ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...
ಬೆಂಗಳೂರು: ಬೆಂಕಿ ಅವಘಡ; ಜಕ್ಕರಾಯನಕೆರೆ ಮೈದಾನದಲ್ಲಿ 150 ವಾಹನಗಳು ಸುಟ್ಟು ಭಸ್ಮ!
ಬೆಂಗಳೂರು: ನಗರದ ಶ್ರೀರಾಮಪುರ ಪೊಲೀಸ್ ಠಾಣೆ ವ್ಯಾಪ್ತಿಯ ಜೆಡಿಎಸ್ ಪ್ರಧಾನ ಕಚೇರಿ ಬಳಿಯ ಜಕ್ಕರಾಯನಕೆರೆ ಮೈದಾನದಲ್ಲಿ ನಿಲುಗಡೆ ಮಾಡಲಾಗಿದ್ದ ಸುಮಾರು 150 ಜಪ್ತಿ ವಾಹನಗಳಿಗೆ ಬುಧವಾರ ಬೆಳಗ್ಗೆ ಬೆಂಕಿ ಹೊತ್ತುಕೊಂಡಿದ್ದು, ಸುಟ್ಟು ಕರಕಲಾಗಿವೆ.
ಕಳ್ಳತನ ಹಾಗೂ ಸಂಚಾರ ನಿಯಮ ಉಲ್ಲಂಘನೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಜಪ್ತಿ ಮಾಡಿಕೊಂಡ ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಸುದ್ದಿ ತಿಳಿದ ತಕ್ಷಣ ಐದು ಅಗ್ನಿಶಾಮಕ ವಾಹನಗಳಲ್ಲಿ ಸ್ಥಳಕ್ಕೆ ಧಾವಿಸಿದ ತಂಡ ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಹತೋಟಿಗೆ ತಂದಿದೆ.
ನಗರದ ಸುಮಾರು 70 ಪೊಲೀಸ್ ಠಾಣೆಗಳ ಪೊಲೀಸರು ವಿವಿಧ ಪ್ರಕರಣಗಳಲ್ಲಿ ಜಪ್ತಿ ಮಾಡಿದ ವಾಹನಗಳನ್ನು ಜಕ್ಕರಾಯನಕೆರೆ ಮೈದಾನದಲ್ಲಿ ನಿಲುಗಡೆ ಮಾಡಿದ್ದರು.
ಈ ಪೈಕಿ 10 ಕಾರುಗಳು ಸೇರಿದಂತೆ 17 ನಾಲ್ಕು ಚಕ್ರದ ವಾಹನಗಳು, ಸುಮಾರು 130 ದ್ವಿಚಕ್ರ ವಾಹನಗಳು ಬೆಂಕಿಗೆ ಆಹುತಿಯಾಗಿವೆ.ಅಗ್ನಿ ದುರಂತಕ್ಕೆ ಕಾರಣ ತಿಳಿದುಬಂದಿಲ್ಲ. ಈ ಮೈದಾನದಲ್ಲಿ ವಿವಿಧ ಮಾದರಿಯ ಸುಮಾರು 500ಕ್ಕೂ ಹೆಚ್ಚು ವಾಹನಗಳನ್ನು ನಿಲುಗಡೆ ಮಾಡಲಾಗಿತ್ತು. ಮೈದಾನದ ಒಂದು ಬದಿಯಲ್ಲಿ ಕಾಣಿಸಿಕೊಂಡ ಬೆಂಕಿ ಇತರ ವಾಹನಗಳಿಗೆ ತಗುಲಿದೆ.
ಕಿಡಿಗೇಡಿಗಳು ಬೀಡಿ ಅಥವಾ ಸಿಗರೇಟ್ ಸೇದಿ ಎಸೆದ ಪರಿಣಾಮ ಬೆಂಕಿ ಉಂಟಾಗಿರುವ ಶಂಕೆ ವ್ಯಕ್ತವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಸಂಬಂಧ ಶ್ರೀರಾಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.