ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ರಾಜ್ಯ ಚಲನಚಿತ್ರ ಪ್ರಶಸ್ತಿ ಘೋಷಣೆ – ಅತ್ಯುತ್ತಮ ನಟ- ನಟಿ ಸುದೀಪ್, ಅನುಪಮಗೌಡ
ನಟ ಸುದೀಪ್ ಅವರ ಅಭಿಮಾನಿಗಳಿಗೆ ಇದು ಸಿಹಿ ಸುದ್ದಿ. 2019ರ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಯಲ್ಲಿ ಸುದೀಪ್ ಅವರಿಗೆ ‘ಅತ್ಯುತ್ತಮ ನಟ’ ಪ್ರಶಸ್ತಿ ಸಿಕ್ಕಿದೆ. ‘ಪೈಲ್ವಾನ್’ ಚಿತ್ರದಲ್ಲಿನ ನಟನೆಗೆ ಸುದೀಪ್ ಅವರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ನಟಿ, ನಿರೂಪಕಿಯಾಗಿ ಗುರುತಿಸಿಕೊಂಡಿರುವ ಅನುಪಮಾ ಗೌಡ ಅವರಿಗೆ 2019ನೇ ಸಾಲಿನ ‘ಅತ್ಯುತ್ತಮ ನಟಿ’ ರಾಜ್ಯ ಪ್ರಶಸ್ತಿ ನೀಡಲಾಗಿದೆ. ದಯಾಳ್ ಪದ್ಮನಾಭನ್ ನಿರ್ದೇಶನದ ‘ತ್ರಯಂಬಕಂ’ ಚಿತ್ರದ ನಟನೆಗಾಗಿ ಅನುಪಮಾ ಗೌಡ ಅವರ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.
‘ಪೈಲ್ವಾನ್’ ಸಿನಿಮಾಗೆ ಎಸ್. ಕೃಷ್ಣ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಸುದೀಪ್ ಅವರು ಕುಸ್ತಿ ಪಟುವಾಗಿ ಕಾಣಿಸಿಕೊಂಡಿದ್ದಾರೆ. 2019ರ ಸೆಪ್ಟೆಂಬರ್ 12ರಂದು ‘ಪೈಲ್ವಾನ್’ ಚಿತ್ರ ಬಿಡುಗಡೆ ಆಗಿತ್ತು. ‘ಅತ್ಯುತ್ತಮ ನಟ’ ರಾಜ್ಯ ಪ್ರಶಸ್ತಿ ಪಡೆದ ಸುದೀಪ್ ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ.
ಪಿ. ಶೇಷಾದ್ರಿ ನಿರ್ದೇಶನ ಮಾಡಿದ ‘ಮೋಹನದಾಸ’ ಸಿನಿಮಾಗೆ ‘ಅತ್ಯುತ್ತಮ ಚಿತ್ರ’ ಪ್ರಶಸ್ತಿ ಸಿಕ್ಕಿದೆ. ಡಾರ್ಲಿಂಗ್ ಕೃಷ್ಣ ನಿರ್ದೇಶನದ ‘ಲವ್ ಮಾಕ್ಟೇಲ್’ 2ನೇ ‘ಅತ್ಯುತ್ತಮ ಸಿನಿಮಾ’ ಪ್ರಶಸ್ತಿ ಪಡೆದಿದೆ. ‘ಅರ್ಘ್ಯಂ’ 3ನೇ ಅತ್ಯುತ್ತಮ ಸಿನಿಮಾ ಆಗಿದೆ. ‘ಕನ್ನೇರಿ’ ಚಿತ್ರಕ್ಕೆ ‘ವಿಶೇಷ ಸಾಮಾಜಿಕ ಕಾಳಜಿಯ ಸಿನಿಮಾ’ ಪ್ರಶಸ್ತಿ ನೀಡಲಾಗಿದೆ.
ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಇಂಡಿಯಾ ವರ್ಸಸ್ ಇಂಗ್ಲೆಂಡ್’ ಸಿನಿಮಾಗೆ ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ ಪ್ರಶಸ್ತಿ ನೀಡಲಾಗಿದೆ. ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಸಿನಿಮಾದಲ್ಲಿನ ಅಭಿನಯಕ್ಕೆ ತಬಲಾ ನಾಣಿ ಅವರು ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅನುಷಾ ಕೃಷ್ಣ ಅವರು ‘ಬ್ರಾಹ್ಮಿ’ ಚಿತ್ರದಲ್ಲಿನ ನಟನೆಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಪಡೆದಿದ್ದಾರೆ.
ದರ್ಶನ್ ನಟನೆಯ ‘ಯಜಮಾನ’ ಚಿತ್ರಕ್ಕಾಗಿ ವಿ. ಹರಿಕೃಷ್ಣ ಅವರು ‘ಅತ್ಯುತ್ತಮ ಸಂಗೀತ ನಿರ್ದೇಶನ’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ‘ಮಿಂಚುಹುಳು’ ಚಿತ್ರಕ್ಕಾಗಿ ಮಾಸ್ಟರ್ ಪ್ರೀತಂ ಅವರಿಗೆ ಅತ್ಯುತ್ತಮ ಬಾಲ ನಟ ಪ್ರಶಸ್ತಿ ಸಿಕ್ಕಿದೆ. ‘ಸುಗಂಧಿ’ ಸಿನಿಮಾದಲ್ಲಿನ ಅಭಿನಯಕ್ಕೆ ಬೇಬಿ ವೈಷ್ಣವಿ ಅಡಿಗ ಅವರಿಗೆ ಅತ್ಯುತ್ತಮ ಬಾಲನಟಿ ಪ್ರಶಸ್ತಿ ನೀಡಲಾಗಿದೆ.
‘ಲವ್ ಮಾಕ್ಟೇಲ್’ ಚಿತ್ರದ ಗೀತೆಗಾಗಿ ರಘು ದೀಕ್ಷಿತ್ ಅವರು ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿ ಪಡೆದಿದ್ದಾರೆ. ‘ರಾಗ ಭೈರವಿ’ ಸಿನಿಮಾದಲ್ಲಿನ ಗೀತೆಗಾಗಿ ಜಯದೇವಿ ಜಿಂಗಮ ಶೆಟ್ಟಿ ಅವರಿಗೆ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ ಕೊಡಲಾಗಿದೆ.