ಇನ್ನೂ ಎರಡು-ಮೂರು ಜನ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆಯಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ರಾಜ್ಯ ವಿಪತ್ತು ನಿರ್ವಹಣಾ ಪಡೆ ಹಾಗೂ ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಮಂಡಿ ಜಿಲ್ಲಾಧಿಕಾರಿ ಅಪೂರ್ವ್ ದೇವಗನ್ ತಿಳಿಸಿದ್ದಾರೆ. ಭಾರಿ ಮಳೆ ಹಿನ್ನೆಲೆ ಶಿಮ್ಲಾ, ಕಾಂಗ್ರಾ ಮತ್ತು ಸಿರಮೌರ್ ಜಿಲ್ಲೆಗಳಲ್ಲಿ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಬುಧವಾರ ರಜೆ ಘೋಷಿಸಲಾಗಿದೆ.
4 ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ 1,337 ರಸ್ತೆಗಳಲ್ಲಿ ಸಂಚಾರ ಸ್ಥಗಿತಗೊಂಡಿದೆ. ಅವುಗಳಲ್ಲಿ ಮಂಡಿಯಲ್ಲಿ–282 , ಶಿಮ್ಲಾದಲ್ಲಿ–255 ,ಚಂಬಾದಲ್ಲಿ 239, ಕುಲ್ಲು 205 ಮತ್ತು ಸಿರಮೌರ್ ಜಿಲ್ಲೆಯ 140 ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ 3 (ಮಂಡಿ-ಧರಂಪುರ್ ರಸ್ತೆ ), ರಾಷ್ಟ್ರೀಯ ಹೆದ್ದಾರಿ 305 (ಆಸ್ಟ್-ಸೈಂಜ್), ರಾಷ್ಟ್ರೀಯ ಹೆದ್ದಾರಿ 5 (ಹಳೆಯ ಹಿಂದೂಸ್ತಾನ್-ಟಿಬೆಟ್ ರಸ್ತೆ ) ಮತ್ತು ರಾಷ್ಟ್ರೀಯ ಹೆದ್ದಾರಿ 707 (ಹಟ್ಕೋಟಿ–ಪೋಂಟಾ) ಗಳಲ್ಲಿಯೂ ಸಂಚಾರ ಸ್ಥಗಿತಗೊಂಡಿದೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (ಎಸ್‌ಇಒಸಿ) ತಿಳಿಸಿದೆ.
ಶಿಮ್ಲಾದಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಜಿಲ್ಲೆಯಾದ್ಯಂತ ಹಲವಾರು ಸ್ಥಳಗಳಲ್ಲಿ ಭೂಕುಸಿತ ಸಂಭವಿಸುವ ಸಾಧ್ಯತೆ ಹೆಚ್ಚಿದೆ ಎಂದು ಉಪ ಆಯುಕ್ತ ಅನುಪಮ್ ಕಶ್ಯಪ್ ಮಂಗಳವಾರ ಸಂಜೆ ಹೊರಡಿಸಿದ ಆದೇಶದಲ್ಲಿ ತಿಳಿಸಿದ್ದಾರೆ.