
ಸದ್ಯದಲ್ಲೇ ಬ್ರಿಟಿಷ್ ಕಾಲದ ಟೋಪಿಗೆ ನಿವೃತ್ತಿ: ಕರ್ನಾಟಕ ಪೊಲೀಸರ ತಲೆ ಅಲಂಕರಿಸಲಿದೆ ಸ್ಮಾರ್ಟ್ ಹ್ಯಾಟ್
ಬೆಂಗಳೂರು, ಮಾರ್ಚ್ 30: ಕರ್ನಾಟಕ ಪೊಲೀಸ್ ಇಲಾಖೆಯ ಹೆಡ್ ಕಾನ್‌ಸ್ಟೆಬಲ್ ಹಾಗೂ ಕಾನ್ ಸ್ಟೆಬಲ್ಗಳು ಈಗಲೂ ಬ್ರಿಟಿಷ್ ಕಾಲದ ಟೋಪಿಯನ್ನು ಧರಿಸುತ್ತಾರೆ. ಈ ಟೋಪಿ ಬದಲಿಸುವ ಕೂಗು ಮೊದಲಿನಿಂದಲೂ ಕೇಳಿಬರುತ್ತಿತ್ತು. ಇದು ಪೊಲೀಸರ ಬಹುವರ್ಷಗಳ ಬೇಡಿಕೆ ಕೂಡ ಆಗಿತ್ತು. ಇದೀಗ ಅದಕ್ಕೆ ಸಮಯ ಬಂದಿದ್ದು, ದೊಡ್ಡ ಟೋಪಿ ಬದಲಾಗಿ ಸ್ಮಾರ್ಟ್ ಪೀಕ್ ಹ್ಯಾಟ್ ಹೆಡ್ ಕಾನ್‌ಸ್ಟೆಬಲ್ ಹಾಗೂ ಕಾನ್ ಸ್ಟೆಬಲ್ಗಳ ತಲೆಯನ್ನು ಅಲಂಕರಿಸಲಿದೆ. ಇಂತಹದೊಂದು ಸಾಹಸಕ್ಕೆ ಪೊಲೀಸ್ ಇಲಾಖೆ ದಿಟ್ಟ ಹೆಜ್ಜೆಯಿಟ್ಟಿದೆ.
ಅನಾದಿ ಕಾಲದಿಂದಲೂ ಬಳಸಿಕೊಂಡು ಬರುತ್ತಿರುವ ಟೋಪಿಯಿಂದ ಸಮಸ್ಯೆ ಜಾಸ್ತಿ ಎನ್ನಲಾಗುತ್ತಿದೆ. ರ್ಯಾಲಿ, ಪ್ರತಿಭಟನೆ ಅಥವಾ ಲಾಟಿ ಚಾರ್ಜ್ ಸಂದರ್ಭಗಳಲ್ಲಿ ಕಿರಿಕಿರಿ ಉಂಟಾಗುತ್ತಿದೆ. ತಲೆ ಮೇಲೆ ಸರಿಯಾಗಿ ನಿಲ್ಲಲ್ಲ. ಒಂದು ವೇಳೆ ಓಡುವಾಗ ಕೆಳಗೆ ಬಿದ್ದರೆ ಸಾರ್ವಜನಿಕವಾಗಿ ಅವಮಾನವಲ್ಲದೇ, ಇಲಾಖೆ ಸಮವಸ್ತ್ರಕ್ಕೆ ಅಗೌರವ ತೋರಿದಂತಾಗುತ್ತದೆ. ಹಾಗಾಗಿ ಟೋಪಿ ಬದಲಾವಣೆಗೆ ಅನೇಕ ವರ್ಷಗಳಿಂದ ಪೊಲೀಸರು ಬೇಡಿಕೆ ಇಡುತ್ತಿದ್ದರೂ ಈಡೇರಿರಲಿಲ್ಲ.