ಜನವರಿ 18ರಿ೦ದ ಶೀರೂರು ಮಠಾಧೀಶರಾದ ಶ್ರೀವೇದವರ್ಧನ ಶ್ರೀಪಾದರ ಪ್ರಥಮ ಪರ್ಯಾಯ ಆರ೦ಭ-ಅದ್ದೂರಿಯ ಧಾನ್ಯ, ಶಿಖರ ಮುಹೂರ್ತ ಸ೦ಪನ್ನ…..ಉಡುಪಿ ಮೋಟಾರ್ಸ್ ನಲ್ಲಿ ಯಮಹಾ ಕಂಪೆನಿಯ ನೂತನ ರೆಟ್ರೋ ಮೊಡೆಲ್ ಬೈಕ್ ‘XSR 155 ಮಾರುಕಟ್ಟೆಗೆ ಬಿಡುಗಡೆ

ಉಡುಪಿ ಕೃಷ್ಣ ಮಠ ರಥ ಬೀದಿಯಲ್ಲಿ ಪ್ರಿ ವೆಡ್ಡಿಂಗ್, ಪೋಸ್ಟ್ ವೆಡ್ಡಿಂಗ್ ಫೋಟೊಶೂಟ್ ನಿಷೇಧ

ಉಡುಪಿ: ಏಪ್ರಿಲ್ 10: ಪ್ರಿ ವೆಡ್ಡಿಂಗ್ ಹಾಗೂ ಪೋಸ್ಟ್ ವೆಡ್ಡಿಂಗ್ ಫೋಟೋಶೂಟ್  ವಿಚಾರದಲ್ಲಿ ಉಡುಪಿ ಶ್ರೀ ಕೃಷ್ಣ ಮಠ ಮಹತ್ವದ ನಿರ್ಧಾರ ಕೈಗೊಂಡಿದೆ. ಕೃಷ್ಣ ಮಠದ ರಥ ಬೀದಿಯ ಆವರಣದಲ್ಲಿ ಪ್ರಿ ವೆಡ್ಡಿಂಗ್ ಹಾಗು ಪೋಸ್ಟ್ ವೆಡ್ಡಿಂಗ್ ಫೋಟೋಶೂಟ್ ನಿಷೇಧಿಸಿ ಪರ್ಯಾಯ ಪುತ್ತಿಗೆ ಮಠ ನಿರ್ಧಾರ ಪ್ರಕಟಿಸಿದೆ. ಬೆಳ್ಳಂಬೆಳಗ್ಗೆ ಹಾಗೂ ಸ್ವಾಮೀಜಿಗಳ ಓಡಾಟದ ವೇಳೆ ಮುಜುಗರದ ಸನ್ನಿವೇಶದ ಸೃಷ್ಟಿಯಾಗುವುದನ್ನು ತಪ್ಪಿಸುವುದಕ್ಕಾಗಿ ಮಠವು ಈ ಕ್ರಮ ಕೈಗೊಂಡಿದೆ.

ಕೃಷ್ಣ ಮಠದ ರಥಬೀದಿ ಪಾರಂಪರಿಕ ಕಟ್ಟಡಗಳು ಇರುವ ಜಾಗ. ಪ್ರಿ ವೆಡ್ಡಿಂಗ್ ಹಾಗೂ ಪೋಸ್ಟ್ ವೆಡ್ಡಿಂಗ್ ಫೋಟೋಶೂಟ್​​ ಹೆಸರಿನಲ್ಲಿ ಬೆಳ್ಳಂಬೆಳ್ಳಗ್ಗೆ ಮಠದ ಆವರಣದಲ್ಲಿ ಅಸಭ್ಯ ವರ್ತನೆ ಕಾಣಿಸುತ್ತಿದೆ. ಫೋಟೋಶೂಟ್ ನೆಪದಲ್ಲಿ ರಥಬೀದಿಯಲ್ಲಿ ಪ್ರೇಮ ಸಲ್ಲಾಪ ನಡೆಯುತ್ತಿದೆ. ಕೇರಳ ಬೆಂಗಳೂರು ಕಡೆಯಿಂದ ಬರುವ ಫೋಟೋಗ್ರಾಫರ್ಸ್ ಹಾವಳಿ ಹೆಚ್ಚಾಗಿದೆ. ಹೀಗಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಠದ ಅಧಿಕಾರಿಗಳು ತಿಳಿಸಿದ್ದಾರೆ.

ಅಷ್ಟಮಠಾಧೀಶರು ಓಡಾಡುವ ರಥಬೀದಿ ಇದಾಗಿದೆ. ನೂರಾರು ವರ್ಷಗಳಿಂದ ಯತಿಗಳು, ದಾಸರು ನಡೆದಾಡಿದ ಬೀದಿ ಇದಾಗಿದೆ. ಇದಕ್ಕೆ ಪಾವಿತ್ರ್ಯವಿದೆ. ಪ್ರತಿ ದಿನ ರಥ ಬೀದಿಯಲ್ಲಿ ಉತ್ಸವ ನಡೆಯುತ್ತದೆ. ಅಷ್ಟೇ ಅಲ್ಲದೆ ಇದು, ಅಷ್ಟಮಠಗಳು ಇರುವ ರಥಬೀದಿಯಾಗಿದೆ. ಇಲ್ಲಿ ಜೋಡಿಹಕ್ಕಿಗಳು ಸರಸ ಸಲ್ಲಾಪ ನಡೆಸುವುದು ಸರಿಯಲ್ಲ. ಹಾಗೆ ಮಾಡುವುದರಿಂದ ಧಾರ್ಮಿಕ ವಾತಾವರಣಕ್ಕೆ ಅಡ್ಡಿ ಆಗುತ್ತದೆ. ಹೀಗಾಗಿ ಮುಜುಗರದ ಸನ್ನಿವೇಶ ತಪ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಠ ತಿಳಿಸಿದೆ.

ಒಂದು ಕಡೆ ಧಾರ್ಮಿಕತೆ ಆಚರಣೆ ನಡೆಯುವ ಸ್ಥಳ ಇದಾಗಿದೆ. ಮತ್ತೊಂದು ಕಡೆ ವಿವಿಧ ಊರುಗಳಿಂದ ಬರುವ ಫೋಟೋಗ್ರಾಫರ್‌ಗಳು, ಜೋಡಿಗಳು ವೆಡ್ಡಿಂಗ್ ಫೋಟೋಶೂಟ್ ಹೆಸರಿನಲ್ಲಿ ಸಲ್ಲಾಪ ಮಾಡುತ್ತಾರೆ. ಇದೊಂತರ ವಿರೋಧಭಾಸವಾಗಿ ಕಾಣಿಸುತ್ತಿದೆ. ಒಂದೆಡೆ ಧಾರ್ಮಿಕ ಪ್ರಜ್ಞೆ ವೃದ್ಧಿಸುತ್ತಿದ್ದರೆ, ಮತ್ತೊಂದೆಡೆ ಅದಕ್ಕೆ ತದ್ವಿರುದ್ಧವಾದ ವಾತಾವರಣಕ್ಕೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಹೆಚ್ಚಾಗಿ ಕಠಿಣ ಕ್ರಮ ಕೈಗೊಳ್ಳಲೇ ಬೇಕಾಯಿತು ಎಂದು ಮಠದ ಅಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.

No Comments

Leave A Comment