ಜನವರಿ 18ರಿ೦ದ ಶೀರೂರು ಮಠಾಧೀಶರಾದ ಶ್ರೀವೇದವರ್ಧನ ಶ್ರೀಪಾದರ ಪ್ರಥಮ ಪರ್ಯಾಯ ಆರ೦ಭ-ಅದ್ದೂರಿಯ ಧಾನ್ಯ, ಶಿಖರ ಮುಹೂರ್ತ ಸ೦ಪನ್ನ…..ಉಡುಪಿ ಮೋಟಾರ್ಸ್ ನಲ್ಲಿ ಯಮಹಾ ಕಂಪೆನಿಯ ನೂತನ ರೆಟ್ರೋ ಮೊಡೆಲ್ ಬೈಕ್ ‘XSR 155 ಮಾರುಕಟ್ಟೆಗೆ ಬಿಡುಗಡೆ
ರಾಜ್ಯದಲ್ಲಿನ 9 ಹೊಸ ವಿಶ್ವವಿದ್ಯಾಲಯಗಳನ್ನು ಮುಚ್ಚಲು ಸಂಪುಟ ಉಪಸಮಿತಿ ತೀರ್ಮಾನ
ಬೆಂಗಳೂರು, ಫೆಬ್ರವರಿ 14: ಬಿಜೆಪಿ (BJP) ಸರ್ಕಾರದ ಅವಧಿಯಲ್ಲಿ ಆರಂಭಿಸಿದ್ದ 10 ಹೊಸ ವಿಶ್ವವಿದ್ಯಾಲಯಗಳ ಪೈಕಿ 9 ವಿಶ್ವವಿದ್ಯಾಲಯಗಳನ್ನು (University) ಮುಚ್ಚಲು ಸಚಿವ ಸಂಪುಟ ಉಪಸಮಿತಿ ತೀರ್ಮಾನಿಸಿದೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅಧ್ಯಕ್ಷತೆಯ ಈ ಉಪಸಮಿತಿ ತೀರ್ಮಾನ ಕೈಗೊಂಡಿದೆ. ವಿಶ್ವವಿದ್ಯಾಲಯಗಳ ಆರ್ಥಿಕ ಸ್ಥಿತಿಗತಿಯ ಪರಿಶೀಲನೆ ಕುರಿತು ಗುರುವಾರ ಮೊದಲ ಸಭೆ ನಡೆಯಿತು. ಸಭೆಯಲ್ಲಿ ಬೀದರ್ ವಿಶ್ವವಿದ್ಯಾಲಯ ಹೊರತುಪಡಿಸಿ ಬೆಂಗಳೂರಿನ ಮಹಾರಾಣಿ ಕ್ಲಸ್ಟರ್ ಮತ್ತು ನೃಪತುಂಗ ವಿಶ್ವವಿದ್ಯಾಲಯ ಸೇರಿ ಎಲ್ಲಾ 9 ವಿಶ್ವವಿದ್ಯಾಲಯಗಳನ್ನು ಮುಚ್ಚಲು ತೀರ್ಮಾನ ಕೈಗೊಳ್ಳಲಾಗಿದೆ.
ಬೀದರ್ ವಿಶ್ವವಿದ್ಯಾಲಯ 150 ಸಂಯೋಜಿತ ಕಾಲೇಜುಗಳನ್ನು ಹೊಂದಿದ್ದು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಯಾವುದೇ ವಿಶ್ವವಿದ್ಯಾಲಯ ಸುಗಮವಾಗಿ ನಡೆಯಲು ಸಂಯೋಜಿತ ಕಾಲೇಜುಗಳ ಶುಲ್ಕ ಮುಖ್ಯ. ಆದ್ದರಿಂದ ಈ ವಿಶ್ವವಿದ್ಯಾಲಯ ಉಳಿಸಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ವರದಿಯಲ್ಲಿದೆ.
ಹೊಸ ವಿಶ್ವವಿದ್ಯಾಲಯಗಳನ್ನು ನಡೆಸಲು ಸರ್ಕಾರ ದೊಡ್ಡ ಮೊತ್ತದ ಹಣ ನೀಡಬೇಕು. ಹೊಸ ವಿಶ್ವವಿದ್ಯಾಲಯಗಳ ಸ್ಥಾಪನೆ ಮತ್ತು ಕಾರ್ಯಾಚರಣೆಗೆ 342 ಕೋಟಿ ಅಗತ್ಯವಿದೆ. ವಿಶ್ವವಿದ್ಯಾಲಯಗಳ ಸ್ಥಾಪನೆಗೆ 100 ರಿಂದ 200 ಎಕರೆ ಅಗತ್ಯವಿದೆ. ಬಹುತೇಕ ವಿಶ್ವವಿದ್ಯಾಲಯಗಳಿಗೆ ಅಷ್ಟು ಪ್ರಮಾಣದ ಜಮೀನು ಲಭ್ಯವಿಲ್ಲ. 342 ಕೋಟಿ ಮೊತ್ತ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ವೇತನ ಮೂಲಸೌಕರ್ಯ ಸಲಕರಣೆ ವಾಹನ ಪೀಠೋಪಕರಣ ಇತರೆ ವಸ್ತುಗಳ ಖರೀದಿಸಲು ಅಗತ್ಯವಿದೆ ಎಂದು ವರದಿಯಲ್ಲಿ ಹೇಳಿತ್ತು.
ಯಾವ್ಯಾವ ವಿಶ್ವವಿದ್ಯಾಲಯ ಮುಚ್ಚಲು ನಿರ್ಧಾರ?
ಹಾಸನ, ಚಾಮರಾಜನಗರ ಹಾವೇರಿ, ಕೊಡಗು, ಕೊಪ್ಪಳ, ಬಾಗಲಕೋಟೆ, ಮಹಾರಾಣಿ ಕ್ಲಸ್ಟರ್, ಮಂಡ್ಯ ಮತ್ತು ನೃಪತುಂಗ ವಿಶ್ವವಿದ್ಯಾಲಯಗಳಿಗೆ ಬೀಗ ಬೀಳುವ ಸಾಧ್ಯತೆ ಇದೆ.
ಈ ವಿಚಾರವಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾತನಾಡಿ, ಇದು ರಾಜ್ಯದ ವಿಚಾರ, ವೈಯಕ್ತಿಕ ಉದ್ದೇಶವೇನಿಲ್ಲ. ವಿದ್ಯಾರ್ಥಿಗಳ ಭವಿಷ್ಯ ನಮಗೆ ಮುಖ್ಯ. ಉಪನ್ಯಾಸಕರು ಚಾಮರಾಜನಗರ, ಮಂಡ್ಯಗೆ ಹೋಗಲು ತಯಾರಿಲ್ಲ. ಸೀನಿಯಾರಿಟಿಗೆ ತೊಂದರೆಯಾಗುತ್ತೆಂಬ ಆತಂಕ ಅವರಿಗಿದೆ. ಈ ವಿಚಾರವನ್ನು ಸಂಪುಟ ಮುಂದೆ ಇಡುತ್ತೇನೆ, ಆಮೇಲೆ ತಿಳಿಸುತ್ತೇನೆ. ಈ ಹಿಂದೆ ಒಂದು ವಿಶ್ವವಿದ್ಯಾಲಯಕ್ಕೆ 2 ಕೋಟಿ ರೂ. ಮೀಸಲು ಇಡಲಾಗಿತ್ತು. ಈಗ ಹೊಸ ವಿವಿಗೆ ಜಮೀನು ಇಲ್ಲ, ಅಲ್ಲಿಗೆ ಹೋಗುವವರೂ ಇಲ್ಲ ಅಂತ ಸಭೆಯಲ್ಲಿ ಸಚಿವರು, ಅಧಿಕಾರಿಗಳು ಅಭಿಪ್ರಾಯ ತಿಳಿಸಿದ್ದಾರೆ. ಮುಖ್ಯಮಂತ್ರಿಗಳಿಗೂ ವಿವರಣೆ ನೀಡಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.