‘ಒಂದು ವಾರದಲ್ಲಿ ಲಿಖಿತ ವಾದ ಸಲ್ಲಿಸಿ’: ನಟ ದರ್ಶನ್ ಜಾಮೀನು ಆದೇಶ ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್
ನವದೆಹಲಿ/ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿ ಹೈಕೋರ್ಟ್ ಜಾಮೀನು ಮೇಲೆ ಬಿಡುಗಡೆ ಹೊಂದಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ, ಪವಿತ್ರಾ ಗೌಡ ಸೇರಿ ಏಳು ಆರೋಪಿಗಳ ಜಾಮೀನು ರದ್ದು ಅರ್ಜಿಯ ತೀರ್ಪನ್ನು ಸುಪ್ರೀಂ ಕೋರ್ಟ್ ಗುರುವಾರ ಕಾಯ್ದಿರಿಸಿದೆ.
ದರ್ಶನ್ ಸೇರಿ 7 ಆರೋಪಿಗಳ ಜಾಮೀನನ್ನು ರದ್ದು ಮಾಡುವಂತೆ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್ಗೆ ಮನವಿ ಮಾಡಿತ್ತು. ವಾದ-ಪ್ರತಿವಾದ ಆಲಿಸಿದ ಕೋರ್ಟ್ ಈಗ ತೀರ್ಪನ್ನು ಕಾಯ್ದಿರಿಸಿದೆ. 10 ದಿನಗಳ ಬಳಿಕವಷ್ಟೇ ದರ್ಶನ್ ಜಾಮೀನು ಅರ್ಜಿ ಬಗ್ಗೆ ತೀರ್ಪು ನೀಡುವುದಾಗಿ ಕೋರ್ಟ್ ಹೇಳಿದೆ.
ಕೋರ್ಟ್ನಲ್ಲಿ ಇಂದು ಆಗಿದ್ದೇನು?
ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ಗೆ ಜಾಮೀನು ನೀಡಿ ಹೈಕೋರ್ಟ್ ಕಳೆದ ವರ್ಷ ಆದೇಶ ನೀಡಿತ್ತು. ಈ ಆದೇಶವನ್ನು ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್ನಲ್ಲಿ ಪ್ರಶ್ನೆ ಮಾಡಿತ್ತು.ಅರ್ಜಿಯನ್ನು ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ , ನ್ಯಾಯಮೂರ್ತಿ ಆರ್. ಮಹದೇವನ್ ಅವರಿದ್ದ ಪೀಠ ವಿಚಾರಣೆ ನಡೆಸಿತು.
ಇಂದು ರಾಜ್ಯ ಸರ್ಕಾರದ ಪರ ವಕೀಲ ಸಿದ್ಧಾರ್ಥ್ ಲೂಥ್ರಾ ಮೊದಲು ವಾದ ಮಂಡಿಸಿದರು. ಇದು ಭೀಕರ ಕೊಲೆ ಕೇಸ್. ಏಳು ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ಜಾಮೀನು ರದ್ದಾಗಬೇಕು ಎನ್ನುವುದು ನಮ್ಮ ವಾದ. ಅಪಾರ್ಟ್ ಮೆಂಟ್ ಬಳಿ ಡೆಡ್ ಬಾಡಿ ಸಿಕ್ಕಿದೆ ಎಂದು ವಾದಿಸಿ ಏಳು ಆರೋಪಿಗಳ ಜಾಮೀನನ್ನು ಮಾತ್ರ ರದ್ದು ಮಾಡಬೇಕು ಎಂದು ಕೋರಿದರು.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಗೆ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿರಲಿಲ್ಲ. ಹೀಗಾಗಿ, ಅವರು ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ನೀಡಿ ಎಂದು ಸರ್ಕಾರಿ ಪರ ವಕಲೀರ ನ್ಯಾಯಮೂರ್ತಿಗಳು ಸೂಚಿಸಿದರು. ಆಗ ಸಿದ್ದಾರ್ಥ್ ಲೂತ್ರಾ ಅವರು ಎಲ್ಲವನ್ನೂ ವಿವರವಾಗಿ ಹೇಳಿದರು.
ದರ್ಶನ್ ಹಾಗೂ ಪವಿತ್ರಾ ಸಂಬಂಧ, ದರ್ಶನ್ ಕೊಲೆಯಲ್ಲಿ ಭಾಗಿ ಆಗಿದ್ದಕ್ಕೆ ಸಿಕ್ಕ ಸಾಕ್ಷಿಗಳು, ಜಾಮೀನು ಸಿಕ್ಕ ಬಳಿಕ ಸಾಕ್ಷಿಗಳ ಜೊತೆ ದರ್ಶನ್ ಕಾಣಿಸಿಕೊಂಡಿದ್ದು ಸೇರಿದಂತೆ ಎಲ್ಲವನ್ನೂ ವಿವರಿಸಿದರು.