ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಮಹಿಳೆಯರು ಶೌರ್ಯವಂತೆಯರಾಗಿ ಮೀನಾಕ್ಷಿ ಸೆಹರಾವತ್ ಮಹಿಳೆಯರಿಗೆ ಕರೆ
ಉಡುಪಿ, ಜ.4: ಭಾರತೀಯ ನಾರಿ ಕೇವಲ ಮನೆಗೆ ಸೀಮಿತವಾಗದೇ ಧೈರ್ಯ, ಶೌರ್ಯವಂತೆಯರಾಗಬೇಕು. ಶಿವಾಜಿಯಂಥ ಮಕ್ಕಳು ನೆರೆಮನೆಯಲ್ಲಿ ಹುಟ್ಟುವ ಬದಲಿಗೆ ತಮ್ಮ ಮನೆಯಲ್ಲೇ ಜನಿಸುವಂತಾಗಿ ಧೈರ್ಯವಂತ ಮಕ್ಕಳ ಶೌರ್ಯಯುತ ತಾಯಂದಿರಾಗಬೇಕು ಎಂದು ರಾಷ್ಟ್ರೀಯ ಚಿಂತಕಿ ಉತ್ತರ ಪ್ರದೇಶದ ಡೆಹ್ರಾಡೂನ್ ನ ಮೀನಾಕ್ಷಿ ಸೆಹರಾವತ್ ಮಹಿಳೆಯರಿಗೆ ಕರೆ ನೀಡಿದರು.
ಅದಮಾರು ಮಠ ಆಶ್ರಯದ ಶ್ರೀಕೃಷ್ಣ ಸೇವಾ ಬಳಗ ನೇತೃತ್ವದಲ್ಲಿ ವಿಶ್ವಾರ್ಪಣಂ ಕಾರ್ಯಕ್ರಮದಂಗವಾಗಿ ಶನಿವಾರ ಪೂರ್ಣಪ್ರಜ್ಞ ಸಭಾಂಗಣದಲ್ಲಿ ನಡೆದ ಪಲಿಮಾರು ಮಠದ ಹಿರಿಯ ಯತಿ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಅಭಿನಂದನೆ ಕಾರ್ಯಕ್ರಮದಲ್ಲಿ ‘ಬಾಂಗ್ಲಾ-ಪಾಠ’ ವಿಷಯದಲ್ಲಿ ಮಾತನಾಡಿದರು.
ಅರಿವಿಲ್ಲದಿದ್ದರೆ ಅಪಾಯಕಾರಿ
ನಮ್ಮ ಸಂಸ್ಕೃತಿ, ಇತಿಹಾಸ ಇತ್ಯಾದಿಗಳ ಬಗ್ಗೆ ಮಕ್ಕಳಿಗೆ ತಿಳಿಸುವಂತಾಗಬೇಕು. ಆ ಬಗ್ಗೆ ಮಕ್ಕಳಿಗೆ ಅರಿವಿಲ್ಲವಾದರೆ ಅಪಾಯಕಾರಿ.
ಸ್ವಾತಂತ್ರ್ಯ ಸಂದರ್ಭದಲ್ಲಿ ‘ಅಹಿಂಸಾ ಪರಮೋ ಧರ್ಮ’ ಎನ್ನುತ್ತಲೇ ಲಕ್ಷಾಂತರ ಹಿಂದೂಗಳ ಮಾರಣಹೋಮ ನಡೆದಿದೆ. ಅನಂತರದಲ್ಲಿ ಹೀಗೆನ್ನುತ್ತ ನಮ್ಮ ಯುವ ಸಮುದಾಯವನ್ನು ನಪುಂಸಕರನ್ನಾಗಿಸುವ ಪ್ರಯತ್ನ ನಡೆದಿದೆ. ಧರ್ಮಾಚರಣೆ ಬಿಟ್ಟರೆ ಹೇಗೆಲ್ಲ ದಬ್ಬಾಳಿಕೆ, ದೌರ್ಜನ್ಯ ನಡೆಯಲಿದೆ ಎನ್ನುವುದಕ್ಕೆ ಬಾಂಗ್ಲಾದೇಶ ಜೀವಂತ ನಿದರ್ಶನ. ನಮ್ಮಲ್ಲಿ ಎಷ್ಟೇ ಹಣ, ಐಶ್ವರ್ಯ ಇದ್ದರೂ ಇಂಥ ದಬ್ಬಾಳಿಕೆಯಿಂದ ಪಾರಾಗಲು ಸಾಧ್ಯವೇ ಇಲ್ಲ. ಹೀಗಾಗಿ ಧರ್ಮಾಚರಣೆ ಮುಖ್ಯ.
ಧರ್ಮವನ್ನು ಕಡೆಗಣಿಸಿ ಹಣಕ್ಕೆ ಆದ್ಯತೆ ನೀಡಿರುವುದು ಬಾಂಗ್ಲಾದ ಈ ಪರಿಸ್ಥಿತಿಗೆ ಕಾರಣ. ಹಣದ ಪ್ರಭಾವ ಮಹಿಳೆಯರನ್ನು ಅತ್ಯಾಚಾರವಾಗಿಸಿತು, ಧರ್ಮದ ಅವಗಣನೆಯಿಂದ ಹೀಗಾಯಿತು ಎಂದು ಎಚ್ಚರಿಸಿದರು.
ಸಂಸ್ಕೃತಿ ಸಂಸ್ಕಾರದ ಅರಿವು ಬೇಕು
ಮುಸ್ಲಿಮರ 10- 12 ವರ್ಷದ ಮಕ್ಕಳಿಗೆ ಅವರ ಧರ್ಮಗ್ರಂಥದ ಸಂಪೂರ್ಣ ಅರಿವಿರುತ್ತದೆ. ಆದರೆ, ಹಿಂದೂಗಳಿಗೆ ಭಗವದ್ಗೀತೆಯ ಹತ್ತು ಶ್ಲೋಕಗಳೂ ಬರುವುದಿಲ್ಲ. ರಾಮಾಯಣ- ಮಹಾಭಾರತದ ವ್ಯತ್ಯಾಸ ಗೊತ್ತಿರುವುದಿಲ್ಲ. ಇದು ದೇಶದ ಹಿತದೃಷ್ಟಿಯಿಂದ ಒಳ್ಳೆಯದಲ್ಲ. ಆದ್ದರಿಂದ ಇಂದಿನಿಂದಲೇ ತಮ್ಮ ಮಕ್ಕಳಿಗೆ ಭಾರತದ ಸಂಸ್ಕೃತಿ, ಸಂಸ್ಕಾರದ ಬಗ್ಗೆ ಅರಿವು ಮೂಡಿಸುವ ಕಾರ್ಯವಾಗಬೇಕು ಎಂದರು.
ನೋ ಮ್ಯಾರೇಜ್, ನೋ ಚಿಲ್ಡನ್’ ಸಂಸ್ಕೃತಿ ಬೇಡ
ನಮ್ಮ ಸಂಸ್ಕೃತಿ, ಆಚಾರ, ವಿಚಾರಗಳನ್ನು ಜೀವನದಲ್ಲಿ ಪಾಲಿಸಬೇಕು. ಮನೆಗಳಲ್ಲಿ ನೋ ಚಿಲ್ಡನ್ (ಮಕ್ಕಳು ಬೇಡ) ಎನ್ನುವ ಪರಿಕಲ್ಪನೆ ಬೆಳೆಯಲೇಬಾರದು. ಹಾಗೆಯೇ ನೋ ಮ್ಯಾರೇಜ್ (ಮದುವೆ ಬೇಡ) ಎನ್ನುವ ವಾದವೂ ಕೂಡದು. ಸನಾತನ ಸಂಸ್ಕೃತಿ ಉಳಿಸಿ ಬೆಳೆಸಲು ಇದೂ ಒಂದು ಭಾಗ. ಮನೆಯಲ್ಲಿ ತಾಯಿ, ಮಗುವಿಗೆ ಸಂಸ್ಕಾರ ನೀಡಬೇಕು ಎಂದರು.
ಆತ್ಮರಕ್ಷಣೆಗೆ ಬೇಕು ಆಯುಧ
ಅಹಿಂಸೆಗೆ ಹೆಚ್ಚು ಆದ್ಯತೆ ನೀಡಬಾರದು. ವೈರಿಯ ಬಗ್ಗೆ ಎಚ್ಚರದಿಂದಿರಬೇಕು. ಆತನ ಬಗ್ಗೆ ಮಾಹಿತಿ ಹೊಂದಿರಬೇಕು. ಆತ್ಮರಕ್ಷಣೆಗಾಗಿ ಆಯುಧ ಹೊಂದುವುದು ತಪ್ಪಲ್ಲ. ಇಲ್ಲವಾದಲ್ಲಿ ವೈರಿಗಳ ಕೈಗೆ ಸಿಲುಕಿ ಹೈರಾಣಾಗಬೇಕಾಗಿದೆ ಎಂದು ಸೆಹರಾವತ್ ಎಚ್ಚರಿಸಿದರು.
ಗಾಂಧಿಯನ್ನು ರಾಷ್ಟ್ರಪಿತ ಎನ್ನಲಾಗದು
ಮೋಹನದಾಸ ಕರಮಚಂದ ಗಾಂಧಿ ಅವರನ್ನು ಭಾರತದ ರಾಷ್ಟ್ರಪಿತ ಎಂದು ಒಪ್ಪಲಾಗದು ಪ್ರತಿಪಾದಿಸಿದರು.
ಮಹಾತ್ಮಾ ಗಾಂಧಿ ಹುಟ್ಟುವುದಕ್ಕೂ ಮುಂಚೆ ಭಾರತ ದೇಶ ಇತ್ತು. ಭಾರತದಲ್ಲಿ ಜನಿಸಿದ ಗಾಂಧಿ, ರಾಷ್ಟ್ರಕ್ಕೆ ತಂದೆಯಾಗುವುದು ಹೇಗೆ ಸಾಧ್ಯ? ಅವರು ಬೇಕಿದ್ದರೆ ಪಾಕಿಸ್ಥಾನಕ್ಕೆ ರಾಷ್ಟ್ರಪಿತನಾಗಲಿ. ಹೇಗೂ ಗಾಂಧಿ, ಜಿನ್ನಾ ಜೊತೆ ಸೇರಿ ಪಾಕಿಸ್ಥಾನವನ್ನು ಹುಟ್ಟುಹಾಕಿದ್ದಾರೆ ಎಂದರು.
ಆತ್ಮದಿಂದ ವ್ಯಕ್ತಿಯನ್ನು ಗುರುತಿಸುವಂತೆ ಸಂಸ್ಕೃತಿ ದೇಶವನ್ನು ಪ್ರತಿನಿಧಿಸುತ್ತದೆ. ಭಾರತದ ಆತ್ಮ ಎಂದರೆ ಇಲ್ಲಿನ ಸಂಸ್ಕೃತಿ. ಭಾರತವನ್ನು ಮಾತೆಯ ಸ್ಥಾನದಲ್ಲಿ ಕಂಡುಕೊಂಡ ದೇಶ ನಮ್ಮದು. ಆದ್ದರಿಂದ ಭಾರತಕ್ಕೆ ಮಾತೆ ಇದ್ದಾಳೆಯೇ ಹೊರತು ರಾಷ್ಟ್ರಪಿತ ಎಂದಿಲ್ಲ ಎಂದು ಮೀನಾಕ್ಷಿ ಪ್ರತಿಪಾದಿಸಿದರು.
ಅದಮಾರು ಮಠದ ಹಿರಿಯ ಯತಿ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು, ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಅದಮಾರು ಮಠದ ಕಿರಿಯ ಯತಿ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಹಾಗೂ ಪಲಿಮಾರು ಮಠದ ಕಿರಿಯ ಯತಿ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು.
ಶ್ರೀಕೃಷ್ಣ ಸೇವಾ ಬಳಗದ ಗೋವಿಂದರಾಜ್ ಸ್ವಾಗತಿಸಿ, ನಾಗರಾಜ ತಂತ್ರಿ ನಿರೂಪಿಸಿದರು. ಶ್ರೀಕಾಂತ ಶೆಟ್ಟಿ ಅವರು ಮೀನಾಕ್ಷಿ ಅವರನ್ನು ಪರಿಚಯಿಸಿದರು. ಪ್ರೊ. ನಂದನ ಪ್ರಭು ವಂದಿಸಿದರು.