ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ
CET ಜನಿವಾರ ವಿವಾದ: ರಾಜ್ಯದಲ್ಲಿ ಭುಗಿಲೆದ್ದ ಆಕ್ರೋಶ, ಪ್ರತಿಭಟನೆ
ಬೆಂಗಳೂರು: ಬೀದರ್ ಮತ್ತು ಶಿವಮೊಗ್ಗದಲ್ಲಿ ಸಿಇಟಿ ಪರೀಕ್ಷಾ ಕೊಠಡಿಗಳಿಗೆ ಪ್ರವೇಶಿಸುವ ಮೊದಲು ವಿದ್ಯಾರ್ಥಿಗಳು ತಮ್ಮ ಜನಿವಾರ (ಪವಿತ್ರ ದಾರ) ತೆಗೆಯುವಂತೆ ಒತ್ತಾಯಿಸಲಾಗಿದೆ ಎಂಬ ವರದಿಗಳ ನಂತರ ರಾಜ್ಯದಲ್ಲಿ ಆಕ್ರೋಶ ಭುಗಿಲೆದ್ದಿದ್ದು, ಧಾರ್ಮಿಕ ಸಂಘಟನೆಗಳು, ರಾಜಕೀಯ ಮುಖಂಡರು ಮತ್ತು ನಾಗರಿಕ ಸಮಾಜದಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಜನಿವಾರ ತೆಗೆಯುವಂತೆ ಅಧಿಕಾರಿಗಳು ಸೂಚಿಸಿದ್ದು. ಈ ಕುರಿತ ಸಿಸಿಟಿವಿ ದೃಶ್ಯಾವಳಿಗಳು ವೈರಲ್ ಆಗುತ್ತಿವೆ. ಬೀದರ್ ಅಷ್ಟೇ ಆಲ್ಲದೆ, ಶಿವಮೊಗ್ಗದಲ್ಲೂ ಇಂತಹದ್ದೇ ಘಟನೆ ನಡೆದಿದೆ. ಇದರ ಬೆನ್ನಲ್ಲೇ ಆಕ್ರೋಶ ವ್ಯಕ್ತವಾಗುತ್ತಿದೆ.
ಕಲಬುರಗಿ ಮತ್ತು ಬೀದರ್‌ನಲ್ಲಿ ಬ್ರಾಹ್ಮಣ ಸಂಘಟನೆಗಳ ಸದಸ್ಯರು ಶನಿವಾರ ಪ್ರತಿಭಟನೆ ನಡೆಸಿದ್ದು, ಟೈಯರ್ ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದರು.
ಅಧಿಕಾರಿಗಳ ವರ್ತನೆ ಸಂವಿಧಾನ ನಿಯಮಗಳ ಉಲ್ಲಂಘನೆ ಮತ್ತು ಹಿಂದೂ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಕಲಬುರಗಿ ಬ್ರಾಹ್ಮಣ ಸಂಘದ ಅಧ್ಯಕ್ಷ ಪಾಂಡುರಂಗ ದೇಶಮುಖ್ ಅವರು ಗುಡುಗಿದ್ದಾರೆ.
ಈ ನಡುವೆ ದಾವಣಗೆರೆ ಹಾಗೂ ಚಿತ್ರದುರ್ಗದಲ್ಲೂ ಪ್ರತಿಭಟನೆ ನಡೆದವು. ಮೈಸೂರಿನಲ್ಲೂ ಸುಮಾರು 300 ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗುತ್ತಾ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ವಿವಾದ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು, ಕರ್ನಾಟಕದಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ವೇಳೆ ವಿದ್ಯಾರ್ಥಿಗಳ ಜನಿವಾರ ತೆಗೆಸಿರುವ ವಿಷಯ ನನಗೆ ತಿಳಿಯಿತು. ಇದು ಜನರ ನಂಬಿಕೆಯ ಮೇಲಿನ ದಾಳಿ. ಕರ್ನಾಟಕದಲ್ಲಿ ಹುಸಿ ಜಾತ್ಯತೀತ ಸರ್ಕಾರದ ಮನೋಭಾವವನ್ನು ನೀವು ನೋಡಬಹುದು. ಅಧಿಕಾರಿಗಳು ಕೆಲವು ವಿದ್ಯಾರ್ಥಿಗಳಿಂದ ಜನಿವಾರ ತೆಗೆಯುವಂತೆ ಮಾಡಿದ್ದಾರೆ. ಒಂದು ಕೇಂದ್ರದಲ್ಲಿ ಜನಿವಾರ ತೆಗೆಯಲು ಸೂಚಿಸಿದ್ದರೆ ಮತ್ತೊಂದು ಕೇಂದ್ರದಲ್ಲಿ ಜನಿವಾರವನ್ನು ಕತ್ತರಿಸಲಾಗಿದೆ. ಇದು ತುಂಬಾ ಖಂಡನೀಯ. ಸಂಬಂಧಪಟ್ಟ ಪ್ರಾಧಿಕಾರ ಈ ಬಗ್ಗೆ ವಿಷಾದ ವ್ಯಕ್ತಪಡಿಸಿದೆ ಮತ್ತು ಕ್ಷಮೆ ಯಾಚಿಸಿದೆ. ಆದರೆ, ಪರೀಕ್ಷೆ ಬರೆಯಲು ಅವಕಾಶ ಸಿಗದ ವ್ಯಕ್ತಿಗೆ ಪರಿಹಾರವೇನು? ಎಂದು ಪ್ರಶ್ನಿಸಿದರು.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಸರ್ಕಾರ ಸಿಬ್ಬಂದಿಯನ್ನು ಅಮಾನತು ಮಾಡಿ ಕೈ ತೊಳೆದುಕೊಂಡಿದೆ. ಇದು ಸರಿಯಲ್ಲ. ಕೇವಲ ಬ್ರಾಹ್ಮಣರಷ್ಟೇ ಜನಿವಾರ ಹಾಕುವುದಿಲ್ಲ. ಇದೊಂದು ಧಾರ್ಮಿಕ ನಂಬಿಕೆಯಾಗಿದ್ದು, ಇದರ ಮೇಲೆ ಪ್ರಹಾರ ನಡೆಸಿದೆ. ಇದನ್ನ ಗಂಭೀರವಾಗಿ ಪರಿಗಣಿಸಿ ಸರ್ಕಾರ ಇದಕ್ಕೊಂದು ಸ್ಪಷ್ಟ ಮಾರ್ಗಸೂಚಿ ಹೊರಡಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಶುರುವಾದ ಜಾತಿಗಣತಿ ವಿವಾದ, ಆಡಳಿತ ವೈಫಲ್ಯ ಮರೆಮಾಚಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಏನಾದರೊಂದು ವಿಷಯಾಂತರ ಮಾಡುತ್ತಲೇ ಇರುತ್ತದೆ ಎಂದು ಟೀಕಿಸಿದರು.
ಜೆಡಿಎಸ್ ಯುವ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿಯವರು ಮಾತನಾಡಿ, ಜಾತಿ, ಧರ್ಮದ ನಂಬಿಕೆ ಗೌರವಿಸುವುದನ್ನು ಕಲಿಯಬೇಕು. ಜನಿವಾರ ಹಾಕಿದ್ದಕ್ಕೆ ಪರೀಕ್ಷೆಗೆ ಕೂರಿಸದೇ ಇರುವುದು ಸರಿಯಲ್ಲ. ಈ ಘಟನೆಯನ್ನು ನಾನು ಖಂಡಿಸುತ್ತೇನೆ. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಸರಕಾರ ಎಚ್ಚರಿಕೆ ವಹಿಸಬೇಕು ಎಂದು ಹೇಳಿದ್ದಾರೆ.
ಜನಿವಾರ ಹಾಕಿಕೊಂಡು ಕಾಪಿ ಹೊಡೆಯೋಕೆ ಆಗುತ್ತಾ? ಜನಿವಾರದಲ್ಲಿ ಕಾಪಿ ಚೀಟಿ ಇಟ್ಟುಕೊಂಡು ಹೋಗೋಕೆ ಆಗುತ್ತಾ? ಜನಿವಾರ ಇದ್ದರೆ ಏನು ಸಮಸ್ಯೆ? ಸ್ಮಾರ್ಟ್ ವಾಚ್ ಕಟ್ಟಿಕೊಂಡು ಬಂದರೆ ನೀವು ತೆಗೆಸಬೇಕು ಎನ್ನುವುದು ಸರಿ. ಆದರೆ, ಜನಿವಾರ ತೆಗೆದು ಒಂದು ಸಮುದಾಯಕ್ಕೆ ಅವಮಾನ ಮಾಡೋದು ಸರಿಯಲ್ಲ ಎಂದು ತಿಳಿಸಿದರು.
ಏತನ್ಮಧ್ಯೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಸ್ವಯಂಪ್ರೇರಿತ ಮಾಹಿತಿ ಪಡೆದುಕೊಂಡಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮತ್ತು ಸ್ಥಳೀಯ ಆಡಳಿತಗಳಿಂದ ತಕ್ಷಣದ ಕ್ರಮಗಳ ಕುರಿತ ವರದಿ ಸಲ್ಲಿಸುವಂತೆ ಕೋರಿದೆ.