3,000 ಕೋ.ರೂ ಸಾಲ ವಂಚನೆ ಕೇಸು: Anil Ambani ಒಡೆತನದ ಕಂಪೆನಿ, Yes Bank ಮೇಲೆ ಇಡಿ ದಾಳಿ
ಖ್ಯಾತ ಉದ್ಯಮಿ ಅನಿಲ್ ಅಂಬಾನಿ ಅವರ ಒಡೆತನದ ಕಂಪನಿಗಳ ಸಮೂಹ ಮತ್ತು ಯೆಸ್ ಬ್ಯಾಂಕ್ ಒಳಗೊಂಡ 3,000 ಕೋಟಿ ರೂಪಾಯಿಗೂ ಹೆಚ್ಚಿನ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಗುರುವಾರ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ರಿಲಯನ್ಸ್ ಕಮ್ಯುನಿಕೇಷನ್ಸ್ (ಆರ್‌ಕಾಮ್) ನ ಸಾಲ ಖಾತೆಯನ್ನು ವಂಚನೆ ಎಂದು ಲೇಬಲ್ ಮಾಡಿ ಮಾಜಿ ಪ್ರವರ್ತಕ ಅನಿಲ್ ಅಂಬಾನಿ ಅವರನ್ನು ಆರ್‌ಬಿಐಗೆ ವರದಿ ಮಾಡುವ ಎಸ್‌ಬಿಐ ಕ್ರಮ ಕೈಗೊಂಡ ನಂತರ ಈ ದಾಳಿ ನಡೆದಿದೆ.
ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಜೂನ್ 2019 ರಿಂದ ಆರ್‌ಕಾಮ್ ದಿವಾಳಿಯಾಗಿದೆ.ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ (PMLA) ಸೆಕ್ಷನ್ 17 ರ ಅಡಿಯಲ್ಲಿ ಇಡಿ ಇಂದು ಪ್ರಾರಂಭಿಸಿದ ಶೋಧ ಕಾರ್ಯಾಚರಣೆಯಲ್ಲಿ 35 ಕ್ಕೂ ಹೆಚ್ಚು ಕಡೆಗಳಲ್ಲಿ, 50 ಕಂಪನಿಗಳು ಮತ್ತು 25 ಕ್ಕೂ ಹೆಚ್ಚು ವ್ಯಕ್ತಿಗಳ ಮೇಲೆ ಶೋಧ ಮತ್ತು ವಿಚಾರಣೆ ನಡೆಸಲಾಗಿದೆ ಎಂದು ಅಧಿಕೃತ ಮೂಲಗಳು ಎಎನ್‌ಐ ಸುದ್ದಿಸಂಸ್ಥೆಗೆ ತಿಳಿಸಿವೆ.
ಸಿಬಿಐ ಎಫ್‌ಐಆರ್‌ಗಳನ್ನು ದಾಖಲಿಸಿದ ನಂತರ, ಇಡಿ ರಿಲಯನ್ಸ್ ಅನಿಲ್ ಅಂಬಾನಿ ಗ್ರೂಪ್ ಕಂಪನಿಗಳು ನಡೆಸಿದ ಹಣ ವರ್ಗಾವಣೆಯ ಅಪರಾಧದ ತನಿಖೆಯನ್ನು ಪ್ರಾರಂಭಿಸಿದೆ ಎಂದು ಮೂಲಗಳು ಎಎನ್‌ಐಗೆ ತಿಳಿಸಿವೆ.
ರಾಷ್ಟ್ರೀಯ ವಸತಿ ಬ್ಯಾಂಕ್, ಸೆಬಿ, ರಾಷ್ಟ್ರೀಯ ಹಣಕಾಸು ವರದಿ ಪ್ರಾಧಿಕಾರ (ಎನ್‌ಎಫ್‌ಆರ್‌ಎ) ಮತ್ತು ಬ್ಯಾಂಕ್ ಆಫ್ ಬರೋಡಾದಂತಹ ಇತರ ಸಂಸ್ಥೆಗಳು ಇಡಿ ಜೊತೆ ಮಾಹಿತಿಯನ್ನು ಹಂಚಿಕೊಂಡಿವೆ ಎಂದು ಅವರು ಹೇಳಿದರು.