
ಅಮೆರಿಕದಿಂದ ಗಡೀಪಾರು ಆದ 119 ಭಾರತೀಯರ ಎರಡನೇ ತಂಡ ವಾರಾಂತ್ಯ ಆಗಮನ
ಚಂಡೀಗಢ: ಅಮೆರಿಕದಿಂದ ಗಡೀಪಾರುಗೊಂಡ ಸುಮಾರು 119 ಮಂದಿ ಭಾರತೀಯರು ಈ ವಾರಾಂತ್ಯದಲ್ಲಿ ಎರಡು ವಿಮಾನಗಳಲ್ಲಿ ಅಮೃತಸರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪುವ ನಿರೀಕ್ಷೆಯಿದೆ. ಜನವರಿ 20 ರಂದು ಅಮೆರಿಕಾ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಂಡ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಬೆಳವಣಿಗೆ ನಡೆದಿದೆ.
ನಾಳೆ ಶನಿವಾರ ಒಂದು ವಿಮಾನ ಮತ್ತು ಭಾನುವಾರ ಫೆಬ್ರವರಿ 16ರಂದು ಅಮೃತಸರದ ಗುರು ರಾಮ್ ದಾಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮತ್ತೊಂದು ವಿಮಾನ ಬಂದಿಳಿಯುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ. ಗಡೀಪಾರು ಮಾಡಲ್ಪಟ್ಟವರಲ್ಲಿ 67 ಮಂದಿ ಪಂಜಾಬ್‌ನವರು, 33 ಮಂದಿ ಹರಿಯಾಣದವರು, ಎಂಟು ಮಂದಿ ಗುಜರಾತ್‌ನವರು, ಮೂವರು ಉತ್ತರ ಪ್ರದೇಶದವರು, ತಲಾ ಇಬ್ಬರು ರಾಜಸ್ಥಾನ ಮತ್ತು ಮಹಾರಾಷ್ಟ್ರದವರು ಮತ್ತು ತಲಾ ಒಬ್ಬರು ಜಮ್ಮು-ಕಾಶ್ಮೀರ ಮತ್ತು ಹಿಮಾಚಲ ಪ್ರದೇಶದವರಾಗಿದ್ದಾರೆ.
ಈ ಗಡೀಪಾರು ಮಾಡಲ್ಪಟ್ಟವರು ಮೆಕ್ಸಿಕೋ ಗಡಿ ಮತ್ತು ಇತರ ಮಾರ್ಗಗಳ ಮೂಲಕ ಅಕ್ರಮವಾಗಿ ಅಮೆರಿಕಕ್ಕೆ ಪ್ರವೇಶಿಸಿ ನಂತರ ತಮ್ಮ ಪಾಸ್‌ಪೋರ್ಟ್‌ಗಳನ್ನು ಹರಿದು ಹಾಕಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಅಮೆರಿಕದಿಂದ ಗಡೀಪಾರು ಮಾಡಲಾಗುತ್ತಿರುವ ಎರಡನೇ ಗುಂಪು ಇದಾಗಿದೆ. ಫೆಬ್ರವರಿ 5 ರಂದು ಅಮೃತಸರಕ್ಕೆ ಬಂದ ಮೊದಲ ಗುಂಪಿನಲ್ಲಿ 104 ಭಾರತೀಯರು ಇದ್ದರು, ಅವರ ಕೈಗಳಿಗೆ ಕೋಳ ತೊಡಿಸಿ, ಕಾಲುಗಳಿಗೆ ಸರಪಳಿ ಕಟ್ಟಿ ಕರೆತರಲಾಗಿತ್ತು ಎಂದು ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ದೇಶದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾದ ನಂತರ, ಗಡೀಪಾರು ಮಾಡಿದವರ ಬಗ್ಗೆ ಭಾರತ ತನ್ನ ಕಳವಳವನ್ನು ಅಮೆರಿಕಕ್ಕೆ ತಿಳಿಸಿತ್ತು.
ನಿನ್ನೆ ಅಮೆರಿಕದಲ್ಲಿ ಶ್ವೇತಭವನದಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ದೊಡ್ಡ ಕನಸುಗಳು ಮತ್ತು ಭರವಸೆಗಳೊಂದಿಗೆ ಸಾಮಾನ್ಯ ಕುಟುಂಬಗಳು ಜನರು ಇಲ್ಲಿಗೆ ಬರುತ್ತಾರೆ, ಜನರು ಈ ರೀತಿ ಅಕ್ರಮವಾಗಿ ಬರಲು ಆಕರ್ಷಿಸುವ ಮತ್ತು ಹೀಗೆ ಬಂದವರನ್ನು ಅಕ್ರಮ ವಲಸಿಗರೆಂದು ಆಕರ್ಷಿಸುವ ಮಾನವ ಕಳ್ಳಸಾಗಣೆಯ ವಿರುದ್ಧ ಹೋರಾಡುವ ಅಗತ್ಯವನ್ನು ಪ್ರತಿಪಾದಿಸಿದರು.
ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿರುವ ಯಾವುದೇ ಪರಿಶೀಲಿಸಿದ ಭಾರತೀಯರನ್ನು ವಾಪಸ್ ಕರೆತರಲು ಭಾರತ ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಅವರು ಹೇಳಿದರು. ಮಾನವ ಕಳ್ಳಸಾಗಣೆಯನ್ನು ನಿರ್ಮೂಲನೆ ಮಾಡಲು ಮಾತುಕತೆ ನಡೆಸಬೇಕೆಂದು ಮೋದಿ ಒತ್ತಾಯಿಸಿದರು.
ಇತರ ದೇಶಗಳಲ್ಲಿ ಅಕ್ರಮವಾಗಿ ಉಳಿದಿರುವವರಿಗೆ ಅಲ್ಲಿರಲು ಯಾವುದೇ ಕಾನೂನುಬದ್ಧ ಹಕ್ಕಿಲ್ಲ. ಭಾರತ ಮತ್ತು ಅಮೆರಿಕಕ್ಕೆ ಸಂಬಂಧಿಸಿದಂತೆ, ಪರಿಶೀಲಿಸಲ್ಪಟ್ಟವರು ಮತ್ತು ನಿಜವಾಗಿಯೂ ಭಾರತದ ನಾಗರಿಕರಾಗಿರುವವರು ಅಮೆರಿಕದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದರೆ, ಭಾರತ ಅವರನ್ನು ವಾಪಸ್ ಕರೆಸಿಕೊಳ್ಳುತ್ತದೆ. ಇಂಥವರು ಸಾಮಾನ್ಯ ಕುಟುಂಬಗಳ ಜನರು. ಅವರಿಗೆ ದೊಡ್ಡ ದೊಡ್ಡ ಹುಸಿ ಕನಸುಗಳನ್ನು ಆಸೆಗಳನ್ನು ತೋರಿಸಿ ಹೆಚ್ಚಿನವರನ್ನು ದಾರಿ ತಪ್ಪಿಸಿ ಇಲ್ಲಿಗೆ ಕರೆತರಲಾಗುತ್ತದೆ ಎಂದು ಹೇಳಿದರು.