕಟಕಟೆಗೆ ತಂದು ನಿಲ್ಲಿಸಿರುವುದು ವಿಪರ್ಯಾಸವೇ ಸರಿ.

ಇದು ಎರಡು ವಾರಗಳ ಹಿಂದಿನ ಮಾತಾಗಿತ್ತು. ಈಗ ಅಲ್ಲಿಯ ಪರಿಸ್ಥಿತಿ ಬೇರೆ. ಸಮಾಜದ ಮೌಲ್ಯ ಎತ್ತಿ ಹಿಡಿದು ಮುನ್ನಡೆಸುತ್ತೇವೆಂದು ವೀಳ್ಯ ಪಡೆದಿರುವ ಬ್ರಿಗೇಡ್​​ನ ಧ್ವನಿ ಇದ್ದಕ್ಕಿದ್ದಂತೆ ಅಡಗಿದೆ. ಧರ್ಮಸ್ಥಳ ವಿರೋಧಿ ಚಳುವಳಿಯ ಭಾಗವೇ ಎನ್ನುವಂತೆ ರೋಚಕ ಸುದ್ದಿಯನ್ನು ಕಂತು ಕಂತುಗಳಲ್ಲಿ ಪ್ರಕಟಿಸುತ್ತ ನೈತಿಕ ಪಾಠ ಮಾಡುತ್ತಿದ್ದ ಯೂಟ್ಯೂಬ್ ಚ್ಯಾನೆಲ್ಗಳು, ಟಿವಿ ಚಾನೆಲ್ಗಳು, ಇಂಗ್ಲಿಷ್ ವೆಬ್ಸೈಟ್ಗಳು ಮುಖ ಮುಚ್ಚಿಕೊಂಡು ಓಡಾಡುವ ಹಂತಕ್ಕೆ ಬಂದಿವೆ. ಎಸ್ಐಟಿ ನಡೆಸುತ್ತಿರುವ ತನಿಖೆಗೆ ಯಾರು ಸಾಕ್ಷಾಧಾರಗಳನ್ನು ನೀಡಬಹುದು ಎಂದು ನಂಬಲಾಗಿತ್ತೋ, ಅವರೇ ಇಂದು ಎಸ್ಐಟಿ ತನಿಖೆಗೆ ಒಳಪಟ್ಟಿದ್ದಾರೆ. ಈ ಬೆಳವಣಿಗೆಯನ್ನು ವಿಶ್ಲೇಷಿಸುತ್ತಾ ಹೋದರೆ, ತನಿಖೆ ಎದುರಿಸುತ್ತಿರುವ ಚಿನ್ನಯ್ಯ, ಸುಜಾತ ಭಟ್ ಹಾಗೂ ಇನ್ನು ಕೆಲವರ ಹಿಂದೆ ಬಹಳ ಪ್ರಭಾವಿ ಶಕ್ತಿಗಳ ಕೈವಾಡ ಇದೆ ಎಂಬ ಗುಮಾನಿ ಹುಟ್ಟುವುದು ಸಹಜವಾಗಿದೆ. ಇದೆಲ್ಲಾ ಶುರುವಾಗಿದ್ದು ಎಲ್ಲಿಂದ ಎಂಬುದನ್ನು ಮತ್ತೊಮ್ಮೆ ಗಮನಿಸಲೇಬೇಕು.

ಧರ್ಮಸ್ಥಳ ಪ್ರಕರಣ: ಎಲ್ಲಿಂದ ಪ್ರಾರಂಭ?

ನೆನಪಿರಬಹುದು ನಿಮಗೆ. 2025 ರ ಜೂನ್ 22 ರಂದು ಬೆಂಗಳೂರು ಮೂಲದ ಇಬ್ಬರು ವಕೀಲರ ವಾಟ್ಸಾಪ್ ಹೇಳಿಕೆ ಪತ್ರಿಕಾ ವಲಯದಲ್ಲಿ ಸಂಚಲನವನ್ನೇ ಮೂಡಿಸಿತು. ತಮಗೊಬ್ಬ ಕಕ್ಷಿದಾರ ಸಿಕ್ಕಿದ್ದು ಆತ 1995 ರಿಂದ 2014ರ ನಡುವಿನ ಅವಧಿಯಲ್ಲಿ ಧರ್ಮಸ್ಥಳದಲ್ಲಿ ಹೆಣ್ಣುಮಕ್ಕಳ ಮತ್ತು ಹೆಂಗಸರ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬಗ್ಗೆ ಮಾಹಿತಿ ನೀಡಲು ಸಿದ್ದನಿದ್ದಾನೆ ಎಂದರು. ಅವರ ಈ ಹೇಳಿಕೆ ಬೆನ್ನಲ್ಲೇ ಒಂದಿಷ್ಟು ಪತ್ರಕರ್ತರು ಎದ್ದು ನಿಂತೇ ಬಿಟ್ಟರು. ಅನ್ಯಾಯಕ್ಕೆ ಒಳಗಾದವರಿಗೆ ಈಗಲಾದರೂ ನಾವು ನ್ಯಾಯ ಒದಗಿಸಲೇಬೇಕೆಂದು ಟೊಂಕ ಕಟ್ಟಿದರು.

Maskman Chinnayya

ಮಾಸ್ಕ್​ಮ್ಯಾನ್ ಚಿನ್ನಯ್ಯ

2025 ರ ಜುಲೈ 3 ರಂದು ಆ ವಕೀಲರ ಕಕ್ಷಿದಾರ ಹೇಳಿಕೆ ನೀಡಿದ. ಅದು ಅಂತಿಂಥ ಹೇಳಿಕೆ ಆಗಿರಲಿಲ್ಲ. ಅದೇನೆಂದರೆ 1995 ರಿಂದ 2014ರ ವರೆಗೆ, ಬಲಾತ್ಕಾರಕ್ಕೆ ಒಳಗಾಗಿ ಕೊನೆಗೆ ಜೀವತೆತ್ತ ಹುಡುಗಿಯರ ಮತ್ತು ಮಹಿಳೆಯರ ಶವ ಹೂಳಲು ತನ್ನ ಮೇಲೆ ಬಹಳ ಒತ್ತಡವಿತ್ತು. ತನಗೆ ಜೀವ ಬೆದರಿಕೆ ಇದ್ದುದರಿಂದ, ತಾನು ಧರ್ಮಸ್ಥಳವನ್ನು ಬಿಟ್ಟು ತಮಿಳುನಾಡಿನ ಒಂದು ಊರಿಗೆ ಹೋಗಿ ತಲೆಮರೆಸಿಕೊಂಡು ಬದುಕುವಂತಾಗಿದೆ ಎಂದು ಹೇಳಿದ. ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ಮುಂದೆ ಹಾಜರಾಗಿ, ಭಾರತೀಯ ನ್ಯಾಯ ಸಂಹಿತದ ಸೆಕ್ಷನ್ 183 ರ ಅಡಿಯಲ್ಲಿ ಪ್ರಮಾಣವಚನ ಸ್ವೀಕರಿಸಿ ಸುದೀರ್ಘ ಹೇಳಿಕೆ ನೀಡಿದ. ಈ ಸುದ್ದಿ ಹೊರ ಬರುತ್ತಿದ್ದಂತೆ, ಸುಜಾತಾ ಭಟ್ ಎನ್ನುವ ಮಹಿಳೆ ಒಂದು ಹೇಳಿಕೆ ನೀಡಿ ಇಡೀ ರಾಜ್ಯದಲ್ಲಿ ಸಂಚಲನ ಮೂಡಿಸಿದಳು. 2003ರಲ್ಲಿ ನಾಪತ್ತೆಯಾದ ತನ್ನ ಮಗಳು ಅನನ್ಯಾ ಭಟ್ ಕೂಡ ನೂರಾರು ಬಲಿಪಶುಗಳಲ್ಲಿ ಒಬ್ಬಳು. ಈ ಬೆಳವಣಿಗೆ ಆಗುತ್ತಿದ್ದಂತೆಯೇ, ಸುದ್ದಿ ಕರ್ನಾಟಕವೇನೂ ಇಡೀ ವಿಶ್ವದ ಮೂಲೆ ಮೂಲೆಗೂ ಹರಡಿತು. ಗಲ್ಫ್ ನ್ಯೂಸ್, ಅಲ್ ಜಜೀರಾ ಮತ್ತು ಬಿಬಿಸಿಯಂತಹ ಅಂತರರಾಷ್ಟ್ರೀಯ ಸುದ್ದಿವಾಹಿನಿಗಳು ಈ ವಿಚಾರವನ್ನಿಟ್ಟುಕೊಂಡು ಒಂದು ಸಂಕಥನವನ್ನು ಬಿಂಬಿಸಿದವು. ‘ಭಾರತೀಯ ದೇವಾಲಯ ಪಟ್ಟಣದಲ್ಲಿ 20 ವರ್ಷಗಳಿಂದ ಸತತವಾಗಿ ನಡೆಯುತ್ತಿರುವ ನೂರಾರು ಮಹಿಳೆಯರ ಬಲಾತ್ಕಾರ ಮತ್ತು ಕೊಲೆ’- ಅವರ ಸುದ್ದಿಯ ಓಘ ಹೇಗಿತ್ತು ಎಂದರೆ, ಹಿಂದೂ ನಂಬಿಕೆಯೇ ಇದಕ್ಕೆಲ್ಲ ಕಾರಣ ಎನ್ನುವಂತಿತ್ತು. ನಮ್ಮಲ್ಲಿನ ಚಾನೆಲ್‌ಗಳು ಮತ್ತು ಯೂಟ್ಯೂಬರ್‌ಗಳು ವರದಿ ಮಾಡಿದ್ದೇ ಮಾಡಿದ್ದು. ಅಪಹರಣಗಳು ಮತ್ತು ಕೊಲೆಗಳು ಹೇಗೆ ನಡೆದಿರಬಹುದು ಎಂಬುದನ್ನು ಕೃತಕ ಬುದ್ಧಿಮತ್ತೆ ಬಳಸಿ ಆ ಪ್ರಕರಣಗಳನ್ನು ಪುನರ್​ಸೃಷ್ಟಿಸಲು ಕೆಲವರು ಪ್ರಯತ್ನಿಸಿದರು.

ಸುಜಾತ ಭಟ್ ಹಾಗೂ ಅನನ್ಯಾ ಭಟ್

ಆಗ ಪೊಲೀಸರಿಗೆ ಬೇರೆ ದಾರಿ ಇರಲಿಲ್ಲ. ನ್ಯಾಯಾಲಯದ ಮುಂದೆ ಮಾಡಿದ ಪ್ರಮಾಣವಚನದ ಹೇಳಿಕೆಯ ಆಧಾರದ ಮೇಲೆ, ಜುಲೈ 4 ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ (ಸಂಖ್ಯೆ 39/2025) ದಾಖಲು ಮಾಡಿಕೊಂಡರು.

ಈ ನಡುವೆ, ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರು ಮಾಧ್ಯಮ ವರದಿಗಳನ್ನು ಆಧರಿಸಿ ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಬರೆದರು. ಜುಲೈ 14 ರಂದು (ರೆಫ್. 481/24-25) ಬರೆದ ಪತ್ರದಲ್ಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ, ಅವರು ಈ ರೀತಿ ನಿರ್ದೇಶನ ನೀಡಿದರು; “ಕಳೆದ 20 ವರ್ಷಗಳಲ್ಲಿ ಧರ್ಮಸ್ಥಳದಿಂದ ಕಾಣೆಯಾದ ಮಹಿಳೆಯರು ಮತ್ತು ಹುಡುಗಿಯರ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ತೆಗೆದುಕೊಂಡ ಕ್ರಮಗಳ ಕುರಿತು ಏಳು ದಿನಗಳಲ್ಲಿ ವಿವರವಾದ ವರದಿಯನ್ನು ಸಲ್ಲಿಸಿ. ಎಷ್ಟು ಜನರನ್ನು ಪತ್ತೆಹಚ್ಚಲಾಗಿದೆ? ಅತ್ಯಾಚಾರ ಮತ್ತು ಕೊಲೆ ಸೇರಿದಂತೆ ಅಸ್ವಾಭಾವಿಕ ಸಾವಿನ ಪ್ರಕರಣಗಳು ಎಷ್ಟು? ಎಲ್ಲಾ ಮಾಹಿತಿ ನೀಡಿ.” ಈ ಬೆಳವಣಿಗೆ ಆಗುತ್ತಿದ್ದಂತೆಯೇ, ರಾಜ್ಯ ಸರಕಾರ ಈ ವಿಚಾರವನ್ನು ಪರಾಮರ್ಶಿಸಿ, ಕೊನೆಗೆ ಜುಲೈ 19 ರಂದು, ಪೊಲೀಸ್ ಮಹಾನಿರ್ದೇಶಕ ಡಾ. ಪ್ರಣಬ್ ಮೊಹಂತಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (SIT)ವೊಂದನ್ನು ರಚಿಸಿತು. ಮಹಿಳಾ ಆಯೋಗದ ನಿರ್ದೇಶನ ಮತ್ತು ನೈರ್ಮಲ್ಯ ಕಾರ್ಯಕರ್ತನ ಪ್ರಮಾಣವಚನದ ಹೇಳಿಕೆ ಆಧಾರದ ಮೇಲೆ ತನಿಖೆ ನಡೆಸುವ ಆದೇಶ ಹೊರಬಿತ್ತು.

Woman Commission

ಮಹಿಳಾ ಆಯೋಗದ ಅಧ್ಯಕ್ಷೆ ಬರೆದ ಪತ್ರ

ಇಲ್ಲಿ ಒಂದು ವಿಚಾರವನ್ನು ಹೇಳಲೇಬೇಕು. ಮೇಲ್ನೋಟಕ್ಕೆ ಕಣ್ಣಿಗೆ ಕಾಣುವ ವಿಚಾರಕ್ಕಿಂತ ಹೆಚ್ಚಿನದನ್ನು ಎಸ್‌ಐಟಿಗೆ ನೀಡಿದ ಆದೇಶದಲ್ಲಿ ಕಾಣಬಹುದು. ಮಹಿಳಾ ಆಯೋಗ ಯಾವ ಪದ ಬಳಕೆ ಮಾಡಿ ತನ್ನ ಆದೇಶವನ್ನು ಹೊರಡಿಸಿತ್ತೋ ಅದನ್ನು ನಕಲು ಮಾಡಿ ಸರಕಾರ ಆದೇಶ ಹೊರಡಿಸಿದಂತಿದೆ. “ಇಪ್ಪತಕ್ಕೂ ಹೆಚ್ಚಿನ ವರ್ಷ ಧರ್ಮಸ್ಥಳದಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆ ಕುರಿತಾಗಿ”– ಎನ್ನುವ ಅಂಶವನ್ನಿಟ್ಟುಕೊಂಡು ಸರಕಾರ ತನ್ನ ಆದೇಶ ಹೊರಡಿಸಿತ್ತು. ಆದನ್ನು ಓದಿದರೆ, ಸತತವಾಗಿ ಇಪ್ಪತ್ತು ವರ್ಷ ಧರ್ಮಸ್ಥಳದಲ್ಲಿ ಈ ರೀತಿಯ ದುರ್ವವ್ಯಹಾರ ನಡೆದಿದೆ ಎನ್ನುವಂತೆ ಭಾಸವಾಗುತ್ತದೆ! ಯಾವಾಗ ಆಗಸ್ಟ್ ಮೂರನೇ ವಾರದವರೆಗೂ ಒಂದು ಸಾಕ್ಷ್ಯಾಧಾರ ಸಿಗದಿದ್ದಾಗ ಸರಕಾರ ಎಚ್ಚೆತ್ತುಕೊಂಡು ತನ್ನ ವರಸೆ ಬದಲಾಯಿಸಿತು.

Govt Order Copy

ಸರ್ಕಾರದ ಆದೇಶ ಪ್ರತಿ

ಧರ್ಮಸ್ಥಳದ ಭಕ್ತರಿಗೆ ಆತಂಕ ಏಕಾಯ್ತು?

ಈ ವಿವಾದ ಪ್ರಾರಂಭವಾಗುವ ತಿಂಗಳುಗಳ ಮೊದಲು ಧರ್ಮಸ್ಥಳದ ಡಾ. ವೀರೇಂದ್ರ ಹೆಗ್ಗಡೆಯವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದು, ಸರಕಾರ ಜಾರಿಗೊಳಿಸಿದ್ದ ಶಕ್ತಿ ಯೋಜನೆಯನ್ನು ಹೊಗಳಿದ್ದರು. ಉಚಿತ ಸಾರಿಗೆ ಸೇವೆಯ ಕಾರಣದಿಂದಾಗಿ ಕರ್ನಾಟಕದ ಮೂಲೆ ಮೂಲೆಯಿಂದ ಮಹಿಳಾ ಭಕ್ತರು ಧರ್ಮಸ್ಥಳಕ್ಕೆ ಬರುತ್ತಿದ್ದಾರೆ, ಎಂದು ಹೇಳಿ ಸರಕಾರಕ್ಕೆ ಕೃತಜ್ಞತೆಯನ್ನು ತಿಳಿಸಿದ್ದರು. ಶಕ್ತಿ ಯೋಜನೆಯ ಯಶಸ್ಸಿಗೆ ಸಿಕ್ಕ  ಪುರಾವೆ ಇದು ಎಂದು ಸಿದ್ದರಾಮಯ್ಯನವರು ಹೇಳಿದ್ದರು. ವಿವಿಧ ಹಿನ್ನೆಲೆಗಳಿಂದ, ಬೇರೆ ಬೇರೆ ಊರಿಂದ ಧರ್ಮಸ್ಥಳಕ್ಕೆ ಬರುತ್ತಿರುವ ಸಾವಿರಾರು ಮಹಿಳೆಯರ ಭಕ್ತಿ ಅನನ್ಯ. ರಾಜಕೀಯ ಪಕ್ಷಗಳ ಬೃಹತ್​ ಸಮಾವೇಶಕ್ಕೆ ಜನ ಬಂದಂತೆ, ಇಲ್ಲಿಗೆ ಜನ ಬರುತ್ತಿಲ್ಲ. ಇಲ್ಲಿಗೆ ಬರುವವರು ನಿಜಾದ ಭಕ್ತರು ಎಂಬುದು ಮೇಲಿನ ಉದಾಹರಣೆಯಿಂದ ನಿರೂಪಿತವಾಯಿತು. ಇಂತಹ ಮಹಿಳೆಯರಿಗೆ ಮಂಜುನಾಥೇಶ್ವರನ ಬಗ್ಗೆಇರುವ ಆಳವಾದ ನಂಬಿಕೆ ಏನು ಎಂಬುದು ತಿಳಿದಂತಾಯಿತು. ಕುತೂಹಲಕಾರಿ ಅಂಶವೇನೆಂದರೆ, ದೇವಾಲಯವು ಶಿವನಿಗೆ ಸಮರ್ಪಿತವಾಗಿದ್ದರೂ, ಅದರ ಪೂಜೆ ನಡೆಸುವವರು ಶೈವೇತರ ಹಿಂದೂ ಸಂಪ್ರದಾಯಗಳ ಪುರೋಹಿತರು ಮತ್ತು ಅದರ ಆಡಳಿತವು ಜೈನ ಕುಟುಂಬ ಟ್ರಸ್ಟ್‌ನ ಕೈಲಿದೆ. ಯಾವಾಗ ಮಾಧ್ಯಮದಲ್ಲಿ ಬರುತ್ತಿರುವ ವರದಿಗಳು ದೇವಾಲಯದ ಟ್ರಸ್ಟ್ ವಿರುದ್ಧದ ಅಭಿಯಾನದಂತೆ ಕಾಣಲು ಶುರುವಾಯಿತೋ, ಆಗ ಭಕ್ತರು ಆತಂಕಕ್ಕೊಳಗಾದರು. ಅವರಿಗೆ, ಇದು ಕೇವಲ ಒಂದು ಆರೋಪವಾಗಿ ಕಾಣುತ್ತಿರಲಿಲ್ಲ. ತಮ್ಮ ನಂಬಿಕೆಯನ್ನೇ ಪ್ರಶ್ನಿಸಿದಂತಿತ್ತು. ಯಾರೋ ತಮ್ಮ ಭಕ್ತಿಯನ್ನು ಅಣಕವಾಡಿದಂತಿತ್ತು. ಯಾವಾಗ ಎಸ್‌ಐಟಿ ತನಿಖೆಯಲ್ಲಿ ಪುರಾವೆ ಸಿಗಲಿಲ್ಲವೋ ಆಗ ಜನರಿಗೆ ಆತಂಕವಾಯ್ತು. ಇದು ಬರೀ ಒಬ್ಬಿಬ್ಬರ ಹೇಳಿಕೆಯಿಂದ ಆದ ಬೆಳವಣಿಗೆ ಅಲ್ಲ, ತಮ್ಮ ನಂಬುಗೆಗೆ ಕೊಡಲಿ ಏಟುಕೊಡಲು ತಯಾರಾದ ಸೈನ್ಯದ ತುಕಡಿಯ ಒಂದು ಯೋಜನೆಯ ಭಾಗವಾಗಿರಬಹುದು ಎಂಬ ಭಯ ಹಲವರಿಗೆ ಕಾಡಿತು.

ಕೇರಳ ಚರ್ಚ್ ವಿವಾದೊಂದಿಗೆ ತುಲನೆ

ಈ ರೀತಿ ಬೆಳವಣಿಗೆ ಆದಾಗೆಲ್ಲ, ಕರ್ನಾಟಕದಲ್ಲೊಂದು ಕುತೂಹಲಕಾರಿ ಚರ್ಚೆ ನಡೆಯುತ್ತದೆ. ಸಮಾಜದ ಯಾವುದೇ ಸ್ತರದಲ್ಲಿ ಈ ರೀತಿಯ ಸಂಚಲನ ಮೂಡಿದಾಗೆಲ್ಲ, ಪ್ರಗತಿಪರರು ಪಕ್ಕದ ಕೇರಳದ ಉದಾಹರಣೆ ಕೊಟ್ಟು ಅವರು ಎಷ್ಟು ಪ್ರೌಢ ನಾಗರಿಕರು, ಅವರ ನಿಲುವು, ಅವರ ನಿರ್ಧಾರಗಳನ್ನು ನಾವು ಅಳವಡಿಸಿಕೊಳ್ಳುವಂತಿದ್ದರೆ ಎಂಬಂತೆ ಬಿಂಬಿಸಿ ನಮ್ಮಲ್ಲಿಯೇ ಕೀಳರಿಮೆ ಬಿತ್ತುವುದಷ್ಟೇ ಅಲ್ಲ, ನಮ್ಮನ್ನು ನಾವೇ ನೇಣುಗಂಬಕ್ಕೆ ಒಡ್ಡಿಕೊಳ್ಳಬೇಕು ಎನ್ನುವ ರೀತಿಯಲ್ಲಿ ಸಂಕಥನವನ್ನು ಹರಿಬಿಡುವುದು ಸರ್ವೇ ಸಾಮಾನ್ಯ. ಧರ್ಮಸ್ಥಳದ ವಿಚಾರಕ್ಕೆ ಸಂಬಂಧಿಸಿದಂತೆ-ಅದೂ ಕೂಡ ಧಾರ್ಮಿಕ ಕೇಂದ್ರದಲ್ಲಿ ನಡೆದಿದೆ ಎನ್ನುವ ಆರೋಪ ಬಂದಾಗ, ಕೇರಳದ ಕ್ರಿಶ್ಚಿಯನ್ ಸಮುದಾಯ ಈ ರೀತಿಯ ವಿವಾದವನ್ನು ಹೇಗೆ ನಿರ್ವಹಿಸಿತು ಎಂದು ಒಮ್ಮೆ ನೋಡಬೇಕು.

ಕೇರಳ ಅತ್ಯಂತ ವಿದ್ಯಾವಂತರ ನಾಡು. ಧರ್ಮಸ್ಥಳ ಘಟನೆಯ ಬಗ್ಗೆ ಕೇರಳದ ಹಲವಾರು ಸಂಸ್ಥೆಗಳು ಮತ್ತು ಮಾಧ್ಯಮಗಳು ತೀವ್ರ ಆಸಕ್ತಿವಹಿಸಿವೆ. ಅಲ್ಲಿ ಎಲ್ಲಾ ಧರ್ಮಗಳು ಸಶಕ್ತವಾಗಿವೆ. ಅಷ್ಟೇ ಅಲ್ಲ, ಸಮಾಜವಾದ ಮತ್ತು ಕಮ್ಯೂನಿಸಂ ಆಳವಾಗಿ ಬೇರು ಬಿಟ್ಟಿವೆ. ಈ ಹಿನ್ನೆಲೆಯಲ್ಲಿ, ಕ್ರಿಶ್ಚಿಯನ್ ಸಮಾಜದ ಎರಡು ಉದಾಹರಣೆಗಳನ್ನು ಇಲ್ಲಿ ಪ್ರಸ್ತಾಪಿಸುವುದು ಸೂಕ್ತ. 33 ವರ್ಷಗಳಿಗೂ ಹೆಚ್ಚು ಕಾಲ ಸನ್ಯಾಸಿನಿಯಾಗಿದ್ದ ಸಿಸ್ಟರ್ ಜೆಸ್ಮೆ, ತನ್ನ ಮೇಲಧಿಕಾರಿಗಳ ಕಿರುಕುಳದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದರು. ಅವರ ಆತ್ಮಚರಿತ್ರೆ ‘ಆಮೆನ್’ ಚರ್ಚ್‌ನೊಳಗೆ ನಡೆಯುತ್ತಿದ್ದ ಮಹಿಳೆಯರ ಶೋಷಣೆಯನ್ನು ಬಹಿರಂಗಪಡಿಸಿತು ಮತ್ತು ರಾಷ್ಟ್ರೀಯ ಗಮನ ಸೆಳೆಯಿತು. ಇದರಿಂದಾಗಿ ಅವರು ಬಹಳ ಕಷ್ಟ ಅನುಭವಿಸಿದ್ದು ಹಳೆಯ ಮಾತು. 2018 ರಲ್ಲಿ, ಅತ್ಯಾಚಾರ ಆರೋಪಗಳನ್ನು ಎದುರಿಸುತ್ತಿದ್ದ ಬಿಷಪ್ ಫ್ರಾಂಕೊ ಮುಲಕ್ಕಲ್ ವಿರುದ್ಧದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಸಿಸ್ಟರ್ ಲೂಸಿ ಕಲಪ್ಪುರ ಅವರನ್ನು ಚರ್ಚ್ನಿಂದ ಹೊರಹಾಕಲಾಯಿತು. ಆದರೆ ವಿಚಾರಣಾ ನ್ಯಾಯಾಲಯವು ಫ್ರಾಂಕೊ ಮುಲಕ್ಕಲ್ ಅವರನ್ನು ಎಲ್ಲ ಆರೋಪಗಳಿಂದ ಬಿಡುಗಡೆ ಮಾಡಿತು. ವಿಪರ್ಯಾಸವೆಂದರೆ, ಧರ್ಮಸ್ಥಳದಲ್ಲಿ ಮಹಿಳಾ ಹಕ್ಕುಗಳನ್ನು ಪ್ರತಿಪಾದಿಸುತ್ತಿರುವ ಕೇರಳ ಮೂಲದ ಸಮಾಜವಾದದ ಧ್ವನಿಗಳು ತಮ್ಮದೇ ಆದ ‘ಕೇರಳ ಮಾದರಿ’ಯನ್ನು ಕಡೆಗಣಿಸಿದಂತೆ ತೋರುತ್ತದೆ.

ಇದು ದೊಡ್ಡ ಕಾರ್ಯಸೂಚಿಯ ಭಾಗವೇ?

ಇದನ್ನು ಸಾಬೀತುಪಡಿಸಲು ನ್ಯಾಯಾಲಯವು ಒಪ್ಪಿಕೊಳ್ಳಬಹುದಾದ ಪುರಾವೆಗಳಿಲ್ಲದಿರಬಹುದು, ಆದರೆ ಧರ್ಮಸ್ಥಳದ ಈ ಬೆಳವಣಿಗೆಯಲ್ಲಿ ಭಾಗಿಯಾಗಿರುವ ವಿವಿಧ ಪ್ರಗತಿಪರ ಗುಂಪುಗಳ ನಡವಳಿಕೆಯು ದೊಡ್ಡ ಕಾರ್ಯಸೂಚಿಯ ಬಾಗವಾಗಿರುವ ಸಾಧ್ಯತೆಯನ್ನು ಎತ್ತಿ ತೋರಿಸುತ್ತದೆ. ಕೇರಳದ ಓರ್ವ ಸಂಸದನ ಹೆಸರು ಈ ವಿವಾದಕ್ಕೆ ಕೂಡ ತಳುಕು ಹಾಕಿಕೊಂಡಿದೆ.

ಇವರು ಯಾರು?

ಧರ್ಮಸ್ಥಳದಲ್ಲಿ ನೂರಾರು ಮಹಿಳೆಯರ ಅತ್ಯಾಚಾರ ಮತ್ತು ಕೊಲೆ ಆಗಿದೆ ಎನ್ನುವವರು ಯಾರು? ಇವರ ಹಿನ್ನೆಲೆ ಏನು? ಅವರು ಪದೇ ಪದೇ ದೊಡ್ಡ ಧಾರ್ಮಿಕ ಸಂಸ್ಥೆಗಳನ್ನೇ ಏಕೆ ಗುರಿಯಾಗಿಸಿ ಹೋರಾಡುತ್ತಾರೆ? ಸಾಮಾನ್ಯವಾಗಿ ಈ ರೀತಿಯ ವಿಚಾರದಲ್ಲಿ ಸಮಾಜವಾದಿ ಮತ್ತು ಪ್ರಗತಿಪರ ಚಿಂತಕರು ಕೈ ಜೋಡಿಸುವುದು ಹೊಸದೇನಲ್ಲ. ಆದರೆ ಇವರ ಜೊತೆ ರಿಯಲ್ ಎಸ್ಟೇಟ್ ಲಾಬಿಯ ಸದಸ್ಯರು ಕೈ ಜೋಡಿಸಿದ್ದರೆ ಏನಾಗಬಹುದು? ಧರ್ಮಸ್ಥಳ ವಿವಾದಕ್ಕೆ ಮೊದಲು, ಕೆಲ ವರ್ಷಗಳ ಹಿಂದೆ ಉಡುಪಿ ಕೃಷ್ಣ ಮಠದತ್ತ ಇವರ ಚಿತ್ತ ಹರಿದಿತ್ತು. ಅಲ್ಲಿ ತಮ್ಮ ಶಕ್ತಿಯನ್ನು ಪ್ರದರ್ಶಸಿದ್ದರು. ಧರ್ಮಸ್ಥಳದ ಬಗ್ಗೆ ಹೋರಾಡುತ್ತಿರುವವರು ಮತ್ತು ಉಡುಪಿ ಕೃಷ್ಣ ಮಠದ ವಿರುದ್ಧ ಕಿಡಿ ಕಾಯುತ್ತಿರುವವರು ಮೇಲ್ನೋಟಕ್ಕೆ ಬೇರೆ ಬೇರೆ. ಆದರೆ ಈ ಎಲ್ಲ ಗುಂಪುಗಳ ನಡುವೆ ಗಮನಾರ್ಹ ಸಾಮ್ಯತೆಯನ್ನು ಕಾಣಬಹುದು. ಈ ರೀತಿಯ ಹೋರಾಟ ಮಾಡುವ ನಾಯಕರು ಕೆಲವು ಗುಣಲಕ್ಷಣಗಳನ್ನು ಈ ರೀತಿ ಪಟ್ಟಿ ಮಾಡಬಹುದು: ಸೌಮ್ಯ, ಸ್ಪಷ್ಟ ಮಾತು, ವೈವಿಧ್ಯತೆಯಲ್ಲಿ ಏಕತೆಯ ಮಂತ್ರವನ್ನು ಪ್ರತಿಪಾದಿಸುವ ನಿಪುಣರು. ಅವರು ಸಂವಿಧಾನ ಮೌಲ್ಯಗಳನ್ನು ಎತ್ತಿಹಿಡಿಯಲು ಟೊಂಕ ಕಟ್ಟಿನಿಂತಂತೆ ಮೇಲ್ನೋಟಕ್ಕೆ ಕಾಣುತ್ತದೆ. ತಮ್ಮ ಸೈದ್ಧಾಂತಿಕ ಕಕ್ಷೆಗೆ ದೊಡ್ಡ ಜನಸಮೂಹವನ್ನು ಸೆಳೆಯುವ ನಿಪುಣರು. ಅವರು ಕೆಲವು ಬಲಪಂಥೀಯ ಸಂಘಟನೆಗಳಂತೆ ಉಗ್ರ ಹೇಳಿಕೆ ನೀಡುವವರಲ್ಲ. ಅಥವಾ ಬಲಪಂಥೀಯರಂತೆ, ಭಾವನಾತ್ಮಕವಾಗಿ ವಿಷಯ ಮಂಡಿಸಿ, ತುಂಬಾ ಕೆಳದರ್ಜೆಯ ಭಾಷೆ ಬಳಸುವ ಜನ ಇವರಲ್ಲ. ಇವರು ಗುಂಪಾಗಿ ಕಾರ್ಯನಿರ್ವಹಿಸುತ್ತಾರೆ. ಇಲ್ಲಿ ನೋಡಿ, ತುಳಿತಕ್ಕೊಳಗಾದ ಸಮುದಾಯದಿಂದ ಬಂದ ಚಿನ್ನಯ್ಯ ಮತ್ತು ಮೇಲ್ಜಾತಿ ಹಿನ್ನೆಲೆಯಿಂದ ಬಂದ ಸುಜಾತಾ ಭಟ್ ಅವರಂತಹ ವ್ಯಕ್ತಿಗಳು ಅವರ ಕೈಯಲ್ಲಿ ಸುಲಭವಾಗಿ ಕೈಗೊಂಬೆಗಳಾಗಿಬಿಡುತ್ತಾರೆ.

ರಾಜಕೀಯವಾಗಿ ಇವರು ಎಡ ಪಂಥದ ಬಗ್ಗೆ ಒಲವು ತೋರುವವರು. ಇದೇ ಕಾರಣಕ್ಕಾಗಿ 2023 ರ ವಿಧಾನಸಭಾ ಚುನಾವಣೆಗಳು ಮತ್ತು 2024 ರ ಲೋಕಸಭೆ ಚುನಾವಣೆಯಲ್ಲಿ ಬೆವರು ಸುರಿಸಿದ್ದಾರೆ. ರಾಜಕೀಯ ಪಕ್ಷವೊಂದಕ್ಕೆ ಸಕ್ರಿಯರಾಗಿ ಕೆಲಸ ಮಾಡಿದ್ದಾರೆ. ಅವರದು ಸಮಾಜವಾದದ ಬ್ರ್ಯಾಂಡ್. ಈ ಬ್ರಾಂಡ್ನಿಂದಾಗಿ, ಹಿಂದೂ ಧಾರ್ಮಿಕ ಸಂಸ್ಥೆಗಳು ಸಾಂವಿಧಾನಿಕ ನೈತಿಕತೆ ಎತ್ತಿ ಹಿಡಿಯುತ್ತಿಲ್ಲ ಎಂದು ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಜನರಿಗೆ ಅನುಮಾನ ಹುಟ್ಟಿಸುವಲ್ಲಿ ಯಶಸ್ವಿಯಾದರು.

ಆದರೆ ಈ ಬಾರಿ ಇವರು ಎಡವಿದ್ದೆಲ್ಲಿ ಎಂದರೆ, ಚಿನ್ನಯ್ಯ, ಸುಜಾತಾ ಭಟ್, ಜಯಂತ್ ಎಲ್ಲರೂ ಸುಳ್ಳು ಹೇಳುತ್ತಿದ್ದಾರೆ ಎಂಬುದು, ಎಸ್ಐಟಿಯ ತನಿಖೆಯಲ್ಲಿ ಹೊರಬಿದ್ದುದು. ವೈರುಧ್ಯದ ಹೇಳಿಕೆಗಳು, ಒಬ್ಬರ ಹೇಳಿಕೆಯನ್ನು ಮತ್ತೊಬ್ಬರ ತಿರಸ್ಕರಿಸುತ್ತಿರುವುದು, ತನಿಖೆಯ ಹಾದಿ ಹೀಗೆ ಸಾಗುತ್ತಿರುವಾಗ, ಜನರಿಗೆ ಗುಮಾನಿ ಶುರುವಾಯ್ತು.

ಎಸ್‌ಐಟಿ ತನಿಖೆಯ ಹರಹು ವಿಸ್ತರಿಸಿ

ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರ್ಕಾರ ಎಸ್‌ಐಟಿಯ ಕೆಲಸದಲ್ಲಿ ಹಸ್ತಕ್ಷೇಪ ಮಾಡಿದಂತೆ ಕಾಣುತ್ತಿಲ್ಲ. ಈ ವಿಚಾರದಲ್ಲಿ, ಸರಕಾರಕ್ಕೆ ಭೇಷ್ ಎನ್ನಲೇಬೇಕು. ಧರ್ಮಸ್ಥಳ ಘಟನೆಗೆ ನೇರವಾಗಿ ಸಂಬಂಧವಿರುವವರನ್ನು ಎಸ್‌ಐಟಿ ಈಗಾಗಲೇ ಬಂಧಿಸಿದೆ. ಆದರೆ ಎಸ್‌ಐಟಿಗೆ ನೀಡಿರುವ ಕಾರ್ಯಸೂಚಿಯ ಪ್ರಕಾರ ಅವರು ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಕೊಲೆಯ ಹಿಂದಿನ ರಹಸ್ಯವನ್ನು ಭೇದಿಸಬೇಕಾಗಿದೆ. ಇಲ್ಲಿಯೇ ಇದೆ ಚಮತ್ಕಾರ. ತನಗೆ ಅಧಿಕೃತವಾಗಿ ಕೊಟ್ಟಿರುವ ಕಾರ್ಯಸೂಚಿಯ (terms of reference) ಪ್ರಕಾರ ಎಸ್‌ಐಟಿ ಹಿಂದಿನ ಕೊಲೆಗಳ ರಹಸ್ಯ ಭೇದಿಸಬೇಕಾಗಿದೆ. ಯಾಕೆಂದರೆ, ನ್ಯಾಯಾಲಯದಲ್ಲಿ ಆತ ಕೊಟ್ಟ ಹೇಳಿಕೆ—ಕೊಲೆಯಾದ ಹೆಣ್ಣು ಮಕ್ಕಳ ಹೆಣವನ್ನು ಹೂತಿದ್ದೇನೆ- ಎನ್ನುವ ಮಾತು ಕೂಡ ಅದೇ ಅಲ್ಲವೇ? ಆ ಪ್ರಕಾರ, ಎಸ್ಐಟಿ ನ್ಯಾಯಾಲಯಕ್ಕೆ ಆ ಕುರಿತು ವರದಿ ನೀಡಬೇಕಾಗಿ ಬರಬಹುದು.

ಅದರ ಅರ್ಥ ಇಷ್ಟೆ: ಈ ಬಾರಿ ನಡೆದ ಬೆಳವಣಿಗೆಯ ಹಿಂದಿರುವ ಕೈಗಳನ್ನು ಹುಡುಕಿ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಈಗಿನ ಕಾರ್ಯಸೂಚಿಯ ಪ್ರಕಾರ ಆಗಲ್ಲ. ಆ ರೀತಿಯ ಆದೇಶವನ್ನು ಸರಕಾರ ನೀಡಿಲ್ಲ. ಈ ಹಿನ್ನೆಲೆಯಲ್ಲಿ, ಸರ್ಕಾರವು ವಿಸ್ತೃತ ಆದೇಶವನ್ನು ಹೊರಡಿಸುವುದು ಅನಿವಾರ್ಯ. ಅಲ್ಲದೆ, ನಿಜವಾದ ಪಿತೂರಿಗಾರರು ಯಾರು ಎಂಬುದನ್ನು ಕಂಡುಹಿಡಿಯಿರಿ ಎಂದು ಎಸ್‌ಐಟಿಗೆ ಸರಕಾರ ಹೇಳಬೇಕು. ಇಲ್ಲದಿದ್ದರೆ ಧರ್ಮಸ್ಥಳದ ವಿಚಾರ ಮುಗಿದ ನಂತರ ಬೇರೆ ಮತ್ತೊಂದು ಹಿಂದೂ ಪೂಜಾ ಸ್ಥಳಗಳನ್ನು ಗುರಿಯಾಗಿಸಿಕೊಂಡು ಇದೇ ರೀತಿಯ ಸಂಚು ಹೂಡಿ ಮತ್ತೆ ಕಾಣಿಸಿಕೊಳ್ಳಬಹುದಲ್ಲ? ಕರ್ನಾಟಕ ಪೊಲೀಸರು ಸುಭಗರು ಎಂದು ನಾವೇ ಶಹಬ್ಬಾಸ್​ಗಿರಿ ಕೊಟ್ಟುಕೊಂಡರೆ ಸಾಕೆ? ಪರಪ್ಪನ ಅಗ್ರಹಾರದಲ್ಲಿ ಇರುವ ಶಂಕಿತ ಭಯೋತ್ಪಾದನಾ ಆರೋಪಿ ತಪ್ಪಿಸಿಕೊಳ್ಳಲು ಮಾಡುತ್ತಿರುವ ಪ್ರಯತ್ನದ ಮಸಲತ್ತನ್ನು ಬಿಚ್ಚಿಟ್ಟಿದ್ದು ಕೇಂದ್ರದಿಂದ ಬಂದ ಎನ್​ಐಎ ತಂಡ. ಇದು ನಮ್ಮ ಪೊಲೀಸರಿಗೆ ಗೊತ್ತೇ ಇರಲಿಲ್ಲ. ಇನ್ನೊಂದು ವಿಚಾರ: ಬೇರೆ ರಾಜ್ಯದ ಸಂಸದರೋ, ಶಾಸಕರೋ ಇದರ ಹಿಂದಿದ್ದರೆ ಆಗ ಎಸ್ಐಟಿ ಏನು ಮಾಡಲಾಗದು. ಅಲ್ಲಿಯ ಸರಕಾರ ಸಹಕಾರ ನೀಡುತ್ತೆ ಎಂಬ ಭರವಸೆ ಇಲ್ಲ. ಹಾಗಾಗಿ ಎಸ್ಐಟಿ ಗೆ ಈಗ ಬಹಳ ದೊಡ್ಡ ಸವಾಲಿದೆ.

ಕಳೆದ ಎರಡು ತಿಂಗಳುಗಳಲ್ಲಿ ಲಕ್ಷಾಂತರ ಭಕ್ತರು ಅನುಭವಿಸಿದ ಸಂಕಷ್ಟವನ್ನು ಸರ್ಕಾರ ನಿಜವಾಗಿಯೂ ಪರಿಗಣಿಸಿ, ಧರ್ಮಸ್ಥಳ ದೇವಾಲಯ ಟ್ರಸ್ಟ್‌ನ ನಿಯಂತ್ರಣವನ್ನು ವಶಪಡಿಸಿಕೊಳ್ಳುವ ಗುರಿಯನ್ನು ಇಟ್ಟುಕೊಂಡು ಮಾಡಿದ ಪಿತೂರಿಯನ್ನು ತನಿಖೆ ಮಾಡಲು ಎಸ್‌ಐಟಿಗೆ ಅಧಿಕಾರ ನೀಡಬೇಕು. ಒಂದೊಮ್ಮೆ ಇದರ ಹಿಂದಿರುವ ಕಾಣದ ಕೈಗಳು ಪಕ್ಕದ ರಾಜ್ಯದಲ್ಲಿ ಕುಳಿತಿವೆ ಎಂದಾದರೆ ಧರ್ಮಸ್ಥಳದ ತನಿಖೆಯನ್ನು ಎನ್ಐಎಗೆ ಕೊಡುವುದು ಸಮಂಜಸ.

ಮಾಧ್ಯಮಗಳು ಏನಾದರೂ ಕಲಿತಿವೆಯೇ?

ಧರ್ಮಸ್ಥಳ ವಿರೋಧಿ ಅಭಿಯಾನಕ್ಕೆ ಅದರ ಆರಂಭಿಕ ದಿನಗಳಿಂದಲೂ ತುಪ್ಪ ಹಾಕಿ ಅದು ಆರದಂತೆ ನೋಡಿಕೊಂಡವರು ಮಾಧ್ಯಮದವರು. ಸಮಾಜದಲ್ಲಿ ಆದ ಅನ್ಯಾಯವನ್ನು ನೋಡಿ ಕಣ್ಮುಚ್ಚಿ ಕೂರಲಾಗದು. ಆದರೆ, ಧರ್ಮಸ್ಥಳದ ವಿಚಾರದಲ್ಲಿ ನಮ್ಮ ಮಾಧ್ಯಮಗಳ ನಡವಳಿಕೆ ಜನರನ್ನು ಬೆಚ್ಚಿ ಬೀಳುಸುವಂತಿದೆ. ಚಿನ್ನಯ್ಯ ಕೋರ್ಟ ಮುಂದೆ ಹೇಳಿಕೆ ನೀಡಿದ. ಅದಕ್ಕೂ ಮೊದಲೇ ಆಯ್ದ ಯೂಟ್ಯೂಬರ್ ಗಳಿಗೆ ಆತ ಕೊಟ್ಟ ಸಂದರ್ಶನಗಳ ಸರಣಿ ಜನರ ತಲೆಯಲ್ಲಿ ಸಂಶಯದ ಬೀಜ ಬಿತ್ತಲು ಸಾಕಾಗಿತ್ತು. ಮಾಧ್ಯಮಗಳಲ್ಲಿರುವವರಿಗೂ ಸಂಶಯದ ಬಿರುಗಾಳಿ ಮೊದಲೇ ಬೀಸಿತ್ತು.

ಈ ಬಾರಿ ಒಂದು ವಿಚಿತ್ರ ಬೆಳವಣಿಗೆ ಆಗಿದ್ದನ್ನು ಇಲ್ಲಿ ಗಮನಿಸಬಹುದು. ಧರ್ಮಸ್ಥಳದ ವಿಚಾರದಲ್ಲಿ ಅನೇಕ ‘ಗೋದಿ ಮೀಡಿಯಾ’ ಮತ್ತು ಮೋದಿ ವಿರೋಧಿ ಮಾಧ್ಯಮ ಬಣ ಕೈಜೋಡಿಸಿದ್ದು ವಿಶೇಷ. ಸಾಮಾನ್ಯವಾಗಿ ಈ ಎರಡೂ ಗುಂಪುಗಳು ಪರಸ್ಪರ ದಾಳಿ ಮಾಡಿಕೊಳ್ಳುವುದರಲ್ಲಿ ಎತ್ತಿದ ಕೈ. ಈ ಎರಡೂ ಗುಂಪುಗಳು ಪತ್ರಿಕೋದ್ಯಮದ ಗುಣಮಟ್ಟವನ್ನು ಕಡಿಮೆ ಮಾಡುತ್ತಿವೆ ಎಂದು ಪರಸ್ಪರ ದೂಷಿಸುವುದರಲ್ಲಿ ತೊಡಗಿರುವುದನ್ನು ನಾವು ಯಾವಾಗಲೂ ಕಾಣುತ್ತೇವೆ. ಆದರೆ ಇಲ್ಲಿ ಈ ಎರಡು ಗುಂಪುಗಳು ಸಾಮಾನ್ಯ ನೆಲೆಯನ್ನು ಕಂಡುಕೊಂಡವು. ಇಬ್ಬರೂ ಯಾವ ನೈತಿಕ ಮೌಲ್ಯದ ಬಗೆಗೂ ತಲೆಕಡೆಸಿಕೊಳ್ಳದೇ ಬರೆದಿದ್ದೇ ಬರೆದಿದ್ದು. ಮೋದಿ ವಿರೋಧಿ ಬಣ ಈ ಬಾರಿ ವಿಚಾರವನ್ನು ಅಂತರಾಷ್ಟ್ರೀಯ ಮಾಧ್ಯಮಗಳ ಮಡಿಲಿಗೆ ಹಾಕಿ ಖುಷಿ ಪಟ್ಟಿದ್ದನ್ನು ನಾವು ನೋಡಿದೆವು. ಮಾಧ್ಯಮದಲ್ಲಿ ಕುಸಿಯುತ್ತಿರುವ ನೈತಿಕ ಮೌಲ್ಯದ ಬಗ್ಗೆ ತಲೆಕೊಡಿಸಿಕೊಂಡು, ವಿರೋಧ ಪಕ್ಷವಾಗಿ ಕೆಲಸ ಮಾಡುತ್ತಿದ್ದೇವೆ ಎಂದುಕೊಂಡಿರುವ ಮಾಧ್ಯಮಗಳಿಗೆ ಧರ್ಮಸ್ಥಳದ ಕೇಸ್ ಸಿಕ್ಕಿದ್ದು ಬಹಳ ಖುಷಿ ಕೊಟ್ಟಂತಿದೆ. ಮೋದಿ ಸರಕಾರದಿಂದ ರಾಜ್ಯ ಸಭೆಗೆ ನಾಮ ನಿರ್ದೇಶಿತವಾಗಿರುವ ವಿರೇಂದ್ರ ಹೆಗ್ಗಡೆ ಅವರನ್ನು ಖೆಡ್ಡಾಕ್ಕೆ ಕೆಡವಲು ಆ ಮೂಲಕ ಮೋದಿಯನ್ನು ಹಣಿಯಲು ಅವರ ಯೋಜನೆ ತಯಾರಾಗಿದ್ದು ಕೇರಳದ ಮಾಧ್ಯಮಗಳು ಇದನ್ನು ಪ್ರಸಾರ ಮಾಡಿದವು ಎಂಬುದನ್ನು ನೋಡಿದಾಗ ಗೊತ್ತಾಗುತ್ತದೆ. ಅಂದರೆ, ಪ್ರಭುತ್ವದ ವಿರುದ್ಧ (anti-establishment) ಧ್ವನಿ ಎತ್ತುವಾಗ ಕೂಡ ಇದೇ ಮಾದರಿಯಲ್ಲಿ ನೆಲೆಯನ್ನು ಗುರುತಿಸಿಕೊಳ್ಳುತ್ತಾರೆ, ಕಾರ್ಯಸೂಚಿಯನ್ನು ಜಾರಿಗೆ ತರುತ್ತಾರೆ. ಈ ಬಾರಿ ತಮ್ಮದು ಹಿತ್ತಾಳೆ ಕಿವಿ ಎಂಬುದನ್ನು ಈ ಮಾಧ್ಯಮಗಳು ನಿರೂಪಿಸಿದವು.

ಮುಂದೇನು?

ಇವತ್ತು ನಿಂತು ಹಿಂತಿರುಗಿ ನೋಡಿದರೆ. ಧರ್ಮಸ್ಥಳದ ಘಟನೆಯು ಪ್ರಗತಿಪರ ಗುಂಪುಗಳಿಗೆ ತಿರುಗುಬಾಣವಾದಂತೆ ಭಾಸವಾಗುತ್ತದೆ. ಹಿನ್ನಡೆ ಆಗಿರಬಹುದು. ಆದರೆ, ಮುಂದೇನಾಗುತ್ತೆ ಎನ್ನುವುದು ಗೊತ್ತಿಲ್ಲ. ಈ ಬೃಹತ್ ಶಕ್ತಿಗಳ ಕಾರ್ಯಸೂಚಿಯನ್ನು ನೋಡಿದರೆ, ಅವರು ಸೋಲೋಪ್ಪಿಕೊಳ್ಳುವ ಜಾಯಮಾನದವರಲ್ಲ. ಅವರು ಮೂಲೆ ಹಿಡಿದು ಕುಳಿತುಕೊಳ್ಳುವವರಲ್ಲ. ಹೊಸ ಸಮಸ್ಯೆಗಳು ಮತ್ತು ಅದಕ್ಕೆ ತಕ್ಕುದಾದ ಹೊಸ ನಿರೂಪಣೆ-ಹೀಗೆ ಹಿಂದೂ ಪೂಜಾ ಸ್ಥಳಗಳ ವಿರುದ್ಧ ಹೊಸ ಅಭಿಯಾನಗಳೊಂದಿಗೆ ಮತ್ತೆ ಹಿಂತಿರುಗುತ್ತಾರೆ.

ಇಂದು ಧರ್ಮಸ್ಥಳದ ವಿಚಾರ ಇರಬಹುದು, ನಾಳೆ ಉಡುಪಿ ಬರಬಹುದು. ಇಲ್ಲೆಲ್ಲ ವಿಚಾರ ಒಂದೆ: ಸಾಂವಿಧಾನಿಕ ಮೌಲ್ಯ ಎತ್ತಿ ಹಿಡಿಯುವಲ್ಲಿ ಹಿಂದೂ ಧಾರ್ಮಿಕ ಕೇಂದ್ರಗಳು ವಿಫಲವಾಗಿವೆ ಎಂಬ ಸಂಕಥನ. ಹಿಂದೂಗಳಲ್ಲಿ ಇರುವ ಆಂತರಿಕ ವಿಭಜನೆಯ ಅರಿವು ಅವರಿಗಿದೆ. ಇವರು ಸಾಮೂಹಿಕ ಪ್ರತಿರೋಧ ಮಾಡಲೊಲ್ಲರು ಎಂಬುದನ್ನು ಪ್ರಗತಿಪರರು ಅರ್ಥಮಾಡಿಕೊಂಡಿದ್ದಾರೆ. ಬಲವಾದ ರಾಜಕೀಯ ಬೆಂಬಲ ಇರುವ ಇವರು ಮತ್ತೆ ತಮ್ಮ ಪ್ರಯತ್ನವನ್ನು ಮುಂದುವರೆಸುವ ಎಲ್ಲಾ ಸಾಧ್ಯತೆ ಕಂಡು ಬರುತ್ತಿದೆ.

No Comments

Leave A Comment